ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಮೊದಲು ಅರ್ಜಿ ಸಲ್ಲಿಕೆಗೆ ಇಂದು(ನವೆಂಬರ್ 15) ಕೊನೆ ದಿನವಾಗಿತ್ತು. ಆದ್ರೆ, ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಅವರು ನವೆಂಬರ್ 21 ರ ವರೆಗೆ ವಿಸ್ತರಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ ನಟಿ ಭಾವನಾ, ಹಾಲಿ ಶಾಸಕರ ಕ್ಷೇತ್ರಕ್ಕೆ ನಲಪಾಡ್ ಅರ್ಜಿ
ಕಾಂಗ್ರೆಸ್ನಿಂದ ಬಿ ಫಾರಂ ಪಡೆಯುವ ಸಲುವಾಗಿ 500ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ 10 ದಿನಗಳಿಂದ ಸುಮಾರು 1100ಕ್ಕೂ ಹೆಚ್ಚು ಮಂದಿ 5 ಸಾವಿರ ರೂ. ಶುಲ್ಕ ಪಾವತಿಸಿ ಅರ್ಜಿಗಳನ್ನು ಖರೀದಿಸಿದ್ದಾರೆ. ಅವರಲ್ಲಿ ಕೇವಲ 500 ಮಂದಿ ಠೇವಣಿ ಬಾಂಡ್‍ನೊಂದಿಗೆ ಅರ್ಜಿ ಸಲ್ಲಿಸಿದ್ದಾರೆ.
ಬಹುತೇಕ ಶಾಸಕರು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಹಲವು ಶಾಸಕರು ಮತ್ತು ಆಕಾಂಕ್ಷಿಗಳು ಇನ್ನೂ ಅರ್ಜಿ ಸಲ್ಲಿಸಿಲ್ಲ. ಅಲ್ಲದೇ ಅವಧಿ ವಿಸ್ತರಣೆ ಮಾಡುವಂತೆ ರಾಜ್ಯದ ಮೂಲೆ, ಮೂಲೆಗಳಿಂದ ಪಕ್ಷದವರು ಹಾಗೂ ಅನ್ಯ ಪಕ್ಷಗಳಿಂದ ಕಾಂಗ್ರೆಸ್ ಗೆ ಬರಲು ಇಚ್ಚಿಸಿರುವ ಟಿಕೆಟ್ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ 6 ದಿನಗಳ ಕಾಲ ಸಮಯ ವಿಸ್ತರಿಸಿದ್ದಾರೆ.
. ಕಾಂಗ್ರೆಸ್ ಪಕ್ಷವು ಟಿಕೆಟ್ಗಾಗಿ ಅರ್ಜಿಗೆ 5,000 ರೂ. ಶುಲ್ಕ ನಿಗದಿಪಡಿಸಿದ್ದು,. ಅರ್ಜಿಯೊಂದಿಗೆ 2 ಲಕ್ಷ ರೂ. ಡಿಡಿ ನೀಡಬೇಕು ಎಂದು ಕಾಂಗ್ರೆಸ್ ಷರತ್ತು ವಿಧಿಸಿದೆ.
ಠೇವಣಿ ಬಾಂಡ್ ಸಲ್ಲಿಕೆ ಸಾಮಾನ್ಯ ಕಾರ್ಯಕರ್ತರಿಗೆ ತಲೆ ಬಿಸಿ ಉಂಟು ಮಾಡಿದೆ. ಪರಿಶಿಷ್ಟ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ಒಂದು ಲಕ್ಷ ರೂ, ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು 2 ಲಕ್ಷ ರೂ. ಠೇವಣಿ ಬಾಂಡ್ ನೀಡಬೇಕಿದೆ. ಕೆಲವು ಕ್ಷೇತ್ರಗಳಲ್ಲಿ ಐದಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೆಲವು ಕಡೆ ಹಾಲಿ ಶಾಸಕರಿರುವ ಕ್ಷೇತ್ರಗಳಿಗೂ ಸ್ಥಳೀಯ ನಾಯಕರು ಅರ್ಜಿ ಹಾಕಿರುವುದು ಕುತೂಹಲ ಮೂಡಿಸಿದೆ. ಕೆಲವು ನಾಯಕರು ತಾವು ಅರ್ಜಿ ಸಲ್ಲಿಸಿದ್ದು, ತಮ್ಮ ಕುಟುಂಬದ ಸದಸ್ಯರಿಂದಲೂ ಅರ್ಜಿ ಹಾಕಿಸಿದ್ದಾರೆ. ಇದರಿಂದ ಇದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ