ಕರ್ನಾಟಕ ರಾಜಕಾರಣಕ್ಕೆ ಕೆಎಚ್ ಮುನಿಯಪ್ಪ, ದೇವನಹಳ್ಳಿಯಲ್ಲಿ ಅಪಸ್ವರ: ಗೊಂದಲದಲ್ಲಿ ನಾಯಕರು
ಮುಂದೆ ಇದು ಭಿನ್ನಮತವಾಗಿ ಪಕ್ಷವನ್ನು ಕಾಡುವ ಭೀತಿ ವ್ಯಕ್ತವಾಗಿದೆ. ದೇವನಹಳ್ಳಿ ಕ್ಷೇತ್ರದಲ್ಲಿ ಟಿಕೆಟ್ಗೆ ಅರ್ಜಿ ಹಾಕುವ ಸಂದರ್ಭದಲ್ಲಿಯೇ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸಿದ್ಧತೆ ಚುರುಕುಗೊಳಿಸಿವೆ. ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಹಾಕಬೇಕು ಎಂಬ ಕಾಂಗ್ರೆಸ್ ನಾಯಕರ ಸೂಚನೆ ಮೇರೆಗೆ ನೂರಾರು ಮಂದಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಹಂತದಲ್ಲಿಯೇ ಕಾಂಗ್ರೆಸ್ ಪಾಳಯದಲ್ಲಿ ಗೊಂದಲಗಳು ಕಾಣಿಸಿಕೊಂಡಿದ್ದು, ಮುಂದೆ ಇದು ಭಿನ್ನಮತವಾಗಿ ಪಕ್ಷವನ್ನು ಕಾಡುವ ಭೀತಿ ವ್ಯಕ್ತವಾಗಿದೆ. ದೇವನಹಳ್ಳಿ ಕ್ಷೇತ್ರದಲ್ಲಿ ಟಿಕೆಟ್ಗೆ ಅರ್ಜಿ ಹಾಕುವ ಸಂದರ್ಭದಲ್ಲಿಯೇ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ.
ಇಷ್ಟು ದಿನ ಸಂಸದರಾಗಿ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಕೆ.ಎಚ್.ಮುನಿಯಪ್ಪ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ತೊಡಗಿಕೊಳ್ಳುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೇಳುವ ಬಗ್ಗೆ ಕೆ.ಎಚ್.ಮುನಿಯಪ್ಪ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಯು ದೇವನಹಳ್ಳಿ ಕ್ಷೇತ್ರದ ಇತರ ಟಿಕೇಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ಗಾಗಿ ಈಗಾಗಲೇ 15 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಟಿಕೇಟ್ ನೀಡುವುದಾದರೆ ನಮ್ಮಲ್ಲೇ ಒಬ್ಬರಿಗೆ ನೀಡಿ, ಬೇರೆಯವರಿಗೆ ಟಿಕೇಟ್ ನೀಡಿದರೆ ನಾವು ಯಾರಿಗಾಗಿ ಶ್ರಮ ಹಾಕಿ ಕೆಲಸ ಮಾಡಬೇಕು ಎಂದು ಸ್ಥಳೀಯ ನಾಯಕರು ಪ್ರಶ್ನಿಸಿದ್ದಾರೆ.
‘ಬೇರೆ ಯಾರೋ ಇಲ್ಲಿಗೆ ಬರುತ್ತಾರೆಂದು ನಾವು ಇತರ ಕ್ಷೇತ್ರಗಳಿಗೆ ಹೋಗಲು ಸಾಧ್ಯವೇ? ದೇವನಹಳ್ಳಿಯಲ್ಲಿ ಸ್ಥಳೀಯ ನಾಯಕರಿಗೇ ಟಿಕೇಟ್ ಕೊಡಿ. ಅಧ್ಯಕ್ಷರು ಹೇಳಿದ ಎಲ್ಲ ಕೆಲಸಗಳನ್ನು ನಾವು ಮಾಡಿದ್ದೇವೆ. ಈಗ ಅಧ್ಯಕ್ಷರೇ ನಮ್ಮ ರಕ್ಷಣೆಗೆ ಬರಬೇಕು’ ಎಂದು ಟಿಕೆಟ್ ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ. ಕೆ.ಎಚ್.ಮುನಿಯಪ್ಪ ಸ್ಪರ್ಧೆ ಬಗ್ಗೆ ಸ್ಥಳೀಯ ಟಿಕೇಟ್ ಆಕಾಂಕ್ಷಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿದ ಕಾಂಗ್ರೆಸ್
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಮೊದಲು ಅರ್ಜಿ ಸಲ್ಲಿಕೆಗೆ ನ 15 ಕೊನೆಯ ಎಂದು ಘೋಷಿಸಲಾಗಿತ್ತು. ಆದರೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅರ್ಜಿ ಸಲ್ಲಿಕೆ ಅವಧಿಯನ್ನು ನ 21ರ ವರೆಗೆ ವಿಸ್ತರಿಸಿದ್ದಾರೆ. ಹಲವು ಶಾಸಕರು ಮತ್ತು ಆಕಾಂಕ್ಷಿಗಳು ಇನ್ನೂ ಅರ್ಜಿ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಯ ದಿನಾಂಕ ವಿಸ್ತರಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಕಾಂಗ್ರೆಸ್ ಪಕ್ಷವು ಟಿಕೆಟ್ಗಾಗಿ ಅರ್ಜಿಗೆ ₹ 5,000 ಶುಲ್ಕ ನಿಗದಿಪಡಿಸಿದೆ. ಅರ್ಜಿಯೊಂದಿಗೆ ₹ 2 ಲಕ್ಷ ಡಿಡಿ ನೀಡಬೇಕು ಎಂದು ಕಾಂಗ್ರೆಸ್ ಪಕ್ಷವು ಷರತ್ತು ವಿಧಿಸಿದೆ.
ಕೋಲಾರ ಕ್ಷೇತ್ರಕ್ಕೆ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಅರ್ಜಿ ಪಡೆದಿದ್ದರು. ಆದರೆ ಸಿದ್ದರಾಮಯ್ಯ ಸ್ಪರ್ಧೆ ಖಚಿತವಾದ ಬಳಿಕ ಅರ್ಜಿ ಸಲ್ಲಿಸಲು ಅವರು ಹಿಂದೇಟು ಹಾಕಿದರು. ವಿ.ಆರ್.ಸುದರ್ಶನ್ ಅವರ ಜೊತೆಗೆ ಗೋವಿಂದೆಗೌಡ, ಶ್ರೀನಿವಾಸ್ ಎಂಬುವವರೂ ಅರ್ಜಿ ಪಡೆದಿದ್ದರು ಎನ್ನಲಾಗಿದೆ. ವರುಣ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ಈವರೆಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ. ನಂಜನಗೂಡು ಕ್ಷೇತ್ರಕ್ಕೆ ಎಚ್.ಸಿ.ಮಹಾದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅರ್ಜಿ ಸಲ್ಲಿಸಿದ್ದಾರೆ.