ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ ಗಾಳಿ ಬೀಸುತ್ತಿದೆ. ಗದ್ದುಗೆಗಾಗಿ ನಾನಾ ತಂತ್ರಗಳು ಮೂರು ಪಕ್ಷಗಳಿಂದಲೂ ಶುರುವಾಗ್ತಿವೆ. ಇದರ ಮಧ್ಯೆ ರೌಡಿ ರಾಜಕೀಯ (Rowdy Politics) ಶುರುವಾಗಿದೆ. ಈಗಾಗಲೇ ಫೈಟರ್ ರವಿ ಕೇಸರಿ ಬಾವುಟ ಹಿಡಿದಾಗಿದೆ. ಬೆತ್ತನಗೆರೆ ಶಂಕರ ಕಮಲ ನಾಯಕರ ಬೆನ್ನ ಹಿಂದೆಯೇ ಓಡಾಡಿಕೊಂಡಿದ್ದಾನೆ. ಸೈಲೆಂಟ್ ಸುನೀಲ್ ಕೇಸರಿ ಶಾಲು ಹೊದ್ದು ಆಗಿದೆ. ಆದ್ರೆ ಇನ್ನೇನು ಬಾವುಟ ಹಿಡಿಯೋದು ಮಾತ್ರ ಸದ್ಯಕ್ಕೆ ಮಿಸ್ ಆಗಿದೆ. ಇದರ ಮಧ್ಯೆ ಇದೀಗ ಬಿಜೆಪಿ(BJP), ಮತ್ತೋರ್ವ ರೌಡಿಶೀಟರ್ಗೆ ಮಣೆ ಹಾಕಿದೆ.
ಇದನ್ನೂ ಓದಿ: ಜಮೀರ್ ಹಣಿಯಲು ‘ಸೈಲೆಂಟ್’ ಅಸ್ತ್ರ: ಸೈಲೆಂಟ್ ಸುನೀಲ್ ಮೂಲಕ ಸೋಲಿಸಲು ರಣತಂತ್ರ…!
ಹೌದು…..ರೌಡಿಶೀಟರ್ಗೆ ಆನೇಕಲ್ ಪುರಸಭೆ ನಾಮನಿರ್ದೇಶಿತ ಸದಸ್ಯನ ಪಟ್ಟ ನೀಡಿದೆ. ರೌಡಿಶೀಟರ್ ಮಂಜುನಾಥ್ ಅಲಿಯಾಸ್ ಉಪ್ಪಿಯನ್ನು ಆನೇಕಲ್ ಪುರಸಭೆ ನಾಮನಿರ್ದೇಶಿತ ಸದಸ್ಯನಾಗಿ ಆಯ್ಕೆ ಮಾಡಿದೆ. ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಂಜುನಾಥ್ ಅಲಿಯಾಸ್ ಉಪ್ಪಿ ಪಕ್ಷಕ್ಕೆ ಸೇರ್ಪಡೆಗೂ ಮುನ್ನವೇ ಅಧಿಕಾರಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಮಡಿವಾಳ ಪೊಲೀಸ್ ಠಾಣೆಯ ರೌಡಿಶೀಟರ್ ಮಂಜುನಾಥ್ ಅಲಿಯಾಸ್ ಉಪ್ಪಿ, ನಖರಬಾಬು ಮರ್ಡರ್ ಕೇಸ್ ಪ್ರಮುಖ ಆರೋಪಿಯಾಗಿದ್ದಾನೆ. ಹೀಗಿದ್ದರೂ ಸಹ ಬಿಜೆಪಿ, ಬೆಂಗಳೂರು ಹೊರವಲಯದ ಆನೇಕಲ್ ಪುರಸಭೆಗೆ ನಾಮನಿರ್ದೇಶಿತ ಸದಸ್ಯನನ್ನಾಗಿ ಆಯ್ಕೆ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಮಂಜುನಾಥ್ ಅಲಿಯಾಸ್ ಉಪ್ಪಿ ಎಂಬಾತನಿಗೆ ಪುರಸಭೆ ನಾಮನಿರ್ದೇಶಿತ ಸದಸ್ಯನ ಪಟ್ಟ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಮತ್ತೆ ರೌಡಿ ರಾಜಕೀಯ ಶುರುವಾಗುತ್ತಾ ಎನ್ನುವುದಕ್ಕೆ ಪುಷ್ಠಿ ನೀಡಿದಂತಿದೆ.
ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳು ಬಿಜೆಪಿಗೆ ರೌಡಿಗಳನ್ನ ಸೇರಿಸಿಕೊಂಡು ರಾಜಕೀಯ ಮಾಡುವ ದುಸ್ಥಿತಿ ಬಂತಾ ಅನ್ನೋ ಚರ್ಚೆ ಒಂದೆಡೆಯಾದ್ರೆ, ಮತ್ತೊಂದು ಲೆಕ್ಕಾಚಾರ ಬೇರೆಯದ್ದನ್ನೇ ಹೇಳುತ್ತಿದೆ.. ರೌಡಿಗಳಿಗೆ ಗಾಳ ಹಾಕಿರುವುದರ ಹಿಂದೆ ಸ್ಲಮ್ ಮತಗಳನ್ನು ಸೆಳೆಯುವ ತಂತ್ರ ಅಡಗಿದ್ಯಾ ಅನ್ನೋ ಅನುಮಾನ ಹುಟ್ಟಿಕೊಂಡಿದೆ.
ರೌಡಿ ರಾಜಕೀಯ ವಿಷಯ ಕಳೆದ ಐದಾರು ದಿನಗಳಿಂದ .ರಾಜ್ಯ ರಾಜಕಾರಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಬೆಂಗಳೂರಿನ ಕುಖ್ಯಾತ ರೌಡಿ ಶೀಟರ್ ಸೈಲೆಂಟ್ ಸುನೀಲ ಬಿಜೆಪಿ ನಾಯಕರ ಜೊತೆ ವೇದಿಕೆ ಹಂಚಿಕೊಂಡಿದ್ದೆ ತಡ, ಬಿಜೆಪಿ ಜೊತೆ ನಂಟು ಹೊಂದಿರುವ ರೌಡಿಗಳ ಫೋಟೋಗಳು ಹರಿದಾಡುತ್ತಿವೆ. ಇನ್ನು ಬಿಜೆಪಿ ಸಂಗಡ ಸೇರಲು ಬೆಂಗಳೂರಿನ ಡಾನ್ಗಳು ತುದಿಗಾಲಲ್ಲಿ ನಿಂತಿದ್ದಾರೆ ಅನ್ನೋ ಗುಮಾನಿ ಶುರುವಾಗಿದ್ದೇ ತಡ, ಕಾಂಗ್ರೆಸ್ ನಾಯಕರು ಮೈಕೊಡವಿ ನಿಂತಿದ್ರೆ, ಬಿಜೆಪಿ ಕೂಡ ಬಾಯಿ ಮುಚ್ಚಿಸುವಂಥಾ ಬಾಣಗಳನ್ನ ತಮ್ಮ ಬತ್ತಳಿಕೆಯಿಂದ ಬಿಡುತ್ತಿದೆ. ಆದ್ರೆ, ಇದರ ಮಧ್ಯೆ ಬಿಜೆಪಿ ಒಬ್ಬೊಬ್ಬ ರೌಡಿ ಶೀಟರ್ನನ್ನು ರಾಜಕಾರಣಕ್ಕೆ ಎಳೆದು ತರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ