ಬೆಂಗಳೂರಿನಲ್ಲಿ ವಲಸೆ ಶಾಸಕರ ವಿರುದ್ಧ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲ್ಯಾನ್
ವಲಸೆ ಹೋದ ಶಾಸಕರಿಗೆ ಕೌಂಟರ್ ಕೊಡಲು ಹಾಗೂ ಜೆಡಿಎಸ್ ಕಣ್ಣಿಟ್ಟಿರುವ ಅಲ್ಪಸಂಖ್ಯಾತರ ಮತಗಳನ್ನು ತಮ್ಮ ಪಕ್ಷದಲ್ಲೇ ಗಟ್ಟಿಗೊಳಿಸಲು ಕಾಂಗ್ರೆಸ್ ಪ್ಲ್ಯಾನ್ ಹಾಕಿಕೊಂಡಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಅಧಿಕಾರಕ್ಕೇರಲು ಈಗಿಂದಲೇ ತಯಾರಿ ಆರಂಭಿಸಿದೆ. ಬಹುಮತ ಪಡೆಯಲು ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿಗಳನ್ನು ಮಣಿಸಲು ಇನ್ನಿಲ್ಲದ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಸೋಲಿನ ನಂತರ ಇದೀಗ ಬಿಜೆಪಿಯು (BJP) ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಸೋಲಿಸಲು ನಿರ್ಧರಿಸಿದೆ. ಇದೀಗ ಕಾಂಗ್ರೆಸ್ (Congress) ಕೂಡ ಇಂತಹ ಪ್ರಯತ್ನಕ್ಕೆ ಮುಂದಾಗಿದೆ. ವಲಸೆ ಹೋದ ಶಾಸಕರಿಗೆ ಕೌಂಟರ್ ಕೊಡಲು ಕಾಂಗ್ರೆಸ್ ಪ್ಲ್ಯಾನ್ ಹಾಕಿಕೊಂಡಿದೆ. ಬೆಂಗಳೂರಿನಲ್ಲಿ ವಲಸೆ ಶಾಸಕರ ವಿರುದ್ಧ ಸೂಕ್ತ ಅಭ್ಯರ್ಥಿಗಳು ಕಣಕ್ಕೆ ಇಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರು ಯೋಜನೆ ಹಾಕಿಕೊಂಡಿದ್ದಾರೆ. ತೆರೆ ಮರೆಯಲ್ಲೇ ಅಭ್ಯರ್ಥಿ ಫೈನಲ್ ಮಾಡಲು ಮುಂದಾದಂತೆ ಕಾಣಿಸುತ್ತಿದೆ. ಕಾಂಗ್ರೆಸ್ ತೊರೆದ ಮುನಿರತ್ನ (Munirathna) ಅವರು ಬಿಜೆಪಿ ಸೇರಿದ್ದರು. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಇವರನ್ನು ಮಣಿಸಲು ಆರ್ಆರ್ ನಗರ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಡಿ.ಕೆ.ಸುರೇಶ್ (D.K.Suresh) ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ನಲ್ಲಿ ಗಂಭೀರ ಚಿಂತನೆ ನಡೆಸಲಾಗಿದೆ.
ಇದನ್ನೂ ಓದಿ: ‘ಡಿಲೀಟ್ ಬಿಜೆಪಿ ನಾಟ್ ವೋಟರ್ ಐಡಿ’ ಡಿಜಿಟಲ್ ಅಭಿಯಾನ ಆರಂಭಿಸಿದ ಕಾಂಗ್ರೆಸ್
ಆರ್.ಆರ್.ನಗರದಲ್ಲಿ (ರಾಜರಾಜೇಶ್ವರಿ ನಗರ) ಮುನಿರತ್ನ ಅವರನ್ನು ಎದುರಿಸಲು ಕುಸುಮಾ ಅವರಿಗೆ ಕಷ್ಟ ಸಾಧ್ಯ ಹಿನ್ನೆಲೆ ಸುರೇಶ್ ಅವರನ್ನು ಕಣಕ್ಕಿಳಿದರೆ ಕಾರ್ಯಕರ್ತರಲ್ಲೂ ಹುಮ್ಮಸ್ಸು, ಧೈರ್ಯ ಬರುತ್ತದೆ ಎಂಬುದು ಕಾಂಗ್ರೆಸ್ ಪಕ್ಷದ ನಾಯಕ ಚಿಂತನೆಯಾಗಿದೆ. ಒಂದೊಮ್ಮೆ ಸುರೇಶ್ ಅವರನ್ನು ಕಣಕ್ಕಿಳಿಸಿದರೆ ಒಕ್ಕಲಿಗರ ವೋಟ್ಗಳು ಸಹ ಒಂದೆಡೆ ಧ್ರುವೀಕರಣ ಮಾಡಲು ಸಾಧ್ಯವಾಗಲಿದೆ. ಬಿಜೆಪಿಯ ಮೂಲ ಕಾರ್ಯಕರ್ತರು ಸಹ ಸಾಥ್ ನೀಡುವ ನಿರೀಕ್ಷೆಯನ್ನು ಪಕ್ಷ ಹೊಂದಿದೆ.
ಆರ್ಆರ್ನಗರ ಅಭ್ಯರ್ಥಿಯಾಗಿರುವ ಕುಸುಮಾಗೆ ಲೋಕಸಭಾ ಟಿಕೆಟ್ ನೀಡುವ ಬಗ್ಗೆ ಪಕ್ಷದೊಳಗೆ ಸಮಾಲೋಚನೆ ನಡೆಸಲಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆದಿದ್ದು, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಮತಗಳನ್ನು ಗಟ್ಟಿಗೊಳಿಸಲು ಅಲ್ಪಸಂಖ್ಯಾತರ ಸಮಾವೇಶ
ಒಂದೆಡೆ ವಲಸೆ ಶಾಸಕರನ್ನು ಮಣಿಸಲು ಕಾಂಗ್ರೆಸ್ ಪ್ಲ್ಯಾನ್ ಹಾಕಿಕೊಂಡರೆ ಇನ್ನೊಂದೆಡೆ ಜೆಡಿಎಸ್ ಕಣ್ಣಿಟ್ಟಿರುವ ಅಲ್ಪಸಂಖ್ಯಾತರ ಮತಗಳನ್ನು ಭದ್ರಗೊಳಿಸಲು ಕಾಂಗ್ರೆಸ್ ಸಮಾವೇಶ ನಡೆಸಲು ಮುಂದಾಗಿದೆ. ಕಾಂಗ್ರೆಸ್ ತೊರೆದ ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರ್ಪಡೆಯಾಗಿ ರಾಜ್ಯಾಧ್ಯಕ್ಷರಾಗಿದ್ದಾರೆ. ಸದ್ಯ ಇವರ ಮೂಲಕ ಜೆಡಿಎಸ್ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದೆ. ಹೀಗಾಗಿ ತಮ್ಮ ಸಾಂಪ್ರದಾಯಕ ಮತಗಳು ಚದುರುವ ಭೀತಿ ಕಾಂಗ್ರೆಸ್ಗೆ ಎದುರಾಗಿದೆ. ಇದೇ ಕಾರಣಕ್ಕೆ ಅಲ್ಪಸಂಖ್ಯಾತರ ಮತಗಳನ್ನು ಭದ್ರಗೊಳಿಸಲು ಕಾಂಗ್ರೆಸ್ನ ಅಲ್ಪಸಂಖ್ಯಾತ ನಾಯಕರು ಸಮಾವೇಶ ನಡೆಸಲು ಚಿಂತಿಸುತ್ತಿದ್ದಾರೆ.
ಇದನ್ನೂ ಓದಿ: ಜೆಡಿಎಸ್ಗೆ ಬಹುಮತ ಬಂದರೆ ದಲಿತರಿಗೆ ಸಿಎಂ ಪಟ್ಟ: ಎಚ್ಡಿ ಕುಮಾರಸ್ವಾಮಿ
ಡಿಸೆಂಬರ್ 13 ರಂದು ನಡೆಯುವ ಸಭೆಯಲ್ಲಿ ಎರಡು ವಿಷಯದ ಬಗ್ಗೆ ಮಹತ್ವದ ಚರ್ಚೆ
ಕಾಂಗ್ರೆಸ್ನ ಅಲ್ಪಸಂಖ್ಯಾತ ಶಾಸಕರು, ಮಾಜಿ ಶಾಸಕರು, ಎಂಎಲ್ಸಿಗಳು, ಮಾಜಿ ಎಂಎಲ್ಸಿಗಳು ಡಿ.13ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ. ಅಂದಿನ ಮಹತ್ವದ ಸಭೆಯಲ್ಲಿ ಅಲ್ಪಸಂಖ್ಯಾತ ಮತಗಳನ್ನು ಭದ್ರಪಡಿಸಲು ಸಮಾವೇಶ ಆಯೋಜನೆ ಬಗ್ಗೆ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ಕೇಳುವ ಬಗ್ಗೆ ಗಂಭೀರ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸದ್ಯ ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಮಾತ್ರ ಟಿಕೆಟ್ ಸಿಗುತ್ತಿವೆ. ಉಳಿದ ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯ ಇದ್ದರೂ ಟಿಕೆಟ್ ಸಿಗುತ್ತಿಲ್ಲ. ಆದ್ದರಿಂದ ಈ ಬಾರಿ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಆಧ್ಯತೆ ಸಿಗುವ ರೀತಿ ಮಾಡಬೇಕು, ಅಲ್ಪಸಂಖ್ಯಾತರಿಗೆ ಹೆಚ್ಚಿನ ಟಿಕೆಟ್ ಪಡೆಯಬೇಕು. ಯಾವ ಯಾವ ಕ್ಷೇತ್ರಗಳಲ್ಲಿ ಗೆಲ್ಲುವ ಶಕ್ತಿ ಇದೆಯೋ ಅಲ್ಲಿ ಟಿಕೆಟ್ ಪಡೆಯಬೇಕು. ಈ ಎಲ್ಲಾ ವಿಚಾರಗಳನ್ನು ಚರ್ಚೆ ನಡೆಸಿ ಪಕ್ಷದ ಹೈಕಮಾಂಡ್ ಗಮನಕ್ಕೆ ತಂದು ಹೆಚ್ಚಿನ ಕ್ಷೇತ್ರಗಳು ಅಲ್ಪಸಂಖ್ಯಾತರಿಗೆ ಸಿಗುವಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಅಲ್ಪಸಂಖ್ಯಾತರ ನಾಯಕರ ಪ್ಲ್ಯಾನ್ ಆಗಿದೆ. ಅಲ್ಲದೆ, ಅಲ್ಪ ಸಂಖ್ಯಾತರ ಪರ ಕಾಂಗ್ರೆಸ್ ಸ್ಪಷ್ಟ ನಿಲುವು ತೋರಿಸದ ಹಿನ್ನೆಲೆಯಲ್ಲಿ ಸಮಯದಾಯದ ಬೇಸರವಿದೆ. ಅದನ್ನು ಶಮನಗೊಳಿಸುವ ಸಂಬಂಧ ಚರ್ಚಿಸುವ ಸಾಧ್ಯತೆ ಇದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:03 pm, Fri, 2 December 22