‘ಡಿಲೀಟ್ ಬಿಜೆಪಿ ನಾಟ್ ವೋಟರ್ ಐಡಿ’ ಡಿಜಿಟಲ್ ಅಭಿಯಾನ ಆರಂಭಿಸಿದ ಕಾಂಗ್ರೆಸ್
ಬಿಬಿಎಂಪಿ ಮತದಾರರದನ್ನು ತಮ್ಮ ಪಕ್ಷದತ್ತ ಸೆಳೆಯಲು ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ನಡೆದ ಅಕ್ರಮ ಪ್ರಕರಣವನ್ನು ದಾಳವನ್ನಾಗಿಸಲು ಕಾಂಗ್ರೆಸ್ ಮುಂದಾಗಿದೆ. ಇದರ ಭಾಗವಾಗಿ #DeleteBJPNotVoterID ಎಂಬ ಅಭಿಯಾನವನ್ನು ಆರಂಭಿಸಿದೆ.
ಬೆಂಗಳೂರು: ನಗರದಲ್ಲಿ ನಡೆದ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ (Illegal in voter ID revision) ಪ್ರಕರಣವನ್ನು ಮತದಾರರನ್ನು ತಮ್ಮ ಪಕ್ಷದತ್ತ ಸೆಳೆಯಲು ದಾಳವನ್ನಾಗಿಸಲು ಕಾಂಗ್ರೆಸ್ (Congress) ಮುಂದಾಗಿದೆ. ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ (BJP) ವಿರುದ್ಧ #DeleteBJPNotVoterID ಎಂಬ ಡಿಜಿಟಲ್ ಅಭಿಯಾನ (Digital Campaign) ರಾಜ್ಯ ಕಾಂಗ್ರೆಸ್ ಆರಂಭಿಸಿದೆ. ಬೆಂಗಳೂರಲ್ಲಿ 6.6 ಲಕ್ಷ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂಬ ಆರೋಪ ಸಂಬಂಧ ಮತದಾರರ ಪಟ್ಟಿ ಪರಿಶೀಲಿಸಲು ಚುನಾವಣಾ ಆಯೋಗ (Election Commission) ಮನವಿ ಮಾಡಿದೆ. ಹೀಗಾಗಿ ವೋಟರ್ ಐಡಿ ಡೇಟಾ ಇದೆಯಾ ಇಲ್ಲವಾ ಎಂದು ಪರಿಶೀಲಿಸಲು ಮತದಾರರಿಗೆ ಜಾಗೃತಿ ಮೂಡಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್, ಡಿಜಿಟಲ್ ಮೂಲಕವೇ ಬೆಂಗಳೂರು ಮತದಾರರ ಸೆಳೆಯಲು ಯೋಜನೆ ಹಾಕಿಕೊಂಡಿದೆ. ವಾಟ್ಸ್ಆ್ಯಪ್, ಫೇಸ್ಬುಕ್ ಡಿಜಿಟಲ್ ವೇದಿಕೆ ಮೂಲಕ 10 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಲು ನಿರ್ಧರಿಸಲಾಗಿದೆ. ಮತದಾರ ಪಟ್ಟಿಯಲ್ಲಿ ಹೆಸರಿದೆಯಾ ಇಲ್ಲವಾ ಎಂಬುದನ್ನ ತಿಳಿಯಲು ಲಿಂಕ್ ಅನ್ನು ಕೂಡ ಹಂಚಿಕೊಂಡಿದೆ.
“ಬಿಜೆಪಿಯ ಘನಂಧಾರಿ ಕೆಲಸಕ್ಕೆ, ಮೇಲಿನ ಫೋಟೋ ರೀತಿ ನಿಮ್ಮ ವೋಟರ್ ಐಡಿ ಕೂಡ ಈಗ ಕ್ಷಣದಲ್ಲಿ ಕಣ್ಮರೆಯಾಗಬಹುದು, ಬಿಜೆಪಿಯ ಈ ಕೀಳು ರಾಜಕೀಯದ ಬಗ್ಗೆ ಎಚ್ಚರದಿಂದಿರಿ. ನಿಮ್ಮ ವೋಟರ್ ಐಡಿಯನ್ನೂ ಬಿಡದವರು, ನಿಮ್ಮನ್ನು ಬಿಟ್ಟಾರೆಯೇ? ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಡಿಲೀಟ್ ಆಗಿದ್ದರೆ, ಬದಲಾಗಿದ್ದರೆ ಅಥವಾ ಯಾವುದೇ ತಪ್ಪುಗಳಾಗಿದ್ದರೂ ಕೂಡಲೇ ಆಕ್ಷೇಪಣೆ ಸಲ್ಲಿಸಿ. ಕೂಡಲೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ – https://electoralsearch.in/ ಜನಹಿತಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್‍ನಿಂದ ಜಾರಿ” ಎಂಬ ಪೋಸ್ಟ್ ಅನ್ನು ಹಂಚಿಕೊಂಡು ಅದರಲ್ಲಿ #DeleteBJPNotVoterID ಎಂಬ ಹ್ಯಾಷ್ಟ್ಯಾಗ್ ಹಾಕಿದೆ.
ಇದನ್ನೂ ಓದಿ: Karnataka Politics ನಾಗ ಯಾರು, ತಿಮ್ಮ ಯಾರು ನನಗೆ ಗೊತ್ತಿಲ್ಲ: ಸಚಿವ ಸೋಮಣ್ಣ ಸ್ಪಷ್ಟನೆ
ಮೊದಲು ಆಪರೇಷನ್ ಕಮಲಾ, ಇದೀಗ ರೌಡಿಗಳ ಆಪರೇಷನ್
ಬಿಜೆಪಿಯವರು ಒಂದೊಂದು ಆಪರೇಷನ್ ಇದೆ, ರೌಡಿಗಳ ಸೆಕ್ಷನ್ ಆಪರೇಷನ್ ಈಗ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸದಾಶಿವನಗರದಲ್ಲಿನ ತಮ್ಮ ನಿವಾಸದೆದುರು ಹೇಳಿಕೆ ನೀಡಿದ್ದಾರೆ. ರೌಡಿ ಶೀಟರ್ಗಳ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಮೊದಲು ಆಪರೇಷನ್ ಕಮಲ ಮಾಡಿದ್ದರು. ಈಗ ರೌಡಿಗಳ ಆಪರೇಷನ್ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ಶುಭವಾಗಲಿ, ಯಶಸ್ಸಾಗಲಿ ಎಂದು ಟಾಂಗ್ ನೀಡಿದರು.
ದೇಶದಲ್ಲಿ ನಮ್ಮ ಪಕ್ಷನೇ ಇಲ್ಲ, ಅವರದೇ ಪಕ್ಷ ತಾನೇ ಇರುವುದು ದೇಶದಲ್ಲಿ. ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ. ಏನೋ ನಾವು ನಾಲ್ಕು ಜನ ಹೆಣ ಹೊರಲು ನಾಲ್ಕು ಜನ ಇದ್ದೇವೆ, ತಮಟೆ ಬಡೆಯಲು ನಾಲ್ಕು ಜನ ಇದ್ದೇವೆ ಅಷ್ಟೇ. ಉಳಿದಂತೆ ಎಲ್ಲಾ ಬಿಜೆಪಿಯವರದ್ದೇ. ಬಿಜೆಪಿಗೆ ಅಭ್ಯರ್ಥಿಗಳು ಇದ್ದಾರೆಯೇ ಅಥವಾ ಇಲ್ಲವೋ ಎಂಬುದನ್ನ ಅವರನ್ನೇ ಕೇಳಿ ಎಂದರು.
ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಮೂರ್ನಾಲ್ಕು ದಿನಗಳಲ್ಲಿ ಚುನಾವಣೆ ಸಮಿತಿ ರಚನೆ ಆಗುತ್ತದೆ. ದೆಹಲಿ ಇಂದ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ ಆಗುತ್ತದೆ ಎಂದರು. ಮಹಾರಾಷ್ಟ್ರ ಗಡಿ ತಗಾದೆ ವಿಚಾರ ಪ್ರತಿಕ್ರಿಯೆ ನೀಡಲು ಕೆಪಿಸಿಸಿ ಅಧ್ಯಕ್ಷರು ನಕಾರಿಸಿದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:02 pm, Fri, 2 December 22