Rahul Gandhi Political Prediction 2023ರಲ್ಲಿ ರಾಹುಲ್ ಗಾಂಧಿಗೆ ಕರ್ಮ ಪರಿವರ್ತನೆ ಯೋಗ: ಹುದ್ದೆಯೋ ಬುದ್ಧನೋ?
Rahul Gandhi Political Prediction: 2023ರ ಏಪ್ರಿಲ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕರ್ಮ ಪರಿವರ್ತನೆ ಯೋಗ; ಹುದ್ದೆಯೋ ಬುದ್ಧನೋ? ಉಡುಪಿಯ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಜಾತಕ ವಿಮರ್ಶೆ ಇಲ್ಲಿದೆ.
ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಈ ದಿನ ನಿಮ್ಮೆದುರು ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷದ ನಾಯಕರ ಜಾತಕ ವಿಶ್ಲೇಷಣೆ (Political Leader Prediction) ಮಾಡಿದ್ದಾರೆ. ಇಷ್ಟಕ್ಕೇ ನೀವು ಯಾರದು ಈ ಜಾತಕ ವಿಮರ್ಶೆ ಎಂದು ಊಹಿಸಿಯೂ ಇರಬಹುದು. ಹೌದು, ಆ ನಾಯಕರ ಹೆಸರು ರಾಹುಲ್ ಗಾಂಧಿ. ಭಾರತ್ ಜೋಡೋ ಯಾತ್ರೆ (Bharat Jodo Yatra) ಎಂಬ ಹೆಸರಿನಲ್ಲಿ ಅವರು ಕೈಗೊಂಡಿರುವ ಪಾದಯಾತ್ರೆ ಬಗ್ಗೆ ಚರ್ಚೆಯಂತೂ ಚಾಲ್ತಿಯಲ್ಲಿದೆ. ರಾಹುಲ್ ಗಾಂಧಿ(Rahul Gandhi) ಅವರ ಭಾರತ್ ಜೋಡೋ ಯಾತ್ರೆ ಸ್ವತಃ ಅವರಲ್ಲಿ, ಅವರು ಪ್ರತಿನಿಧಿಸುವ ಕಾಂಗ್ರೆಸ್ (Congress) ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದೆ. ಮುಂದಿನ ಚುನಾವಣೆಗಳಿಗೆ ಬಲ ತರಬಹುದು ಎಂಬ ಭಾರೀ ನಿರೀಕ್ಷೆ ಇದೆ.
ಇನ್ನೇನು ದೇಶದಲ್ಲಿ ಕಾಂಗ್ರೆಸ್ ಕಥೆ ಮುಗಿದೇ ಹೋಯಿತು ಅಂದುಕೊಳ್ಳುವ ಹೊತ್ತಿಗೆ ರಾಹುಲ್ ಗಾಂಧಿಯ ಪಾದಯಾತ್ರೆ ಗುಟುಕು ಜೀವ ನೀಡಿದಂತಾಗಿದೆ. ಮುಂದಿನ ಲೋಕಸಭೆ ಚುನಾವಣೆಗೆ(lok sabha election 2024) ಈ ಯಾತ್ರೆಯಿಂದ ದೊಡ್ಡ ಸಹಾಯ ಆಗಬಹುದು ಎಂಬ ನಿರೀಕ್ಷೆ ಹಲವರಲ್ಲಿದೆ. ಮೇಲು ನೋಟದ ಮಾತಿಗೆ ಹೇಳಿದಾಗ ರಾಹುಲ್ ಗಾಂಧಿಯ ಚೇಷ್ಟೆಯ ಸ್ವಭಾವ, ಕೆಣಕುವ ಮಾತುಗಳು ಅನೇಕರಿಗೆ ಹಿಡಿಸದೆ ಇರಬಹುದು. ಅಪಹಾಸ್ಯವನ್ನೂ ಮಾಡಬಹುದು. ಆದರೆ ಒಬ್ಬ ವ್ಯಕ್ತಿಯನ್ನು ವೈದ್ಯರಾಗಲೀ, ಜ್ಯೋತಿಷ ಪಂಡಿತರಾಗಲೀ ತಿರಸ್ಕಾರ ದೃಷ್ಟಿಯಲ್ಲಿ ನೋಡಬಾರದು ಎಂಬುದು ಶಾಸ್ತ್ರ ವಚನ. ಅವರ ಮಾತು, ನಡೆ- ಆಲೋಚನೆ ಬಗ್ಗೆ ಭಿನ್ನವಾದ ಅಭಿಪ್ರಾಯವಿದ್ದರೂ ನಮ್ಮಂತವರು ಅಪಹಾಸ್ಯ ಮಾಡಬಾರದು. ಇರಲಿ, ಈಗ ವಿಷಯಕ್ಕೆ ಬಂದುಬಿಡೋಣ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೊಸಬರಿಗೆ ಹೆಚ್ಚು ಜಯ: ಪ್ರಕಾಶ್ ಅಮ್ಮಣ್ಣಾಯ
ಕಾಂಗ್ರೆಸ್ಗೆ ಮರುಜೀವ ಕೊಟ್ಟು ಜನರ ಬೆಂಬಲ ತರಲು ಹೊರಟಿರುವ ರಾಹುಲ್ ಅವರ ಪ್ರಯತ್ನದಿಂದ ವಿರೋಧ ಪಕ್ಷ ಕಾಂಗ್ರೆಸ್ ಅತ್ಯಂತ ಪ್ರಬಲ ವಿರೋಧ ಪಕ್ಷ ಆಗಿ, ಕಾಂಗ್ರೆಸ್ ಪಕ್ಷವು 2023 ರಲ್ಲೆ ಈ ದೇಶದಲ್ಲಿ ರಾಹುಲ್ ಎಲ್ಲ ಕಡೆ ಹೇಳಿಕೊಂಡು ಬರುತ್ತಿರುವಂತೆ ಪ್ರಜಾಪ್ರಭುತ್ವ ಉಳಿಸಲು ಪ್ರಬಲ ತಂತ್ರ (decisive strategy) ಹೆಣೆಯಬಹುದೇ ಎಂಬ ಕುತೂಹಲದೊಂದಿಗೆ ಅಕೆಡಮಿಕ್ ಆಸಕ್ತಿಯಿಂದ ಈ ಲೇಖನಕ್ಕೆ ಜಾತಕ ನೋಡಲಾಗಿತ್ತೇ ವಿನಾ ಅವರನ್ನು ದೂಷಿಸುವ ದೃಷ್ಟಿಯಿಂದ ಅಲ್ಲ.
ರಾಹುಲ್ ಗಾಂಧಿ ಅವರದು ಅನೂರಾಧ ನಕ್ಷತ್ರ ವೃಶ್ಚಿಕ ರಾಶಿ. ಚಿನ್ನದ ತಟ್ಟೆಯಲ್ಲಿ ಉಣ್ಣಬಹುದಾದಂಥ ಕುಟುಂಬದಲ್ಲಿ ಹುಟ್ಟಿದ ಈ ವ್ಯಕ್ತಿ ದೇಶದಾದ್ಯಂತ ಸಂಚರಿಸಿ, ದೇಶದೊಳಗಿನ ಕಷ್ಟ- ಸುಖಗಳನ್ನು ಕಾಣುತ್ತಿದ್ದಾರೆ. ಈತನ ಜನ್ಮ ಜಾತಕದಲ್ಲಿ ಶನಿಯು ಆತ್ಮ ಕಾರಕ. ಅದರಲ್ಲೂ ಶನಿಯು ಲಗ್ನದಿಂದ ಸಪ್ತಮಾಧಿಪತಿ (ಏಳನೆ ಮನೆಯ ಅಧಿಪತಿ). ನಿವೃತ್ತಿ ಸ್ಥಾನಾಧಿಪತಿ, ಜನಪದ ಕ್ಷೇತ್ರಾಧಿಪತಿ. ಅಲ್ಲದೆ ಮರಣಾಧಿಪನೂ ಹೌದು. ಇನ್ನು ಪಂಚಮದಲ್ಲಿ ಕೇತು ಗ್ರಹ ಇದೆ. ಕೇತುವು ಉತ್ತೇಜನವನ್ನು ಕ್ಷೀಣಿಸುತ್ತದೆ. ಆಲಸ್ಯ ತರಿಸುತ್ತದೆ. ಜತೆಗೆ ದುಃಖ ನೀಡುತ್ತದೆ.
ಈ ಗ್ರಹ ಸ್ಥಿತಿ ಏನನ್ನು ಸೂಚಿಸುತ್ತದೆ ಅಂದರೆ, ಜನ (ಅಭಿಮಾನಿಗಳು, ಬೆಂಬಲಿಗರು) ಬಯಸಿದ ಕರ್ಮದಲ್ಲಿ ಒತ್ತಾಯಕ್ಕೆ, ಈ ವ್ಯಕ್ತಿಗೆ ಇಷ್ಟವಾಗದ, ಬೇಡವಾದ ಹುದ್ದೆಯಲ್ಲಿ ಅನಿವಾರ್ಯವಾಗಿ ಕುಳಿತು ದುಃಖಿತ ಆಗುವಂತೆ ಮಾಡುತ್ತದೆ. ಕೇತು ಗ್ರಹ ಮೋಕ್ಷ (salvation) ಕಾರಕನೂ ಹೌದು. ನಮ್ಮೆಲ್ಲರ ಹಿಂದಿನ ಚರಿತ್ರೆಗಳ ವಿಚಾರ ಬಿಡಿ. ರಾಮ- ಕೃಷ್ಣರನ್ನು ಉಳಿದು ಯಾರ ಚರಿತ್ರೆಗಳೂ ಶುದ್ಧವಿದೆ ಎಂದು ಹೇಳಲಾಗದು. ಮುಂದೆ ಇವರು ಜನರು ಅಂದುಕೊಂಡಂತೆ ಪ್ರಧಾನ ಮಂತ್ರಿ ಹುದ್ಧೆ ಸಿಗುವುದಿದ್ದರೆ ಸಿಗಲಿ. ಆದರೆ ಅದನ್ನು ಪಡೆಯಲಾಗದಿದ್ದರೆ ಆಗ ಏನು?
ಇದನ್ನು ಗ್ರಹಗಳ ಸ್ಥಿತಿಗೆ ಅನುಗುಣವಾಗಿಯೇ ಹೇಳುತ್ತಿದ್ದೇನೆ; ಅನ್ಯಥಾ ಭಾವಿಸಬಾರದು. ರಾಹುಲ್ ಗಾಂಧಿ ಅವರು ಸರ್ವಸಂಘ ಪರಿತ್ಯಾಗ ಮಾಡಿ, ಸನ್ಯಾಸಿಯಂತೆ ಯಾವ ಆಸೆ- ಆಕಾಂಕ್ಷೆ ಇಲ್ಲದವರಾಗುವ ಸಾಧ್ಯತೆಗಳಿವೆ. ನಾನು, ನನ್ನ ತಾಯಿ, ಸಂಸಾರ ಇತ್ಯಾದಿ ವ್ಯಾಮೋಹ ಹೋಗಿಬಿಡುವ ಜಾತಕ ಇದು. ಅಂದರೆ ಒಂದು ರೂಪದ ಸನ್ಯಾಸವೇ. ಬಹುಶಃ ನಾನು ನೋಡುವ ರೀತಿಯಲ್ಲಿ ಈ ಜಾತಕ ಸರಿಯಾಗಿಯೇ ಇದೆ. ಇವರು ಜೀವನ ರಥದಲ್ಲಿ ಜುಗುಪ್ಸೆಗೊಂಡು ತನ್ನ ಪಾಡಿಗೆ ತಾನು ಎನ್ನುವ ಸನ್ಯಾಸದಂತಹ ಸ್ಥಿತಿಗೆ ಬರುವಂತಹ ಲಕ್ಚಣವಿದೆ.
ಈ ಜಾತಕದಲ್ಲಿ ಭವಿಷ್ಯ ಬೆಳವಣಿಗೆಯ ರೂಪದ ಬದಲಾವಣೆಗೆ ತಾಯಿಯೇ ಕಾರಣ ಎನ್ನಬಹುದು. ಯಾವ ತಾಯಿಗೂ ಮಕ್ಕಳ ಯಶಸ್ಸಿನ ಬಗ್ಗೆ ಆಸೆ ಇರುವುದು ಸಹಜವೇ. ಆದರೆ ಮಕ್ಕಳಿಗೆ ತಾಯಿಯ ಆ ಬಯಕೆಯು ಇಷ್ಟವೇ- ಇಲ್ಲವೇ ಎಂಬುದೂ ಮುಖ್ಯವಾಗುತ್ತದೆ. ಯಾಕೆಂದರೆ ರಾಹುಲ್ ಗಾಂಧಿಯವರು ಎಲ್ಲೂ ನಾನು ಈ ದೇಶದ ಪ್ರಧಾನ ಮಂತ್ರಿ ಆಗುತ್ತೇನೆ, ಆಗಬೇಕು ಎಂದು ತನ್ನ ಬಯಕೆಯನ್ನು ವ್ಯಕ್ತಪಡಿಸಿದ್ದಿಲ್ಲ. ಪಕ್ಷದ ಜನರು ಬಯಸಿರಬಹುದು. ಇದು ಅವರಿಗೆ ಉಭಯ ಸಂಕಟ ಆಗಿರಲಿಕ್ಕಿಲ್ಲ ಎಂದು ಹೇಳುವುದು ಹೇಗೆ? ಜನರು ಪ್ರೀತಿಸಿ, ಬಯಸಿದಾಗ ಅದಕ್ಕೆ ತಕ್ಕಂತೆ ನಡೆಯುವುದು ಅನಿವಾರ್ಯ ಆಗುತ್ತದೆ.
ಲಗ್ನಕ್ಕೆ ಬಾಧಕಾಧಿಪತಿಯೂ ಚತುರ್ಥ (ಮಾತೃ) ಸ್ಥಾನಾಧಿಪತಿ ಶುಕ್ರನೇ ಕಾರಣವಾಗಿ ಲಗ್ನದಲ್ಲೇ ಇದ್ದಾನೆ. ತಾಯಿಗಾಗಿ ಹೋರಾಟವಷ್ಟೆ ಎಂಬುದರ ಸೂಚನೆ ಇದು. ಈ ಹಿಂದೆ ಮಹಾಭಾರತದಲ್ಲಿ ಭೀಷ್ಮರು ಪಿತೃ ವಾಕ್ಯ ಪರಿಪಾಲನೆಗಾಗಿ, ಇನ್ನು ದ್ರೋಣರು ಮಗ ಅಶ್ವತ್ಥಾಮನಿಗಾಗಿ ರಣಾಂಗಣಕ್ಕೆ ಇಳಿದಿದ್ದರು. ತಾಯಿ ಇರುವ ತನಕ ಮಾತೃಪ್ರೇಮದಿಂದ ಪಕ್ಷಕ್ಕಾಗಿ ದುಡಿಯಬಹುದಷ್ಟೆ. ತಾಯಿಯ ನಂತರ ಇದಾವುದೂ ಬೇಡ ಎಂದು ಎಲ್ಲದರಿಂದ ಹಿಂದೆ ಸರಿದುಬಿಡುತ್ತಾರೆ ರಾಹುಲ್ ಗಾಂಧಿ ಎಂಬುದನ್ನು ಜಾತಕ ಸೂಚಿಸುತ್ತಿದೆ. ಮುಂದಿನ ಏಪ್ರಿಲ್ ನಂತರ ಇವರ ಕರ್ಮ ಮಾರ್ಗವೂ ಬದಲಾಗುತ್ತದೆ. ಮಹತ್ತರವಾದ ಪರಿವರ್ತನೆ ಆಗಲಿದೆ. ಎಲ್ಲವೂ ಮುಂದಿನ ಒಂದು ಗತಿಗೆ ಕಾರಣ ಅಷ್ಟೇ.
ಗೌತಮ ಬುದ್ಧನು ಸುಖದ ಸುಪ್ಪತ್ತಿಗೆ ಬಿಟ್ಟು ದೇಶ ಸಂಚಾರಕ್ಕಿಳಿದು ಏನಾಯ್ತು? ಪೆದ್ದನೊಬ್ಬನನ್ನು ರಾಜಕುವರಿಯೊಬ್ಬಳು ವಿವಾಹವಾಗಿ ಕಾಳಿಮಾತೆಯ ಮಂದಿರದಲ್ಲಿ ಜ್ಞಾನ ನೀಡಲು ಹೋಗಿ (ಮಹಾ ಕಾಳಿದಾಸ) ಏನಾಯ್ತು? ಮನುಷ್ಯ ಹೇಗೇ ಇರಲಿ, ಜ್ಞಾನ ಬಂದಾಗ ಬದಲಾಗುವುದು ಸಹಜವಲ್ಲವೇ? ಇದನ್ನೇ ಅದೇ ಕಾಳಿದಾಸನು, ಅಯೋಗ್ಯ ಪುರುಷಂ ನಾಸ್ತಿ ಸಂಯೋಜಕ ಸ್ತತ್ರ ದುರ್ಲಭ ಎಂದಿದ್ದಾನೆ. ಅಂತೂ ರಾಹುಲ್ ಗಾಂಧಿಯವರಿಗೆ ಏಪ್ರಿಲ್ ನಂತರ ಒಂದು ಅತ್ಯತ್ತಮ ಕರ್ಮ ಪರಿವರ್ತನೆ ಆಗಲಿದೆ.
ಈ ಮಧ್ಯೆ ಖೇದಕರ ಸಂಗತಿಯೂ ಒಂದಿದೆ. ಯಾವ ತಾಯಿಯು ಮಗನ ಸಲುವಾಗಿ ಅನಾರೋಗ್ಯವನ್ನೂ ಲೆಕ್ಕಿಸಲು ಯಾತ್ರೆಯಲ್ಲಿ ಪಾಲ್ಗೊಂಡರೋ ಯಾವ ತಾಯಿಗಾಗಿ ತನಗೆ ಬೇಕೋ ಬೇಡವೋ ರಾಜಕಾರಣದಲ್ಲಿ ಇದ್ದಾರೋ ಈ ತಾಯಿ- ಮಗನ ವಾತ್ಸಲ್ಯಕ್ಕೆ ಧಕ್ಕೆ ಎದುರಾಗಬಹುದು. ತಾಯಿಯ ಮಾರ್ಗದರ್ಶನ- ಬೆಂಬಲ ಸಿಗದಿರಬಹುದು. ಇದು ಕೂಡ ಜಾತಕದ ವಿಮರ್ಶೆಯಿಂದಷ್ಟೇ ಹೇಳಬಹುದು. ಮುಖ್ಯವಾಗಿ ಸೋನಿಯಾಗಾಂಧಿ ಅವರ ಆರೋಗ್ಯದ ಬಗ್ಗೆ ಬಲು ಎಚ್ಚರಿಕೆ ಅಗತ್ಯ.
(ಈ ಲೇಖನವು ಜ್ಯೋತಿಷ್ಯ ಆಧಾರದಲ್ಲಿ ಲೇಖಕರು ತಿಳಿಸಿರುವ ಅಭಿಪ್ರಾಯ ಆಗಿರುತ್ತದೆ. ಇದು ಟಿವಿ9 ಕನ್ನಡ ಡಿಜಿಟಲ್ ಅಭಿಪ್ರಾಯ ಅಲ್ಲ. -ಸಂಪಾದಕರು)
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ)