ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ರಾ ಹಳ್ಳಿಹಕ್ಕಿ ಹೆಚ್‌.ವಿಶ್ವನಾಥ್?

| Updated By: ರಮೇಶ್ ಬಿ. ಜವಳಗೇರಾ

Updated on: Dec 06, 2022 | 10:21 AM

ತಮ್ಮ ಪಕ್ಷದ ಸರಕಾರ ಹಾಗೂ ಸಚಿವರನ್ನು ಟೀಕಿಸುತ್ತಿರುವ ವಿಶ್ವನಾಥ್, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯವಾಗಿ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ. ಇದಕ್ಕೆ ಪೂರಕವೆಂಬತೆ ದೆಹಲಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ.

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ರಾ ಹಳ್ಳಿಹಕ್ಕಿ ಹೆಚ್‌.ವಿಶ್ವನಾಥ್?
H vishwanath Meets Kharge
Follow us on

ನವದೆಹಲಿ/ಬೆಂಗಳೂರು: ವಿಧಾನಪರಿಷತ್‌ ಸದಸ್ಯ, ಮಾಜಿ ಸಚಿವ ಅಡಗೂರು ಹೆಚ್‌. ವಿಶ್ವನಾಥ್‌(H Vishwanath) ಅವರು ಬಿಜೆಪಿ(BJP) ತೊರೆದು ಕಾಂಗ್ರೆಸ್‌ ಸೇರುವ ಸಾಧ್ಯತೆ ದಟ್ಟವಾಗಿದೆ. ಬಾಯ್ಬಿಟ್ರೆ ಸಾಕು ಸ್ವಪಕ್ಷದ​ ವಿರುದ್ಧ ಕಿಡಿಕಾರುವ ಬಿಜೆಪಿ ವಿಧಾನಪರಿಷತ್ ಸದಸ್ಯ  ವಿಶ್ವನಾಥ್, ಇದೀಗ ಸದ್ದಿಲ್ಲದೆ ಮರಳಿ ಕಾಂಗ್ರೆಸ್ (Congress) ಸೇರುವ ಲಕ್ಷಣಗಳು ಕಾಣುತ್ತಿವೆ. ದೆಹಲಿಯಲ್ಲಿ ನಡೆದ ಈ ಅನಿರೀಕ್ಷಿತ ಬೆಳವಣಿಗೆಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ

ಹೌದು.. ವಿಶ್ವನಾಥ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಭೇಟಿ ಮಾಡಿದ್ದು , ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯನವರ ನಡೆಯಿಂದ ಬೇಸತ್ತು ಕಾಂಗ್ರೆಸ್ ತೊರೆದಿದ್ದ ಹೆಚ್​ ವಿಶ್ವನಾಥ್ ಅವರು ಏಕಾಏಕಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಹುಣಸೂರು ಉಪಚುನಾವಣೆಯಲ್ಲಿ ವಿಶ್ವನಾಥ್ ಸೋತ ಬಳಿಕ ಅವರನ್ನು ಸಮಾಧಾನಪಡಿಸಲೆಂದೇ ಬಿಜೆಪಿ ಅವರಿಗೆ ಸಾಹಿತ್ಯ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯನಾಗಿ ಮಾಡಿತ್ತು. ಆದರೂ ವಿಶ್ವನಾಥ್, ಸ್ವಪಕ್ಷದ ಸರ್ಕಾರದ ಬಹಿರಂಗವಾಗಿ ಟೀಕಿಸುತ್ತಲೇ ಇದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡಿ ಶುಭ ಹಾರೈಸಿದ್ದಾರೆ. ಇದು ಬರೀ ಶುಭ ಹಾರೈಕೆಯ ಭೇಟಿಯಲ್ಲ. ಇದರ ಹಿಂದೆ ಬೇರೆಯದ್ದೇ ರಾಜಕೀಯ ಲೆಕ್ಕಚಾರಗಳು ಅಡಗಿವೆ.

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮೂರು ವರ್ಷದ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲು ಪ್ರಮುಖ ಪಾತ್ರವಹಿಸಿದ್ದರು. ಆದರೆ ಉಪಚುನಾವಣೆಯಲ್ಲಿ ಸೋತ ಬಳಿಕ ಅವರು ನಿಧಾನವಾಗಿ ವಿಶ್ವನಾಥ್ ಬಿಜೆಪಿ ವಿರುದ್ಧ ಟೀಕಿಸಲಾರಂಭಿಸಿದರು. ವಿರೋಧ ಪಕ್ಷದ ರೀತಿಯಲ್ಲಿ ಬಿಜೆಪಿ ಸರ್ಕಾರದ ನಡೆ ಹಾಗೂ ಸ್ವಪಕ್ಷದ ನಾಯಕರ ವಿರುದ್ಧವೇ ಟೀಕಿಸುತ್ತಲೇ ಇದ್ದಾರೆ. ಇದರಿಂದ ಬಿಜೆಪಿ ಸಹ ವಿಶ್ವನಾಥ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಈ ಹಿನ್ನೆಲೆಯಲ್ಲಿ ಹಳ್ಳಿ ಹಕ್ಕಿ ಇದೀಗ ಮತ್ತೆ ಕಾಂಗ್ರೆಸ್​ನತ್ತ ಮುಖಮಾಡಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಮತ್ತೆ ಕಾಂಗ್ರೆಸ್ ಸೇರುವಿರಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದ ಅವರು ‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇವತ್ತಿನ ರಾಜಕಾರಣ ಹೀಗೆಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾಲಚಕ್ರದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ವಿಶ್ವನಾಥ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಈಗ ಬಿಜೆಪಿಯಲ್ಲಿರುವ ವಿಶ್ವನಾಥ್‌ ಆ ಪಕ್ಷದಿಂದಲೂ ದೂರ ಸರಿದಿದ್ದಾರೆ. ಪಕ್ಷದ ಯಾವುದೇ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗದೇ ಅಂತರ ಕಾಪಾಡಿಕೊಳ್ಳುತ್ತ ತಮ್ಮ ಪಕ್ಷದ ಸರಕಾರ ಹಾಗೂ ಸಚಿವರನ್ನು ಟೀಕಿಸುತ್ತಿದ್ದಾರೆ. ಈಗ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯವಾಗಿ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

Published On - 10:11 am, Tue, 6 December 22