ಬೆಂಗಳೂರು, (ನವೆಂಬರ್ 23): ನನ್ನನ್ನು ವಿರೋಧಿಸಿದರೆ ಮೋದಿಯವರನ್ನು (Narendra Modi) ವಿರೋಧಿಸಿದಂತೆ ಎಂಬ ತಮ್ಮ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY vijayendra) ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ರಾಜ್ಯಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ್ದು ಯಡಿಯೂರಪ್ಪನವರಲ್ಲ. ನಮ್ಮ ಪಕ್ಷದ ವರಿಷ್ಠರು ಹಾಗೂ ಎಲ್ಲಾ ಹಿರಿಯರು ಆಯ್ಕೆ ಮಾಡಿದ್ದಾರೆ. ಈ ಹಿನ್ನೆಲೆ ಪಕ್ಷ ಹಾಗೂ ದೇಶದ ಹಿತದಿಂದ ಒಂದಾಗಿ ಹೋಗಬೇಕು. ಈ ಉದ್ದೇಶದಿಂದ ಹಾಗೇ ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪಕ್ಷದಲ್ಲಿ ಎಲ್ಲರನ್ನೂ ಜೊತೆಗೆ ಕರೆದೊಯ್ಯುವುದು ನನ್ನ ಜವಾಬ್ದಾರಿ. ಜಾರಕಿಹೊಳಿ ನಡೆ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆಯುತ್ತಿತ್ತು. ಕೆಲವು ಬಾರಿ ಶಾಸಕ ರಮೇಶ್ ಅಸಮಾಧಾನ ತೋಡಿಕೊಂಡಿದ್ದರು. ಹೀಗಾಗಿ ರಮೇಶ್ ಭೇಟಿ ಮಾಡಿ ಅರ್ಧಗಂಟೆ ಚರ್ಚೆ ಮಾಡಿದ್ದೇನೆ. ಕೆಲವು ಸಣ್ಣಪುಟ್ಟ ಅಸಮಾಧಾನಗಳಿದ್ದವು, ಅದರ ಬಗ್ಗೆ ಚರ್ಚಿಸಿದ್ದೇವೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು. ಪಕ್ಷದಲ್ಲಿ ಸಹಕಾರ ಕೊಡುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದರು.
ಇನ್ನು ಇದೇ ವೇಳೆ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಸೋಮಣ್ಣ ಅಸಮಾಧಾನದ ಬಗ್ಗೆ ಮಾತನಾಡಿ, ಪಕ್ಷದ ಹಿರಿಯರು ಏನೇ ಮಾತಾಡಿದರೂ ಆಶೀರ್ವಾದ ಅಂದುಕೊಳ್ಳುತ್ತೇನೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.
ನನ್ನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದವರು ಯಾರು? ಯಡಿಯೂರಪ್ಪನಾ? ಅದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ. ಕರ್ನಾಟಕದ ಎಲ್ಲಾ 28 ಸೀಟುಗಳನ್ನು ಗೆದ್ದು ಮೋದಿ ಅವರಿಗೆ ತಲುಪಿಸುವುದು ನನ್ನ ಕೆಲಸ. ಯಾರಾದರೂ ನನ್ನನ್ನು ವಿರೋಧಿಸಿದರೆ ಅವರು ಮೋದಿಯನ್ನು ವಿರೋಧಿಸಿದಂತೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ