ಕಾಂಗ್ರೆಸ್​ಗೆ ಹೋಗುವವರಿಗೆ ಶಾಕ್​ ಕೊಡಲು ಮುಂದಾದ ಬಿಜೆಪಿ, ಕೋರ್ ಕಮಿಟಿಯಲ್ಲಿ ಮಹತ್ವದ ತೀರ್ಮಾನ ಕೈಗೊಂಡ ನಾಯಕರು

| Updated By: ರಮೇಶ್ ಬಿ. ಜವಳಗೇರಾ

Updated on: Aug 22, 2023 | 9:46 AM

ವಲಸಿಗ ಶಾಸಕರು ಮರಳಿ ಕಾಂಗ್ರೆಸ್ ನತ್ತ ಹೊರಡುತ್ತಿದ್ದಾರೆ ಎಂದು ಕಮಲ ಕೊಳಕ್ಕೆ ಬಿದ್ದಿರುವ ಕಲ್ಲು ಇನ್ನೂ ಕದಡುತ್ತಲೇ ಇದೆ. ಬೆಂಗಳೂರಿನಲ್ಲಿ ನಿನ್ನೆ (ಆಗಸ್ಟ್ 21) ನಡೆದಿರುವ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಕೂಡಾ ಇದೇವಿಚಾರ ಚರ್ಚೆಯಾಗಿದ್ದು, ಅಲ್ಲದೇ ಮುನಿಸಿಕೊಂಡವರನ್ನು ಅಂಗಲಾಚುವುದು ಬೇಡ. ಬದಲಾಗಿ ಪರ್ಯಾಯ ನಾಯಕನನ್ನು ಹುಟ್ಟುಹಾಕಲು ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ ಕೋರ್​ಕಮಿಟಿಯಲ್ಲಿ ಚರ್ಚೆ ಆಗಿದ್ದೇನು ಎನ್ನುವ ವಿವರ ಇಲ್ಲಿದೆ.

ಕಾಂಗ್ರೆಸ್​ಗೆ ಹೋಗುವವರಿಗೆ ಶಾಕ್​ ಕೊಡಲು ಮುಂದಾದ ಬಿಜೆಪಿ, ಕೋರ್ ಕಮಿಟಿಯಲ್ಲಿ ಮಹತ್ವದ ತೀರ್ಮಾನ ಕೈಗೊಂಡ ನಾಯಕರು
ಕರ್ನಾಟಕ ಬಿಜೆಪಿ ಕೋರ್​ಕಮಿಟಿ ಸಭೆ
Follow us on

ಬೆಂಗಳೂರು, (ಆಗಸ್ಟ್ 22): ಒಂದು ಕಡೆ ಕಾಂಗ್ರೆಸ್ (Congress) ಆಪರೇಷನ್ ಆಟ ಶುರು ಮಾಡಿದ್ರೆ, ಇತ್ತ ಬಿಜೆಪಿ (BJP) ಅದನ್ನು ದೊಡ್ಡ ಮಟ್ಟದಲ್ಲಿ ತಡೆಯುತ್ತೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದ್ರೆ ನಿನ್ನೆ(ಆಗಸ್ಟ್ 21) ನಡೆದ ಬಿಜೆಪಿ ಕೋರ್​ಕಮಿಟಿ ಸಭೆಯಲ್ಲಿ ಆದ ಚರ್ಚೆ, ನಾಯಕರ ಮನಸ್ಥಿತಿ ಬೇರೆಯದ್ದನ್ನೇ ಹೇಳುತ್ತಿದೆ. ಕಾಂಗ್ರೆಸ್‌ನತ್ತ ಮುಖ ಮಾಡಿರುವ ಬಾಂಬೆ ಫ್ರೆಂಡ್ಸ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೋದು ಬೇಡ ಎಂಬ ಮನಸ್ಥಿತಿಗೆ ಬಿಜೆಪಿ ನಾಯಕರು ಬಂದಿದ್ದಾರೆ. ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಮತ್ತು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅಸಮಾಧಾನದ ಬಗ್ಗೆ ಚರ್ಚೆ ನಡೆಸಿದ್ದು, ಬಿಜೆಪಿಗೆ ವಲಸೆ ಬಂದವರು ತಿರಗಾ ಕಾಂಗ್ರೆಸ್ ಬಾಗಿಲು ತಟ್ಟಿದರೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುವುದು ಬೇಡ ಎಂಬ ಮನಸ್ಥಿತಿಗೆ ಬಿಜೆಪಿ ರಾಜ್ಯ ನಾಯಕರು ಬಂದಿದ್ದಾರೆ.

‘ಪಕ್ಷ ಬಿಡುವವರ ಮನವೊಲಿಸೋಣ, ಅಂಗಲಾಚುವುದು ಬೇಡ’

ಆಪರೇಷನ್ ಹಸ್ತದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ‘ಪಕ್ಷ ಬಿಡುವವರ ಮನವೊಲಿಸೋಣ ಆದ್ರೆ ಅಂಗಲಾಚುವುದು ಬೇಡ. 2024ರ ಲೋಕಸಭೆ ಚುನಾವಣೆ ಬಗ್ಗೆ ಮಾತ್ರ ಗಮನ ಹರಿಸಿ. ಪಕ್ಷ ಸಂಘಟನೆ ಬಲಗೊಳಿಸುವ ಬಗ್ಗೆ ಮಾತ್ರ ಗಮನ ಹರಿಸಬೇಕು. ಕಾಲಕ್ಕೆ ತಕ್ಕಂತೆ ಎಲ್ಲವೂ ಆಗುತ್ತದೆ, ಈಗ ನಾವು ಎಡವಿದ್ದೇವೆ. ಶಾಸಕರ ಜೊತೆಗೆ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಬೇಕು. ನಮ್ಮದು ಕೇಡರ್ ಬೇಸ್ ಪಾರ್ಟಿ, ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು. ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಗೊಂದಲದಿಂದ ಸಮಸ್ಯೆಯಾಗಿದೆ. ಬಿಎಲ್​ಪಿ ನಾಯಕ, ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಶೀಘ್ರ ನಿರ್ಧರಿಸಿ. ಈ ಬಗ್ಗೆ ಬೇಕಿದ್ದರೆ ಮತ್ತೊಮ್ಮೆ ಬಿಜೆಪಿ ಹೈಕಮಾಂಡ್​ ನಾಯಕರನ್ನು ಭೇಟಿಯಾಗಿ ಒತ್ತಾಯಿಸೋಣ ಅಂತಾ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದನ್ನೂ ಓದಿ: ಆಪರೇಷನ್ ಹಸ್ತ ಭೀತಿ; ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು?

ಈ ಮಧ್ಯೆ ಯಶವಂತಪುರ ಶಾಸಕ ಎಸ್.‌ಟಿ. ಸೋಮಶೇಖರ್ ಅಸಮಾಧಾನದಿಂದಾಗಿ ಯಶವಂತಪುರ ಕ್ಷೇತ್ರದ ಬಿಜೆಪಿ ಮುಖಂಡರಾದ ಸಿ.ಎಂ. ಮಾರೇಗೌಡ ಮತ್ತು ಧನಂಜಯ ಪಕ್ಷದಿಂದ ಉಚ್ಛಾಟನೆ ವಿಚಾರವೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ. ಉಚ್ಛಾಟನೆ ಬಳಿಕ ನಾನು ಅವರನ್ನು ಉಚ್ಛಾಟನೆ ಮಾಡಿ ಎಂದು ಹೇಳಿಲ್ಲ ಎಂದು ಬಹಿರಂಗವಾಗಿ ಹೇಳುತ್ತಿರುವ ಸೋಮಶೇಖರ್ ನಡೆ ಬಗ್ಗೆಯೂ ಸಭೆಯಲ್ಲಿ ಪರೋಕ್ಷ ಆಕ್ಷೇಪ ವ್ಯಕ್ತವಾಗಿದೆ. ಮಾರೇಗೌಡ ಮತ್ತು ತಂಡದ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೋಮಶೇಖರ್ ಪಕ್ಷಕ್ಕೆ ಲಿಖಿತ ಪತ್ರ ನೀಡಿದ್ರು. ಉಚ್ಛಾಟನೆ ಬಳಿಕ ನಾನು ಕ್ರಮಕ್ಕೆ ಒತ್ತಾಯಿಸಿಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ ಎಂದು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ.

ಎಸ್‌ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಗೆ ಅಣಿಯಾಗಿರುವ ಮುನ್ನವೇ ನಿನ್ನೆ ದೊಡ್ಡ ಪ್ರಮಾಣದಲ್ಲಿ ಅವರ ಬೆಂಬಲಿಗರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಎಸ್.ಟಿ.ಸೋಮಶೇಖರ್ ಬೆಂಬಲಿಗರಾದ, ಬಿಬಿಎಂಪಿ ಮಾಜಿ ಸದಸ್ಯರಾದ ಆರ್ಯ ಶ್ರೀನಿವಾಸ್​, ರಾಜಣ್ಣ, ಜಿ.ಪಂ. ಮಾಜಿ ಸದಸ್ಯರಾದ ಶಿವಮಾದಯ್ಯ, ಹನುಮಂತೇಗೌಡ, ತಾಲೂಕು ಪಂಚಾಯತ್ ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ನಂಬಲು ಬಿಜೆಪಿ ಹಿಂದೇಟು..ಪರ್ಯಾಯ ನಾಯಕನ ಹುಟ್ಟುಹಾಕುವ ಚರ್ಚೆ

ಉಚ್ಛಾಟನೆ ಬಳಿಕ ನಾನು ಉಚ್ಛಾಟನೆಗೆ ಒತ್ತಾಯಿಸಿಲ್ಲ ಎಂಬ ಸೋಮಶೇಖರ್ ಹೇಳಿಕೆ ಬಗ್ಗೆ ರಾಜ್ಯ ನಾಯಕರು ಆಕ್ಷೇಪಿಸಿದ್ದಾರೆ. ಒಂದೆಡೆ ಸೋಮಶೇಖರ್ ಆಪ್ತ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಗಳು ಕಾಂಗ್ರೆಸ್ ಸೇರಿದ್ದಾರೆ. ಇನ್ನೊಂದೆಡೆ ಪಕ್ಷ ತ್ಯಜಿಸುವುದಿಲ್ಲ ಎಂದು ಸೋಮಶೇಖರ್ ಹೇಳುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ನಂಬಲು ಬಿಜೆಪಿ ಹಿಂದೇಟು ಹಾಕುತ್ತಿದೆ. ಅತಿಯಾದ ಮನವೊಲಿಕೆ ಬೇಡ, ಪ್ರಯತ್ನ ಅಷ್ಟೇ ಮಾಡೋಣ ಎನ್ನುವ ನಿಲುವಿಗೆ ರಾಜ್ಯ ಬಿಜೆಪಿ ನಾಯಕರು ಬಂದಿದ್ದು, ಈಗ ಸೋಮಶೇಖರ್ ಏನು ಹೇಳುತ್ತಾರೋ ಅದನ್ನು ಎಲ್ಲಾ ಕೇಳಿಸಿಕೊಳ್ಳೋಣ. ಒಂದು ವೇಳೆ ಪಕ್ಷ ತೊರೆದು ಹೋದರೆ ಪರ್ಯಾಯ ನಾಯಕತ್ವದ ರೆಡಿ ಮಾಡುವುದಕ್ಕೆ ರಾಜ್ಯ ನಾಯಕರು ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ಸೋಮಶೇಖರ್ ನಡೆ ಕಾದು ನೋಡುವ ಬಗ್ಗೆ ಚಿಂತಿಸಿರುವ ಬಿಜೆಪಿ ನಾಯಕರು, ಪರ್ಯಾಯ ನಾಯಕನನ್ನು ಹುಟ್ಟುಹಾಕಲು ಚಿಂತನೆ ನಡೆಸಿದ್ದಾರೆ.

ಸದ್ಯಕ್ಕೆ ಅವರ ಮಾತನ್ನ ಕೇಳೋಣ. ಪಕ್ಷ ತೊರೆದರೆ ಮುಂದೇನು ಮಾಡಬೇಕೋ ಮಾಡೋಣ. ಯಶವಂತಪುರದಲ್ಲಿ ಪಕ್ಷದ ಕಾರ್ಯಕರ್ತರಿದ್ದಾರೆ. ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಮುಂದಿನ ದಿನಗಳಲ್ಲಿ ಸೂಕ್ತ ನಾಯಕತ್ವ ನೀಡಿದರೆ ಗೆಲುವು ಕಷ್ಟವೇನಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

ಶಿವರಾಂ ಹೆಬ್ಬಾರ್ ವಿಚಾರದಲ್ಲೂ ಇದೇ ನಿಲುವು ಹೊಂದಿರುವ ಬಿಜೆಪಿ, ಯಲ್ಲಾಪುರದಲ್ಲೂ ಬಿಜೆಪಿ ಬಲಿಷ್ಠವಾಗಿದೆ. ಅಲ್ಲೂ ತಳ ಮಟ್ಟದ ಕಾರ್ಯಕರ್ತರ ಮೂಲಕ ಪಕ್ಷ ಕಟ್ಟಬಹುದು. ಅನಂತ್ ಕುಮಾರ್ ಹೆಗಡೆ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿಯಂತ ನಾಯಕರು ಸ್ಥಾನ ತುಂಬಬಲ್ಲರು ಎನ್ನುವ ಅಭಿಪ್ರಾಯಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ. ಹೀಗಾಗಿ ಸೋಮಶೇಖರ್ ಹಾಗೂ ಹೆಬ್ಬಾರ್ ಪಕ್ಷ ಬಿಡುವ ವಿಚಾರಕ್ಕೆ ಬಿಜೆಪಿ ನಾಯಕರು ಮಾನಸಿಕವಾಗಿ ತಯಾರಿ ನಡೆಸಿದ್ದಾರೆ,

ಒಟ್ಟಿನಲ್ಲಿ ಎಸ್​​ಟಿ ಸೋಮಶೇಖರ್ ಸೂಚನೆ ಮೇರೆಗೆ ಅವರ ಬೆಂಬಲಿಗರು ಕಾಂಗ್ರೆಸ್ ಸೇರಿದ್ದಾರೆ ಎನ್ನಲಾಗುತ್ತಿದ್ದು, ಎಸ್‌ಟಿ.ಸೋಮಶೇಖರ್ ಮುಂದಿನ ನಡೆ ಏನಾಗಿರುತ್ತೆ ಕುತೂಹಲ ಮೂಡಿಸಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:02 am, Tue, 22 August 23