Karnataka Latest News Highlights: ರಾಜ್ಯದಲ್ಲಿ ತರಕಾರಿ, ಹೋಟೆಲ್ ಊಟ, ಮದ್ಯ ಹೀಗೆ ಎಲ್ಲವೂ ಬೆಲೆ ಏರಿಕೆಯಾಗಿದ್ದು ಜನರ ಜೇಬಿಗೆ ಕತ್ತರಿ ಬಿದ್ದಿದೆ. ಜುಲೈ 1ಕ್ಕೆ ಜಾರಿಯಾಗಬೇಕಿದ್ದ ಅನ್ನ ಭಾಗ್ಯ ಯೋಜನೆ ಜಾರಿಗೆ ಅಕ್ಕಿ ಸಮಸ್ಯೆ ಎದುರಾಗಿದ್ದು, ಫಲಾನುಭವಿಗಳಿಗೆ ಅಕ್ಕಿಯ ಹಣ ನೀಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ. ಜೊತೆಗೆ ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ಮತ್ತು ವಿಪಕ್ಷ ಬಿಜೆಪಿ (BJP) ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಆಡಳಿತಾರೂಢ ಮತ್ತು ವಿಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಕೌಂಟರ್ ನೀಡಲು ಬಿಜೆಪಿ ಮನೆ ಮನೆ ಅಭಿಯಾನವನ್ನು ಈಗಾಗಲೇ ಆರಂಭಿಸಿದೆ. ಮತ್ತೊಂದೆಡೆ ಜುಲೈ ಒಂದರಂದು ಗೃಹಜ್ಯೋತಿ ಯೋಜನೆ ಜಾರಿಯಾಗಲಿದೆ. ಆಗಸ್ಟ್ 15ರ ಬಳಿಕ, ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ನಿರ್ಧರಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 2ರವರೆಗೂ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಬೆಂಗಳೂರು: ಗೃಹಜ್ಯೋತಿ ಯೋಜನೆಗೆ ಇಂದು (ಜೂ.29) 2,65,000 ಗ್ರಾಹಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಗೆ ಈವರೆಗೆ 80,99,932 ಗ್ರಾಹಕರು ನೋಂದಣಿ ಮಾಡಿಸಿದ್ದಾರೆ.
ನವದೆಹಲಿ: ಇಂದು (ಜೂ.29) ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದೇನೆ. ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಂದಿದ್ದೇನೆ. ಈಗ ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ಭೇಟಿ ಮಾಡುತ್ತೇನೆ. ಸಚಿವರ ಜತೆ ಏನೆಲ್ಲಾ ಚರ್ಚೆ ಮಾಡಿದ್ದೇನೆಂದು ಬೆಳಗ್ಗೆ ತಿಳಿಸುತ್ತೇನೆ ಎಂದು ನವದೆಹಲಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬಿಡ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಮಾಂಸಹಾರ ತ್ಯಜಿಸಿ ಬಕ್ರೀದ್ ಆಚರಣೆ ಮಾಡಿದ್ದಾರೆ. ಗ್ರಾಮಸ್ಥರ ನಿರ್ಣಯದಂತೆ ಮುಸ್ಲಿಮರು ಮಾಂಸಹಾರ ತ್ಯಜಿಸಿ ಸಿಹಿ ತಿಂದು ಬಕ್ರೀದ್ ಹಬ್ಬವನ್ನು ಆಚರಿಸಿದ್ದಾರೆ.
ನವದೆಹಲಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು (ಜೂ.29) ರಾತ್ರಿ 8 ಗಂಟೆಗೆ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಲಿದ್ದಾರೆ. ದೆಹಲಿಯ ಅಕ್ಬರ್ ರೋಡ್ ನಿವಾಸದಲ್ಲಿ ಭೇಟಿಯಾಗಲಿದ್ದು, ಮೇಕೆದಾಟು, ಕಳಸಾ ಬಂಡೂರಿ ಯೋಜನೆಗಳ ಕುರಿತು ಚರ್ಚಿಸಲಿದ್ದಾರೆ.
ಬಾಗಲಕೋಟೆ: ಬಕ್ರೀದ್ ಹಬ್ಬ ಹಿನ್ನೆಲೆ ಬಾದಾಮಿ ಪಟ್ಟಣದ ಹೊರವಲಯದಲ್ಲಿ ಗೋವುಗಳನ್ನು ಹತ್ಯೆ ಮಾಡಿದ ವ್ಯಕ್ತಿಯನ್ನು ಹಿಂದೂ ಪರ ಕಾರ್ಯಕರ್ತರು ಗಿಡಕ್ಕೆ ಕಟ್ಟಿ ಅವಾಚ್ಯ ಶಬ್ದದಿಂದ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಗೋವುಗಳನ್ನು ಹತ್ಯೆ ಮಾಡಿದ ವಿರುದ್ಧವಾಗಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಗೋ ಹತ್ಯೆಗೈದವರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರು: ಶ್ರಮ ಒಬ್ಬರದ್ದು, ಅನುಭವಿಸುವವರು ಮತ್ತೊಬ್ಬರು ಎಂಬ ವಿಧಾನಸೌಧದಲ್ಲಿ ಕೆಂಪೇಗೌಡ ಜಯಂತಿ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶ್ರಮ ಒಬ್ಬರದ್ದಾದರೆ, ಅನುಭವಿಸುವವರು ಮತ್ತೊಬ್ಬರು. ಇದು ನಡೆದುಕೊಂಡೇ ಬಂದಿದೆ ಏನೂ ಮಾಡಲಾಗದು. ವಿಧಾನಸೌಧಕ್ಕಾಗಿ ಕೆಂಗಲ್ ಹನುಮಂತಯ್ಯನವರು ಶ್ರಮ ವಹಿಸಿದರು. ಕೈದಿಗಳು ಕಾಲಿಗೆ ಸರಪಳಿ ಹಾಕಿಕೊಂಡೇ ಕಲ್ಲು ಹೊತ್ತು ಸಾಗಿಸಿದರು. ಆದರೆ ವಿಧಾನಸೌಧದಲ್ಲಿ ಬೇರೆಯವರು ಸವಲತ್ತು ಅನುಭವಿಸುತ್ತಿದ್ದಾರೆ. ಜೀವನವೇ ಹಾಗೆ ಎಂದಿದ್ದರು.
ಬೆಂಗಳೂರು: ಬಿಜೆಪಿ ನಾಯಕರು ಬಹಿರಂಗವಾಗಿ ಪಕ್ಷಕ್ಕೆ ದಕ್ಕೆ ತರುವಂತಹ ಹೇಳಿಕೆ ಹಿನ್ನೆಲೆ ಪಕ್ಷದ ರಾಜ್ಯ ಶಿಸ್ತು ಸಮಿತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ರೇಣುಕಾಚಾರ್ಯ ಸೇರಿ ಕೆಲವರಿಗೆ ಬಹಿರಂಗ ಹೇಳಿಕೆ ನೀಡದಂತೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸಕ್ಕೆ ಸಚಿವ ಜಮೀರ್ ಅಹ್ಮದ್ ಆಟೋದಲ್ಲಿ ಬಿರಿಯಾನಿ ಕಳುಹಿಸಿದ್ದರು. ಆದರೆ ಅನುಮತಿ ಇಲ್ಲದೆ ತಂದಿದ್ದ ಬಿರಿಯಾನಿಯನ್ನ ಒಳಗೆ ಬಿಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ಆಟೋದಲ್ಲಿ ತಂದಿದ್ದ ಬಿರಿಯಾನಿಯನ್ನು ವಾಪಸ್ ಕಳುಹಿಸಿದ್ದಾರೆ. ಆದರೆ ಅದೇ ಬಿರಿಯಾನಿ ಬೆನ್ಜ್ ಕಾರಿನಲ್ಲಿ ಹೋದಾಗ ಒಳಗೆ ಬಿಟ್ಟಿದ್ದಾರೆ. ನಂತರ ಬಿರಿಯಾನಿಯನ್ನು ಇಳಿಸಿ ವಾಪಸ್ ಕಳುಹಿಸಿದ್ದಾರೆ.
ಹಾಸನ: ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ. ಆಸ್ಪತ್ರೆಯ ಅವ್ಯವಸ್ಥೆ ಕಂಡು ಸಿಮೆಂಟ್ ಮಂಜು ಅಸಮಾಧಾನಗೊಂಡರು. ಈ ವೇಳೆ ಶಾಸಕ ಸಿಮೆಂಟ್ ಮಂಜು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಪತ್ರೆ ಹೆರಿಗೆ ವಾರ್ಡ್ನಲ್ಲೂ ಸೂಕ್ತ ರೀತಿಯ ನಿರ್ವಹಣೆ ಮಾಡಿಲ್ಲ. ಸಿಬ್ಬಂದಿ ಲಭ್ಯತೆ ಇದ್ದರೂ ಯಾಕೆ ಶುಚಿತ್ವ ಕಾಪಾಡುತ್ತಿಲ್ಲ. ಅಳವಡಿಸಿದ ಜನರೇಟರ್ ಬಳಸದ ವೈದ್ಯಾಧಿಕಾರಿಗಳ ವಿರುದ್ಧ ಗರಂ ಆದರು.
ಬೆಂಗಳೂರು: ಭ್ರಷ್ಟಾಚಾರದ ಪಿತಾಮಹ ಎಂದರೆ ಕಾಂಗ್ರೆಸ್. 60 ಪರ್ಸೆಂಟ್ ಕಮಿಷನ್ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ. ಕಮಿಷನ್ ಪಡೆಯಲು ಅಧಿಕಾರಿಗಳ ಜತೆ ಸುರ್ಜೇವಾಲ ಸಭೆ ನಡೆಸಿದ್ದಾರೆ. ಕೋಲಾರದಲ್ಲಿ ನಿಷ್ಟಾವಂತರಾಗಿ ಡಿಸಿ, ಸಿಇಒ ಕೆಲಸ ಮಾಡುತ್ತಿದ್ದರು. ಈಗ ನಿಷ್ಟಾವಂತ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಒಂದು ಸ್ಥಾನಕ್ಕೆ ನಾಲ್ಕು ಜನರ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಸಂಸದ ಮುನಿಸ್ವಾಮಿ ವಾಗ್ದಾಳಿ ಮಾಡಿದರು.
ಮಡಿಕೇರಿ: ಡಿಕೆ ಶಿವಕುಮಾರ್-ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ತುಂಬಾ ದಿನ ಉಳಿಯಲ್ಲ. ಸಂಸತ್ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನ ಆಗುತ್ತೆ. ಸಿದ್ದರಾಮಯ್ಯ ಸರ್ಕಾರದ ಯೋಜನೆಗಳಲ್ಲಿ ಯಾವ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ ಸರ್ಕಾರದ ನಿರ್ಧಾರದಿಂದ ಜನರು ಗೊಂದಲದಲ್ಲಿದ್ದಾರೆ. ಪ್ರಧಾನಿ ಮೋದಿಯವರನ್ನು ತೆಗಳುವುದರ ಮೂಲಕ ವಿಷಯಾಂತರ ಮಾಡಲಾಗುತ್ತಿದೆ. ಬೆಲೆ ಏರಿಕೆಗೂ ಪ್ರಧಾನಿ ನರೇಂದ್ರ ಮೋದಿಯನ್ನು ಕೇಳಿ ಅಂತಾರೆ. ಮೋದಿ ಟೊಮ್ಯಾಟೋ ಬೆಲೆ ಏರಿಕೆ ಮಾಡಿದ್ರಾ. ಬೆಲೆ ಏರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಕಾರಣ. ಸರ್ಕಾರದ ವಿರುದ್ಧ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಎಂದು ಮಡಿಕೇರಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಶೋಕ್ ಹೇಳಿದರು.
ಬೆಂಗಳೂರು: ಬಕ್ರೀದ್ ಹಬ್ಬ ಹಿನ್ನೆಲೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ತೆರಳಿದ್ದು, ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ನಜೀರ್ ಅಹ್ಮದ್ ನಿವಾಸ ಬೆಂಗಳೂರಿನ ಸಂಜಯನಗರದಲ್ಲಿದೆ.
ಕೊಪ್ಪಳ: ಅಕ್ಕಿ ಬದಲು ಹಣ ನೀಡುವ ನಿರ್ಧಾರಕ್ಕೆ ಬಿಜೆಪಿ ಟೀಕೆ ವಿಚಾರವಾಗಿ ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ ಬಿಜೆಪಿಯವರು ಇರುವುದೇ ಟೀಕೆ ಮಾಡುವುದಕ್ಕೆ. ಶಕ್ತಿ ಯೋಜನೆಯಿಂದ ಈಗಾಗಲೇ ಮಹಿಳೆಯರಿಗೆ ಅನುಕೂಲ ಆಗಿದೆ. ಅನ್ನಭಾಗ್ಯ ಯೋಜನೆಯಿಂದ ಸಹ ಬಡವರಿಗೆ ಉಪಯೋಗ ಆಗುತ್ತೆ. ಟೀಕೆ ಮಾಡುವವರು ಅನ್ನಭಾಗ್ಯ ಫಲಾನುಭವಿಗಳಲ್ಲ. ಎಲ್ಲ ಕಡೆ ಕೇಳಿದರೂ ಅಕ್ಕಿ ಸಿಕ್ಕಿಲ್ಲ, ಹೀಗಾಗಿ ಹಣ ನೀಡುತ್ತಿದ್ದೇವೆ. ಬಡವರು ನಮ್ಮ ಯೋಜನೆ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಬರುವ ಚುನಾವಣೆಯಲ್ಲೂ ಬಿಜೆಪಿಗೆ ಜನ ಬುದ್ಧಿ ಕಲಿಸುತ್ತಾರೆ. ಬಿಜೆಪಿಯವರು ಏನು ಅವಾಂತರ ಮಾಡಿದ್ದಾರೆ ಅನ್ನೋದು ಗೊತ್ತು. ಕೇಂದ್ರದ ಬೆಲೆ ಏರಿಕೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ಶಾಸಕ ರಾಘವೇಂದ್ರ ಹಿಟ್ನಾಳ್ ಕಿಡಿಕಾರಿದ್ದಾರೆ.
ಕೋಲಾರ: ಗ್ಯಾರಂಟಿ ಭರವಸೆ ನೀಡಿದ್ದು ಕಾಂಗ್ರೆಸ್ನವರು, ಬಿಜೆಪಿಯಲ್ಲ. ಸೋನಿಯಾ ಗಾಂಧಿ, ರಾಹುಲ್ರನ್ನು ಕೇಳಿ ಮಾತು ಕೊಟ್ಟಿದ್ದೀರಿ. ನಿಮ್ಮ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಹೋಗಿ ಕೇಳಿ. ಕಾಂಗ್ರೆಸ್ ಬಿಟ್ಟಿ ಭಾಗ್ಯಗಳ ಬಗ್ಗೆ ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದೆ. ಮೋದಿ ಮೇಲೆ ಗೂಬೆ ಕೂರಿಸಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಕೊಡುತ್ತೇವೆಂದು ಹೇಳಿದ್ದಾರೆ. ಹಾಗಾಗಿ 170 ರೂಪಾಯಿ ಅಲ್ಲ, 340 ರೂಪಾಯಿ ನೀಡಬೇಕು. 340 ರೂ. ನೀಡುವವರೆಗೂ ನಾವು ಬಿಡಲ್ಲ ಎಂದು ಕೋಲಾರದಲ್ಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.
ಆದಾಯಕ್ಕೂ ಪತ್ತೆಯಾದ ಆಸ್ತಿ ದಾಖಲೆಗಳಿಗೂ ತಾಳೆಯಾಗದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಕೆಆರ್ ಪುರ ತಹಶೀಲ್ದಾರ್ ಅವರನ್ನು ಮನೆಯಲ್ಲಿ ಬಂಧಿಸಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಸಂಜೆವರೆಗೆ ಲೋಕಾಯುಕ್ತ ಕಚೇರಿಯಲ್ಲಿ ಅಜಿತ್ ರೈ ವಿಚಾರಣೆ ನಡೆಯಲಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಉಡುಪಿ: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಮೇಲೆ ಮರವೊಂದು ಉರುಳಿ ಬಿದ್ದ ಘಟನೆ ಹಾಲಾಡಿ ರಸ್ತೆಯಲ್ಲಿ ನಡೆದಿದೆ. ಮಳೆ ಹಿನ್ನಲೆಯಲ್ಲಿ ರಸ್ತೆ ಪಕ್ಕದಲ್ಲಿದ್ದ ಮರ ರಸ್ತೆಗೆ ಉರುಳಿತ್ತು. ಅದೇ ಮಾರ್ಗವಾಗಿ ತೆರಳುತ್ತಿದ್ದ ಗುರುರಾಜ ಗಂಟಿಹೊಳೆ ಅವರು ಮರ ತೆರವು ಮಾಡಲು ನೆರವಾಗಿದ್ದಾರೆ. ಈ ವೇಳೆ ಚಿಕ್ಕ ಮರವೊಂದು ಉರುಳಿ ಬಿದ್ದಿದ್ದು, ಕೂಡಲೇ ಎಚ್ಚೆತ್ತ ಶಾಸಕರು ಪಕ್ಕಕ್ಕೆ ಓಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಯೋಜನೆಗಳಲ್ಲಿ ಯಾವ ಸ್ಪಷ್ಟತೆ ಇಲ್ಲ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಮಡಿಕೇರಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ನಿರ್ಧಾರದಿಂದ ಜನರು ಗೊಂದಲದಲ್ಲಿದ್ದಾರೆ. ಮೋದಿ ತೆಗಳುವುದರ ಮೂಲಕ ವಿಷಯಾಂತರ ಮಾಡಲಾಗುತ್ತಿದೆ. ಬೆಲೆ ಏರಿಕೆಗೂ ಪ್ರಧಾನಿ ನರೇಂದ್ರ ಮೋದಿಯನ್ನು ಕೇಳಿ ಅಂತಾರೆ. ಮೋದಿ ಟೊಮ್ಯಾಟೋ ಬೆಲೆ ಏರಿಕೆ ಮಾಡಿದ್ದಾರಾ? ಬೆಲೆ ಏರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಕಾರಣ. ಸರ್ಕಾರದ ವಿರುದ್ಧ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದರು.
ಉಡುಪಿ: ಬಿಪಿಎಲ್ ಕಾರ್ಡ್‌ದಾರರಿಗೆ 5 ಕೆಜಿ ಅಕ್ಕಿ ಬದಲು ಹಣ ಕೊಡಲು ರಾಜ್ಯ ಸರ್ಕಾರದ ನಿರ್ಧಾರ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಕೇಂದ್ರ ಸರಕಾರ ಬಿಪಿಎಲ್ ಇರುವವರಿಗೆ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ನೀಡುತ್ತಿದೆ. ಒಂದು ತಿಂಗಳಿಗೆ ಕೇಂದ್ರ ಸರಕಾರಕ್ಕೆ 18ರಿಂದ 19 ಸಾವಿರ ಕೋಟಿ ಖರ್ಚಾಗುತ್ತದೆ. ತೆಲಂಗಾಣದಲ್ಲಿ ಕೇಂದ್ರ ಸರಕಾರದ ಅಕ್ಕಿ ಎಂದು ರಶೀದಿ ನೀಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರು ಇದನ್ನು ನಮ್ಮ ಅಕ್ಕಿ ನಮ್ಮ ಅಕ್ಕಿ ಅಂತ ಹೇಳುತ್ತಿದ್ದಾರೆ. ಆಹಾರ ಭದ್ರತಾ ಕಾಯ್ದೆಗೆ ಸ್ಪಷ್ಟ ರೂಪಕೊಟ್ಟು ಅನುಷ್ಠಾನ ಮಾಡಿದ್ದು ನರೇಂದ್ರ ಮೋದಿಯವರು. ನೀವು ಈಗ ಅಕ್ಕಿ ಸಿಕ್ಕಿಲ್ಲ ಹಣ ಕೊಡುತ್ತಿದ್ದೇವೆ ಎನ್ನುತ್ತಿದ್ದೀರಿ. ನೀವು 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳುವಾಗ ಕೇಂದ್ರದ 5 ಕೆ.ಜಿ ಅಕ್ಕಿ ಸೇರಿ ಅಂತ ಹೇಳಿದ್ದೀರಾ ? ಹಾಗಾದರೆ ಕೇಂದ್ರ ನೀಡುವ ಅಕ್ಕಿಗೆ ರಾಜ್ಯದಿಂದ ಹಣ ನೀಡುತ್ತಿದ್ದೀರಾ? ಜನರಿಗೆ ತಪ್ಪು ಮಾಹಿತಿ ಒದಗಿಸಬೇಡಿ. ನೀವು ಹೇಳಿದ್ದು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು. ಹೀಗಾಗಿ 10 ಕೆಜಿ ಅಕ್ಕಿ ಕೊಡಬೇಕಲ್ವ? ಎಂದರು. 34 ರೂಪಾಯಿಗೆ ಅಕ್ಕಿ ಬರುವುದಿಲ್ಲ ಅದರಲ್ಲೂ ಹಣ ಉಳಿಸಿಕೊಳ್ಳಲು ಒದ್ದಾಟ ಮಾಡುತ್ತಿದ್ದೀರಿ. ದಯವಿಟ್ಟು ಕರ್ನಾಟಕದ ಜನವನ್ನು ತಪ್ಪು ಹಾದಿಗೆ ಎಳೆಯಬೇಡಿ. ಕೇಂದ್ರ ಸರಕಾರ ಕೊಡುವ ಅಕ್ಕಿ ಹೊರತುಪಡಿಸಿ 10 ಕೆಜಿ ಅಕ್ಕಿ ನೀಡಿ ಎಂದರು.
ಗದಗ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ ಸಿ ಪಾಟೀಲ್ ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ ಬಸ್ ಪ್ರಯಾಣ ಹೊರತುಪಡಿಸಿದ್ರೆ, ಉಳಿದ ಯೋಜನೆ ಜಾರಿ ಮಾಡಲು ಸಾಧ್ಯವಾಗ್ತಾಯಿಲ್ಲ. ಈವರಿಗೆ 2 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಆ 2 ಕೋಟಿ ಪ್ರಯಾಣದ ವೆಚ್ಚವನ್ನು ಸರ್ಕಾರ ಬರಿಸಬೇಕು ಎಂದರು.
ಬೆಂಗಳೂರು: ಬಿಜೆಪಿಯವರದ್ದು ಮನೆಯೊಂದು ನೂರು ಬಾಗಿಲು ಆಗಿದೆ. ಬಿಜೆಪಿ ಪಕ್ಷ ಛಿದ್ರ ಛಿದ್ರ ಆಗಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಅಂತಿಮ ಘಟ್ಟ ತಲುಪಿದೆ. ಎಷ್ಟೇ ಫೆವಿಕಾಲ್ ಹಾಕಿದರೂ ಕೂಡ ಬಿಜೆಪಿ ಜೋಡಿಸಲು ಆಗುವುದಿಲ್ಲ. ಪಾಪ ನಮ್ಮ ಗ್ಯಾರಂಟಿಗಳಿಂದ ತೊಂದರೆ ಆಗುತ್ತಿದೆ ಅವರಿಗೆ. ಉರಿದುಕೊಂಡಿದ್ದಾರೆ ಉರಿದುಕೊಳ್ಳಲಿ. ಬಿಜೆಪಿಯವರು ಒಂದೊಂದು ತರ ಮಾತಾಡುತ್ತಿದ್ದಾರೆ ಎಂದರು.
ಚಾಮರಾಜನಗರ: ಮೂರು ಬಾರಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದರೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಅಧಿಕಾರಿಗಳ ಸಭೆ ನಡೆಸಿಲ್ಲ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕಿದೆ. ಸಿದ್ದರಾಮಯ್ಯ ಅವರು ಹಿಂದೆ ಸಿಎಂ ಆಗಿದ್ದಾಗ 20ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದರು. ವಿಶೇಷ ಅನುದಾನವನ್ನೂ ನೀಡಿದ್ದರು. ಆದರೆ ಉಸ್ತುವಾರಿ ಸಚಿವರು ಜಿಲ್ಲಾ ಅಭಿವೃದ್ದಿಗೆ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ.
ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಜ್ವರದ ಕೇಸ್ ಹೆಚ್ಚಳ ಹಿನ್ನೆಲೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಸಭೆ ಕರೆದಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ನೇತೃತ್ವದಲ್ಲಿ ನಾಳೆ ನಡೆಯುವ ಈ ವರ್ಚುವಲ್ ಸಭೆಯಲ್ಲಿ ಎಲ್ಲ ರಾಜ್ಯಗಳ ಆರೋಗ್ಯ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ, ಮುಸ್ಲಿಂ ಬಂಧುಗಳಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು. ನಾವೆಲ್ಲರು ಮನುಷ್ಯರು, ಪರಸ್ಪರ ಪ್ರೀತಿಯಿಂದ ಇರಬೇಕು. ಕೆಲವು ಶಕ್ತಿಗಳು ಬೇಕು ಅಂತಾ ಅಹಿತಕರ ಮಾಡುತ್ತೇವೆ. ನಾವು ಸೊಪ್ಪು ಹಾಕಲು ಹೋಗಬಾರದು. ಎಲ್ಲರು ಪ್ರೀತಿಯಿಂದ ಇದ್ದರೆ ರಾಜ್ಯನು ಅಭಿವೃಧ್ಧಿ ಆಗುತ್ತದೆ. ಪ್ರೀತಿ ವಿಶ್ವಾಸದ ಮನಸ್ಸು ಎಲ್ಲರಿಗೆ ಬರಬೇಕು. ಇಂದು ಪ್ರಾರ್ಥನೆ ಮಾಡಿ ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ಕೇಳಿಕೊಂಡಿದ್ದೀರಿ ಎಂದರು.
ಬೆಂಗಳೂರು: ಬಕ್ರೀದ್ ಹಬ್ಬ ಪ್ರಯುಕ್ತ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ಸ್ಥಳೀಯ ಶಾಸಕ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಕೂಡ ಭಾಗಿಯಾಗಿದ್ದಾರೆ.
ತುಮಕೂರು: ಕೊರಟಗೆರೆಯ ಈದ್ಗಾ ಮೈದಾನದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪ್ರಪ್ರಥಮವಾಗಿ ಅಲ್ಲಾಗೆ ನಾನು ನಮನ ಸಲ್ಲಿಸುತ್ತೇನೆ. ಇಡೀ ವಿಶ್ವಕ್ಕೆ ಸಂದೇಶ ಕೊಡುವ ಬಕ್ರಿದ್ ಹಬ್ಬ ಇದು. ನಾನು ಎಲ್ಲರಿಗೂ ನಮನಗಳನ್ನ ಹೇಳುತ್ತೇನೆ. ಅಲ್ಲಾ ಎಲ್ಲರಿಗೂ ಅನೇಕ ರೀತಿ ಪರೀಕ್ಷೆ ಮಾಡುತ್ತಾನೆ. ಅದರಲ್ಲೂ ಮನುಷ್ಯರಿಗೆ ಹೆಚ್ಚು ಪರೀಕ್ಷೆ ಮಾಡುತ್ತಾನೆ. ಮಹಮ್ಮದ್ ಇಬ್ರಾಹಿಂ ಇಡೀ ವಿಶ್ವಕ್ಕೆ ಸಂದೇಶ ಕೊಟ್ಟಿದ್ದಾರೆ. ಇದು ಪವಿತ್ರವಾದ ಹಬ್ಬ. ನಾನು ಬಹಳ ಸಂತೋಷವಾಗಿ ನಿಮ್ಮೊಟ್ಟಿಗೆ ಭಾಗಿಯಾಗಿದ್ದೇನೆ. ಚುನಾವಣಾ ಸಂದರ್ಭದಲ್ಲಿ ನಿಮ್ಮ ಬಳಿ ಬಂದು ನಿಮ್ಮ ಅಶಿರ್ವಾದ ಕೇಳಿದ್ದೆ. ನಿವೆಲ್ಲಾ ಕೊಟ್ಟಿದ್ದೀರಾ, ಅಲ್ಲಾನ ಕೃಪೆಯಿಂದ ಇವತ್ತು ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮ ಅಶಿರ್ವಾದದಿಂದ ಗೃಹ ಸಚಿವನಾಗಿದ್ದೇನೆ. ಈ ರಾಜ್ಯದಲ್ಲಿ ಶಾಂತಿ ಕಾಪಾಡಬೇಕಾದ ಕೆಲಸ ನನ್ನದು. ಇದರಲ್ಲಿ ಯಾವುದೇ ಮುಲಾಜಿಲ್ಲದೇ ಕೆಲಸ ನಿಬಾಯಿಸುತ್ತೇನೆ ಎಂದರು.
ತುಮಕೂರು: ಬಕ್ರೀದ್ ಆಚರಣೆ ಪ್ರಯುಕ್ತ ಕೊರಟಗೆರೆಯ ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ ಸಾಮೂಹಿಕ ಪ್ರಾರ್ಥನೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭಾಗಿಯಾಗಿದ್ದಾರೆ. ಕಪ್ಪು ಟೋಪಿ ಧರಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಕ್ರೀದ್ ಆಚರಣೆಯಲ್ಲಿ ನೂರಾರು ಮುಸ್ಲಿಮರು ಭಾಗಿಯಾಗಿದ್ದಾರೆ.
ತ್ಯಾಗ – ಬಲಿದಾನದ ಸಂಕೇತವಾಗಿ ಆಚರಿಸಲ್ಪಡುವ ಪವಿತ್ರ ಬಕ್ರೀದ್ ಹಬ್ಬವು ನಾಡಿನಲ್ಲಿ ಸ್ನೇಹ, ಸೌಹಾರ್ದತೆಯು ಶಾಶ್ವತವಾಗಿ ನೆಲೆಸಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ. ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಹಾರೈಕೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪುತ್ರನೂ ಆಗಿರುವ ಮಾಜಿ ಶಾಸಕ ಡಾ. ಯತಿಂದ್ರ ಅವರಿಗೆ ಉನ್ನತ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿರುವ ಬೆಂಬಲಿಗರು ಯತಿಂದ್ರ ಹೆಸರಲ್ಲಿ ನಂಜನಗೂಡು ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ತಗಡೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರಿಂದ ಪೂಜೆ ಸಲ್ಲಿಸಲಾಗಿದೆ. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಡಾ. ಯತಿಂದ್ರ ಹಗಲಿರುಳು ಶ್ರಮಿಸಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆ ಯತಿಂದ್ರಗೆ ಉನ್ನತ ಸ್ಥಾನಮಾನ ನೀಡಬೇಕು. ಈ ಮೂಲಕ ಕ್ಷೇತ್ರಕ್ಕೆ ಹಾಗೂ ಜಿಲ್ಲೆಗೆ ಮತ್ತಷ್ಟು ಸೇವೆ ಅವರಿಂದ ದೊರೆಯಲಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಮಂಡ್ಯ: ಅಕ್ಕಿ ಬದಲು ಹಣ ನೀಡಿದರೆ ಕುಟುಂಬಗಳಲ್ಲಿ ಗೊಂದಲ ಮೂಡಲಿದೆ ಎಂದು ಸರ್ಕಾರಕ್ಕೆ ಪಡಿತರ ವಿತರಕರ ಸಂಘದ ರಾಜ್ಯಧ್ಯಕ್ಷ ಕೃಷ್ಣಪ್ಪ ಕಿವಿಮಾತು ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ದುಡ್ಡು ಕೊಡುತ್ತೇವೆ ಎಂದು ಹೇಳಿಲ್ಲ. ಹೇಳಿದಂತೆ ಆಹಾರ ಪದಾರ್ಥಗಳನ್ನೆ ನೀಡಿ. ಅಕ್ಕಿ ಕೊಡಲಾಗದಿದ್ದರೆ ಸಕ್ಕರೆ, ಕಾಳುಗಳನ್ನ ಕೊಡಿ. ದುಡ್ಡು ಕೊಡುವುದರಿಂದ ಮನೆಗಳಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಲಿದೆ. ಕುಟುಂಬಗಳಲ್ಲಿ ಹಣದ ಕುರಿತು ಮನಸ್ಥಾನ ಉಂಟಾಗುವ ಸಾದ್ಯತೆಯಿದೆ. ಎರಡು ರಾಜ್ಯಗಳಲ್ಲಿ ಈ ರೀತಿ ಹಣ ನೀಡಿದಾಗ ಯೋಜನೆ ಪಲಕಾರಿಯಾಗಿಲ್ಲ ಎಂದು ಹೇಳಿದ್ದಾರೆ.
ಹಾಸನ : ಪುಂಡರ ಬೈಕ್ ವೀಲ್ಹಿಂಗ್ ಹುಚ್ಚಾಟಕ್ಕೆ ಇಬ್ಬರು ಯುವತಿಯರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಸಾಲಗಾಮೆ ರಸ್ತೆಯ ಸಹ್ಯಾದ್ರಿ ಚಿತ್ರಮಂದಿರ ಬಳಿ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ವೀಲ್ಹಿಂಗ್ ಮಾಡಿಕೊಂಡು ಬಂದು ಪುಂಡರು ಭೂಮಿಕಾ ಹಾಗೂ ಸಿಂಚನೆಗೆ ಡಿಕ್ಕಿ ಹೊಡೆದಿದ್ದಾರೆ. ಭೂಮಿಕಾ ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಬೆಂಗಳೂರಿಗೆ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇತ್ತ, ಆಕ್ರೋಶಗೊಂಡ ಸಾರ್ವಜನಿಕರು ಡಿಕ್ಕಿ ಹೊಡೆದ ಶಾಕೀರ್ ಹಾಗೂ ಅಪ್ರಾಪ್ತನ ಬೆಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು: ಆಪ್ತನ ಸೋಲಿಗೆ ಕಾರಣ ಆದವರ ವಿರುದ್ಧ ಶಿಸ್ತು ಕ್ರಮ ಕೋರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ಕೃಷ್ಣರಾಜ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ಅಲೆಯ ನಡುವೆಯೂ 7 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಸೋಮಶೇಖರ್ ಸೋಲಿಗೆ ಕಾಂಗ್ರೆಸ್‌ನ ಪ್ರದೀಪ್‌ಕುಮಾರ್ ಹಾಗೂ ನವೀನ್‌ಕುಮಾರ್ ಕಾರಣ ಎಂದು ಎಂ.ಕೆ ಸೋಮಶೇಖರ್ ಅವರು ಸಿದ್ದರಾಮಯ್ಯಗೆ ದೂರು ನೀಡಿದ್ದರು.
Published On - 7:34 am, Thu, 29 June 23