ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ (Karnataka Cabinet Meeting) ವಲಸಿಗ ಸಚಿವರ ವಾಪಸಾತಿ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ ಎನ್ನುವ ಮಾಹಿತಿ ಟಿವಿ9ಗೆ ಲಭ್ಯವಾಗಿದೆ. ಕಾಂಗ್ರೆಸ್ನಿಂದ (Congress Party) ವಲಸೆ ಬಂದಿರುವ ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಭೈರತಿ ಬಸವರಾಜ, ಎಂಟಿಬಿ ನಾಗರಾಜ್, ನಾರಾಯಣಗೌಡ, ಸುಧಾಕರ್ ಸೇರಿದಂತೆ ವಲಸಿಗ ಸಚಿವರು ಸಭೆಯಲ್ಲಿ ಈ ಬೆಳವಣಿಗೆಗೆ ಸಂಬಂಧಿಸಿದಂತೆ ತಮ್ಮ ಸ್ಪಷ್ಟನೆ ನೀಡಿದರು. ನಾವು ಕಾಂಗ್ರೆಸ್ಗೆ ಹೋಗುತ್ತೇವೆಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ. ನಾವು ಎಲ್ಲಿಗೂ ಹೋಗುವುದಿಲ್ಲ. ಬಿಜೆಪಿಯಲ್ಲಿಯೇ (BJP) ಉಳಿಯುತ್ತೇವೆ ಎಂದು ಅವರೆಲ್ಲರೂ ಸ್ಪಷ್ಟವಾಗಿ ತಿಳಿಸಿದರು. ಬಿಜೆಪಿ ಸೇರ್ಪಡೆ ಸಮಯದಲ್ಲಿ ನಡೆದ ಬೆಳವಣಿಗೆಗಳನ್ನು ನೆನಪಿಸಿಕೊಂಡ ಕೆಲವರು, ಅಂದಿನ ಬೆಳವಣಿಗೆಗಳನ್ನು ಮೆಲುಕು ಹಾಕಲು ಆರಂಭಿಸಿದರು.
ತಮ್ಮ ನಿವಾಸಕ್ಕೆ ಬಿಜೆಪಿ ನಾಯಕರು ಬಂದಿದ್ದ ಬಗ್ಗೆ ಸಚಿವ ಎಂಟಿಬಿ ನಾಗರಾಜ್ ವಿವರಿಸಲು ಆರಂಭಿಸಿದರು. ‘ಹಿಂದೆ ನಡೆದಿದ್ದನ್ನು ಈಗ ಹೇಳುವುದು ಬೇಡ’ ಎಂದು ಸಚಿವ ಅಶೋಕ್, ಎಂಟಿಬಿ ನಾಗರಾಜ್ ಅವರನ್ನು ಸುಮ್ಮನಿರಿಸಿದರು. ಸಚಿವ ಮುನಿರತ್ನ ಮಾತನಾಡಿ, ‘ನಾವು ಯಾವತ್ತಿದ್ದರೂ ವಲಸಿಗರೇ. ನಮ್ಮನ್ನು ಇಂದಿಗೂ ವಲಸಿಗರು ಎಂದೇ ಕರೆಯುತ್ತಿದ್ದಾರೆ. ಮುಂದಿನ ಬಾರಿ ಸರ್ಕಾರ ಬಂದರೂ ನಮ್ಮನ್ನು ವಲಸಿಗರು ಅಂತ್ಲೇ ಕರೆಯುತ್ತಾರೆ’ ಎಂದರು. ಸಚಿವ ನಾರಾಯಣಗೌಡ ಸಹ ‘ಕೊನೆಯವರೆಗೂ ಬಿಜೆಪಿಯಲ್ಲಿಯೇ ಉಳಿಯುತ್ತೇವೆ. ಪಕ್ಷ ಬಿಡುವುದಿಲ್ಲ’ ಎಂದು ಖಚಿತವಾಗಿ ನುಡಿದರು.
‘ನಿಮಗೆ ನನ್ನ ಮತ್ತು ಪಕ್ಷದ ಬೆಂಬಲ ಸದಾ ಇರುತ್ತದೆ. ಯಾವುದೇ ಸಮಸ್ಯೆಯಿಲ್ಲ. ಆತಂಕ ಬೇಡ. ಸಚಿವರಾಗಿ ನಿಮ್ಮ ಕಾರ್ಯನಿರ್ವಹಣೆ ಬಗ್ಗೆ ವರಿಷ್ಠರಿಗೂ ಮೆಚ್ಚುಗೆಯಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಸಚಿವರಾದ ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಭೈರತಿ ಬಸವರಾಜ, ಎಂಟಿಬಿ ನಾಗರಾಜ್, ನಾರಾಯಣ ಗೌಡ, ಡಾ. ಸುಧಾಕರ್ ಸೇರಿದಂತೆ ಹಲವು ವಲಸಿಗ ಸಚಿವರು ತಮ್ಮ ಸ್ಪಷ್ಟನೆಗಳನ್ನು ನೀಡಿದರು. ‘ನಾವೆಲ್ಲರೂ ಪಕ್ಷಕ್ಕೆ ನಿಷ್ಠರಾಗಿರುತ್ತೇವೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಚರ್ಚೆಗೆ ಅಂತ್ಯ ಹಾಡಿದರು.
3 ನಿಗಮಗಳ ವಿಲೀನಕ್ಕೆ ಸಂಪುಟ ಅಸ್ತು: 400 ಪಶುವೈದ್ಯರ ನೇಮಕಾತಿಗೆ ಅನುಮೋದನೆ
ಕರ್ನಾಟಕ ಸರ್ಕಾರದ ಸುಪರ್ದಿಯಲ್ಲಿರುವ ಮೂರು ನಿಗಮಗಳನ್ನು ವಿಲೀನಗೊಳಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಅರಣ್ಯ ಅಭಿವೃದ್ಧಿ ನಿಗಮ, ಅರಣ್ಯ ಕೈಗಾರಿಕಾ ನಿಗಮ ಮತ್ತು ಗೇರು ಅಭಿವೃದ್ಧಿ ನಿಗಮಗಳನ್ನು ವಿಲೀನಗೊಳಿಸಲು ಸರ್ಕಾರವು ನಿರ್ಧರಿಸಿದೆ ಎಂದು ಸಚಿವ ಸಂಪುಟ ಸಭೆಯ ವಿವರಗಳನ್ನು ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತಿಳಿಸಿದರು. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿದ್ಯಾವಿಕಾಸ ಕಾರ್ಯಕ್ರಮದ ಸಮವಸ್ತ್ರಕ್ಕೆ ₹ 73.63 ಕೋಟಿ ನೀಡಲು ನಿರ್ಧರಿಸಲಾಗಿದೆ ಎಂದರು.
ಲೋಕಾಯುಕ್ತದಲ್ಲಿ ಇನ್ನೂ ಸ್ವಲ್ಪ ದಿನ ಮೂರ್ನಾಲ್ಕು ಸಿಬ್ಬಂದಿಯನ್ನು ಮುಂದುವರಿಸುತ್ತೇವೆ. ಸನ್ನಡತೆ ಅಧಾರದಲ್ಲಿ 166 ಕೈದಿಗಳ ಬಿಡುಗಡೆಗೆ ನಿರ್ಧರಿಸಲಾಗಿದೆ. ಚಾಮುಂಡೇಶ್ವರಿ ದೇಗುಲದ ಮೂಲಸೌಕರ್ಯಕ್ಕೆ ₹ 92.81 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟದಲ್ಲಿ ಸ್ವಾಮಿತ್ವ ಯೋಜನೆಗೆ ₹ 287 ಕೋಟಿ ಅನುದಾನ ನೀಡಲಾಗಿದೆ. ಗ್ರಾಮೀಣ ವಸತಿ ಹಕ್ಕು, ಕೃಷಿ ಭೂಮಿಯ ಹಕ್ಕುಗಳ ದಾಖಲೆಗಳನ್ನು ಹಾಗೂ ಪಟ್ಟಣ, ನಗರದ ಆಸ್ತಿಗಳ ದಾಖಲೆ ಸಿದ್ಧಪಡಿಸಲು ಸಮೀಕ್ಷೆ ನೆರವಾಗಲಿದೆ ಎಂದರು. ಕೆಟಿಪಿಪಿ ಕಾಯ್ದೆಯ ಅನ್ವಯ ಅರ್ಹ ಖಾಸಗಿ ಏಜೆನ್ಸಿಗಳಿಂದ ಡ್ರೋಣ್ ಮೂಲಕ ಸಮೀಕ್ಷೆ ನಡೆಸಲಾಗುವುದು. ಇದಕ್ಕಾಗಿ ₹ 287 ಕೋಟಿ ಮೊತ್ತಕ್ಕೆ ಆಡಳಿತಾತ್ಮಕ ಅನುದಾನ ಸಿಕ್ಕಿದೆ ಎಂದರು.
ಇದನ್ನೂ ಓದಿ: 17 ಶಾಸಕರು ಬಿಜೆಪಿಗೆ ಬರದಿದ್ದರೆ ಯಾರೂ ಸಚಿವರಾಗುತ್ತಿರಲಿಲ್ಲ; ಗುಟ್ಟಾಗಿ ಸಭೆ ನಡೆಸಿದವರಿಗೆ ಬಾಲಚಂದ್ರ ಜಾರಕಿಹೊಳಿ ಟಾಂಗ್
Published On - 6:35 pm, Thu, 27 January 22