17 ಶಾಸಕರು ಬಿಜೆಪಿಗೆ ಬರದಿದ್ದರೆ ಯಾರೂ ಸಚಿವರಾಗುತ್ತಿರಲಿಲ್ಲ; ಗುಟ್ಟಾಗಿ ಸಭೆ ನಡೆಸಿದವರಿಗೆ ಬಾಲಚಂದ್ರ ಜಾರಕಿಹೊಳಿ ಟಾಂಗ್
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ತ್ಯಾಗದಿಂದ ತಾವು ಪವರ್ ಎಂಜಾಯ್ ಮಾಡುತ್ತಿದ್ದೀರಿ. 17 ಶಾಸಕರು ಬಿಜೆಪಿಗೆ ಬರದಿದ್ದರೆ ಯಾರೂ ಮಂತ್ರಿಯೂ ಆಗುತ್ತಿರಲಿಲ್ಲ, ರಾಜ್ಯಸಭಾ ಸದಸ್ಯರೂ ಆಗ್ತಿರಲಿಲ್ಲ ಎನ್ನುವ ಮೂಲಕ ಗೌಪ್ಯ ಸಭೆಯಲ್ಲಿ ಭಾಗಿಯಾಗಿದ್ದವರಿಗೆ ಬಾಲಚಂದ್ರ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.
ಬೆಳಗಾವಿ: ಕೆಲವರು ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲಿರುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿ ಇರುವುದಿಲ್ಲ. ಸದ್ಯದಲ್ಲೇ ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್, ಜೆಡಿಎಸ್, ಬಿಜೆಪಿಯವರಲ್ಲಿ ಯಾರು ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ. 2023ರ ಚುನಾವಣೆಗೆ ಅರಭಾವಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಬಿಜೆಪಿ (BJP) ಬಿಟ್ಟು ಬೇರೆ ಪಕ್ಷದಿಂದ ಸ್ಪರ್ಧೆ ಮಾಡೋದಿಲ್ಲ. ವಿಧಾನ ಪರಿಷತ್ ಚುನಾವಣೆ ವೇಳೆ ಶುರುವಾದ ಭಿನ್ನಾಭಿಪ್ರಾಯವನ್ನು ಎಲ್ಲರೂ ಸೇರಿ ಬಗೆಹರಿಸಿಕೊಳ್ಳುತ್ತೇವೆ. ಆದಷ್ಟು ಬೇಗ ಎಲ್ಲರೂ ಒಗ್ಗೂಡಿ ಹೋಗುವ ಪ್ರಯತ್ನ ಮಾಡುತ್ತೇವೆ ಎಂದು ಗೋಕಾಕ್‌ನಲ್ಲಿ ಕೆಎಂಎಫ್ (KMF) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ಬಿಜೆಪಿ ನಾಯಕರ ಗೌಪ್ಯ ಸಭೆ ವಿಚಾರವಾಗಿ ಗೋಕಾಕ್‌ನಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಪಿ. ರಾಜೀವ್ ಅಧಿಕೃತ ಬಿಜೆಪಿ ಸಭೆ ಅಲ್ಲ ಅಂದಿದ್ದರು. ಉಮೇಶ್ ಕತ್ತಿಯವರ ಹೇಳಿಕೆ ನೋಡಿದ್ದೆ ಮಹಾಂತೇಶ್ ಕವಟಗಿಮಠ ಸಭೆ ಕರೆದಿದ್ರು ಅಂದಿದ್ದರು. ಪಕ್ಷದ ಸಭೆ ಅಂದ್ರೆ ಜಿಲ್ಲಾಧ್ಯಕ್ಷರು ಸೇರಿ ಎಲ್ಲರೂ ಇರ್ತಾರೆ. ನನಗೆ, ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿಗೆ ಆಹ್ವಾನ ಬಂದಿಲ್ಲ. ಈ ಸಭೆ ಅಧಿಕೃತವೋ ಅನಧಿಕೃತವೋ ಪಕ್ಷದಿಂದ ಹೇಳಬೇಕು. ಒಂದು ವರ್ಷ ಬಿಟ್ಟು ಚುನಾವಣೆ ಇದೆ, ಹೈಕಮಾಂಡ್‌ಗೆ ಒಬ್ಬರಿಗೊಬ್ಬರು ದೂರು ಕೊಡಲು ಟೈಮೂ ಇಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ನಡೆಯುತ್ತಿರೋದು ಪಕ್ಷದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ ಎನ್ನುವ ಮೂಲಕ ಬೆಳಗಾವಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ.
ಪಕ್ಷದೊಳಗಿನ ಸಮಸ್ಯೆಗಳ ಬಗ್ಗೆ ನಮ್ಮ ಮುಖಂಡರು ಸೇರಿ ಬಗೆಹರಿಸಿಕೊಂಡರೆ ಒಳ್ಳೆಯದಾಗುತ್ತದೆ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದ್ದೇ ಇರುತ್ತವೆ, ವಿಚಾರಗಳು ಬೇರೆ ಬೇರೆ ಇರುತ್ತವೆ, ವೈಮನಸ್ಸು ಇರುತ್ತವೆ. ಭಿನ್ನಾಭಿಪ್ರಾಯವನ್ನು ಎಲ್ಲರೂ ಕೂಡಿ ಬಗೆಹರಿಸಿಕೊಳ್ಳುತ್ತೇವೆ. ಪಕ್ಷದ ಮುಖಂಡರು, ಸಂಘ ಪರಿವಾರದವರು ಎಲ್ಲ ಗಮನಿಸುತ್ತಿದ್ದಾರೆ ಎಂದು ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಜಾರಕಿಹೊಳಿ ಸಹೋದರರನ್ನು ದೂರವಿಟ್ಟು ಸಭೆ ಮಾಡಿದವರಿಗೆ ಬಾಲಚಂದ್ರ ಜಾರಕಿಹೊಳಿ ಟಾಂಗ್ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ನಾನು ತೊಡಗಿಲ್ಲ, ರಮೇಶ್ ಜಾರಕಿಹೊಳಿಯೂ ತೊಡಗಿಲ್ಲ. ಪವರ್ ಎಂಜಾಯ್ ಮಾಡುವವರಲ್ಲಿ ನಾನು ಒಂದು ವಿನಂತಿ ಮಾಡುತ್ತೇನೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಇವರ ತ್ಯಾಗದಿಂದ ತಾವು ಪವರ್ ಎಂಜಾಯ್ ಮಾಡುತ್ತಿದ್ದೀರಿ. ಅಧಿಕಾರ ಕೊಟ್ಟ ಯಾರನ್ನೂ ನೀವು ಮರೆಯಬೇಡಿ. 17 ಶಾಸಕರು ಬಿಜೆಪಿಗೆ ಬರದಿದ್ದರೆ ಯಾರೂ ಮಂತ್ರಿಯೂ ಆಗುತ್ತಿರಲಿಲ್ಲ, ರಾಜ್ಯಸಭಾ ಸದಸ್ಯರೂ ಆಗ್ತಿರಲಿಲ್ಲ, ಯಾರೂ ಉಪಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ ಎನ್ನುವ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದ ಲಕ್ಷ್ಮಣ್ ಸವದಿ, ಉಮೇಶ್ ಕತ್ತಿ, ಜೊಲ್ಲೆ ದಂಪತಿಗೆ ಪರೋಕ್ಷವಾಗಿ ಬಾಲಚಂದ್ರ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.
ಲಖನ್ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ:
ಈ ನಡುವೆ ಲಖನ್ ಜಾರಕಿಹೊಳಿ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ರಾಜಕಾರಣದಲ್ಲಿ ಲಖನ್ ಜಾರಕಿಹೊಳಿ ವ್ಯಾಪಾರ ಮಾಡುತ್ತಾರಷ್ಟೇ. ಲಖನ್ ರಾಜ್ಯ ರಾಜಕಾರಣವನ್ನು ಮಾಡುವವರಲ್ಲ. ಅವನ ವ್ಯಾಪ್ತಿ ಗೋಕಾಕ್ ಮುನ್ಸಿಪಾಲಿಟಿಯಷ್ಟೇ. ಲಖನ್ ತನ್ನ ಶಕ್ತಿ ಏನೆಂಬುದು ನೋಡಿಕೊಳ್ಳಲಿ. ಅವರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ. ಲಖನ್ ಜಾರಕಿಹೊಳಿ ತನ್ನ ಇತಿಮಿತಿಯಲ್ಲಿ ರಾಜಕಾರಣ ಮಾಡಲಿ ಎಂದು ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹಾಗೇ, ಕಾಂಗ್ರೆಸ್‌ನ 16 ಜನ ಬಿಜೆಪಿಗೆ ಬರುತ್ತಾರೆಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಬಿಜೆಪಿಯಲ್ಲಿ 120 ಸೀಟ್ ಇದ್ದು ಹೌಸ್‌ಫುಲ್ ಆಗಿವೆ. ಇನ್ನು 16 ಜನರನ್ನು ಎಲ್ಲಿ ಕೂರಿಸುತ್ತಾರೆ? ಟಾಪ್ ಮೇಲೆ ಕೂರಿಸ್ತಾರಾ? ಅಥವಾ ಕೆಳಗೆ ಕೂರಿಸ್ತಾರಾ? ರಮೇಶ್ ಜಾರಕಿಹೊಳಿ ಮೇಲಿಂದ ಮೇಲೆ ಬಾಂಬ್ ಹಾಕುತ್ತಿದ್ದಾರೆ. ಕೆಲವು ಬಾಂಬ್ ಸ್ಫೋಟವಾಗುತ್ತದೆ, ಕೆಲವು ಸ್ಫೋಟವಾಗುವುದಿಲ್ಲ. ಬಾಂಬ್ ಸಿಡಿಯುತ್ತದೆ ಎಂದು ಕಿವಿ ಮುಚ್ಚಿಕೊಳ್ಳಬೇಕಷ್ಟೆ. ರಮೇಶ್ ಜಾರಕಿಹೊಳಿ ಟೈಮ್ ಪಾಸ್ ಮಾಡ್ತಿದ್ದಾರೆ ಎಂದು ಗೋಕಾಕ್‌ನಲ್ಲಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ರಾಜಕೀಯ ವ್ಯಾಪಾರ ಮಾಡುತ್ತಾರೆ. ಇವರೇನು ಸಮಾಜ ಸೇವೆ ಮಾಡುವವರಲ್ಲ. ಬಿಜೆಪಿಗೆ ಹೋಗುತ್ತೇವೆಂದು ಕಾಂಗ್ರೆಸ್‌ಗೆ ಬ್ಲ್ಯಾಕ್‌ಮೇಲ್ ಮಾಡುತ್ತಾರೆ, ಕಾಂಗ್ರೆಸ್‌ಗೆ ಹೋಗ್ತೇವೆಂದು ಬಿಜೆಪಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಇವರಿಬ್ಬರೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರಷ್ಟೇ ಎಂದು ಸಹೋದರರ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. 6 ತಿಂಗಳ ಬಳಿಕ ಪಕ್ಷಾಂತರ ನಡೆಯುತ್ತದೆ. ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆಗೆ ಹೀಗೆ 6 ತಿಂಗಳ ಕಾಲ ಎಲ್ಲವೂ ನಡೆಯುತ್ತದೆ ಎಂದು ಗೋಕಾಕ್‌ನಲ್ಲಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕಾಂಗ್ರೆಸ್‌ನವರು ಬಿಜೆಪಿಗೆ ಹೋಗುವ ಸ್ಥಿತಿಯಲ್ಲಿಲ್ಲ. ಬಿಜೆಪಿ, ಜೆಡಿಎಸ್‌ವರು ಕಾಂಗ್ರೆಸ್‌ಗೆ ಬರುತ್ತಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೇಳಿರುವುದು ಸತ್ಯ. ಕಾಂಗ್ರೆಸ್‌ನಿಂದ ಹೋದ ಸಚಿವರು, ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಹೋದವರು ಮತ್ತೆ ಪಕ್ಷಕ್ಕೆ ವಾಪಾಸ್ ಬರುತ್ತಾರೆ. ಯಾರು ಬರುತ್ತಾರೆಂದು ನಮ್ಮ ನಾಯಕರಿಗೆ ಗೊತ್ತು ಎಂದು ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇದನ್ನೂ ಓದಿ: ಲಕ್ಷ್ಮಣ ಸವದಿ ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ; ಟಿವಿ9ಗೆ ಎಂಎಲ್ಸಿ ಲಖನ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಅವರೇನು ದೊಡ್ಡವರೂ ಅಲ್ಲ, ಸಣ್ಣವರೂ ಅಲ್ಲ: ಜಾರಕಿಹೊಳಿ ಬ್ರದರ್ಸ್‌ಗೆ ಸಚಿವ ಉಮೇಶ್ ಕತ್ತಿ ಟಾಂಗ್