ಮುಗಿಯದ ಸಿಎಂ ಸ್ಥಾನದ ಜಟಾಪಟಿ; ಕಾಂಗ್ರೆಸ್​ ಹೈಕಮಾಂಡ್​ನಿಂದ ನಾಳೆ ಬೆಳಗ್ಗೆ ದೆಹಲಿಯಲ್ಲಿ ಅಂತಿಮ ಸಭೆ

|

Updated on: May 16, 2023 | 9:03 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಪಟ್ಟು ಬಿಡದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಅಂತಿಮ ಸಭೆ ನಿಗದಿಪಡಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ನಾಳೆಯ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಮುಗಿಯದ ಸಿಎಂ ಸ್ಥಾನದ ಜಟಾಪಟಿ; ಕಾಂಗ್ರೆಸ್​ ಹೈಕಮಾಂಡ್​ನಿಂದ ನಾಳೆ ಬೆಳಗ್ಗೆ ದೆಹಲಿಯಲ್ಲಿ ಅಂತಿಮ ಸಭೆ
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ
Follow us on

ನವದೆಹಲಿ: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆಯುವ ಮೂಲಕ ಅಧಿಕಾರ ಗಳಿಸಿರುವ ಕಾಂಗ್ರೆಸ್​​ ಪಕ್ಷಕ್ಕೀಗ ಮುಖ್ಯಮಂತ್ರಿ ಆಯ್ಕೆಯೇ ಬಹುದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿರುವ ವೀಕ್ಷಕರು ಆ ಕುರಿತು ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಒಪ್ಪಿಸಿದ್ದರು. ಅದಾದ ನಂತರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಇಬ್ಬರ ಜತೆಗೂ ಹಲವು ಸುತ್ತಿನ ಮಾತುಕತೆ ನಡೆಸಿದೆ. ಆದಾಗ್ಯೂ, ಮಂಗಳವಾರ ರಾತ್ರಿಯಾದೂ ಅಂತಿಮ ಒಪ್ಪಂದಕ್ಕೆ ಬರುವಲ್ಲಿ ವಿಫಲವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಪಟ್ಟು ಬಿಡದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಅಂತಿಮ ಸಭೆ ನಿಗದಿಪಡಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ನಾಳೆಯ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಈ ಮಧ್ಯೆ, ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​ ನಿವಾಸದಲ್ಲಿ ಸಮಾಲೋಚನೆ ನಡೆಸಿದ್ದಾರೆ. ಏನು ಚರ್ಚೆಯಾಗಿದೆ ಎಂಬ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿದ ಡಿಕೆ ಶಿವಕುಮಾರ್! ಏನದು?

ಮತ್ತೊಂದೆಡೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆ ಮಾತುಕತೆ ನಡೆಸಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟುಹಿಡಿದಿದ್ದಾರೆ.

ಸಿಎಂ ಸ್ಥಾನ ನೀಡದಿದ್ದರೆ ಸರ್ಕಾರದ ಭಾಗವಾಗುವುದಿಲ್ಲ; ಡಿಕೆಶಿ

ಖರ್ಗೆ ಭೇಟಿ ವೇಳೆ ಸಿಎಂ ಸ್ಥಾನಕ್ಕಾಗಿ ಆಗ್ರಹಿಸಿದ ಡಿಕೆ ಶಿವಕುಮಾರ್​, ಮುಖ್ಯಮಂತ್ರಿ ಸ್ಥಾನ ನೀಡಿದರೆ ಉತ್ತಮವಾಗಿ ಕೆಲಸ ಮಾಡುತ್ತೇನೆ. ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದಂತೆ ಉತ್ತಮವಾಗಿ ಕೆಲಸ ಮಾಡುವೆ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಎಂ ಸ್ಥಾನ ನೀಡದಿದ್ದರೆ ಕೇವಲ ಶಾಸಕನಾಗಿ ಮುಂದುವರಿಯುತ್ತೇನೆ. ಸರ್ಕಾರದ ಭಾಗವಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಪ್ರತಿಕ್ರಿಯಿಸಿದ ಖರ್ಗೆ, ಎಲ್ಲಾ ವಾಸ್ತವಾಂಶ ಗೊತ್ತಿದೆ. ನಾನು ಇತರರ ಜೊತೆ ಮಾತನಾಡಿ ಮುಂದಿನ ವಿಚಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಈ ಮಧ್ಯೆ, ನಾಯಕರ ಭೇಟಿ ವೇಳೆ ಮಲ್ಲಿಕಾರ್ಜುನ ಖರ್ಗೆಯಿಂದ ರಿಪೋರ್ಟ್ ಬಗ್ಗೆಯೂ ಚರ್ಚೆಯಾಗಿದೆ. ವೀಕ್ಷಕರು ನೀಡಿರುವ ರಿಪೋರ್ಟ್​ನಲ್ಲಿರುವ ಮಾಹಿತಿಯನ್ನು ಡಿಕೆಶಿ ಹಾಗೂ ಸಿದ್ದರಾಮಯ್ಯಗೆ ಖರ್ಗೆ ತಿಳಿಸಿದ್ದಾರೆ. ಸಂಖ್ಯಾಬಲ, ಶಾಸಕರ ಅಭಿಪ್ರಾಯ, ರಾಜಕೀಯ ಲೆಕ್ಕಾಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ವೀಕ್ಷರ ನೀಡಿರುವ ರಿಪೋರ್ಟ್ ಜತೆ ನಾಯಕರ ಅಭಿಪ್ರಾಯ ಸಂಗ್ರಹಿಸಿ ರಾಹುಲ್​ ಗಾಂಧಿಗೆ ಖರ್ಗೆ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:01 pm, Tue, 16 May 23