ಕುರ್ಚಿ ಕದನದ ನಡುವೆ ಪೋಸ್ಟ್​ ಕಾಳಗ: ಡಿಕೆಶಿಗೆ ಸಿದ್ದರಾಮಯ್ಯ ನೇರಾನೇರ ಕೌಂಟರ್

ಅಧಿಕಾರ ಹಸ್ತಾಂತರವಾಗಿ ನಮ್ಮ ನಡುವೆ ಏನೂ ಇಲ್ಲ ಎಂದು ಇಷ್ಟು ದಿನ ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​​ ಅವರ ನಡುವಿನ ಮನಸ್ತಾಪ ಈಗ ಬಹಿರಂಗಗೊಂಡಿದೆ. ಬೆಳಗ್ಗೆ ಡಿಕೆಶಿ ತಮ್ಮ ಎಕ್ಸ್​​ ಖಾತೆಯಲ್ಲಿ ಮಾಡಿದ್ದ 'ಕೊಟ್ಟ ಮಾತು' ಪೋಸ್ಟ್​​ಗೆ ಸಿದ್ದರಾಮಯ್ಯ ನೇರಾನೇರ ಕೌಂಟರ್​​ ಕಟೊಟ್ಟಿದ್ದಾರೆ. ಆ ಮೂಲಕ ಇಬ್ಬರ ನಡುವಿನ ಕಾಳಗ ಮತ್ತೊಂದು ಹಂತ ತಲುಪಿತಾ ಎನ್ನುವ ಅನುಮಾನ ಮೂಡಿದೆ.

ಕುರ್ಚಿ ಕದನದ ನಡುವೆ ಪೋಸ್ಟ್​ ಕಾಳಗ: ಡಿಕೆಶಿಗೆ ಸಿದ್ದರಾಮಯ್ಯ ನೇರಾನೇರ ಕೌಂಟರ್
ಪೋಸ್ಟರ್​​ ವಾರ್​​

Updated on: Nov 27, 2025 | 7:48 PM

ಬೆಂಗಳೂರು, ನವೆಂಬರ್​​ 27: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ಅವರ ನಡುವಿನ ಕುರ್ಚಿ ಕಾಳಗ ಈಗ ಪೋಸ್ಟ್​​ ವಾರ್​​ ತನಕ ತಲುಪಿದೆ. ಕೊಟ್ಟ ಮಾತಿನ ಶಕ್ತಿಯೇ ಜಗತ್ತಿನ ಶಕ್ತಿ ಎಂಬ ಡಿಕೆಶಿ ಪೋಸ್ಟ್​​ಗೆ ಸಿದ್ದರಾಮಯ್ಯ ನೇರಾ ನೇರ ಕೌಂಟರ್​ ಕೊಟ್ಟಿದ್ದಾರೆ. ಆ ಮೂಲಕ ಪಟ್ಟದ ಕದನ ಮತ್ತೊಂದು ಹಂತ ತಲುಪಿದೆ. ಕರ್ನಾಟಕದ ಜನತೆಗೆ ನಾವು ಕೊಟ್ಟ ಮಾತು ಕೇವಲ ಘೋಷಣೆ ಅಲ್ಲ, ನಾವು ಜನತೆಗೆ ಕೊಟ್ಟ ಮಾತೇ ನಮಗೆ ಜಗತ್ತು ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​​ ಮಾಡಿರೋದು ಸಂಚಲನ ಮೂಡಿಸಿದೆ.

ಸಿದ್ದರಾಮಯ್ಯ ಪೋಸ್ಟ್​​ನಲ್ಲಿ ಏನಿದೆ?


ಮಾತು ಎಂದರೆ ಶಕ್ತಿ ಅಲ್ಲ, ಅದು ಜನರ ಹಿತಕ್ಕಾಗಿ ಲೋಕವನ್ನು ಉತ್ತಮಗೊಳಿಸಿದಾಗ ಮಾತ್ರ ಶಕ್ತಿಯಾಗುತ್ತದೆ. ನಮ್ಮ ರಾಜ್ಯದ ಮಹಿಳೆಯರಿಗೆ 600 ಕೋಟಿಗೂ ಹೆಚ್ಚು ಉಚಿತ ಪ್ರಯಾಣಗಳನ್ನು ನೀಡಿದ ಶಕ್ತಿ ಯೋಜನೆಯ ಯಶಸ್ಸನ್ನು ಘೋಷಿಸುವ ಹೆಮ್ಮೆ ನನಗಿದೆ. ಸರ್ಕಾರ ರಚಿಸಿದ ಮೊದಲ ತಿಂಗಳಲ್ಲೇ ನಾವು ನಮ್ಮ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ ಮಾತಿನಲ್ಲಿ ಅಲ್ಲ, ಕಾರ್ಯದಲ್ಲಿ. ನನ್ನ ಮೊದಲ ಅವಧಿಯಲ್ಲಿ (2013–18) ನೀಡಿದ 165 ಭರವಸೆಗಳ ಪೈಕಿ 157ನ್ನು, ಅಂದರೆ ಶೇ. 95ಕ್ಕೂ ಹೆಚ್ಚನ್ನು ಈಡೇರಿಸಿದ್ದೇವೆ. ಈ ಅವಧಿಯಲ್ಲಿನ 593 ಭರವಸೆಗಳಲ್ಲಿ 243ಕ್ಕೂ ಹೆಚ್ಚು ಈಗಾಗಲೇ ಪೂರ್ಣಗೊಂಡಿವೆ. ಉಳಿದ ಪ್ರತಿಯೊಂದು ಭರವಸೆಯನ್ನೂ ಬದ್ಧತೆ, ನಂಬಿಕೆ, ಮತ್ತು ಕಾಳಜಿಯೊಂದಿಗೆ ಖಚಿತವಾಗಿ ಪೂರೈಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಕರ್ನಾಟಕದ ಜನತೆ ಕೊಟ್ಟ ಆದೇಶವು ಒಂದು ಕ್ಷಣಿಕ ವಿಶ್ವಾಸವಲ್ಲ ,ಅದು ಐದು ವರ್ಷಗಳ ಪೂರ್ಣ ಹೊಣೆ. ನಾನು ಸೇರಿದಂತೆ ಕಾಂಗ್ರೆಸ್ ಪಕ್ಷವು, ಸಹಾನುಭೂತಿ ಮತ್ತು ಧೈರ್ಯ ಎಂಬ ಮೌಲ್ಯಗಳೊಂದಿಗೆ ಜನರಿಗಾಗಿ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಕರ್ನಾಟಕಕ್ಕೆ ನೀಡಿದ ನಮ್ಮ ಮಾತು ಒಂದು ಘೋಷಣೆ ಅಲ್ಲ, ಅದೇ ನಮಗೆ ಜಗತ್ತು ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ ಅಹಿಂದ ನಾಯಕರು

ಡಿಕೆಶಿ ಮಾಡಿದ್ದ ಪೋಸ್ಟ್​​ನಲ್ಲಿ ಏನಿತ್ತು?

ಪಟ್ಟದಾಟದ ನಡುವೆ ಇಂದು ಬೆಳಗ್ಗೆಯಷ್ಟೇ ಡಿಸಿಎಂ ಡಿಕೆಶಿ ಮಾರ್ಮಿಕವಾಗಿ ಪೋಸ್ಟ್​​ ಮಾಡಿದ್ದರು. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿ ದೊಡ್ಡ ಶಕ್ತಿ ಎಂದು ಹೇಳುವ ಮೂಲಕ, ಕೊಟ್ಟ ಮಾತನ್ನು ಮತ್ತೆ ನೆನಪಿಸಿದ್ದರು. ಯಾರೇ ಆಗಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ಜಡ್ಜ್ ಆಗಲಿ, ಅಧ್ಯಕ್ಷರಾಗಲಿ, ಯಾರೇ ಆಗಿರಲಿ. ನನ್ನನ್ನು ಸೇರಿಸಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಬರೆದುಕೊಂಡಿದ್ದರು. ಆದರೆ ಈ ವಿಚಾರವಾಗಿ ಮಾಧ್ಯಮಗಳು ಪ್ರಶ್ನಿಸಿದಾಗ ನಾನು ಆ ರೀತಿ ಪೋಸ್ಟ್​​ ಮಾಡಿಲ್ಲ ಎಂದು ಡಿಕೆಶಿ ತಿಳಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:21 pm, Thu, 27 November 25