ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಛತ್ತೀಸ್ಗಢ ಅಧಿವೇಶನದಲ್ಲಿ ಕೊಡೆ ಹಿಡಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿರುವುದು ಕೀಳು ಮಟ್ಟದ ಪ್ರಚಾರದ ಗಿಮಿಕ್ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ (MB Patil) ಟೀಕಿಸಿದರು. ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಅವರು ಕೈ ಮುಗಿದು ನಿಂತಾಗ, ಅವರ ಎದುರಿಗೇ ಹಾದುಹೋದ ಮೋದಿ ಕೈ ಮುಗಿದಿರಲಿಲ್ಲ. ಅಡ್ವಾಣಿ ಅವರಿಗೆ ಅಪಮಾನ ಮಾಡಿದ್ದರು. ಇನ್ನು ಅದೇ ಪರಿಸ್ಥಿತಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬರಲಿದೆ ಎಂದು ಪಾಟೀಲ್ ಹೇಳಿದರು.
ವಿಧಾನಸಭಾ ಚುನಾವಣೆಗೆ ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಅಭಿವೃದ್ಧಿ ಎಂಬುದೇ ನಮ್ಮ ಮುಖ್ಯ ಘೋಷಣೆಯಾಗಿದೆ. ಈ ಐದು ಅಂಶಗಳೊಂದಿಗೆ ಪ್ರಚಾರ ಆರಂಭಿಸುತ್ತೇವೆ ಎಂದು ಎಂಬಿ ಪಾಟೀಲ್ ತಿಳಿಸಿದರು. ಉಚಿತ ಘೋಷಣೆಗಳನ್ನು ಮನೆ ಮನೆಗೆ ತೆಗೆದುಕೊಂಡು ಹೋಗುತ್ತೇವೆ. ಬಿಜೆಪಿ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಆದರೆ, ನಾವು ರಾಜ್ಯದ ಜನರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಸ್ಟಾರ್ ಪ್ರಚಾರಕರ ಕೊರತೆ ಇಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಅಧಿಕಾರದ ರಿಮೋಟ್ ಪರಿವಾರದ ಕೈಯಲ್ಲಿ; ಪ್ರಧಾನಿ ಮೋದಿ ವಾಗ್ದಾಳಿ
ಸಿದ್ದರಾಮಯ್ಯ, ಡಿಕೆಶಿ, ಪ್ರಿಯಾಂಕಾ, ರಾಹುಲ್ ಸ್ಟಾರ್ ಪ್ರಚಾರಕರೇ. ರಾಜ್ಯ ಬಿಜೆಪಿ ನಾಯಕರಿಗೆ ಅವರು ಸೋಲುತ್ತಾರೆ ಎಂಬುದು ಚೆನ್ನಾಗಿ ಗೊತ್ತಾಗಿದೆ. ಅದೇ ಕಾರಣಕ್ಕೆ ಪದೇಪದೆ ರಾಜ್ಯಕ್ಕೆ ಮೋದಿ, ಅಮಿತ್ ಶಾ ಬರ್ತಿದ್ದಾರೆ. ರಾಜ್ಯದಲ್ಲಿ ನರೇಂದ್ರ ಮೋದಿ ಮ್ಯಾಜಿಕ್ ನಡೆಯಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ಗೆ ಕಾಂಗ್ರೆಸ್ ಪಕ್ಷ ಅಪಮಾನ ಮಾಡಿತ್ತು ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಎಂಬಿ ಪಾಟೀಲ್, ವೀರೇಂದ್ರ ಪಾಟೀಲ್ಗೆ ಅನಾರೋಗ್ಯ ಆಗಿತ್ತು. ಆದರೆ ಬಿಎಸ್ ಯಡಿಯೂರಪ್ಪ ಅವರಿಗೆ ಏನಾಗಿತ್ತು ಎಂದು ಪ್ರಶ್ನಿಸಿದರು. ಸಿಎಂ ಸ್ಥಾನದಿಂದ ಬಿಎಸ್ವೈಯನ್ನು ಯಾಕೆ ಇಳಿಸಿದರು? ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಇನ್ನೊಬ್ಬ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದರು. ತಿರುಗುಬಾಣ ಆಗುತ್ತದೆ ಎಂದು ಲಿಂಗಾಯತರನ್ನು ಸಿಎಂ ಮಾಡಿದರು. ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದರು. ಅಂಥವರು ಈ ಬಾರಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎನ್ನುತ್ತಾರೆ. ಲಿಂಗಾಯತರ ಮನವೊಲಿಸಲು ಮೋದಿ ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ನಾಟಕ ಎಲ್ಲರಿಗೂ ಅರ್ಥ ಆಗಿದೆ ಎಂದು ಎಂಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ