ರಸ್ತೆ ಗುಂಡಿ ಮುಚ್ಚಿದ ಶಾಲಾ ವಿದ್ಯಾರ್ಥಿಗಳು, ವಿಡಿಯೋ ಶೇರ್ ಮಾಡಿ ಸರ್ಕಾರಕ್ಕೆ ತಿವಿದ ಕಾಂಗ್ರೆಸ್ ಶಾಸಕ
ಸರಕಾರ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದರಲ್ಲಿ ನಿರತವಾಗಿದ್ದರೆ, ವಿದ್ಯಾರ್ಥಿಗಳು ಗುಂಡಿಗಳನ್ನು ಮುಚ್ಚುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ವಿಡಿಯೋ ಶೇರ್ ಮಾಡಿ ಸರ್ಕಾರಕ್ಕೆ ತಿವಿದಿದ್ದಾರೆ.
ಬೆಂಗಳೂರು/ಮೈಸೂರು: ರಸ್ತೆ ಗುಂಡಿಗಳಿಂದ ಸಾಕಷ್ಟು ಅಪಘಾತ ಸಂಭವಿಸುತ್ತಲೇ ಇವೆ.ರಸ್ತೆ ಗುಂಡಿ ತಪ್ಪಿಸಲು ಹೋಗಿ ಸಾಕಷ್ಟು ಬೈಕ್ ಸವಾರರು ಪ್ರಾಣ ಕಳೆದುಕೊಂಡ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ಬೇರೆ-ಬೇರೆ ಜಿಲ್ಲೆಗಳಲ್ಲಿ ರಸ್ತೆ ಗುಂಡಿಗಳಿಗೆ ಅವೆಷ್ಟು ಜೀವಗಳು ಬಲಿಯಾಗಿವೆಯೋ ಲೆಕ್ಕವಿಲ್ಲ. ಆದ್ರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಏನು ಕಾಣದಂತೆ ಕಣ್ಮಿಚ್ಚಿ ಕುಳಿತುಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಈ ಸುದ್ದಿ.
ಹೌದು…ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನರಸಿಂಹಸ್ವಾಮಿ ಬಡಾವಣೆಯ ಸರ್ಕಾರಿ ಶಾಲೆ ಮುಂಭಾಗದ ರಸ್ತೆ ಗುಂಡಿಗಳನ್ನು ವಿದ್ಯಾರ್ಥಿಗಳೇ ಮುಚ್ಚಿದ್ದಾರೆ. ನಿಜವಾಗಲೂ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನಾಚಿಕೆ ಆಗಬೇಕು. ಈ ವಿಡಿಯೋವನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ.
While Govt is busy painting schools saffron, the students are filling up potholes. The priorities of the Govt is clear, please their masters. pic.twitter.com/ojpFrkp1nP
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 21, 2022
ಸರಕಾರ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದರಲ್ಲಿ ನಿರತವಾಗಿದ್ದರೆ, ವಿದ್ಯಾರ್ಥಿಗಳು ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಈ ಮೂಲಕ ಸರ್ಕಾರದ ಆದ್ಯತೆಗಳು ಸ್ಪಷ್ಟವಾಗಿವೆ ಎಂದು ಪ್ರಿಯಾಂಕ್ ಖರ್ಗೆ ವಿಡಿಯೋ ಸಮೇತ ಬಿಜೆಪಿ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
ವಿವೇಕ ಯೋಜನೆಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವುದಕ್ಕೆ ಮುಂದಾಗಿದೆ. ಆದ್ರೆ, ಇದೀಗ ಇದಕ್ಕೆ ಪ್ರಿಯಾಂಕ್ ಖರ್ಗೆ ಶಾಲಾ ವಿದ್ಯಾರ್ಥಿಗಳು ರಸ್ತೆ ಗುಂಡಿ ಮುಚ್ಚುವ ವಿಡಿಯೋ ಶೇರ್ ಮಾಡಿಕೊಂಡು ಬೊಮ್ಮಾಮಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
Published On - 12:28 am, Tue, 22 November 22