ಕುಮಾರಸ್ವಾಮಿ ವೇಗ ನೋಡಿದರೆ ಬಿಜೆಪಿ ಅಧ್ಯಕ್ಷರಾದರೂ ಅಚ್ಚರಿ ಇಲ್ಲ: ವಿಜಯೇಂದ್ರಗೆ ಎಚ್ಚರಿಸಿದ ಕಾಂಗ್ರೆಸ್

ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ ರಾಜಕೀಯ ಸಮೀಕರಣ ಬದಲಾದಂತೆ ಅವರ ಧಾರ್ಮಿಕ ನಿಲುವುಗಳಲ್ಲೂ ಸಹ ಬದಲಾಗುತ್ತಿವೆ. ಹೌದು...ಮೊದಲೆಲ್ಲಾ ಬಲಪಂಥಿಯ ನಿಲುವುಗಳನ್ನು ವಿರೋಧ ಮಾಡುತ್ತಾ ಬಂದಿರುವ ಕುಮಾರಸ್ವಾಮಿ ಇದೀಗ ಬಲಪಂಥದ ಕಡೆ ವಾಲಿದ್ದಾರೆ. ಇದಕ್ಕೆ ಕಾಂಗ್ರೆಸ್​​ ವ್ಯಂಗ್ಯವಾಡಿದೆ.

ಕುಮಾರಸ್ವಾಮಿ ವೇಗ ನೋಡಿದರೆ ಬಿಜೆಪಿ ಅಧ್ಯಕ್ಷರಾದರೂ ಅಚ್ಚರಿ ಇಲ್ಲ: ವಿಜಯೇಂದ್ರಗೆ ಎಚ್ಚರಿಸಿದ ಕಾಂಗ್ರೆಸ್

Updated on: Dec 11, 2023 | 7:06 PM

ಬೆಂಗಳೂರು, (ಡಿಸೆಂಬರ್ 11): ಜೆಡಿಎಸ್​​ ಎನ್​ಡಿಎ ಜೊತೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಇತ್ತ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ (HD Kumaraswamy) ಅವರ ಧಾರ್ಮಿಕ ನಿಲುವುಗಳು ಸಹ ಬದಲಾಗಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಟ್ರೋಲ್​ ಆಗುತ್ತಿದ್ದಾರೆ. ಇದೀಗ ಕಾಂಗ್ರೆಸ್ ಸಹ ಕುಮಾರಸ್ವಾಮಿ ಕಾಲೆಳೆದಿದ್ದು, ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಎಚ್​ಡಿ ಕುಮಾರಸ್ವಾಮಿಯವರು ಕೋಮುವಾದದ ಕಡೆ ಹೋಗುತ್ತಿರುವ ವೇಗ ನೋಡಿದರೆ ಬಿಜೆಪಿ ಅಧ್ಯಕ್ಷರಾದರೂ ಅಚ್ಚರಿಯಾಗಬೇಕಿಲ್ಲ ಎಂದು​ ಲೇವಡಿ ಮಾಡಿದೆ.

ಈ ಬಗ್ಗೆ ಎಕ್ಸ್​(ಟ್ವಿಟ್ಟರ್​) ಪೋಸ್ಟ್​ ಮಾಡಿರುವ ಕಾಂಗ್ರೆಸ್, ಕುಮಾರಸ್ವಾಮಿಯವರು ಬಿಜೆಪಿಯವರಿಗಿಂತ ಹೆಚ್ಚು ಆರ್​ಎಸ್​ಎಸ್​ ಭಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಅವರು ಕೋಮುವಾದ ಕಡೆಗೆ ಹೋಗುತ್ತಿರುವ ವೇಗ ನೋಡಿದರೆ ಕಲವೇ ದಿನಗಳಲ್ಲಿ ಬಿಜೆಪಿಗಳನ್ನೇ ಓವರ್​ ಟೇಕ್​ ಮಾಡಿ ಬಿಜೆಪಿ ಅಧ್ಯಕ್ಷರಾದರೂ ಅಚ್ಚರಿ ಇಲ್ಲ ಎಂದು ಕುಮಾರಸ್ವಾಮಿ ಅವರ ಕಾಲೆಳೆದಿದೆ.

ಇದನ್ನೂ ಓದಿ: 50 ಜನ ಕರೆದುಕೊಂಡು ಬರುವ ಬಗ್ಗೆ ಕೇಂದ್ರದ ನಾಯಕರ ಬಳಿ ಮಾತನಾಡಿದ್ದಾರೆ: ಹೊಸ ಬಾಂಬ್ ಸಿಡಿದ ಹೆಚ್​ಡಿಕೆ


ಬಿಜೆಪಿಯವರ ಒಳಜಗಳ ಕುಮಾರಸ್ವಾಮಿಯವರಿಗೆ ವರದಾನವಾಗಲಿದೆ ಎಂದಿರುವ ಕಾಂಗ್ರೆಸ್, ಬಿಜೆಪಿ ಹೈಕಮಾಂಡ್​ ಕುಮಾರಸ್ವಾಮಿಯವರನ್ನು ರಾಜ್ಯ ಬಿಜೆಪಿಗೆ ಪ್ರತಿಷ್ಠಾಪಿಸಿದರೂ ಅತಿಶಯೋಕ್ತಿ ಇಲ್ಲ ಎಂದು ಲೇವಡಿ ಮಾಡಿದೆ. ಅಲ್ಲದೇ ಎಚ್ಚರದಿಂದಿರಿ ಎಂದು ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಹೇಳಿದೆ.

ಮೊನ್ನೇ ಅಷ್ಟೇ ಕುಮಾರಸ್ವಾಮಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಆರ್​ಎಸ್​ಎಸ್​ ಪ್ರಭಾಕರ್ ಭಟ್ ಅವರ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಇಲ್ಲಿಗೆ ಬಂದ ಬಳಿಕ ಮನಪರಿವರ್ತನೆಯಾಗಿದೆ ಎಂದು ಆರ್​ಎಸ್​ಎಸ್​ ಹಾಗೂ ಪ್ರಭಾಕರ್ ಭಟ್ ಅವರನ್ನು ಹಾಡಿಹೊಗಳಿದ್ದರು.

ದೇಶದ ಸಂಸ್ಕೃತಿ ಜತೆಗೆ ಗುರು ಹಿರಿಯರನ್ನು ಗೌರವಿಸುವ ಮಾನವೀಯ ಗುಣ, ರಾಷ್ಟ್ರಭಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಮೈಗೂಡಿಸುವ ಇಂತಹ ಶಿಕ್ಷಣ ಸಂಸ್ಥೆಗಳ ಅಗತ್ಯವಿದೆ. ಪ್ರಭಾಕರ್ ಭಟ್​ ಅವರ ಬಗ್ಗೆ ನನಗೆ ಅಷ್ಟು ತಿಳಿದಿರಲಿಲ್ಲ. ಇಲ್ಲಿ ಬಾರದಿದ್ದರೆ ನನಗೆ ದೊಡ್ಡ ನಷ್ಟ ಉಂಟಾಗುತ್ತಿತ್ತು. ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತಿರುವ ಪ್ರಭಾಕರ್ ಭಟ್ಟರ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ಹಾಗಾಗಿ ಈ ಹಿಂದೆ ಅವರನ್ನು ಏನೇನೋ ಟೀಕಿಸಿದ್ದೇನೆ. ಈಗ ನನ್ನಲ್ಲಿ ಪರಿವರ್ತನೆ ಆಗಿದೆ ಎಂದು ಪ್ರಭಾಕರ್ ಭಟ್​ ಅವರನ್ನು ಗುಣಗಾನ ಮಾಡಿದ್ದರು.

ಈ ಗುಣಗಾನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಇತರೆ ಪೇಜ್​ಗಳು ಟ್ರೋಲ್​ ಮಾಡುತ್ತಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:05 pm, Mon, 11 December 23