ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಡಿ.13 ರಂದು ಬಿಜೆಪಿ ಬೃಹತ್ ಪ್ರತಿಭಟನೆ
ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಇಂದು (ಡಿ.11) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು.
ಬೆಂಗಳೂರು, ಡಿಸೆಂಬರ್ 11: ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಬೆಳಗಾವಿಯಲ್ಲಿ ಬಿಜೆಪಿ (BJP) ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಇಂದು (ಡಿ.11) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು. ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಹ ಭಾಗಿಯಾಗಲಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿಗಳನ್ನು ಸಮರ್ಪಕವಾಗಿ ಜಾರಿಗೆ ತಂದಿಲ್ಲವೆಂದು ವಿರೋಧ ಪಕ್ಷಗಳು ಗುಡುಗುತ್ತಿವೆ. ಇದು ಮಾತ್ರವಲ್ಲದೇ ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ನಡೆದಿದೆ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಆವರಿಸಿರುವ ಬರಗಾಲವನ್ನು ಸರ್ಕಾರ ಸಮರ್ಪಕವಾಗಿ ನಿಭಾಯಿಸುತ್ತಿಲ್ಲ. ಮತ್ತು ರೈತರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲವೆಂದು ಬಿಜೆಪಿ ನಾಯಕರು ಸರ್ಕಾರಕ್ಕೆ ಟೀಕಾ ಪ್ರಹಾರ ಮಾಡುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಲು ನಿಶ್ಚಯಿಸಿದ್ದಾರೆ.
ಇದನ್ನೂ ಓದಿ: ಸದನದಲ್ಲಿ ಪ್ರತಿಭಟನೆ ಮುಂದುವರಿಸಿದ ವಿಪಕ್ಷ ಬಿಜೆಪಿ, ನನ್ನ ಹೇಳಿಕೆಗೆ ಬದ್ಧ ಎಂದ ಜಮೀರ್
ವಿಧಾನಸಭೆ ಚುನಾವಣೆಯಲ್ಲಿ ಹಿನಾಯ ಸೋಲುಕಂಡ ಬಳಿಕ ಬಿಜೆಪಿಗೆ ಜಂಗಾಬಲವೇ ಅಡಗಿಹೋದಂತೆ ಆಗಿದೆ. ಹೌದು ಚುನಾವಣೆ ಬಳಿಕ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷ ಯಾರು ಎಂಬುವುದು ಯಕ್ಷ ಪ್ರಶ್ನೆಯಾಗಿತ್ತು. ಈ ಯಕ್ಷ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಚುನಾವಣೆ ನಡೆದು 6 ತಿಂಗಳ ನಂತರ. ವಿರೋಧ ಪಕ್ಷದ ನಾಯಕನಾಗಿ ಆರ್. ಅಶೋಕ ಮತ್ತು ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ನೇಮಕವಾಗಿದ್ದಾರೆ.
ಇದೀಗ ತಾವೆ ಘೋಷಿಸಿಕೊಂಡಂತೆ ಜೋಡೆತ್ತುಗಳ ರೀತಿ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇವೆ ಲೋಕಸಭೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಎಂದು ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ಅದರಂತೆ ಇದೀಗ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಸೋಲಿನಿಂದ ಹತಾಶರಾಗಿರುವ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಯತ್ನಿಸುತ್ತಿದ್ದಾರೆ. ಅಲ್ಲದೆ ನಾವೆಲ್ಲರು ಒಗ್ಗಟ್ಟಾಗಿದ್ದೇವೆ ಎಂದು ತೋರಿಸಲು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:53 pm, Mon, 11 December 23