ಆಪರೇಷನ್ ಹಸ್ತ ಮಧ್ಯೆ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟ: ಹೈಕಮಾಂಡ್ಗೆ ಪತ್ರ ಬರೆದ ಸಚಿವರು
ಇತ್ತೀಚೆಗೆಷ್ಟೇ ಶಾಸಕರು ಹಾಗೂ ಸಚಿವರ ನಡುವಿನ ಅಂತರ್ ಯುದ್ಧವನ್ನು ಸಿಎಂ ಸಿದ್ದರಾಮಯ್ಯ ಅವರು ಸಭೆ ಮಾಡಿ ನಿವಾರಿಸಿದ್ದರು. ಬಳಿಕ ಇದೀಗ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದ್ದು, ಬಿಜೆಪಿಯ ಕೆಲ ನಾಯಕರಿಗೆ ಗಾಳ ಹಾಕಿದೆ. ಆದರೆ, ಇದರ ಮಧ್ಯೆ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟವಾಗಿದೆ. ಅಲ್ಲದೇ ಕೆಲ ಸಚಿವರು ಹೈಕಮಾಂಡ್ಗೆ ಪತ್ರ ಬರೆದಿದ್ದು, ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರು, (ಆಗಸ್ಟ್ 18): ಸದ್ಯ ಕರ್ನಾಟಕದಲ್ಲಿನಲ್ಲಿ ಆಪರೇಷನ್ ಹಸ್ತ (Operation Hasta) ಜೋರಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಬಿಜೆಪಿ(BJP) ಶಾಸಕರುಗಳಿಗೆ ಗಾಳ ಹಾಕಿದೆ. ಇದರ ಮಧ್ಯೆ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಹೌದು…ವಿಧಾನ ಪರಿಷತ್ನ ಮೂವರ ಸದಸ್ಯರ ನಾಮನಿರ್ದೇಶನ (MLC nominees) ವಿಚಾರ ರಾಜ್ಯ ಕಾಂಗ್ರೆಸ್ನಲ್ಲಿ ಹಲ್ಚಲ್ ಸೃಷ್ಟಿಸಿದೆ. ಪಕ್ಷದೊಳಗೆ ತೀವ್ರ ವಿರೋಧವಿದ್ದರೂ ಸಿಎಂ ಸಿದ್ದರಾಮಯ್ಯ ಮೂವರ ಪಟ್ಟಿಯನ್ನ ರಾಜಭವನಕ್ಕೆ ಪಟ್ಟಿ ರವಾನಿಸಿದ್ದಾರೆ. ಸಮಾಜಸೇವೆ ಕೋಟಾದಡಿ ಸುಧಾಮ್ ದಾಸ್‌ಗೆ ಅವಕಾಶ ನೀಡಿದ್ದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಸೀತಾರಾಂಗೆ ಸ್ಥಾನ ಕಲ್ಪಿಸಲಾಗಿದೆ. ಇನ್ನು ಕಲಾವಿದರ ಕೋಟಾದ ಅಡಿಯಲ್ಲಿ ಉಮಾಶ್ರೀಗೆ ಮಣೆ ಹಾಕಲಾಗಿದೆ. ಆದ್ರೆ, ಸುಧಾಮ್ ದಾಸ್ ಆಯ್ಕೆಗೆ ಕಾಂಗ್ರೆಸ್ನಲ್ಲೇ ವಿರೋಧ ವ್ಯಕ್ತವಾಗಿದೆ.
ಸುಧಾಮ್ ದಾಸ್‌ಗೆ ಪರಿಷತ್ ಸ್ಥಾನ ನೀಡಿರುವುದಕ್ಕೆ ದಲಿತ ಸಮುದಾಯದ ಸಚಿವರಾದ ಡಾ.ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ ಆರ್.ಬಿ.ತಿಮ್ಮಾಪುರ ಕೆ.ಹೆಚ್.ಮುನಿಯಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಪಕ್ಷದೊಳಗೆ ತೀವ್ರ ವಿರೋಧವಿದ್ದರೂ ಸಿಎಂ ಸಿದ್ದರಾಮಯ್ಯ ಮೂವರ ಪಟ್ಟಿಯನ್ನ ರಾಜಭವನಕ್ಕೆ ಪಟ್ಟಿ ರವಾನಿಸಿರುವುದು ಬಂಡಾಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ರಾಜ್ಯಪಾಲರ ಅಂಗಳದಲ್ಲಿ MLC ನಾಮ ನಿರ್ದೇಶನದ ಚೆಂಡು, ಬಂಡಾಯಕ್ಕೆ ದಾರಿ ಮಾಡುತ್ತಾ ಸಿಎಂ ನಿರ್ಧಾರ
ಚುನಾವಣೆಗೂ ಮುನ್ನ ಐಕ್ಯತಾ ಸಮಾವೇಶದ ಮೂಲಕ ದಲಿತರನ್ನ ಒಗ್ಗಟ್ಟಿಸಿದ್ದೇವೆ. ಪಕ್ಷ ಅಧಿಕಾರಕ್ಕೆ ಬರಲು ದಲಿತರ ಕೊಡುಗೆ ದೊಡ್ಡದಿದೆ. ಚುನಾವಣೆಗೆ ಮುನ್ನ ದಲಿತ ನಾಯಕರ ಶ್ರಮ ದೊಡ್ಡದಿದೆ. ಈಗ ಏಕಾಏಕಿ ನಮ್ಮ ಅಭಿಪ್ರಾಯ ಕೇಳದ ನಿನ್ನೆ ಮೊನ್ನೆ ಬಂದ ಮಾಜಿ ಇಡಿ ಅಧಿಕಾರಿಗೆ ಮಣೆ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಸುಧಾಮ್ ದಾಸ್ ಹೆಸರು ಪಟ್ಟಿಯಿಂದ ಕೈಬಿಡುವಂತೆ ಹೈಕಮಾಂಡ್ಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಎಂ.ಆರ್. ಸೀತಾರಂ ಹೆಸರಿಗೂ ಸಹ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸೀತಾರಾಂ ವಿರುದ್ದ ಆರ್ಥಿಕ ಅಪರಾಧದ ಕೇಸ್ ಇದ್ದರೂ ಸಹ ಅವರನ್ನು ಏಕೆ ಆಯ್ಕೆ ಮಾಡಲಾಗಿದೆ ಎಂದು ಆಕ್ರೋಶಗೊಂಡಿದ್ದು, ವಿರೋಧದ ನಡುವೆಯೂ ರಾಜಭವನಕ್ಕೆ ಪಟ್ಟಿ ಕಳುಹಿಸಿದ್ದೇಕೆ ಎಂದು ನಾಯಕರ ಪ್ರಶ್ನಿಸಿದ್ದಾರೆ.
ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿರುವುದು ನಿಜ ಎಂದ ಮುನಿಯಪ್ಪ
ಇನ್ನು ವಿಧಾನಪರಿಷತ್ ಸದಸ್ಯರ ನೇಮಕದ ವಿಚಾರವಾಗಿ ಹೈಕಮಾಂಡ್ ನಾಯಕರಿಗೆ ಪತ್ರ ಬರೆರುವುದು ನಿಜ ಎಂದು ಸಚಿವ ಮುನಿಯಪ್ಪ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಇಂದು (ಆಗಸ್ಟ್ 18) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿರುವುದು ನಿಜ. ಸುಧಾಮ್ ದಾಸ್ ಮೂರು ತಿಂಗಳ ಹಿಂದಿನ ತನಕ ಸರ್ಕಾರಿ ಅಧಿಕಾರಿ ಆಗಿದ್ದರು.ಅವರು ಈಗಷ್ಟೇ ಪಕ್ಷಕ್ಕೆ ಬಂದಿದ್ದಾರೆ. ಇನ್ನೊಂದಿಷ್ಟು ದಿನಗಳ ಕಾಲ ಸುಧಾಮ್ ದಾಸ್ ಪಕ್ಷಕ್ಕೆ ಕೆಲಸ ಮಾಡಲಿ. 30 ವರ್ಷಗಳಿಂದ ಕೆಲಸ ಮಾಡಿದ ದಲಿತ ನಾಯಕರಿಗೆ ಅವಕಾಶ ನೀಡಲಿ ಎಂಬುದಷ್ಟೇ ನಮ್ಮ ಸಲಹೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಪತ್ರ ಬರೆದಿರುವುದು ಸತ್ಯ. ಈ ಬಗ್ಗೆ ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಸಚಿವರು ಹೈಕಮಾಂಡ್ಗೆ ಬರೆದ ಪತ್ರದಲ್ಲೇನಿದೆ?
ಪರಿಷತ್ ಸ್ಥಾನ ಆಯ್ಕೆಯಲ್ಲಿ ಹೈಕಮಾಂಡ್ ಆಗಲಿ , ರಾಜ್ಯ ನಾಯಕರಾಗಲಿ ನಮ್ಮ ಅಭಿಪ್ರಾಯವನ್ನ ಕೇಳಲೇ ಇಲ್ಲ. ಇದರಿಂದಾಗಿ ನಾವು ತೀವ್ರ ನಿರ್ಲಕ್ಷ್ಯಕ್ಕೆಗೊಳಗಾಗಿದ್ದೇವೆ ಎಂಬ ಭಾವನೆ ಉಂಟಾಗಿದೆ. ಪರಿಷತ್ ಆಯ್ಕೆಯಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಇಂಜಿನಿಯರಿಂಗ್ ಮುಖ್ಯ. ಸುಧಾಮ್ ದಾಸ್ ಇಡಿ ಇಲಾಖೆಗೆ ಹಠಾತ್ ಆಗಿ ರಾಜೀನಾಮೆ ನೀಡಿ ರಾಜ್ಯದಲ್ಲಿ ಮಾಹಿತಿ ಆಯುಕ್ತರಾಗಿದ್ದಾರೆ ಎಂಬ ಮಾಹಿತಿ ನಮಗಿದೆ. ಸುಧಾಮ್ ದಾಸ್ ಕೆಲ ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾವು ಸುಧಾಮ್ ದಾಸ್ ಹೆಸರನ್ನ ತೀವ್ರವಾಗಿ ವಿರೋಧಿಸುತ್ತೇವೆ. ಪರಿಷತ್ ಆಯ್ಕೆಗೆ ಸುಧಾಮ್ ದಾಸ್ ಹೆಸರು ಪರಿಗಣಿಸಿದ್ದರೆ ಕೂಡಲೇ ಹೆಸರು ಕೈಬಿಡಬೇಕು. ನಾವು ಸೂಕ್ತ ಅಭ್ಯರ್ಥಿಯನ್ನ ಆಯ್ಕೆ ಮಾಡಲು ಅವಕಾಶ ಮಾಡಿಕೊಡಲು ಮನವಿ ಮಾಡ್ತೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಸ್ಪಷ್ಟನೆ ಕೇಳಿದ ರಾಜ್ಯಪಾಲ
ಸೀತಾರಾಂ ಹಾಗೂ ಸುಧಾಮ್ ದಾಸ್ ವಿರುದ್ದ ಈಗಾಗಲೇ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಕರ್ನಾಟಕ ಮುಸ್ಲಿಂ ಜನ ಸಂಘ ಹಾಗೂ ನ್ಯಾಯಮಿತ್ರ ಸಂಸ್ಥೆ ದೂರು ನೀಡಿದ್ದಾರೆ. ಈಗ ಏಕಾಏಕಿ ನಾಮನಿರ್ದೇಶನ ಮಾಡಿದರೂ ಸಹ ರಾಜಭವನಕ್ಕೆ ಕೆಟ್ಟ ಹೆಸರು. ಹೀಗಾಗಿ ದೂರಿನ ಬಗ್ಗೆ ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ಸರ್ಕಾರದ ಬಳಿ ಸ್ಪಷ್ಟನೆ ಕೇಳಿದ್ದಾರೆ. ಆದ್ರೆ, ಇದುವರೆಗೂ ರಾಜ್ಯ ಸರ್ಕಾರ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿಲ್ಲ.
Published On - 1:00 pm, Fri, 18 August 23