ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸಲು ಬೆಂಗಳೂರಿನಲ್ಲಿ ಮನೆ ಮಾಡಲಿರುವ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್: ಸಚಿವ ಅಶೋಕ್ ಏನಂದ್ರು ನೋಡಿ
ರಾಜ್ಯದಲ್ಲಿ ಮತ್ತೆ ಕಮಲ ಪಕ್ಷ ಅರಳಿಸಲು ಕೇಂದ್ರ ನಾಯಕರು ಮೆಗಾ ಪ್ಲಾನ್ ಹಾಕಿಕೊಂಡಿದ್ದು, ಬಿಜೆಪಿ ಚಾಣಕ್ಯ ಎಂದೇ ಖ್ಯಾತಿ ಪಡೆದಿರುವ ಅಮಿತ್ ಶಾ ಅವರು ರಾಜ್ಯದಲ್ಲಿ ಠಿಕಾಣಿ ಹೂಡಲಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿ ಮನೆ ಮಾಡಲಿದ್ದಾರಂತೆ.
ಬಾಗಲಕೋಟೆ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದು, ಬಿಜೆಪಿ ಸರ್ಕಾರವನ್ನು ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಹೈಕಮಾಂಡ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಮೇಲಿಂದ ಮೇಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಘಟಾನುಘಟಿ ನಾಯಕರುಗಳು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಮತ್ತೆ ಕಮಲ ಅರಳಿಸಲು ಬಿಜೆಪಿ ಚಾಣಕ್ಯ ಎಂದೇ ಖ್ಯಾತಿ ಪಡೆದಿರುವ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ಬೆಂಗಳೂರಿನಲ್ಲಿ ಮನೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ಠಿಕಾಣಿ ಹೂಡಲಿರುವ ಅಮಿತ್ ಶಾ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಬೆಂಗಳೂರಿನಲ್ಲಿ ಮನೆ ಮಾಡಲಿದ್ದಾರೆ ಎಂದರು.
ಬಾಗಲಕೋಟೆಯ ಬೀಳಗಿ ಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಮಾತನಾಡಿದ ಅವರು, ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಬೆಂಗಳೂರಿನಲ್ಲೇ ಠಿಕಾಣಿ ಹೂಡಲಿದ್ದು, ಮನೆಯೂ ಮಾಡಲಿದ್ದಾರೆ. ನಮ್ಮದು ನಾಳೆ ಬಾ ಅನ್ನೋ ಪಾರ್ಟಿ ಅಲ್ಲ, ಇವತ್ತು ಬಾ ಅನ್ನೋ ಪಾರ್ಟಿ. ಅಮೀತ್ ಶಾ, ಧರ್ಮೇಂದ್ರ ಪ್ರಧಾನ ಎಲ್ಲರೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಇಲ್ಲಿಗೆ ಬರುತ್ತಾರೆ. ಅವರ (ಕಾಂಗ್ರೆಸ್) ತರಹ ಇಲ್ಲಿಗೆ ಬಂದು ಭಾಷಣ ಮಾಡಿ ಓಡಿ ಹೋಗುವುದಲ್ಲ. ಇಲ್ಲಿ ಬರಬೇಕು, ಇಲ್ಲಿ ಇದ್ದುಕೊಂಡು ಡಬಲ್ ಇಂಜಿನ್ ಸರ್ಕಾರ ತರಬೇಕು ಅಂತಾ ಅವರೆಲ್ಲರ (ಬಿಜೆಪಿ ನಾಯಕರು) ಬಯಕೆಯಾಗಿದೆ ಎಂದರು.
ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ನಮ್ಮ ಸರ್ಕಾರ ಬರುವುದು ಸತ್ಯ ಎಂದು ಹೇಳಿದ ಸಚಿವ ಅಶೋಕ್, ಬೆಂಗಳೂರಲ್ಲಿ ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಮನೆ ಮಾಡುವುದು ಶೇಕಡಾ ನೂರರಷ್ಟು ಸತ್ಯ. ಇದರಲ್ಲಿ ಅನುಮಾನವೇ ಇಲ್ಲ. ಯಾಕೆ ನಮ್ಮ ನಾಯಕರು ಬರುತ್ತಾರೆ ಎಂದರೆ, ಗೆಲ್ಲುತ್ತೇವೆ ಎಂಬ ದೃಷ್ಟಿಯಿಂದ ಬರುತ್ತಿದ್ದಾರೆ ಎಂದರು.
ಇದನ್ನೂ ಓದಿ: ದೇವೇಗೌಡರನ್ನು ಹೊಗಳಿದ ಯಡಿಯೂರಪ್ಪ, ಅಮಿತ್ ಶಾ ಟೀಕೆಗೆ ಉತ್ತರ ಎಂದ ಕುಮಾರಸ್ವಾಮಿ
ಇತ್ತೀಚೆಗೆ ಬಳ್ಳಾರಿಗೆ ಆಗಮಿಸಿದ್ದ ಅಮಿತ್ ಶಾ ಅವರು, ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಸಂಡೂರು ಪಟ್ಟಣದಲ್ಲಿರುವ ಎಸ್ಆರ್ಎಸ್ ಮೈದಾನದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಷಣ ಮಾಡಿದ್ದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಅಬ್ಬರಿಸಿದ್ದರು. ಯಾಕೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರಬೇಕು ಎಂದು ವೇಳೆ ಬಿಜೆಪಿ ಸರ್ಕಾರದ ಸಾಧನೆಗಳನ್ನು ಕಾರ್ಯಕರ್ತರ ಹಾಗೂ ಅಭಿಮಾನಿಗಳ ಮುಂದಿಟ್ಟಿದ್ದರು.
ಇನ್ನು, ಎರಡು ದಿನಗಳ ಹಿಂದೆಯಷ್ಟೇ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮತ್ತು ಸಹ ಉಸ್ತುವಾರಿ ಮನ್ಸುಖ್ ಮಾಂಡವೀಯ ಅವರು ಬೆಂಗಳೂರಿಗೆ ಆಗಮಿಸಿ ಬೆಂಗಳೂರು ನಾಯಕರ ಸಭೆ ನಡೆಸಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡಿದರೆ ಹೆಚ್ಚು ಸ್ಥಾನ ಗೆಲ್ಲುವ ಅವಕಾಶವಿದೆ ಎಂಬ ಮಾಹಿತಿ ನಮಗೆ ಇದೆ. ಈ ಹಿಂದೆ ನಡೆದ ಚುನಾವಣೆಯಲ್ಲಿ ನಾವು 18 ಸ್ಥಾನಗಳನ್ನು ಗೆದ್ದಿದ್ದೇವೆ, ಈ ಸಲ ರೆಕಾರ್ಡ್ ಬ್ರೇಕ್ ಮಾಡಬಹುದು. ಬೆಂಗಳೂರಿನ ನೀವೆಲ್ಲರೂ ಸಮರ್ಥರು, ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿ. ಬೆಂಗಳೂರು ನಗರದ ಸುತ್ತಮುತ್ತಲಿನ ಕ್ಷೇತ್ರಗಳತ್ತಲೂ ಗಮನಹರಿಸಿ ಎಂದು ಧರ್ಮೇಂದ್ರ ಪ್ರಧಾನ್ ಅವರು ಸಲಹೆ ನೀಡಿದ್ದರು. ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಂದಾಲ್ಲಾ ಒಂದು ಸಮಾವೇಶಗಳನ್ನು ನಡೆಸಿಕೊಂಡು ಬಿಜೆಪಿ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Sat, 25 February 23