ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಯಡಿಯೂರಪ್ಪ ನಿರ್ಧಾರ ಸ್ವಾಗತಿಸಿದ ಮಾಜಿ ಸಿಎಂ ಎಸ್​.ಎಂ.ಕೃಷ್ಣ

|

Updated on: Feb 24, 2023 | 4:59 PM

ಇದು ನನ್ನ ಕೊನೆಯ ಅಧಿವೇಶನ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ಮಾತೇ ಇಲ್ಲ ಎಂದು ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ್ದಾರೆ. ಈ ಬಗ್ಗೆ ಸ್ವಾಗತಿಸಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ, ರಾಜ್ಯದ ಜನರಿಗೆ ನಿಮ್ಮ ಸೇವೆ ಬೇರೆ ರೂಪದಲ್ಲಿ ದೊರೆಯಲಿ ಎಂದಿದ್ದಾರೆ.

ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಯಡಿಯೂರಪ್ಪ ನಿರ್ಧಾರ ಸ್ವಾಗತಿಸಿದ ಮಾಜಿ ಸಿಎಂ ಎಸ್​.ಎಂ.ಕೃಷ್ಣ
ಎಸ್.ಎಂ.ಕೃಷ್ಣ ಮತ್ತು ಬಿ.ಎಸ್.ಯಡಿಯೂರಪ್ಪ
Follow us on

ಬೆಂಗಳೂರು: ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರ ನಿರ್ಧಾರವನ್ನು ಸ್ವಾಗತಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (S.M.Krishna) ಅವರು, ನಿಮ್ಮ ನಡೆ ಕರ್ನಾಟಕದ ಯುವ ಜನಾಂಗಕ್ಕೆ ದಾರಿದೀಪವಾಗಲಿ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರಿಗೆ ಪತ್ರ ಬರೆದ ಎಸ್.ಎಂ.ಕೃಷ್ಣ, ನಾಲ್ಕು ದಶಕಗಳ ಸುಧೀರ್ಘ ರಾಜಕೀಯ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡು ರೈತಾಪಿ ವರ್ಗದ ಪರವಾಗಿ ಅಹರ್ನಿಶಿ ಹೋರಾಟ ನಡೆಸಿದ ತಾವು ಚುನಾವಣಾ ರಾಜಕೀಯದಿಂದ ದೂರ ಸರಿದು ಯುವ ಸಮೂಹಕ್ಕೆ ಮಾರ್ಗದರ್ಶಕರಾಗಲು ನಿಶ್ಚಯಿಸಿರುವ ತಮ್ಮ ನಿರ್ಧಾರವನ್ನು ಸ್ವಾಗತಿಸುತ್ತೇನೆ. ರಾಜ್ಯದ ಜನರಿಗೆ ನಿಮ್ಮ ಸೇವೆ ಬೇರೆ ರೂಪದಲ್ಲಿ ದೊರೆಯಲಿ. ನಿಮ್ಮ ನಡೆ ಕರ್ನಾಟಕದ ಯುವ ಜನಾಂಗಕ್ಕೆ ದಾರಿದೀಪವಾಗಲಿ ಎಂದು ಹೇಳಿದ್ದಾರೆ.

1983ರಿಂದ ಶಾಸನ ಸಭೆಯ ಸದಸ್ಯರಾಗಿ ಆಯ್ಕೆಯಾಗಿರುವ ತಮ್ಮ ಸಿದ್ದಾಂತಕ್ಕೆ ಬದ್ಧರಾಗಿ ಹಗಲಿರುಳು ಹೋರಾಡಿ ಬಿಜೆಪಿ ಪಕ್ಷವನ್ನು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತರುವಲ್ಲಿ ತಮ್ಮ ಪಾತ್ರ ಹಿರಿದಾದ್ದು. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಪ್ರತಿ ಹಂತದಲ್ಲೂ ಹೋರಾಟವೇ ನಿಮ್ಮ ಜೀವನದ ಮಂತ್ರವಾಗಿಸಿಕೊಂಡು ರಾಜ್ಯದ ಎಲ್ಲಾ ಸಮುದಾಯಗಳ ಏಳಿಗೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಜನಮಾನಸದಲ್ಲಿ ಅಜರಾಮರಾಗಿದ್ದೀರಿ ಎಂದರು.

ಇದನ್ನೂ ಓದಿ: ಯಡಿಯೂರಪ್ಪ ಜತೆ ಏನೇ ವೈಷಮ್ಯ ಇರಬಹುದು, ನನ್ನನ್ನು ಬೆಳೆಸಿದ್ರು: ವಿದಾಯದ ಮಾತಲ್ಲಿ ರಾಜಾಹುಲಿ ಹೊಗಳಿದ ಹಿಂದೂಹುಲಿ

“ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ನಡುವುದು” ಎನ್ನುವ ಮಟ್ಟಿಗೆ ನಿಮ್ಮ ಧ್ವನಿ ವಿಧಾನಸೌಧದಲ್ಲಿ ಮೊಳಗಿದೆ. ನಾವಿಬ್ಬರೂ ಒಂದೇ ಜಿಲ್ಲೆಯಿಂದ ಬಂದವರಾದರೂ ತಾವು ಶಿವಮೊಗ್ಗದ ಶಿಕಾರಿಪುರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ರಾಜ್ಯದ ಸರ್ವವ್ಯಾಪಿ ಸಂಚರಿಸಿ ಪಕ್ಷನ್ನು ಅಧಿಕಾರಕ್ಕೆ ಏರಿಸಿ ಜನನಾಯಕರಾಗಿ ರೂಪುಗೊಂಡ ಹಲವು ಯುವನಾಯಕರನ್ನು ಸೃಷ್ಟಿಸಿ ಯಶಸ್ವಿ ನಾಯಕರಾಗಿ ಸಾರ್ವಜನಿಕ ಜೀವನ ಸವೆಸಿ ಇಂದು ಚುನಾವಣಾ ರಾಜಕೀಯದಿಂದ ವಿರಮಿಸುತ್ತಿರುವ ತಮಗೆ ಭಗವಂತ ಆಯಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಸೇವೆ ಬೇರೆ ರೂಪದಲ್ಲಿ ರಾಜ್ಯದ ಜನರಿಗೆ ದೊರೆತು ಸಮಾಜದ ಶ್ರೇಯೋಭಿವೃದ್ಧಿಗೆ ಅನುವಾಗಲಿ, ತಮ್ಮ ಮುಂದಿನ ನಡೆ ಯುವಜನಾಂಗಕ್ಕೆ ದಾರಿದೀಪವಾಗಲಿ ಎಂದು ಎಸ್.ಎಂ.ಕೃಷ್ಣ ಅವರು ಹಾರೈಸಿದರು.

“ಇದು ನನ್ನ ಕೊನೆಯ ಅಧಿವೇಶನ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ಮಾತೇ ಇಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸದನಕ್ಕೆ ಆಯ್ಕೆಯಾಗಿ ಬರಬೇಕು. ಶಿಕಾರಿಪುರ ತಾಲೂಕಿನ ಜನರ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ಫೆಬ್ರವರಿ 27ಕ್ಕೆ ನನಗೆ 80 ವರ್ಷ ತುಂಬುತ್ತದೆ. ಅಂದೇ ಏರ್​ಪೋರ್ಟ್​ ಉದ್ಘಾಟನೆಗೆ ಬರುತ್ತೇನೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇದು ನನಗೆ ಅತ್ಯಂತ ಸಮಾಧಾನ ಮತ್ತು ತೃಪ್ತಿ ತಂದಿದೆ” ಎಂದು ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ವಿದಾಯ ಭಾಷಣ ಮಾಡಿದರು.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Fri, 24 February 23