ಬಿಎಸ್‌ವೈಗೆ ಸರ್ವಪಕ್ಷ ಶಾಸಕರ ವಿದಾಯ, 15ನೇ ವಿಧಾನಸಭೆಯ ಕೊನೆ ಸದನದಲ್ಲಿ ಸವಿ ಸವಿ ನೆನಪು
15ನೇ ವಿಧಾನಸಭೆಯ ಕೊನೆಯ ಅಧಿವೇಶನ ಇಂದು(ಫೆಬ್ರವರಿ 24) ಕೊನೆಗೊಳ್ಳಲಿದ್ದು, ಬಿಎಸ್‌ವೈಗೆ ಸರ್ವಪಕ್ಷ ಶಾಸಕರು ‘ವಿದಾಯ’ ಭಾಷಣ ಮಾಡಿ ಗುಣಗಾನ ಮಾಡಿದ್ದಾರೆ.
ಬೆಂಗಳೂರು: 15ನೇ ವಿಧಾನಸಭೆಯ ಕೊನೆಯ ಅಧಿವೇಶನ ಇಂದು(ಫೆಬ್ರವರಿ 24) ಕೊನೆಗೊಳ್ಳಲಿದೆ. ಈ 15ನೇ ವಿಧಾನಸಭೆಯಲ್ಲಿ ಒಟ್ಟು 167 ದಿನಗಳ ಕಾಲ ಕಲಾಪ ನಡೆದಿದ್ದು, 167 ದಿನಗಳಲ್ಲಿ ಒಟ್ಟು 760 ಗಂಟೆ ನಡೆದಿರುವ ಅಧಿವೇಶನ ನಡೆದಿದೆ. ಈ ಅವಧಿಯಲ್ಲಿ 15ನೇ ವಿಧಾನಸಭೆಯಲ್ಲಿ ಒಟ್ಟು 200 ವಿಧೇಯಕಗಳ ಮಂಡನೆಯಾಗಿದೆ. ಹಾಗೇ 6,754 ಚುಕ್ಕೆ ಗುರುತಿನ ಪ್ರಶ್ನೆಗಳು, 27 ಸಾವಿರ ಚುಕ್ಕೆ ರಹಿತ ಪ್ರಶ್ನೆಗಳನ್ನು ಕೇಳಲಾಗಿದೆ. ಇನ್ನು ಇಂದು 15ನೇ ವಿಧಾನಸಭೆ ಕೊನೆ ದಿನವಾಗಿದ್ದರಿಂದ ಸದನದಲ್ಲಿ ಶಾಸಕರು, ಮಂತ್ರಿಗಳು ಸವಿ ಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಲ್ಲದೇ ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಗಳನ್ನು ಮಾಡಿಕೊಳ್ಳುತ್ತಿದ್ದ ಆಡಳಿತ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಪರಸ್ಪರ ಗುಣಗಾನ ಮಾಡಿದರು. ಹಾಗಾದ್ರೆ, 15ನೇ ವಿಧಾನಸಭೆಯ ಕೊನೆ ದಿನದ ಸದನದಲ್ಲಿ ಯಾರೆಲ್ಲ ಏನೆಲ್ಲ ಮಾತನಾಡಿದರು ಎನ್ನುವುದು ಈ ಕೆಳಗಿನಂತಿದೆ ನೋಡಿ.
ವಿಧಾನಸಭೆಯಲ್ಲಿ ಬಿಎಸ್‌ವೈಗೆ ಸರ್ವಪಕ್ಷ ಶಾಸಕರ ‘ವಿದಾಯ’
ಬಿಎಸ್ ಯಡಿಯೂರಪ್ಪ ಅವರಿಗೆ ಇದೇ ಕೊನೆ. ಇನ್ಮುಂದೆ ಅವರು ಚುನಾವಣೆಗೆ ಸ್ಪರ್ಧಿಸಲ್ಲ, ಮತ್ತೆ ಸದನಕ್ಕೆ ಬರುವುದಿಲ್ಲ ಎಂದು ತಮ್ಮ ವಿದಾಯದ ಭಾಷಣದಲ್ಲಿ ಹೇಳಿದ್ದಾರೆ. ವಿಧಾನಸಭೆಯ ಬಜೆಟ್ ಮೇಲಿನ ಚರ್ಚೆ ವೇಳೆ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ನಾನು ಚುನಾವಣೆಗೆ ಸ್ಪರ್ಧಿಸಲ್ಲ..ಮತ್ತೆ ಈ ಸದನಕ್ಕೆ ಬರೋದಿಲ್ಲ. ಇದೇ ನನ್ನ ವಿದಾಯದ ಬಾಷಣ ಎಂದು ಭಾವುಕರಾಗಿದ್ರು. ಇಂದು 15ನೇ ವಿಧಾನಸಭೆಯ ಕೊನೆ ದಿನವಾಗಿದ್ದರಿಂದ ಪಕ್ಷದ ಶಾಸಕರು, ಮಂತ್ರಿಗಳು, ವಿರೋಧ ಪಕ್ಷದ ಶಾಸಕರು ಹೀಗೆ ಸರ್ವಪಕ್ಷ ಶಾಸಕರು ಯಡಿಯೂರಪ್ಪ ಅವರ ಬಗ್ಗೆ ವಿದಾಯದ ಭಾಷಣ ಮಾಡಿದರು. ಈ ವೇಳೆ ಯಡಿಯೂರಪ್ಪನವರ ಕಾರ್ಯವೈಖರಿ, ಪಕ್ಷ ಸಂಘಟನೆ, ಆಡಳಿತದ ಬಗ್ಗೆ ಗುಣಗಾನ ಮಾಡಿದರು.
ಸಿದ್ದರಾಮಯ್ಯನವರನ್ನು ಹಾಡಿಹೊಗಳಿದ ಬಿಎಸ್ವೈ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಹ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಕೆಲಸವನ್ನು ಯಾವ ರೀತಿ ಮೆಚ್ಚಬೇಕು ಎಂದು ತಿಳಿಯುತ್ತಿಲ್ಲ. ಅನೇಕ ಸಂಗತಿಗಳನ್ನು ಸ್ಟಡಿ ಮಾಡಿ ಇಲ್ಲಿ ಬಂದು ಮಾರ್ಗದರ್ಶನ ನೀಡಿದ ರೀತಿ ಏನು ಇದೆ ಅದನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ಅದೇ ರೀತಿ ಎ.ಟಿ.ರಾಮಸ್ವಾಮಿ ಸೇರಿದಂತೆ ಹಲವರು ಉತ್ತಮ ಕೆಲಸ ಮಾಡಿದ್ದಾರೆ. ಮತ್ತೊಮ್ಮೆ ಗೆದ್ದು ಬಂದು ಮತ್ತಷ್ಟು ಒಳ್ಳೆ ಕೆಲಸ ಮಾಡಿ ಎಂದು ಬಿಎಸ್ವೈ ಶುಭಹಾರೈಸಿದರು.
ಬಿಎಸ್ವೈ ನಮ್ಮ ನಾಯಕ ಎಂದ ಯತ್ನಾಳ್
ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 15ನೇ ವಿಧಾನಸಭೆ ಕಲಾಪದ ಕೊನೆದಿನದಂದು ಹಾಡಿಹೊಗಳಿದ್ದಾರೆ. ಮಾಜಿ ಸಿಎಂ B.S.ಯಡಿಯೂರಪ್ಪ ನಮ್ಮನ್ನೆಲ್ಲ ಮುನ್ನಡೆಸುತ್ತಿದ್ದರು. ಸುಮ್ಮನೇ ಕೂತ್ಕೊಳ್ಳಿ ಎಂದು ನಮ್ಮನ್ನು ಗದರಿಸುತ್ತಿದ್ದರು. 2 ಬಾರಿ ಸಂಸದ, ಒಂದು ಬಾರಿ MLC, 2 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯ ಆದಾಗ ಧ್ವನಿ ಎತ್ತಿದ್ದೇನೆ. ಇಲ್ಲಿಯೂ ಅನ್ಯಾಯವಾದಾಗ ಮಾತನಾಡಲು ಅವಕಾಶ ನೀಡಿದ್ದೀರಿ. ಯಡಿಯೂರೊ್ಒ ಜತೆ ಏನೇ ವೈಷಮ್ಯ ಇರಬಹುದು, ಅವರು ನಮ್ಮ ನಾಯಕರು. ರಾಜ್ಯದಲ್ಲಿ ಪಕ್ಷ ಕಟ್ಟಿದ್ದು ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್. ಪಕ್ಷ ಕಟ್ಟಿ ಕೊನೆವರೆಗೂ ಉಳಿದವರು ಯಡಿಯೂರಪ್ಪ. ಈಗ ಸ್ಪರ್ಧಿಸಲ್ಲ ಪುತ್ರನನ್ನು ರೆಡಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಕೆಲವರು ಸಾಯೋವರೆಗೂ ಶಾಸಕನಾಗೇ ಉಳಿಯಬೇಕು ಅಂತಿದ್ದಾರೆ. ಬಿಎಸ್ವೈ ನನ್ನನ್ನೂ ಮಂತ್ರಿ ಮಾಡಲಿಲ್ಲ, ನಿಮ್ಮನ್ನೂ ಮಂತ್ರಿ ಮಾಡ್ಲಿಲ್ಲ. ಅದೇನೇ ಇರಲಿ ಬಿ.ಎಸ್.ಯಡಿಯೂರಪ್ಪ ಅವರು ನನ್ನನ್ನು ಬೆಳೆಸಿದರು ಎಂದು ಗುಣಗಾನ ಮಾಡಿದರು.
ನಾನು ಕಾಲೇಜಿನಲ್ಲಿದ್ದಾಗ ವಿಧಾನಸೌಧ ನೋಡಬೇಕೆಂದು ಅನ್ನಿಸಿತ್ತು
ವಿಧಾನಸಭೆಯ (Karnataka Legislative Assembly) ಕಲಾಪದ ಕೊನೆಯ ದಿನವಾದ ಇಂದು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ನಾನು ಕಾಲೇಜಿನಲ್ಲಿದ್ದಾಗ ವಿಧಾನಸೌಧ (Vidhana Soudha) ನೋಡಬೇಕು ಅಂತಾ ಅನ್ನಿಸಿತ್ತು. ನಮ್ಮನ್ನು ಒಂದು ದಿನ ಸದನಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ನಾನು ನಮ್ಮ ಶಾಸಕರ ಕುರ್ಚಿ ಯಾವುದು ಅಂತ ಕೇಳಿದೆ. ಅದರಂತೆ ತೋರಿಸಿದಾಗ ನಾನು ಕುರ್ಚಿಗೆ ನಮಸ್ಕಾರ ಹಾಕಿದ್ದೆ. ಈಗ ನನ್ನ ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಈ ಸದನವನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಅವಧಿಯಲ್ಲಿ ಏನೂ ಆಗುವುದಿಲ್ಲ ಎಂದು ನಾನು ಅಂದುಕೊಂಡಿದ್ದೆ. ಆದರೆ ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಅತ್ಯಂತ ಯಶಸ್ವಿಯಾಗಿ ನಾನು ಗೃಹ ಖಾತೆಯನ್ನು ನಿಭಾಯಿಸಿದ್ದೇನೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನನ್ನನ್ನು ವೈಯಕ್ತಿಕವಾಗಿ ಪ್ರೀತಿ ಮಾಡಿದರು. ಆದರೆ ಖಾತೆಯನ್ನು ಟೀಕೆ ಮಾಡಿದರು. ನೀನು ಒಳ್ಳೆಯವನು, ಆದರೆ ಈ ಖಾತೆಗೆ ನೀನು ಅಸಮರ್ಥ ಎಂದಿದ್ದರು. ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ, ಏನು ಮಾಡಲು ಆಗುವುದಿಲ್ಲ. ಕಾನೂನು ಸಚಿವರು ಒಂದು ರೀತಿ ಆಪದ್ಬಾಂಧವ. ಸಮಸ್ಯೆ ಎದುರಾದಾಗ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಬಗೆಹರಿಸಿದ್ದಾರೆ ಎಂದರು.
ಬಿಎಸ್ವೈ ಗುಣಗಾನ ಮಾಡಿದ ಅರವಿಂದ ಲಿಂಬಾವಳಿ
ನಾನು ಸಕ್ರಿಯ ರಾಜಕಾರಣಕ್ಕೆ ಬರುವ ಅಪೇಕ್ಷೆ ಇರಲಿಲ್ಲ. ಬಿಎಸ್ವೈ, ಅನಂತಕುಮಾರ್ ನನ್ನನ್ನು ಗುರುತಿಸಿ ಕರೆತಂದರು. ಅನಂತಕುಮಾರ್ ಜತೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಕ್ಷೇತ್ರ ಪುನರ್ ವಿಂಗಡನೆಯಾಗಿ ಮಹದೇವಪುರ ಕ್ಷೇತ್ರ ಆಗಿತ್ತು. ಆಗ ನನ್ನನ್ನು ಮಹದೇವಪುರ ಕ್ಷೇತ್ರದಿಂದ ಕಣಕ್ಕಿಳಿಸಿದ್ದರು. ಈ ವರೆಗೆ ಮಹದೇವಪುರ ಕ್ಷೇತ್ರದಲ್ಲಿ 3 ಬಾರಿ ಆಯ್ಕೆಯಾಗಿದ್ದೇನೆ. ಈಗ ಬಿ.ಎಸ್.ಯಡಿಯೂರಪ್ಪ ನನಗೆ ಮಾರ್ಗದರ್ಶನ ನೀಡ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆದಾಗ ಪ್ರಕೃತಿ ವಿಕೋಪ ಆಯ್ತು. ಎಲ್ಲವನ್ನೂ ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ಶಾಸಕ ಅರವಿಂದ ಲಿಂಬಾವಳಿ ಯಡಿಯೂರಪ್ಪ ಅವರನ್ನು ಹಾಡಿಹೊಗಳಿದರು.
ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಭಾಷಣ
ಕಾಗೇರಿಯವರು ಹೇಗೆ ಸಭಾಧ್ಯಕ್ಷ ಸ್ಥಾನ ಹೇಗೆ ನಿರ್ವಹಿಸ್ಥಾರೆ ಅಂದುಕೊಂಡಿದ್ದೆ. ಹಿಂದೆಂದೂ ಯಾರೂ ನಿರ್ವಹಿಸದ ರೀತಿ ನಿರ್ವಹಣೆ ಮಾಡಿದ್ದಾರೆ. ನನ್ನದೇ ಮಸ್ಯೆ ಬಂದಾಗ ಸಮರ್ಥವಾಗಿ ನಿರ್ವಹಣೆ ಮಾಡಿದ್ರು. ನನ್ನ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಪೂಜಿಸೋದು ನಮ್ಮ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನು. ರಾಜಕೀಯ ಗುರು ಅಂತ ಹೇಳೋದು ಯಡಿಯೂರಪ್ಪ ಅವರನ್ನು. ನಾನು ಕೆ.ಆರ್. ನಗರ ಅಭ್ಯರ್ಥಿ ಆಗಬೇಕು ಅಂದಾಗ ನನಗೆ ಬಿ ಫಾರ್ಮ್ ಕೊಟ್ಟರು. ಎಲ್ಲರೂ ಬಿ ಫಾರ್ಮ್ ಕೊಡಲಿ ಅಂತ ಕಾಯ್ತಾರೆ, ಹೋಗೋ ನಾಮಪತ್ರ ಸಲ್ಲಿಸು ಅಂತ ದೇವೇಗೌಡರು ಬೈದಿದ್ದರು. ಅಂದು ನಾಮಪತ್ರ ಸಲ್ಲಿಸದಿದ್ರೆ ನಾನು ಇಲ್ಲಿಗೆ ಬರಲು ಆಗ್ತಿರಲಿಲ್ಲ, ನನ್ನ ಬೆಳೆಸಿದ್ದು ನಮ್ಮ ನಾಯಕ ಕುಮಾರಸ್ವಾಮಿ ಅವರು. ಸಮ್ಮಿಶ್ರ ಸರ್ಕಾರದಲ್ಲಿ ನಾಯಕನಾಗಿ ಮಾಡಿದ್ದು ಕುಮಾರಣ್ಣ ಅವರು ನಾವು ಶಾಸಕರಾಗಿ ಬರಲು ಬಹಳ ಕಷ್ಟ ಪಡಬೇಕಿದೆ. ನಿಮ್ಮ ಕಾಲದ ರೀತಿ ಹಾಗೆ ಇಲ್ಲ. ನಮ್ಮ ಸಾಹೇಬರು ಯಡಿಯೂರಪ್ಪ ಎಂಟು ಬಾರಿ ಆಯ್ಕೆಯಾಗಿದ್ದಾರೆ. ನಮಗೆ ಆ ರೀತಿ ಆಯ್ಕೆಯಾಗೋದು ಕಷ್ಟ ಇದೆ. ಅನೇಕರು ಸಚಿವರಾಗಬೇಕು ಅಂತ ಆಸೆ ಇದೆ. ಆಸೆ ಇಟ್ಟುಕೊಂಡೇ ಸತ್ತೋಗಿದ್ದಾರೆ. ವಿಧಾನಸೌಧದ ಸುತ್ತ ಆತ್ಮ ತಿರುಗುತ್ತಿದೆ. ಅದಕ್ಕೆ ಇಲ್ಲಿರುವ ಫೈಲ್ ಕ್ಲಿಯರ್ ಆಗ್ತಿಲ್ಲ. ಒಂದು ಬಾರಿ ಸೋತರೆ ನಮ್ಮ ಕಥೆ ಮುಗೀತು. ಆದ್ರೆ ಅಧಿಕಾರಿಗಳು ಇರುತ್ತಾರೆ, ಪ್ರಮೋಷನ್ ಪಡೆಯುತ್ತಾರೆ. ಒಳ್ಳೆಯ ಕಾರಲ್ಲಿ ಓಡಾಡ್ತಾರೆ ಎಂದರು.