ಬೆಂಗಳೂರು, (ಡಿಸೆಂಬರ್ 29): ನಿಗಮ ಮಂಡಳಿ ನೇಮಕ ಇನ್ನೂ ಕಗ್ಗಂಟಾಗಿ ಉಳಿದಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕಾಂಗ್ರೆಸ್ ಹಿರಿಯ ರೆಬೆಲ್ ಶಾಸಕರಿಗಾಗಿ ವಿಶೇಷ ಹುದ್ದೆ ಸೃಷ್ಟಿಸಿದ್ದಾರೆ. ಹೌದು..ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡು ರೆಬೆಲ್ ಆಗಿರುವ ಬಸವರಾಜ್ ರಾಯರೆಡ್ಡಿ, ಬಿ.ಆರ್ ಪಾಟೀಲ್ ಹಾಗೂ ಆರ್.ವಿ ದೇಶಪಾಂಡೆಗೆ ವಿಶೇಷ ಹುದ್ದೆಗೆ ನೇಮಕ ಮಾಡಲಾಗಿದೆ. ಅಲ್ಲದೇ ಮೂವರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.
ಕೊಪ್ಪಳ ಜಿಲ್ಲೆಯ ಉಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ್ ರಾಯರೆಡ್ಡಿಗೆ ಮುಖ್ಯಮಂತ್ರಿಗೆ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿದರೆ, ಕಲಬುರಗಿ ಜಿಲ್ಲೆ ಆಳಂದ ಕ್ಷೇತ್ರದ ಶಾಸಕ ಬಿ.ಆರ್ ಪಾಟೀಲ್ ಅವರನ್ನು ಸಿಎಂ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಕ್ಷೇತ್ರದ ಶಾಸ ಆರ್.ವಿ ದೇಶಪಾಂಡೆಗೆ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷರಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ವಿಶೇಷ ಅಂದರೆ ಈ ಮೂವರಿಗೂ ರಾಜ್ಯ ಸರ್ಕಾರ ಸಂಪುಟ ದರ್ಜೆ ಸ್ಥಾನಮಾನ ನೀಡಿದೆ.
ಈ ಮೂವರು ಶಾಸಕರಿಗೆ ನಿಗಮ ಮಂಡಳಿ ನೀಡಲು ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದ್ರೆ, ಇವರು ನಿರಾಕರಿಸಿದ್ದು, ಖುದ್ದು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಜೊತೆ ಚರ್ಚೆ ನಡೆಯುವ ವೇಳೆಯಲ್ಲೇ ರಾಯರರೆಡ್ಡಿ ಅವರನ್ನು ಕರೆದು ನಿಗಮ ಮಂಡಳಿ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದರು. ಆದ್ರೆ, ರಾಯರೆಡ್ಡಿ ಕೊಡುವುದಾದರೆ ಮಂತ್ರಿ ಸ್ಥಾನ ನೀಡಿ. ಇಲ್ಲವಾದಲ್ಲಿ ಯಾವುದೇ ನಿಗಮ ಮಂಡಳಿ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದರು.
ಇನ್ನು ಮತ್ತೋರ್ವ ಹಿರಿಯ ಶಾಸಕ ಬಿಆರ್ ಪಾಟೀಲ್ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನದಲ್ಲಿದ್ದರು. ಇದರ ಬೆನ್ನಲ್ಲೇ ಇವರ ಪತ್ರಗಳಿಗೆ, ಫೋನ್ ಕೆಲ ಸಚಿವರು ಸರಿಯಾಗಿ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಸಿಎಂಗೆ ಪ್ರತ ಬರೆದಿದ್ದರು. ಕೂಡಲೇ ಶಾಸಕಾಂಗ ಸಭೆ ಕರೆಯಬೇಕು ಸಚಿವರಿಗೆ ತಿಳಿವಳಿಕೆ ಹೇಳಬೇಕೆಂದಿದ್ದರು. ಅದರಂತೆ ಸಿದ್ದರಾಮಯ್ಯ ಶಾಸಕಾಂಗ ಸಭೆ ಕರೆದು ಶಾಸಕರನ್ನು ಗಣನೆಗೆ ತೆಗೆದುಕೊಂಡು ಕೆಲಸ ನಿರ್ವಹಿಸುವಂತೆ ಸೂಚಿಸಿದ್ದರು.
ಇದಾದ ನಂತರ ತಮ್ಮ ಕ್ಷೇತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ಗಮನಿಸಿದಬೇಕಾದ ಅಂಶ ಅಂದರೆ ಈ ಮೂವರು ಶಾಸಕರು ಸಿದ್ದರಾಮಯ್ಯನವರ ಬಣದಲ್ಲೇ ಗುರುತಿಸಿಕೊಂಡುವರು. ಇದೀಗ ಸಿದ್ದರಾಂಯ್ಯನವರು ತಮ್ಮ ಆಪ್ತ ಶಾಸಕರಿಗೆ ಹೊಸ ಹುದ್ದೆ ಸೃಷ್ಟಿಸಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Fri, 29 December 23