ರಾಜ್ಯಾಧ್ಯಕ್ಷರ ಆಯ್ಕೆ ತಪ್ಪಾಗಿದೆ ಎನಿಸಿದರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ: ಯತ್ನಾಳ್​ಗೆ ಪ್ರಲ್ಹಾದ್ ಜೋಶಿ ಪಾಠ

ಯಾರಿಗಾದರೂ ದೂರುದುಮ್ಮಾನಗಳು ಇದ್ದರೆ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರ ಜತೆ ಮಾತುಕತೆ ನಡೆಸಬೇಕು. ಅದನ್ನು ಬಿಟ್ಟು ಪಕ್ಷದ ವಿರುದ್ಧ ಮಾತನಾಡಿದರೆ, ಬಹಿರಂಗ ಹೇಳಿಕೆ ಕೊಡುವುದು ಮಾಡಿದರೆ ಒಳ್ಳೆಯದಲ್ಲ ಎಂದು ಜೋಶಿ ಹೇಳಿದ್ದಾರೆ.

ರಾಜ್ಯಾಧ್ಯಕ್ಷರ ಆಯ್ಕೆ ತಪ್ಪಾಗಿದೆ ಎನಿಸಿದರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ: ಯತ್ನಾಳ್​ಗೆ ಪ್ರಲ್ಹಾದ್ ಜೋಶಿ ಪಾಠ
ಪ್ರಲ್ಹಾದ್ ಜೋಶಿ
Follow us
| Updated By: ಗಣಪತಿ ಶರ್ಮ

Updated on: Dec 29, 2023 | 1:29 PM

ದಾವಣಗೆರೆ, ಡಿಸೆಂಬರ್ 29: ‘ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೊಡುವುದು ಸರಿ ಅಲ್ಲ, ರಾಜ್ಯಾಧ್ಯಕ್ಷರ ಆಯ್ಕೆ ತಪ್ಪಾಗಿದೆ ಎಂದು ಅನಿಸಿದರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ. ಅದನ್ನು ಹೇಳಿಕೆ ಕೊಡುವುದು ಸರಿ ಅಲ್ಲ’ ಎಂದು ಶಾಸಕ ಬಸನಗೌಡ ಯತ್ನಾಳ್​​ಗೆ (Basangouda Patil Yatnal) ಕೇಂದ್ರ ಪ್ರಲ್ಹಾದ್ ಜೋಶಿ (Pralhad Joshi) ಕಿವಿಮಾತು ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಪದಾಧಿಕಾರಿಗಳ ಪಟ್ಟಿಯಲ್ಲಿ ಯಡಿಯೂರಪ್ಪ ಪರ ಇರುವವರಿಗೆ ಮಾತ್ರ ಸ್ಥಾನ ನೀಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

ಯಾರಿಗಾದರೂ ದೂರುದುಮ್ಮಾನಗಳು ಇದ್ದರೆ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರ ಜತೆ ಮಾತುಕತೆ ನಡೆಸಬೇಕು. ಅದನ್ನು ಬಿಟ್ಟು ಪಕ್ಷದ ವಿರುದ್ಧ ಮಾತನಾಡಿದರೆ, ಬಹಿರಂಗ ಹೇಳಿಕೆ ಕೊಡುವುದು ಮಾಡಿದರೆ ಒಳ್ಳೆಯದಾಗುವುದಿಲ್ಲ. ಬಹಿರಂಗವಾಗಿ ಹೇಳಿಕೆ ಕೊಡುವವರಿಗೆ ನಾನು ಹೇಳುವುದೇನೆಂದರೆ, ಬಿಜೆಪಿ ಹಿತಕಾಯುವವರು ತಮ್ಮ ಬಹಿರಂಗ ಹೇಳಿಕೆಗಳನ್ನು ಕೊಡುವುದು ತಕ್ಷಣ ನಿಲ್ಲಿಸಬೇಕು. ಇದು ಸರಿ ಅಲ್ಲ. ಯುವ ರಾಜ್ಯಧ್ಯಕ್ಷರನ್ನು ನೇಮಕ ಮಾಡಲು ರಾಷ್ಟ್ರೀಯ ಅಧ್ಯಕ್ಷರು, ವರಿಷ್ಠರು, ಪ್ರಧಾನಿಯವರು ಕೂತೇ ಆಯ್ಕೆ ಮಾಡಿರುತ್ತಾರೆ. ಇದು ರಾಷ್ಟ್ರೀಯ ಘಟಕದ ನಿರ್ಣಯ. ಅದರೆ ನಿಮಗೆ ಇಲ್ಲಿ ತಪ್ಪಾಗುತ್ತಿದೆ ಇದು ಸರಿಯಾಗಬೇಕೆಂದಿದ್ದರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ, ಅಥವಾ ರಾಷ್ಟ್ರೀಯ ಪ್ರಮುಖರನ್ನು ಭೇಟಿಯಾಗಿ. ಅದು ಬಿಟ್ಟು ಬಹಿರಂಗವಾಗಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಜೋಶಿ ಹೇಳಿದರು.

ಯತ್ನಾಳ್ ಅವರು ಶಾಸಕರಿದ್ದಾರೆ. ಅವರನ್ನು ಕರೆದು ಮಾತ್ನಾಡುವ ಕೆಲಸವನ್ನು ರಾಷ್ಟ್ರೀಯ ಅಧ್ಯಕ್ಷರು ಮಾಡ್ತಾರೆ ಎಂದು ಜೋಶಿ ಹೇಳಿದರು.

ಸಿದ್ದರಾಮಯ್ಯನವರೇ ಯಾರದ್ದು ಬುರುಡೆ ಸರ್ಕಾರ: ಜೋಶಿ ಪ್ರಶ್ನೆ

ಬಿಜೆಪಿ ಸರ್ಕಾರ ಬುರುಡೆ ಸರ್ಕಾರ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯಿಸಿ, ಬುರುಡೆ ಯಾರು ಎಂಬ ಬಗ್ಗೆ ಹಿಂದೆ ಮಾತನಾಡಿದ್ದಾರೆ. 1971 ರಿಂದ ಗರಿಬಿ ಹಟಾವೋ ಎಂದು ಹೇಳಿದವರು ನೀವು, 1971 ರಿಂದ 1977 ರವರೆಗೆ, 1980 ರಿಂದ 1984 ರವರೆಗೆ, 1984 ರಿಂದ 1989 ರವರೆಗೆ 1991 ರಿಂದ 1996 ರವರೆಗೆ, 2004 ರಿಂದ 2010 ರವರೆಗೆ ಹೀಗೆ ಈ ಎಲ್ಲಾ ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಇಷ್ಟು ವರ್ಷಗಳ ಕಾಲ ನೀವು ಆಡಳಿತ ನಡೆಸಿದ್ದೀರಿ. ನಿಮಗೆ ಒಂದು ಗ್ಯಾಸ್ ಕೊಡಲು ಆಗಲಿಲ್ಲ, ಇಡೀ ದೇಶದಲ್ಲಿ ಇವರ ಆಡಳಿತವಧಿಯಲ್ಲಿ ಗ್ಯಾಸ್ ಸಂಪರ್ಕ ಪಡೆಯಬೇಕಾದ್ರೆ ಹರಸಾಹಸ ಪಡುವ ಪರಿಸ್ಥಿತಿ ಇತ್ತು. ಒಂದು ಮನೆ ಕೊಡಲು ಆಗಲಿಲ್ಲ ನಿಮಗೆ, 1960 ರಿಂದ 2014 ರವರೆಗೆ ಮೋದಿ ಬರುವವರೆಗೆ ಈ ದೇಶದಲ್ಲಿ ಸೂರು ಇಲ್ಲದವರಿಗೆ ಸೂರು ಎಂದು ಹೇಳಿಕೊಂಡೇ ಬಂದ್ರು, ಇದಕ್ಕೆ ಇಂದಿರಾ ಅವಾಸ್ ಯೋಜನೆ ಎಂಬ ಹೆಸರು ಬೇರೆ ಕೊಟ್ಟರು. ಮೂರು ಕೋಟಿ ಮೂವತ್ತು ಲಕ್ಷ ಮನೆಗಳು ಕೊಟ್ಟಿದ್ದೇವೆ ಎಂದು ಲೆಕ್ಕ ಕೊಟ್ಟರು. ಕಳೆದ ವರ್ಷದಲ್ಲಿ ಮೋದಿಯವರ ಆಡಳಿತದಲ್ಲಿ ನಾಲ್ಕು ಕೋಟಿ ಮನೆಗಳನ್ನು ನಾವು ಕೊಟ್ಟಿದ್ದೇವೆ ಸ್ವಾಮಿ. ಸಿದ್ದರಾಮಯ್ಯನವರೇ ಇವಾಗ ಹೇಳಿ ಯಾರದ್ದು ಬುರುಡೆ ಸರ್ಕಾರ, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ನೀವು ಎಂದು ಸಿದ್ದರಾಮಯ್ಯ ವಿರುದ್ಧ ಜೋಶಿ ಗುಡುಗಿದರು.

ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಈ ರೀತಿಯ ಹೇಳಿಕೆ ಕೊಡುತ್ತಾರೆ. ವಿಚಾರ ಡೈವರ್ಟ್ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡ್ತಿದ್ದಾರೆ ಎಂದು ಜೋಶಿ ಟೀಕಿಸಿದರು.

ಇದನ್ನೂ ಓದಿ: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈಹಾಕಿ ಸುಟ್ಟುಗೊಂಡಿದ್ದಾರೆ: ಸಿದ್ದರಾಮಯ್ಯ, ಎಂಬಿ ಪಾಟೀಲ್​ ವಿರುದ್ಧ ಯತ್ನಾಳ್ ಕಿಡಿ

ಕನ್ನಡ ಪರ ಹೋರಾಟಗಾರರ ಪರ ಬ್ಯಾಟ್ ಬೀಸಿದ ಕೇಂದ್ರ ಸಚಿವರು, ಕನ್ನಡ ಪರ ಹೋರಾಟಗಾರರ ಮೇಲೆ ಇದ್ದಬದ್ದ ಸೆಕ್ಷನ್​​ಗಳನ್ನು ಹಾಕಿ ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಸರಿಯಲ್ಲ. ಕನ್ನಡ ಬಳಕೆ ಮಾಡ್ಬೇಕೆಂಬುದು ಕನ್ನಡಪರ ಹೋರಾಟಗಾರರ ಬೇಡಿಕೆ ನ್ಯಾಯಯುತವಾಗಿದೆ. ಎಲ್ಲಾ ಕಡೆಯು ಕನ್ನಡ ಫಲಕಗಳನ್ನು ಅಳವಡಿಕೆ ಮಾಡ್ಬೇಕೆಂಬ ಅವರ ಬೇಡಿಕೆ ಸರಿ ಇದೆ. ಇನ್ನೊಮ್ಮೆ ಯಾರು ಹೋರಾಟ ಮಾಡ್ಬಾರದೆಂದು ಈ ರೀತಿಯಲ್ಲಿ ಸೆಕ್ಷನ್​​ಗಳನ್ನು ಹಾಕಿ ಸರ್ಕಾರ ಅವರಿಗೆ ತೊಂದರೆ ಕೊಡುತ್ತಿದೆ. ಈ ಸರ್ಕಾರ ಇಬ್ಬಗೆಯ ನೀತಿಯನ್ನು ತೋರಿಸುತ್ತಿದೆ ಎಂದು ಜೋಶಿ ಟೀಕಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ