Siddu Nija Kanasugalu: ನನ್ನ ತೇಜೋವಧೆ ಮಾಡುವ ಪ್ರಯತ್ನ ಇದು ಎಂದ ಸಿದ್ದರಾಮಯ್ಯ
ಬಿಜೆಪಿ ಉದ್ದೇಶ ಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದೆ, ಬಿಜೆಪಿಯವರು ಸುಳ್ಳು ಹೇಳಿ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ನನ್ನ ತೇಜೋವಧೆ ಮಾಡುವ ಪ್ರಯತ್ನ ಇದು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರು: ನಾನು ಹಿಂದೂ ವಿರೋಧಿ ಅಲ್ಲ, ಹಿಂದುತ್ವದ ವಿರೋಧಿಯಾಗಿದ್ದೇನೆ. ಬಿಜೆಪಿಯವರು ಪ್ರಬಲ ವ್ಯಕ್ತಿಗಳನ್ನು ಗುರಿಯಾಗಿಸುತ್ತಾರೆ. ಬಿಜೆಪಿ (BJP) ಉದ್ದೇಶ ಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದೆ. ಸುಳ್ಳು ಹೇಳಿ ಜನರಿಗೆ ತಪ್ಪು ಮಾಹಿತಿ ನೀಡಿದೆ. ನನ್ನ ತೇಜೋವಧೆ ಮಾಡುವ ಪ್ರಯತ್ನ ಇದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯಿಂದ ‘ಸಿದ್ದು ನಿಜ ಕನಸುಗಳು’ ಪುಸ್ತಕ (Siddu Nija Kanasugalu) ಬಿಡುಗಡೆ ವಿಚಾರವಾಗಿ ಟಿವಿ9 ಜೊತೆ ಮಾತನಾಡಿದ ಅವರು, ನಾನು ಹಿಂದೂನೇ ಅಲ್ವಾ, ಹಿಂದೂ ವಿರೋಧಿ ಹೇಗೆ ಆಗುತ್ತೇನೆ ಎಂದು ಪ್ರಶ್ನಿಸಿದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿಕೊಂಡಿರುವ ಬಿಜೆಪಿ, ಸಿದ್ದು ನಿಜ ಕನಸುಗಳು ಎಂಬ ಪುಸ್ತಕವನ್ನು ಬಿಡುಗಡೆ ಮಾಡುತ್ತಿದೆ. ಈ ಪುಸ್ತಕದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರು ಹಿಂದೂ ಧರ್ಮವನ್ನು ನಡೆಸಿಕೊಂಡ ರೀತಿ ಹಾಗೂ ಹಿಂದೂ ವಿರೋಧಿ ನಡೆಯನ್ನು ಹೆಚ್ಚು ಹೈಲೆಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಪುಸ್ತಕ ಇಂದು (ಜ.9) ಮಧ್ಯಾಹ್ನ 3 ಗಂಟೆಗೆ ಬಿಡುಗಡೆಯಾಗಲಿದ್ದು, ಬಳಿಕವೇ ಪುಸ್ತಕದಲ್ಲಿ ಏನಿದೆ ಎಂದು ತಿಳಿದುಬರಲಿದೆ.
ಇದನ್ನೂ ಓದಿ: ಇಂದು ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ; ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಈ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಹಿಂದೂ ಧರ್ಮ ಬೇರೆ, ಹಿಂದುತ್ವ ಬೇರೆ. ಹಿಂದುತ್ವ ಮಾತನಾಡುತ್ತಾರಲ್ಲ ಅದಕ್ಕೆ ಮತ್ತು ಬೇರೆ ಧರ್ಮದವರನ್ನು ದ್ವೇಷ ಮಾಡುವುದನ್ನು ನಾನು ವಿರೋಧ ಇದೆ. ಅದುಬಿಟ್ಟರೆ ನಾನು ಹಿಂದೂ ಧರ್ಮದ ಪರವಾಗಿ ಇದ್ದೇನೆ, ಎಲ್ಲ ಧರ್ಮದ ಪರ ಇದ್ದೇನೆ. ಬಿಜೆಪಿ ನನ್ನನ್ನು ಹಣಿಯಲು ಸಾಧ್ಯವಿಲ್ಲ. ಅವಹೇಳನ ಹಾಗೂ ತೇಜೋವಧೆ ಮಾಡುವ ಪ್ರಯತ್ನ ಅಷ್ಟೇ. ಬಿಜೆಪಿಯವರ ಹುನ್ನಾರವನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಆಕ್ರೋಶ
ಬಿಜೆಪಿಯಿಂದ ‘ಸಿದ್ದು ನಿಜ ಕನಸು ಪುಸ್ತಕ’ ಬಿಡುಗಡೆ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮದು ಬದುಕು, ಅವರದ್ದು ಭಾವನೆ ಎಂದರು. ನಾನು ಕೂಡ 300ಕ್ಕೂ ಹೆಚ್ಚು ದೇವಸ್ಥಾನಗಳನ್ನು ಕಟ್ಟಿಸಿದ್ದೇನೆ. ನಾನು ದೇವಸ್ಥಾನಗಳನ್ನು ಕಟ್ಟಿಸಿದ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಆದರೆ ಒಂದು ಚರ್ಚ್ ಬಗ್ಗೆ ಪದೇ ಪದೇ ಮಾತಾಡುತ್ತಾರೆ. ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಬಗ್ಗೆ ಮಾತಾಡಲು ಆಗುತ್ತಿಲ್ಲ. ಕೊರೋನಾದಿಂದ ಮೃತಪಟ್ಟವರಿಗೆ ಪರಿಹಾರ ಕೊಟ್ಟಿಲ್ಲ, ಉದ್ಯೋಗ ಕೊಟ್ಟಿಲ್ಲ, ಬೆಲೆ ಏರಿಕೆ ಬಗ್ಗೆ ಮಾತಾಡಲ್ಲ. ಆದರೆ ನಮ್ಮ ನಾಯಕರ ಮೇಲೆ ಒಂದು ಕಳಂಕ ತರುವುದಕ್ಕೆ ಹೋಗುತ್ತಿದ್ದಾರೆ. ಪುಸ್ತಕ ಬರೆದು ಚರ್ಚೆಗೆ ಕರೆಯಲಿ, ನಾವು ಚರ್ಚೆ ಮಾಡಲು ಸಿದ್ಧ ಎಂದರು.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Mon, 9 January 23