ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದ 2023-24ನೇ ಸಾಲಿನ ಬಜೆಟ್ ಮಂಡನೆಯನ್ನ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಾರಿ ಬಜೆಟ್ ಮಂಡನೆ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಇನ್ನು ನಾಳೆಯಿಂದ ‘ಅನ್ನಭಾಗ್ಯ’ ಫಲಾನುಭವಿಗಳ ಖಾತೆಗೆ 5 ಕೆಜಿ ಅಕ್ಕಿ ಬದಲು ಹಣ ಜಮೆ ಮಾಡಲು ಸಿಎಂ ಚಾಲನೆ ನೀಡಲಿದ್ದಾರೆ. ಜೊತೆಗೆ ರಾಜ್ಯದಲ್ಲಿ ಅಧಿಕ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಮಳೆಯಿಂದ ಖಾಲಿಯಾಗಿದ್ದ ಡ್ಯಾಂಗಳು ಭರ್ತಿಯಾಗುತ್ತಿವೆ. ಮೊತ್ತೊಂದಡೆ ತರಕಾರಿ, ಹಣ್ಣು ಮತ್ತು ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿವೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೆಟ್ಸ್….
ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ, ತನಿಖೆ ಇನ್ನೂ ಮುಂದುವರಿದಿದೆ ಎಂದು ಹಿರೇಕೋಡಿಯ ನಂದಿಪರ್ವತ ಆಶ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರು ಹೇಳಿದ್ದಾರೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿ ನಿಗದಿತ ಅವಧಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗುವುದು. ನ್ಯಾಯಾಲಯದಲ್ಲಿ ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ಇಲಾಖೆಯಿಂದ ಪ್ರಯತ್ನ ಮಾಡಲಾಗುವುದು ಎಂದರು. ಪೊಲೀಸರಿಂದ ಸರಿಯಾದ ತನಿಖೆ ಆಗುತ್ತಿಲ್ಲಾ ಎಂಬ ರಾಜಕೀಯ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, FIR ಆಗಿ ಎರಡು ದಿನ ಮಾತ್ರ ಆಗಿದೆ, ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಎಲ್ಲರ ಹೇಳಿಕೆಗಳನ್ನ ನಾನು ಗಮನಿಸಿದ್ದೇನೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿನ ಎಲ್ಲಾ ಹೇಳಿಕೆ ಗಮನಿಸಿದ್ದೇನೆ. ಇದೆ ಕಾರಣಕ್ಕಾಗಿ ಹಿರಿಯ ಅಧಿಕಾರಿಯಾಗಿ ಬೆಂಗಳೂರಿಂದ ಇಲ್ಲಿಗೆ ಬಂದಿದ್ದೇನೆ. ಪ್ರಕರಣದ ತನಿಖೆ ಯಾವ ರೀತಿಯಲ್ಲಿ ನಡೆಯುತ್ತಿದೆ ಪರಿಶೀಲನೆ ಮಾಡುತ್ತಿದ್ದೇನೆ ಎಂದರು.
ಚಿಕ್ಕೋಡಿ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣ ಸಂಬಂಧ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು, ಜೈನ ಸಮುದಾಯದ ಮುಖಂಡರ ಜೊತೆ ಸುದೀರ್ಘ ಚರ್ಚೆ ನಡೆಸಿದರು. ಮುನಿಗಳ ಹತ್ಯೆ ಪ್ರಕರಣ ತೀವ್ರತೆ ಪಡೆದ ಹಿನ್ನೆಲೆ ಖುದ್ದು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹತ್ಯೆ ಖಂಡಿಸಿ ಚಿಕ್ಕೋಡಿಯಲ್ಲಿ ನಾಳೆ ಜೈನರಿಂದ ಪ್ರತಿಭಟನೆ ಹಿನ್ನೆಲೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಹಿತೇಂದ್ರ ಮನವಿ ಮಾಡಿದರು.
ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸಲು 50% ರಿಯಾಯಿತಿ ಹಿನ್ನೆಲೆ 4 ದಿನದಲ್ಲಿ 28,432 ಪ್ರಕರಣಗಳಲ್ಲಿ 88 ಲಕ್ಷ ರೂ. ದಂಡ ಪಾವತಿಯಾಗಿದೆ. ಮೊದಲ ದಿನ 8820 ಕೇಸ್ಗಳಲ್ಲಿ 28,35,500 ದಂಡ ಪಾವತಿಯಾಗಿತ್ತು. 2ನೇ ದಿನ 7931 ಕೇಸ್ಗಳಲ್ಲಿ 24,74,750 ರೂ. ದಂಡ, 3ನೇ ದಿನ 7234 ಕೇಸ್ಗಳಲ್ಲಿ 22,34,300 ರೂ. ದಂಡ, 4ನೇ ದಿನವಾದ ಇಂದು 3795 ಕೇಸ್ಗಳಲ್ಲಿ 11,49,200 ರೂ. ದಂಡ ಪಾವತಿ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನ ಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ಖಂಡಿಸಿ ಸತ್ಯಾಗ್ರಹ ನಡೆಸುತ್ತಿರುವ ಹುಬ್ಬಳ್ಳಿಯ ವರೂರು ಕ್ಷೇತ್ರದ ಗುಣಧರ ನಂದಿ ಮಹಾರಾಜರ ಅವರ ಜೊತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಉನ್ನತ ಮಟ್ಟದ ತನಿಖೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದೇನೆ. ಸೋಮವಾರ ವಿಧಾನಸಭೆಯಲ್ಲಿ ಹತ್ಯೆಯನ್ನು ಖಂಡಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಬೆಳಗಾವಿಯ ಚಿಕ್ಕೋಡಿಯಲ್ಲಿ ಜೈನ ಮುನಿ ಕಾಮಕುಮಾರನಂದಿ ಮಹರಾಜರ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು. ಜೈನ ದಿಗಂಬರ ಮುನಿ ವೀರಸಾಗರ ಮಹಾರಾಜ್ ನೇತೃತ್ವದಲ್ಲಿ ಜಯನಗರದ ಜೈನ ಮಂದಿರದಿಂದ ಸೌತ್ ಎಂಡ್ ಸರ್ಕಲ್ ನ ಅಶೋಕ ಪಿಲ್ಲರ್ ವರೆಗೂ ಈ ಮೆರವಣಿಗೆ ಸಾಗಿತು. ಈ ವೇಳೆ ಸಾವಿರಾರು ಜೈನ ಸಮುದಾಯದವರು ಮುನಿಯ ಸಾವಿಗೆ ನ್ಯಾಯ ನೀಡುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ವಿರೇಂದ್ರ ಹೆಗ್ಗಡೆ ಅವರ ಸಹೋದರ ಸುರೇಂದ್ರ ಕುಮಾರ್, ಜೈನ ಮುನಿಗಳು ದೇಶಾದ್ಯಂತ ಸಂಚಾರ ಮಾಡುತ್ತಿರುತ್ತಾರೆ. ಈ ರೀತಿ ಘಟನೆ ನಡೆದರೆ ನಮಗೆ ಮಾರ್ಗದರ್ಶನ ತೋರುವವರಿಗೆ ಭದ್ರತೆ ಇಲ್ಲದಂತಾಗುತ್ತೆ. ಸರ್ಕಾರ ಜೈನ ಮುನಿಗಳಿಗೆ ಭದ್ರತೆ ನೀಡಬೇಕು ಅಂತಾ ಒತ್ತಾಯಿಸಿದರು. ಇನ್ನು ಇದೇ ವೇಳೆ ಮಾತನಾಡಿದ ಜೈನ ದಿಗಂಬರ ಮುನಿ ವೀರಸಾಗರ ಮಹಾರಾಜ್, ಮುನಿಗಳ ಹತ್ಯೆಯಿಂದ ನೋವಾಗಿದೆ. ಹಣದ ವಿಚಾರಕ್ಕೆ ಗಲಾಟೆಯಾಗಿದೆ ಅಂತಾರೆ. ಆದರೆ ಏನಾಗಿದೆ ಗೊತ್ತಿಲ್ಲ. ಮುನಿಗಳ ರಕ್ಷಣೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದರು.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಇನ್ನೊಂದೆಡೆ, ಭಾರೀ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿಯುತ್ತಿತ್ತು.
ತುಮಕೂರು: ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವ ಬಗ್ಗೆ ಪುನರುಚ್ಚರಿಸಿದ ಗೃಹಸಚಿವ ಪರಮೇಶ್ವರ್, ರಾಜ್ಯದಲ್ಲಿ ಡ್ರಗ್ಸ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ತೀರ್ಮಾನ ಮಾಡಲಾಗಿದೆ. ಒಂದೂವರೆ ತಿಂಗಳಲ್ಲಿ 150-200 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ್ದೇವೆ. ದಿನ ನಿತ್ಯ ಪಟ್ಟಣ ಪ್ರದೇಶದಲ್ಲಿ ಈ ದಂಧೆ ಆಗುತ್ತಿದೆ. ಇದು ಬಹಳ ಕೆಟ್ಟದ್ದು, ಆರೋಗ್ಯದ ಮೇಲೆ ಬಹಳ ಪರಿಣಾಮ ಬೀಳಲಿದೆ. ಮೊದಲೆಲ್ಲಾ ಹಳ್ಳಿಗಳಲ್ಲಿ ಟೊಮ್ಯಾಟೊ ಗಿಡಗಳ ತರಹ ಗಾಂಜ ಬೆಳೆಯುತಿದ್ದರು. ಅದನ್ನ ಒಣಗಿಸಿ ಸೇವಿಸುತ್ತಿದ್ದರು ಈಗ ಮಾತ್ರೆಗಳು ಬಂದಿವೆ. ಕೆಮಿಕಲ್ಸ್ ಮಿಕ್ಸ್ ಆಗುರುವ ಮಾತ್ರೆಗಳ ಸೇವನೆಯಿಂದ ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಹತ್ತಿಕ್ಕಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದರು.
ಹುಬ್ಬಳ್ಳಿ: ಮಾಜಿ ಶಾಸಕ ಸಿಎಮ್ ನಿಂಬಣ್ಣವರ ನಿಧಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂತಾಪ ಸೂಚಿಸಿದ್ದಾರೆ. ಕಳೆದ 20 ದಿನಗಳ ಹಿಂದೆ ಮಾಜಿ ಶಾಸಕರು ಹೃದಯಿ ಸಂಭಂದಿ ಕಾಯಿಲೆಗೆ ಒಳಗಾಗಿದ್ದರು. ಹೀಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಒಂದು ವಾರದ ಹಿಂದೆ ನಾನು ಅವರ ಸಂಪರ್ಕ ಮಾಡಲು ಪ್ರಯತ್ನ ಮಾಡಿದ್ದೆ. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಕಳೆದ ಎರಡು ದಿನಗಳ ಹಿಂದೆ ಅವರು ಜಯದೇವ ಆಸ್ಪತ್ರೆಯಲ್ಲಿರೋ ಮಾಹಿತಿ ಸಿಕ್ಕಿತ್ತು. ಅವರ ಮಗನ ಜೊತೆ ನಾನು ಮಾತಾಡಿದ್ದೆ. ಇವತ್ತು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1999 ರಿಂದ ನಿಂಬಣ್ಣವರ ಸಾರ್ವಜನಿಕ ಜೀವನದಲ್ಲಿ ಇದ್ದರು. ಬಹಳ ಉತ್ತಮವಾದ ಕೆಲಸ ಮಾಡಿದರು. ಅವರು ರಾಜಕಾರಣಕ್ಕೆ ಬರುವ ಮೊದಲು ಶಿಕ್ಷಕರಾಗಿದ್ದರು. ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು ಎಂದರು. ನಿಂಬಣ್ಣವರ 70 ವಯಸ್ಸು ದಾಟಿದ ಬಳಿಕ ಶಾಸಕರಾಗಿದ್ದರು. ಬಹಳ ಕಳಕಳಿಯಿಂದ ಕೆಲಸ ಮಾಡುತ್ತಿದ್ದರು. ಇವತ್ತು ಹಿರಿಯ ಕಾರ್ಯಕರ್ತನನ್ನ ಬಿಜೆಪಿ ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಚಿಕ್ಕಬಳ್ಳಾಪುರ: ಮಾಜಿ ಸಚಿವ ಅಶ್ವತ್ಥ್ ನಾರಾಯಣರನ್ನು ನೇಣುಗಂಬಕ್ಕೆ ಹಾಕಬೇಕೆಂದು ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ನಾನು ಹಾಗೆ ಹೇಳೇ ಇಲ್ಲ ಎಂದು ಟಿವಿ9ಗೆ ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪ ಮೊಯ್ಲಿ ಸ್ಪಷ್ಟನೆ ನೀಡಿದ್ದಾರೆ. ವಿವಿಗಳಲ್ಲಿ ಉಪನ್ಯಾಸಕರು, ಸಿಬ್ಬಂದಿ ಕೊರತೆ ವಿಚಾರದಲ್ಲಿ ಬೇಸರವಾಗಿದೆ. ಉನ್ನತ ಶಿಕ್ಷಣ ಸಚಿವರಾಗಿ ಅಶ್ವತ್ಥ್ ನಾರಾಯಣ ರಾಜಕೀಯ ಮಾಡಿದ್ದರು. ಬೇರೆ ದೇಶದಲ್ಲಿ ಆಗಿದ್ದರೆ ಅವರನ್ನು ನೇಣುಹಾಕುತ್ತಿದ್ದರು ಎಂದು ಹೇಳಿದ್ದಾಗಿ ಸ್ಪಷ್ಟನೆ ನೀಡಿದರು.
ವಿಜಯಪುರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಲವಾರು ಕಾಮಗಾರಿಯಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಮಾಡಿದ್ದಾರೆ. ಸಿ ಸಿ ಪಾಟೀಲರು ತಮ್ಮ ಬಜೆಟಟ್ಗಿಂತ ನಾಲ್ಕೈದು ಸಾವಿರ ಕೋಟಿ ಜಾಸ್ತಿ ಖರ್ಚು ಮಾಡಿದ್ದಾರೆ. ಯಾಕೆ ಹೆಚ್ಚು ಖರ್ಚು ಮಾಡಿದರು, ಗೊತ್ತಲ್ಲ ಎಂದು ಸಚಿವ ಎಂ ಬಿ ಪಾಟೀಲ್ ಟಾಂಗ್ ಕೊಟ್ಟರು. ನೀರಾವರಿ ಇಲಾಖೆಯಲ್ಲಿ 10-15 ಸಾವಿರ ಕೋಟಿ ಹೆಚ್ಚು ಖರ್ಚು ಮಾಡಿದ್ದಾರೆ. ಬಜೆಟ್ಗಿಂತ ಹೆಚ್ಚು ಯಾಕೆ ಖರ್ಚು ಮಾಡಿದ್ದೀರಿ ಜನರನ್ನ ಯಾಕೆ ಮರಳು ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಇದರ ಹಿಂದಿನ ಉದ್ದೇಶ ಏನು ಹಾಗಿದ್ದರೆ? ಬಿಬಿಎಂಪಿಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಲೂಟಿ ಹೊಡೆಯಲು ಬಜೆಟ್ಗಿಂತ ಹೆಚ್ಚಿನ ಅನುದಾನ ಖರ್ಚು ಮಾಡಿದ್ದೀರೆ. ಬಜೆಟ್ಗಿಂತ ಹೆಚ್ಚು ಖರ್ಚು ಮಾಡುವಾಗ ನಿಮ್ಮ ಶಿಸ್ತು ಎಲ್ಲಿತ್ತು? ನೀವು ಮಾಡಿದ ಅಕ್ರಮಗಳನ್ನ, ಅಶಿಸ್ತನ್ನ ಎಳೆ-ಎಳೆಯಾಗಿ ನಮ್ಮ ಸಿಎಂ ಬಜೆಟ್ ಪುಸ್ತಕದಲ್ಲಿಯೆ ಹೇಳಿ ಬಿಟ್ಟಿದ್ದಾರೆ ಎಂದರು.
ಕಾರವಾರ: ಲಂಡನ್ ಬ್ರಿಡ್ಜ್ ಬಳಿ ಇರುವ ಟನಲ್ನಲ್ಲಿ ಮಳೆ ನೀರು ಸೋರಿಕೆ ಹಿನ್ನಲೆ ಜಿಲ್ಲಾಡಳಿತವು ವಾಹನ ಸಂಚಾರವನ್ನ ಬಂದ್ ಮಾಡಿದೆ. ಟನಲ್ನಲ್ಲಿ ನೀರು ಸೋರಿಕೆ ಬಗ್ಗೆ ಟಿವಿ9 ವಿಸ್ತೃತ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಐಆರ್‌ಬಿ ಸಿಬ್ಬಂದಿಯೊಂದಿಗೆ ಸಭೆ ಮಾಡಿದ್ದರು. ಇದೇ ವೇಳೆ, ಟನಲ್ ಪಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ಕೇಳಿದ್ದರು. ಆದರೆ ಈವರಗೆ ಐಆರ್‌ಬಿ ಫಿಟ್ನೆಸ್ ಸರ್ಟಿಫಿಕೇಟ್ ನೀಡದ ಹಿನ್ನೆಲೆ ಸಂಚಾರ ಬಂದ್ ಮಾಡಲಾಗಿದೆ.
ಕಲಬುರಗಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಶ್ರೀಗಳ ಸಭೆ ನಡೆದಿದ್ದು, ಸಮುದಾಯದ ಎಲ್ಲಾ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಲು ಆಗ್ರಹಿಸಲಾಗಿದೆ. ಸಭೆಯಲ್ಲಿ ಕಾಶಿ ಜಗದ್ಗುರು, ಶ್ರೀಶೈಲ ಜಗದ್ಗುರು, ಉಜ್ಜಯಿನಿ ಜಗದ್ಗುರು, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಈಶ್ವರ ಖಂಡ್ರೆ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಧಾರವಾಡ: ಕಲಘಟಗಿ ಮಾಜಿ ಶಾಸಕ ಸಿ.ಎಮ್. ನಿಂಬಣ್ಣವರ್ (76) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಇಂದು (ಜು.09) ಸಾವನ್ನಪ್ಪಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಗೆಲವು ಸಾಧಿಸಿದ್ದರು.
ಬೆಳಗಾವಿ: ಜೈನಮುನಿ ಹತ್ಯೆ ಖಂಡಿಸಿ ಇಂದು(ಜು.9) ಬೆಳಗಾವಿಯ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಜೈನ ಸಮುದಾಯ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಸಿದ್ದಸೇನ ಮಹಾರಾಜರ ಭಾಷಣ ಮಾಡಿ ‘ಈ ಪ್ರತಿಭಟನೆ ಜಾತಿ, ಧರ್ಮ, ಸರ್ಕಾರದ ವಿರುದ್ಧ ಅಲ್ಲ. ಅಂಹಿಸಾ ಪರಮೋ ಧರ್ಮದ ಅಡಿಯಲ್ಲಿ ಹೋರಾಟ ಮಾಡ್ತಿದ್ದೇವೆ. ಸಾಧು ಸಂತರ ಮೇಲೆ ಅನ್ಯಾಯ ಆದಾಗ ನಾವೆಲ್ಲರೂ ಹೊರ ಬರಬೇಕು. ಧರ್ಮ ರಕ್ಷಣೆ, ಸಾಧು ಸಂತರ ರಕ್ಷಣೆಗೆ ಜನರು ಇಂದು ಬೀದಿಗಿಳಿದಿದ್ದಾರೆ ಎಂದರು.
ಮೈಸೂರು: ವಿಧಾನಸೌಧದಲ್ಲಿ ಕುಮಾರಸ್ವಾಮಿ ಪೆನ್ಡ್ರೈವ್ ಪ್ರದರ್ಶನ ವಿಚಾರ ‘ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸಮಾಜ ಕಲ್ಯಾಣ ಸಚಿವ ಡಾ.ಮಹದೇವಪ್ಪ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು ‘ಹೆಚ್ಡಿಕೆ ಪ್ರದರ್ಶಿಸಿದ ಪೆನ್ಡ್ರೈವ್ನಲ್ಲಿ ಏನಿದೆ ಎಂದು ಗೊತ್ತಿಲ್ಲ. ದಾಖಲೆ ಬಿಡುಗಡೆ ಮಾಡಿ ಎಂದು ಸದನದಲ್ಲೇ ಒತ್ತಾಯಿಸಿದ್ದೇವೆ ಎಂದರು.
ಬೆಂಗಳೂರು: ಅಮರನಾಥ ಯಾತ್ರೆಗೆ ತೆರಳಿದ್ದವರು ಸಂಕಷ್ಟಕ್ಕೆ ಸಿಲುಕಿದ ವಿಚಾರವಾಗಿ ಕರ್ನಾಟಕದ ಯಾತ್ರಾರ್ಥಿಗಳ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ. ಸಂಪರ್ಕಕ್ಕೆ ಸಿಕ್ಕ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಸಂತ್ರಸ್ತರ ರಕ್ಷಣೆ ಹಾಗೂ ರಾಜ್ಯಕ್ಕೆ ಕರೆತರುವ ಬಗ್ಗೆ ಸಿಎಂ ಸೂಚಿಸಿದ್ದಾರೆ. ಅದರಂತೆ ಯಾತ್ರೆಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರನ್ನ ಸರ್ಕಾರ ನೇಮಕ ಮಾಡಿದೆ.
ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಡಿಸಿಎಂ ಸಿಟಿ ರೌಂಡ್ಸ್ ಹಾಕುತ್ತಿದ್ದು, ಈ ವೇಳೆ ಖಾಸಗಿ ಹೋಟಲ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಸ್ಥಳೀಯ ಬಿಜೆಪಿ ಶಾಸಕ ಮುನಿರಾಜು ಭೇಟಿಯಾಗಿದ್ದಾರೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಡಿಸಿಎಂಗೆ ಶಾಸಕರು ಮಾಹಿತಿ ನೀಡುತ್ತಿದ್ದಾರೆ.
ಬೆಂಗಳೂರು: ಸಿಟಿ ರೌಂಡ್ಸ್ ಹಾಕುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ‘ಬಜೆಟ್ನಲ್ಲಿ ಅವರು ಎಷ್ಟೆ ಅನುದಾನ ನೀಡಲಿ, ನಾವು ರೆವೆನ್ಯೂ ಜನರೇಟ್ ಮಾಡುತ್ತೇವೆ. ಟ್ಯಾಕ್ಸ್ ಕದಿಯುತ್ತಿರುವವರಿಗೆ ಕಡಿವಾಣ ಹಾಕುವ ಮೂಲಕ ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ ಎಂದರು.
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಮುಂಜಾನೆಯಿಂದಲೇ ಸಿಟಿ ರೌಂಡ್ಸ್ ನಡೆಸುತ್ತಿದ್ದು, ಈ ವೇಳೆ ಪಾಲಿಕೆ ವಾಹನಗಳ ನಡುವೆ ಡಿಕ್ಕಿಯಾಗಿದೆ. ಮಾಗಡಿ ರೋಡ್ನಲ್ಲಿ ಡಿಕೆ ವಾಹನ ಹಿಂಬಾಲಿಸುತ್ತಿದ್ದ ಪಾಲಿಕೆ ಆಯುಕ್ತರ ವಾಹನಕ್ಕೆ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಪಾಲಿಕೆ ವಾಹನ ಗುದ್ದಿದೆ. ಅದೃಷ್ಟವಶಾತ್ ಡಿಕ್ಕಿ ಹೊಡೆದ ವಾಹನದಲ್ಲಿ ಕಮಿಷನರ್ ಇರಲಿಲ್ಲ.
ಬಾಗಲಕೋಟೆ: ಗುಳೇದಗುಡ್ಡ ಸಮೀಪದ ಮಲಪ್ರಭಾ ನದಿಯಲ್ಲಿ ಮೀನುಗಾರರ ಬಲೆಗೆ ಬರೊಬ್ಬರಿ 50 ಕೆಜಿ ತೂಕದ ಮೀನು ಬಿದ್ದಿದೆ. ಮೀನುಗಾರರಾದ ಪರಶುರಾಮ ಭೋವಿ, ಕುಬ್ಬಣ್ಣ ಚೌಹಾಣ್ ಬಲೆಗೆ ಬಿದ್ದಿರುವ ಈ ದೊಡ್ಡ ಗಾತ್ರದ ಹದ್ದು ಜಾತಿಯ ಮೀನು.
ಚಿಕ್ಕಮಗಳೂರು: ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರವೊಂದು ಮನೆ ಮೇಲೆ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಸ್ಥಳೀಯರು ಮನೆಯ ಮೇಲೆ ಬಿದ್ದ ಮರ ತೆರವು ಮಾಡುತ್ತಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಅವರು ಇಂದು ಎರಡು ಕಡೆ ಸರ್ಪ್ರೈಸ್ ವಿಸಿಟ್ ನೀಡಲಿದ್ದರು. ಅದರಂತೆ ಇದೀಗ ಸೀಗೆಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ.
ಬೆಳಗಾವಿ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜೈನ ಸಮುದಾಯದ ಮುಖಂಡರು, ಜೈನ ಮುನಿಗಳು ಸೇರಿ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆಗೆ ಪ್ಲ್ಯಾನ್ ಮಾಡಿದ್ದು, ಹಲಗಾ ಗ್ರಾಮದ 108ನೇ ಸಿದ್ದಸೇನ ಮಹಾರಾಜ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಈ ವೇಳೆ ಶ್ರಾವಕ್, ಶ್ರಾವಿಕೆಯರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆಯಿದೆ.
ಬೆಂಗಳೂರು: ದಾಸರಹಳ್ಳಿ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಸಾರ್ವಜನಿಕರೊಟ್ಟಿಗೆ ಆಹಾರದ ರುಚಿ ಬಗ್ಗೆ ಮಾಹಿತಿ ಪಡೆಯುತ್ತಾ ಕೇಸರಿಬಾತ್ ಉಪ್ಪಿಟ್ಟು ಸೇವಿಸುತ್ತಿದ್ದಾರೆ.
ಬೆಂಗಳೂರು: ಬೆಂಗಳೂರಿನ 2 ಸ್ಥಳಗಳಿಗೆ ಡಿಕೆ ಶಿವಕುಮಾರ್ ಸರ್ಪ್ರೈಸ್ ವಿಸಿಟ್ ಮಾಡಲಿದ್ದು, ರಸ್ತೆಯಲ್ಲಿ ತೆರೆಳುವ ವೇಳೆ ಬೆಂಗಾವಲು ವಾಹನ ದಾರಿ ತಪ್ಪಿದ ಘಟನೆ ನಡೆದಿದೆ. ಡಿಕೆಸಿ ವಾಹನ ಬಿಟ್ಟು ಮುಂದೆ ಹೋಗಿದ್ದು, ಬಳಿಕ ತಿರುವು ತೆಗೆದುಕೊಂಡು ಬಂದಿದೆ. ಅಲ್ಲಿಯವರೆಗೆ ಮಾರ್ಗ ಮಧ್ಯೆ ಡಿಕೆ ಶಿವಕುಮಾರ್ ವಾಹನ ನಿಲ್ಲಿಸಿದ್ದಾರೆ.
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನ 2 ಸ್ಥಳಗಳಿಗೆ ಸರ್ಪ್ರೈಸ್ ವಿಸಿಟ್ ನೀಡಲಿದ್ದಾರೆ. ಹೌದು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಕೆಶಿ, ಕನ್ನಹಳ್ಳಿ ಮತ್ತು ಸೀಗೆಹಳ್ಳಿ ಕಸದ ಘಟಕಗಳಿಗೆ ತೆರಳುವ ಸಾಧ್ಯತೆಯಿದೆ.
ಬೆಂಗಳೂರು: ತರಕಾರಿಗಳಲ್ಲಿ ಕೆಂಪು ಸುಂದರಿಯಾದ ಟೊಮೆಟೊಗೆ ಫುಲ್ ಡಿಮ್ಯಾಂಡ್ ಬಂದಿದೆ. ಈ ಹಿನ್ನಲೆ ಟೊಮೆಟೊ ರೈಸ್ ಮಾಡಲು ಹೊಟೇಲ್ ಮಾಲೀಕರು ಹಿಂದೇಟು ಹಾಕಿದ್ದಾರೆ. ಈಗಾಗಲೇ ಟೊಮೆಟೊ 100ರ ಗಡಿ ದಾಟಿದ್ದು, ಹೋಟಲ್ ಮಾಲೀಕರುಗಳು ಟೊಮೆಟೊ ಬಾತ್ ಬದಲಿಗೆ ಲೆಮನ್ ರೈಸ್, ಪಲಾವ್, ಪುಳಿಯೊಗರೆ, ವಾಂಗಿ ಭಾತ್, ಬಿಸಿ ಬೆಳೆ ಬಾತ್ ಹಾಗೂ ಚಿತ್ರಾನ್ನ ಮಾಡುತ್ತಿದ್ದಾರೆ.
ಬೆಂಗಳೂರು: ಪವಿತ್ರ ಅಮರನಾಥ ಯಾತ್ರೆಗೆ ತೆರಳಿ ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಟ್ಟೀಟ್ ಮಾಡಿದ್ದಾರೆ. ಗದಗ್ನಿಂದ ತೆರಳಿರುವ 23 ಮಂದಿ ಸೇರಿ ಒಟ್ಟು 80 ಮಂದಿ ಕನ್ನಡಿಗರು ಅಮರನಾಥ ಮಂದಿರದಿಂದ 6 km ದೂರದಲ್ಲಿರುವ ಪಂಚತಾರ್ನಿ ಟೆಂಟ್ನಲ್ಲಿ ಸಿಲುಕಿದ್ದಾರೆ ಎನ್ನುವ ಮಾಹಿತಿ ಲಭ್ಯವಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ರಕ್ಷಣಾ ಕಾರ್ಯ ಕೈಗೊಂಡು, ಎಲ್ಲರನ್ನೂ ಸುರಕ್ಷಿತವಾಗಿ ವಾಪಸು ಕರೆತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಬೆಂಗಳೂರು: ಕಾಂಗ್ರೆಸ್ 5 ಗ್ಯಾರಂಟಿಗಳಲ್ಲೊಂದಾದ ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ಹಣ ಹಾಕಲಾಗುವುದು ಎಂದಿದ್ದ ಸರ್ಕಾರ. ನಾಳೆಯಿಂದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಿದೆ. ಇದಕ್ಕೆ ನಾಳೆ(ಜು.10) ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಾಲನೆ ನೀಡಲಿದ್ದಾರೆ.
Published On - 8:02 am, Sun, 9 July 23