ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಮೂಲಕ ಈಗಾಗಲೇ ಮತದಾರರನ್ನು ಸೆಳೆಯಲು ಹಲವೆಡೆ ಕಾರ್ಯಕ್ರಮಗಳನ್ನು ನಡೆಸಿದ್ದು, ಪ್ರಚಾರ ಅಭಿಯಾನ ಮುಂದುವರಿಸಿದೆ. ಈ ಮಧ್ಯೆ, ಬಿಜೆಪಿ ಕೂಡ ಭರ್ಜರಿಯಾಗಿಯೇ ಚುನಾವಣಾ ತಯಾರಿ ನಡೆಸುತ್ತಿದ್ದು, ಪಕ್ಷದ ರಾಷ್ಟ್ರಮಟ್ಟದ ನಾಯಕರು ಮತ್ತೆ ಮತ್ತೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಶಿವಮೊಗ್ಗೆ ಭೇಟಿ ನೀಡಲಿದ್ದು, ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ. ಆಮೇಲೆ ಬೆಳಗಾವಿಗೂ ಭೇಟಿ ನೀಡಲಿದ್ದಾರೆ. ರಾಜ್ಯ ರಾಜಕೀಯ ವಿದ್ಯಮಾನಗಳ ಇಂದಿನ (ಫೆಬ್ರವರಿ 25) ಲೈವ್ ಅಪ್ಡೇಟ್ಸ್ ಇಲ್ಲಿವೆ.
ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಕಾಂಗ್ರೆಸ್ನ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಬಿಜೆಪಿಯ ರಮೇಶ್ ಜಾರಕಿಹೊಳಿ ಮಧ್ಯೆ ಕ್ರೆಡಿಟ್ ಫೈಟ್ ಆರಂಭವಾಗಿದೆ. ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಮಾಡ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಶಿಷ್ಟಾಚಾರದ ಪ್ರಕಾರ ನಾವು ಎಲ್ಲರನ್ನೂ ಆಹ್ವಾನ ಮಾಡುತ್ತೇವೆ. ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಿದ್ದೇವೆ ಎಂದು ಹೇಳಿದ್ದಾರೆ. ಈ ಮಧ್ಯೆ, ಮಾರ್ಚ್ 2ರಂದೇ ಕಾರ್ಯಕ್ರಮ ಮಾಡ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಾನೀಗ ಯಾವ ಪಕ್ಷದ ಸದಸ್ಯನೂ ಅಲ್ಲ ಎಂದು ಶಿವಮೊಗ್ಗದಲ್ಲಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ. ನನ್ನನ್ನು ಪರಿಷತ್ ಸದಸ್ಯ ಮಾಡಿದ್ದು ಆರ್ಎಸ್ಎಸ್ ಮುಖಂಡ ಮುಕುಂದ್. ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಆ ನಂತರ ನನ್ನನ್ನು ಪರಿಷತ್ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಬರುತ್ತಿರುವುದು ಸಂತೋಷ. ಅವರು ಕೇವಲ ವಿಮಾನ ನಿಲ್ದಾಣ ಉದ್ಘಾಟಿಸಿ ಹೋಗುವುದಲ್ಲ. ವಿಐಎಸ್ಎಲ್ ಕಾರ್ಮಿಕರ ಸಮಸ್ಯೆಯನ್ನೂ ಆಲಿಸಬೇಕು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿಶ್ ಶಾ ಅವರ ನೇತೃತ್ವದಿಂದ ನಮಗೆ ಆನೆ ಬಲ ಸಿಕ್ಕಿದಂತಾಗಿದೆ. ಫೆ. 27ರಂದು ಶಿವಮೊಗ್ಗಕ್ಕೆ ಮೋದಿ ಬರುತ್ತಾರೆ. ನನ್ನ ಬಹಳ ವರ್ಷದ ಕನಸು ನನಸಾಗಿದೆ. ಅಭಿವೃದ್ಧಿಗೆ ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಿದ್ದೇನೆಂಬ ತೃಪ್ತಿ ಇದೆ. ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವೆ. ವೀರಶೈವ ಲಿಂಗಾಯತ ಬಂಧುಗಳಲ್ಲಿ ಕೈ ಜೋಡಿಸಿ ಮನವಿ ಮಾಡುತ್ತಿದ್ದೇನೆ. ನಾನೇ ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗುತ್ತಿದ್ದೇನೆ. ನನಗೆ ಎಲ್ಲಾ ಬೆಂಬಲ ಕೊಟ್ಟು ಬಿಜೆಪಿ ಗೆಲ್ಲಿಸಬೇಕೆಂದು ಕೈಜೋಡಿಸಿ ಪ್ರಾರ್ಥನೆ ಮಾಡುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಚುನಾವಣೆ ಜಯಿಸುವುದಕ್ಕಾಗಿ ಮಾರ್ಚ್ 1ರಿಂದ ನಾಲ್ಕು ತಂಡಗಳಾಗಿ ರಥಯಾತ್ರೆ ಮಾಡುತ್ತೇವೆ ಎಂದು ಬಿಜೆಪಿ ರಥಯಾತ್ರೆ ಸಂಚಾಲಕ ಸಿ.ಸಿ.ಪಾಟೀಲ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಮಾರ್ಚ್ 1ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಥಮ ಯಾತ್ರೆಗೆ ಚಾಲನೆ ದೊರೆಯಲಿದೆ. 1ನೇ ರಥಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಚಾಲನೆ ನೀಡ್ತಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ 2ನೇ ರಥಯಾತ್ರೆ ಶುರುವಾಗಲಿದೆ. 2ನೇ ರಥಯಾತ್ರೆಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡ್ತಾರೆ. 3 ಮತ್ತು 4ನೇ ರಥಯಾತ್ರೆಯನ್ನು ಅಮಿತ್ ಶಾ ಉದ್ಘಾಟನೆ ಮಾಡ್ತಾರೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ನವರು ಬಿಜೆಪಿಯ ಬಿ ಟೀಂ ಜೆಡಿಎಸ್ ಎಂದು ಹೇಳ್ತಾರೆ. ಬಿಜೆಪಿಯವರು ಕಾಂಗ್ರೆಸ್ನ ಬಿ ಟೀಂ ಎಂದು ಹೇಳುತ್ತಾರೆ. ಆದರೆ ನಾವು ಯಾರ ಟೀಂ ಅಲ್ಲ, ಈ ರಾಜ್ಯದ ಜನರ ಟೀಂ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ಟಿ-20 ಮ್ಯಾಚ್ ರೀತಿ ಕುತೂಹಲವಿದೆ. ಕೊನೆಯ ಓವರ್ವರೆಗೂ ಈ ಕುತೂಹಲವಿರಲಿದೆ. ಹಾಸನ ಕ್ಷೇತ್ರದಲ್ಲಿ ಟಿಕೆಟ್ ನೀಡಿಕೆ ಬಗ್ಗೆ ಚರ್ಚಿಸುವ ಸಲುವಾಗಿ ನಾಳೆ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಆ ಸಭೆಗೆ ರೇವಣ್ಣ ಅವರನ್ನು ಕರೆದಿಲ್ಲ. ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ರಾಜ್ಯದ ಜನರಿಗೂ ಕುತೂಹಲವಿದೆ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರೆಲ್ಲರೂ ನನ್ನ ಕುಟುಂಬ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಬಿಜೆಪಿ ಸೋಲಿಸ್ತೇನೆ ಎಂದಿದ್ದೆ. ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಕಾರ್ಯಕರ್ತರ ಅಭಿಮಾನಕ್ಕೆ ಚ್ಯುತಿ ಬರದಂತೆ ಟಿಕೆಟ್ ನೀಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಹಾಸನ ಟಿಕೆಟ್ ಘೋಷಣೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
130 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಕೆಜೆಪಿಗೆ ಹೋದಾಗ ಪ್ರಾಣ ಇರುವವರೆಗೆ ಬಿಜೆಪಿಗೆ ಹೋಗಲ್ಲ ಎಂದಿದ್ದರು. ಈಗ ಜೀವ ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದಿದ್ದಾರೆ. ಹಿಂದಿನ ವಿಚಾರಗಳನ್ನು ಈಗ ಸ್ತಾಪ ಮಾಡಲು ಹೋಗಲ್ಲ ಎನ್ನುತ್ತಲೇ ಕುಮಾರಸ್ವಾಮಿ ಅವರು ಬಿಎಸ್ವೈ ರಾಜಕೀಯ ಇತಿಹಾಸ ಕೆದಕಿದರು. ಸಿದ್ದರಾಮಯ್ಯ ಗೆದ್ದ ಎತ್ತಿನಬಾಲ ಹಿಡಿಯಲು ಹೋಗ್ತಾರೆ ಅಂತ ನಗೆ ಹೇಳುತ್ತಾರೆ. ಅವರು ಸೋತ ಎತ್ತಿನಬಾಲ ಹಿಡಿಯಲು ಹೋಗ್ತಾರೆ ಎಂದು ಎಚ್ಡಿಕೆ ವಾಗ್ದಾಳಿ ನಡೆಸಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಏನು ಎಂದು ಎಚ್ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ರಾಜ್ಯದ ಜನರು ಭೂಮಿ ನೀಡಿದ್ದಾರೆ, ಕೆಲವರಿಗೆ ಇನ್ನೂ ಹಣ ಬಂದಿಲ್ಲ. ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಮೋದಿ ಕೊಡುಗೆ ಶೂನ್ಯ ಎಂದು ಅವರು ಹೇಳಿದ್ದಾರೆ.
ಶೃಂಗೇರಿಯಲ್ಲಿ ಸುದ್ದಿಗೋಷ್ಠಿ ಆರಂಭಿಸಿರುವ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾರ್ಚ್ 11ರಂದು ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ತಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಬಿಂಬಿಸಲು ಪ್ರಧಾನಿ ನರೇಂದ್ರ ಮೋದಿ ಬರ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಮಾರ್ಚ್ 11ರಂದು ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅದೇ ದಿನ ಬಿಡದಿಯಿಂದ ಮದ್ದೂರಿನವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ರೂಪಿಸಿರುವ ತಂತ್ರಗಾರಿಕೆಯ ಭಾಗವಾಗಿ ಈ ರೋಡ್ ಶೋ ನಡೆಯಲಿದೆ ಎನ್ನಲಾಗುತ್ತಿದೆ.
ಶೃಂಗೇರಿ ಮಠದ ಭಾರತೀತೀರ್ಥ ಶ್ರೀಗಳನ್ನು ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಏಕಾಂಗಿಯಾಗಿ ಭೇಟಿಯಾದರು. ಕೆಲವೇ ಕ್ಷಣಗಳಲ್ಲಿ ಶಾರದಾಂಬೆ ದರ್ಶನಕ್ಕೆ ತೆರಳಲಿರುವ ಕುಮಾರಸ್ವಾಮಿ, ನಂತರ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಬೇಕು ಎಂಬ ಸಚಿವ ಅಶ್ವಥ್ಥನಾರಾಯಣ ಹೇಳಿಕೆ ಖಂಡಿಸಿ ಮೈಸೂರಿನಲ್ಲಿಂದು ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ. ‘ನನ್ನನ್ನೂ ಹತ್ಯೆ ಮಾಡಿ’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ.
ಫೆಬ್ರವರಿ 27ಕ್ಕೆ ಬೆಳಗಾವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. 8 ಕಿಲೋಮೀಟರ್ ರೋಡ್ ಶೋಗೆ ಸಿದ್ಧತೆ ನಡೆಯುತ್ತಿದ್ದು, ಶಾಸಕ ಅಭಯ ಪಾಟೀಲ್ ಅವರೇ ಖುದ್ದು ಪಕ್ಷದ ಬಾವುಟ, ಬಟ್ಟಿಂಗ್ಸ್ ಕಟ್ಟಿ ಸಿದ್ಧತೆಗೆ ಚಾಲನೆ ನೀಡಿದ್ದಾರೆ. ರೋಡ್ ಶೋ ಮಾರ್ಗದಲ್ಲಿ 600ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು 10 ಸಾವಿರ ಧ್ವಜ ಕಟ್ಟಿದ್ದಾರೆ.
ಚಿತ್ರದುರ್ಗದ ಚಂದ್ರವಳ್ಳಿ ಆಟದ ಮೈದಾನದಲ್ಲಿ ಇಂದು ಬಿಜೆಪಿ ಮಹಿಳಾ ಸಮಾವೇಶ ನಡೆಯಲಿದೆ.ಬಿಜೆಪಿ ಮೋರ್ಚಾ ಸಮಾವೇಶದ ಸಂಚಾಲಕ ಬಿವೈ ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ನಟಿ ತಾರಾ, ಮಹಿಳಾ ಮೋರ್ಚಾ ರಾಜ್ಯದ್ಯಕ್ಷೆ ಗೀತಾ ಸೇರಿ ಹಲವರು ಭಾಗಿಯಾಗಲಿದ್ದಾರೆ.
ಇಂದು ಬಾಗಲಕೋಟೆ ಜಿಲ್ಲೆ ಬೀಳಗಿ ವಿಧಾನಸಭಾ ಕ್ಷೇತ್ರದ ಕಲಾದಗಿಯಲ್ಲಿ ಕಂದಾಯ ಸಚಿವ ಆರ್ ಅಶೋಕ ಗ್ರಾಮವಾಸ್ತವ್ಯ ನಡೆಸಲಿದ್ದಾರೆ. ಬೆಳಿಗ್ಗೆ 11ಕ್ಕೆ ಆಗಮಿಸಲಿರುವ ಸಚಿವರು ಕಲಾದಗಿ ಗ್ರಾಮದಲ್ಲಿ ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಮೂಲಕ ಗ್ರಾಮ ಪ್ರದಕ್ಷಿಣೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಭಾವಚಿತ್ರ ಇರುವ ಪೇಎಂಎಲ್ಎ ಪೋಸ್ಟರ್ಗಳನ್ನು ನಗರದ ಹಲವೆಡೆ ಅಂಟಿಸಿರುವುದು ಕಂಡುಬಂದಿದೆ. ‘ನಿಮಗೆ ಕೆಲಸ ಆಗಬೇಕೇ ನನಗೆ ಪೇ ಮಾಡಿ’ ಎಂಬ ಸಂದೇಶವನ್ನು ಪೋಸ್ಟರ್ನಲ್ಲಿ ಹಾಕಲಾಗಿದೆ. ಸದ್ಯ ಪೋಸ್ಟರ್ಗಳನ್ನು ತೆರವುಗೊಳಿಸಲಾಗಿದೆ.
ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಶೃಂಗೇರಿಗೆ ಭೇಟಿ ನೀಡಿದ್ದು, ಶಾರದಾಂಬೆಯ ದರ್ಶನ ಪಡೆಯಲಿದ್ದಾರೆ. ನಂತರ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಬಳಿಕ ಪಂಚರತ್ನ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಶೃಂಗೇರಿ ಶ್ರೀಗಳನ್ನು ಭೇಟಿಯಾಗಿ ಎಚ್ಡಿಕೆ ಆಶೀರ್ವಾದ ಪಡೆಯಲಿದ್ದಾರೆ. ನಂತರ ಹಾಸನ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ.
Published On - 7:45 am, Sat, 25 February 23