ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರದ ಗೊಂದಲ ಶನಿವಾರವೂ ಕರ್ನಾಟಕದಲ್ಲಿ ಮುಂದುವರಿದಿದೆ. ಹಲವು ಕ್ಷಿಪ್ರ ಬೆಳವಣಿಗೆಗಳು ನಡೆದವು. ಹಲವು ಮಠಾಧೀಶರು ಯಡಿಯೂರಪ್ಪ ಪರ ಹೇಳಿಕೆಗಳನ್ನು ನೀಡುವುದು ಮುಂದುವರಿದಿದ್ದರೆ, ಮುಖ್ಯಮಂತ್ರಿ ಗಾದಿಗೆ ಹೆಸರು ಕೇಳಿಬರುತ್ತಿರುವ ಪ್ರಲ್ಹಾದ್ ಜೋಶಿ ಹಾಗೂ ಆರ್.ಅಶೋಕ್ ಹೊಸ ರೀತಿಯ ದಾಳಗಳನ್ನು ಉರುಳಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ವಿವರ ಇಲ್ಲಿದೆ. ನಗರದ ಅರಮನೆ ಮೈದಾನದಲ್ಲಿ ಭಾನುವಾರ (ಜುಲೈ 25) ಸ್ವಾಮೀಜಿಗಳ ಸಮಾವೇಶ ನಡೆಯಲಿದೆ.
ಡೆಡ್‌ಲೈನ್ ಗೊತ್ತಿಲ್ಲ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದ ಚರ್ಚೆ ಆರಂಭವಾದ ನಂತರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೆಸರು ಮುಂಚೂಣಿಯಲ್ಲಿದೆ. ಜುಲೈ 26ರಂದು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, ಯಾರಿಗೆ ಯಾರು ಡೆಡ್‌ಲೈನ್ ಕೊಟ್ಟಿದ್ದಾರೆಂದು ಗೊತ್ತಿಲ್ಲ ಎಂದು ಮುಗುಂ ಆಗಿ ಹೇಳಿದರು.
ಬಿ.ಎಸ್.ಯಡಿಯೂರಪ್ಪ ನೀಡಿದ ಹೇಳಿಕೆಯನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಅವರು ಕೇಂದ್ರ ನಾಯಕರ ಜತೆ ಮಾತುಕತೆ ಆಗಿದೆ ಎಂದಿದ್ದಾರೆ. ಆದರೆ ಏನು ಮಾತುಕತೆ ಆಗಿದೆ ಎಂಬ ವಿವರಗಳು ನನಗೆ ಗೊತ್ತಿಲ್ಲ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ಮೊದಲು ಜನರ ಕೆಲಸ ಮಾಡೋಣ: ಆರ್.ಅಶೋಕ್
ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸುವ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.ಅಶೋಕ, ಈಗ ಮಳೆಗಾಲ ಬಂದು, ಭೂಕುಸಿತ ಸಂಭವಿಸಿದೆ. ಪಟ್ಟಿಯಲ್ಲಿ ನಿಮ್ಮ ಹೆಸರೂ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ, ಮೊದಲು ಜನರ ಕೆಲಸ ಮಾಡೋಣ. ನಾಯಕತ್ವದ ವಿಚಾರದ ಬಗ್ಗೆ ಕೇಂದ್ರದ ನಾಯಕರು ನೋಡಿಕೊಳ್ಳುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯಮಂತ್ರಿ ಬದಲಾವಣೆಗೆ ಮುಹೂರ್ತ ಫಿಕ್ಸ್ ಆಗಿದೆಯೇ ಎಂಬ ವಿಚಾರದ ಬಗ್ಗೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ದೋಣಿಗಲ್‌ನಲ್ಲಿ ಪ್ರತಿಕ್ರಿಯಿಸಿದ ಅಶೋಕ, ಮುಹೂರ್ತದ ಬಗ್ಗೆ ಸ್ವತಃ ಯಡಿಯೂರಪ್ಪ ಹೇಳಿಕೆ ಕೊಟ್ಟಿದ್ದಾರೆ. ನಾನು ಅದರ ಬಗ್ಗೆ ಏನೂ ಹೇಳುವುದಿಲ್ಲ. ನಮ್ಮ ಕೇಂದ್ರ ನಾಯಕರು ಏನು ಹೇಳುತ್ತಾರೋ ಅದನ್ನೇ ಪಾಲಿಸುತ್ತೇವೆ. ಕೇಂದ್ರದ ನಾಯಕರು ಹಾಕಿದ ಗೆರೆಯನ್ನು ದಾಟುವುದಿಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವ ಬಗ್ಗೆ ಸ್ವಾಮೀಜಿಗಳು ನೀಡಿರುವ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ನಾನು ನೇರವಾಗಿ ಯಾವ ಸ್ವಾಮಿಜಿಯನ್ನೂ ಭೇಟಿಯಾಗಿಲ್ಲ. ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಒಂದು ರಾಜಕೀಯ ಪಕ್ಷದ ಆಂತರಿಕ ವಿಚಾರ ಎಂದು ಸ್ವಾಮಿಜಿಗಳ ಹೇಳಿಕೆಗೆ ಸಚಿವ ಆರ್.ಅಶೋಕ ಪರೋಕ್ಷವಾಗಿ ತಿರುಗೇಟು ನೀಡಿದರು.
ಕಂದಾಯ ಸಚಿವರು ದೋಣಿಗಲ್‌ನಲ್ಲಿ ಇರುವಾಗಲೇ ಮುಖ್ಯಮಂತ್ರಿ ಕಚೇರಿಯಿಂದ ಎರಡು ಬಾರಿ ಅವರಿಗೆ ಕರೆ ಬಂದಿತ್ತು. ಮುಖ್ಯಮಂತ್ರಿ ಕಚೇರಿಗೆ ಭಾನುವಾರ ಮುಂಜಾನೆಯೇ ಬರಬೇಕು ಎಂಬ ಯಡಿಯೂರಪ್ಪ ಸೂಚನೆಯನ್ನು ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ಅಶೋಕ ಅವರಿಗೆ ತಿಳಿಸಿದರು.
ನಾಳೆ ಮಠಾಧೀಶರ ಸಮಾವೇಶ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ (ಜುಲೈ 25) ವಿವಿಧ ಮಠಾಧೀಶರ ಸಮಾವೇಶ ನಡೆಯಲಿದೆ ಎಂದು ಷಡಕ್ಷರಿ ರುದ್ರಮುನಿ ಸ್ವಾಮೀಜಿ ಹೇಳಿದ್ದಾರೆ. ಬೆಳಿಗ್ಗೆ 10.30ಕ್ಕೆ ಸಮಾವೇಶ ಆರಂಭವಾಗಲಿದ್ದು, ಸಾವಿರಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಮಠಗಳ ಪಾತ್ರ, ದೇಶಕ್ಕೆ ಮಠಗಳ ಕೊಡುಗೆ ಏನು ಎಂಬ ಬಗ್ಗೆ ಈ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಯಡಿಯೂರಪ್ಪ ಅವರ ಮುಖ್ಯಮಂತ್ರಿ ಪಟ್ಟ ಉಳಿಸಲು ಸ್ವಾಮೀಜಿಗ ಅಗತ್ಯವಿಲ್ಲ. ಅವರು ವೈಯಕ್ತಿಕ ವರ್ಚಸ್ಸು ಮತ್ತು ಪರಿಶ್ರಮದಿಂದ ಬೆಳೆದು ಬಂದಿದ್ದಾರೆ. ನಾವು ಸಾವಿರ ಸ್ವಾಮೀಜಿಗಳು ಸೇರಿ ಯಡಿಯೂರಪ್ಪ ಅವರಿಗೆ ರಕ್ಷಣೆ ಕೊಡುತ್ತೇವೆ ಎನ್ನಲು ಆಗುವುದಿಲ್ಲ ಎಂದರು.
ವಿವಿಧ ಮಠಾಧೀಶರಿಂದ ಸಚಿವ ಮುರುಗೇಶ್ ನಿರಾಣಿ ಭೇಟಿ
ಕಲಬುರಗಿ ನಗರದಲ್ಲಿ ಶನಿವಾರ ಸಚಿವ ಮುರುಗೇಶ್ ನಿರಾಣಿ ಅವರನ್ನು ಐವಾನ್ ಈ ಶಾಹಿ ಅತಿಥಿ ಗೃಹದಲ್ಲಿ ಸುಲಫಲಮಠದ ಸಾರಂಗದರ ದೇಶಿಕೇಂದ್ರ ಜಗದ್ಗುರು ಸೇರಿದಂತೆ ಹಲವು ಮಠಾಧೀಶರು ಭೇಟಿಯಾದರು. ಈ ವೇಳೆ ಏನು ಚರ್ಚೆ ನಡೆಯಿತು ಎಂಬ ವಿವರಗಳು ಲಭ್ಯವಾಗಿಲ್ಲ. ಯಡಿಯೂರಪ್ಪ ನಂತರ ಮುಖ್ಯಮಂತ್ರಿ ಗಾದಿಗೆ ಕೇಳಿಬರುತ್ತಿರುವ ಹಲವು ಹೆಸರುಗಳ ಪೈಕಿ ಮುರುಗೇಶ್ ನಿರಾಣಿ ಅವರ ಹೆಸರೂ ಸೇರಿದೆ. ಈ ಹಿನ್ನೆಲೆಯಲ್ಲಿಯೇ ಈ ಭೇಟಿಯೂ ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿದೆ.
ಸಚಿವರಾಗಲಿ ರಾಘವೇಂದ್ರ: ಈಶ್ವರಪ್ಪ
ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಆದಷ್ಟು ಬೇಗ ಕೇಂದ್ರ ಸಚಿವರಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸಂಸದರಾಗಿ ರಾಘವೇಂದ್ರ ಸಾವಿರಾರು ಕೋಟಿ ಅನುದಾನ ತಂದಿದ್ದಾರೆ, ಸಚಿವರಾದರೆ ಮತ್ತಷ್ಟು ಅನುದಾನ ತರುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು.
ಯಡಿಯೂರಪ್ಪ ಉಳಿವಿಗಾಗಿ ಸಿದ್ದಲಿಂಗೇಶ್ವರನ ಮೊರೆ
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದು ಅಭಿಮಾನಿಗಳು ಶನಿವಾರ ಕೆ.ಆರ್.ಪೇಟೆ ತಾಲ್ಲೂಕು ಬೂಕನಕೆರೆ ಗ್ರಾಮದ ಸ್ವತಂತ್ರ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಅರ್ಚನೆ ಮಾಡಿಸಿ, ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
(Karnataka Politics discussion continue on change of chief minister BS Yediyurappa)
ಇದನ್ನೂ ಓದಿ: ಬಿಜೆಪಿ ಭ್ರಷ್ಟರ ಪಕ್ಷ: ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ – ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಾಖ್ಯಾನ
ಇದನ್ನೂ ಓದಿ: ತವರು ಜಿಲ್ಲೆ ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ನೀಡಿದ ಸಿಎಂ ಯಡಿಯೂರಪ್ಪ; 1800 ಕೋಟಿ ರೂ. ವಿವಿಧ ಕಾಮಗಾರಿಗಳಿಗೆ ಚಾಲನೆ
Published On - 5:17 pm, Sat, 24 July 21