ಆ ದಿನಗಳು ಕಥೆ ಯಾರದ್ದು ಎಂದು ಸಿದ್ದರಾಮಯ್ಯ ಹೇಳಬೇಕು: ಸಿದ್ದರಾಮಯ್ಯಗೆ ಸಿ.ಟಿ.ರವಿ ಪ್ರಶ್ನೆ
ರೌಡಿ ಮೋರ್ಚಾ ಮಾಡಲಿ ಎಂದು ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ಕಿಡಿಕಾರಿದ ಬಿಜೆಪಿಯ ಸಿ.ಟಿ.ರವಿ, ಆ ದಿನಗಳು ಕಥೆ ಯಾರದ್ದು ಎಂದು ಸಿದ್ದರಾಮಯ್ಯ ಹೇಳಬೇಕು ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರು: ರೌಡಿಗಳು ಬಿಜೆಪಿ ಸೇರಿಕೊಳ್ಳುತ್ತಿರುವ ಬಗ್ಗೆ ಕಾಂಗ್ರೆಸ್ ಟೀಕಿಸುತ್ತಿದ್ದು, ಬಿಜೆಪಿ ರೌಡಿ ಮೋರ್ಚಾ ಮಾಡಲಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಇದಕ್ಕೆ ಕಿಡಿಕಾರಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi), ಆ ದಿನಗಳು ಕಥೆ (Aa Dinagalu Story) ಯಾರದ್ದು ಎಂದು ಸಿದ್ದರಾಮಯ್ಯ (Siddaramaiah) ಅವರು ಹೇಳಬೇಕು. ಅಗ್ನಿ ಶ್ರೀಧರ್ ಯಾರ ಹೆಸರು ಹೇಳಿದ್ದಾರೆ ಮತ್ತು ಅವರು ಯಾವ ಪಾರ್ಟಿ? ಕೊತ್ವಾಲ್ ರಾಮಚಂದ್ರ (Kotwal Ramachandra) ಶಿಷ್ಯ ಯಾರು? ಜಯರಾಜ್ (Jayaraj) ಶಿಷ್ಯ ಯಾರು? ಆ ದಿನಗಳನ್ನು ಮೆಲುಕು ಹಾಕಿದರೆ ಗೊತ್ತಾಗುತ್ತದೆ ಸಿದ್ದರಾಮಯ್ಯನವರೇ, ಆ ದಿನಗಳನ್ನು ಮೆಲುಕು ಹಾಕಿದರೆ ರೌಡಿ ಯಾರು ಎಂದು ಗೊತ್ತಾಗುತ್ತದೆ ಎಂದು ಹೇಳಿದರು. ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ಈ ಹೇಳಿಕೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಅನೇಕ ರೌಡಿಗಳು ಸೇರಿದ್ದು, ಸದ್ಯ 60 ಮಂದಿ ರೌಡಿಗಳು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಕಾರ ವ್ಯಕ್ತಪಡಿಸಿದ ಸಿ.ಟಿ.ರವಿ ಅವರು, ತಲೆ ಕೆಟ್ಟವರ ಹೇಳಿಕೆಗಳಿಗೆ ಪ್ರತಿಕ್ರಿಯೆ ಮಾಡಲ್ಲ ಎಂದರು.
ಇದನ್ನೂ ಓದಿ: ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರ ಆಯ್ಕೆ ಮಾಡಬಹುದೆಂಬ ಅಭಿಪ್ರಾಯ ಬರುತ್ತಿದೆ: ಕೆ. ಎಸ್ ಈಶ್ವರಪ್ಪ
ಬಾಯಿ ಬಿಟ್ಟರೆ ಸಂಸ್ಕೃತಿ, ಆಚಾರ, ವಿಚಾರದ ಮಂತ್ರ ಉದುರಿಸುವ ಆರ್ ಎಸ್ ಎಸ್ ನಾಯಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕರೆಸಿಕೊಂಡದ್ದು ರೌಡಿಮೋರ್ಚಾ ಕಟ್ಟಲು ಸಲಹೆ ನೀಡಲಿಕ್ಕಾಗಿಯೇ? ಆರ್ ಎಸ್ ಎಸ್ ಮೌನ ಸಮ್ಮತಿ ಲಕ್ಷಣವೇ? ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು.
ಗಣಿಲೂಟಿಕೋರ ರೌಡಿಗಳನ್ನು ಕಟ್ಟಿಕೊಂಡು ಅಧಿಕಾರಕ್ಕೆ ಬಂದಿದ್ದ ಬಿಜೆಪಿಯ ಮುಖ್ಯಮಂತ್ರಿಗಳು ಕೊನೆಗೆ ಜೈಲು ಪಾಲಾಗಬೇಕಾಯಿತು. ಈಗ ಹೊಸ ರೌಡಿಪಡೆ ಕಟ್ಟುತ್ತಿರುವುದು ಯಾರನ್ನು ಜೈಲಿಗೆ ಕಳಿಸಲು? ಸೋಲಿನ ಭೀತಿಯಲ್ಲಿರುವ ರಾಜ್ಯಬಿಜೆಪಿ ಬೀದಿ ರೌಡಿಗಳನ್ನು ಕಟ್ಟಿಕೊಂಡು ಚುನಾವಣೆ ಗೆಲ್ಲಲು ಹೊರಟಿರುವುದು, ಧರ್ಮ,ಸಂಸ್ಕೃತಿ ಬಗ್ಗೆ ಬೊಗಳೆ ಬಿಡುವ ಸಂಘ ಪರಿವಾರದ ನೈತಿಕ ಅಧ:ಪತನವಲ್ಲದೆ ಮತ್ತೇನು? ಎಂದು ಸರಣಿ ಟ್ವೀಟ್ಗಳಲ್ಲಿ ಪ್ರಶ್ನಿಸಿದ್ದರು.
ಬಾಯಿ ಬಿಟ್ಟರೆ ಸಂಸ್ಕೃತಿ, ಆಚಾರ, ವಿಚಾರದ ಮಂತ್ರ ಉದುರಿಸುವ ಆರ್ ಎಸ್ ಎಸ್ ನಾಯಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕರೆಸಿಕೊಂಡದ್ದು ರೌಡಿಮೋರ್ಚಾ ಕಟ್ಟಲು ಸಲಹೆ ನೀಡಲಿಕ್ಕಾಗಿಯೇ? ಆರ್ ಎಸ್ ಎಸ್ ಮೌನ ಸಮ್ಮತಿ ಲಕ್ಷಣವೇ?
— Siddaramaiah (@siddaramaiah) December 3, 2022
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Tue, 6 December 22