ಗಂಗಾವತಿಯನ್ನೇ ಆಯ್ಕೆ ಮಾಡಿಕೊಂಡಿದ್ಯಾಕೆ? ಕೊನೆಗೂ ಕಾರಣ ಕೊಟ್ಟ ಜನಾರ್ದನ ರೆಡ್ಡಿ
ಮನೆ ಮಾಡಲು ಗಂಗಾವತಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆಯೂ ಇಂಗಿತ ವ್ಯಕ್ತಪಡಿಸಿದ್ದಾರೆ.
ಗದಗ: ಅಕ್ರಮ ಗಣಿಗಾರಿಕೆಯಿಂದ ಜೈಲುಪಾಲಾಗಿ ಆಚೆ ಬಂದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತೆ ರಾಜಕೀಯದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ. ಕರ್ನಾಟಕ ಚುನಾವಣೆ (Karnataka Election) ಸಮೀಪಿಸುತ್ತಿದ್ದಂತೆ ಜನಾರ್ದನ ರೆಡ್ಡಿ (Gali Janardhan Reddy) ಅವರು ರಾಜಕೀಯವಾಗಿ ಸಕ್ರಿಯರಾಗಿದ್ದು, ಗಂಗಾವತಿಯಲ್ಲಿ ಮನೆ ಸಹ ನೋಡಿದ್ದಾರೆ. ಇನ್ನು ಗಂಗಾವತಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಸ್ವತಃ ಜನಾರ್ದನ ರೆಡ್ಡಿ ಕಾರಣ ಸಹ ಕೊಟ್ಟಿದ್ದಾರೆ.
ಇಂದು(ಡಿಸೆಂಬರ್ 06) ಗದನಲ್ಲಿರುವ ಗೆಳೆಯ ಶ್ರೀರಾಮುಲು ನಿವಾಸಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ಸುಪ್ರೀಂ ಕೋರ್ಟ್ ಬಳ್ಳಾರಿಗೆ ಹೋಗಲು ನಿರ್ಬಂಧ ಹೇರಿದೆ. ಪದೇ ಪದೇ ಬೆಂಗಳೂರಿನಲ್ಲಿ ಇರಲು ಇಷ್ಟವಿಲ್ಲ. ಉತ್ತರ ಕರ್ನಾಟಕದಲ್ಲಿಯೇ ಇರಬೇಕು ನಮ್ಮ ಜನರ ನಡುವೆ ಇರಬೇಕು. ಹಾಗಾಗಿ ಗಂಗಾವತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಜನರ ನಡುವೆ ಇರುವ ಉದ್ದೇಶದಿಂದ ಗಂಗಾವತಿ ಆಯ್ಕೆ ಮಾಡಿದ್ದೇನೆ. ಸಾರ್ವಜನಿಕರ ಬದುಕಲ್ಲಿ ಬರಲೇಬೇಕು ಅಂತ ಓಡಾಡುತ್ತಿದ್ದೇನೆ. ಹೊಸ ಪಕ್ಷ ಕಟ್ಟುವ ಬಗ್ಗೆ ಇನ್ನೂ ಸಮಯ ಇದೆ. 12 ವರ್ಷ ಮನೆಯಲ್ಲಿ ಇರಲು ಆಗುವುದಿಲ್ಲ. ಹಾಗಾಗಿ ಸಾರ್ವಜನಿಕವಾಗಿ ಓಡಾಡುತ್ತಿದ್ದರೆ ಶಕ್ತಿಯೇ ಬೇರೆ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ವಿಚಾರವನ್ನು ಮುಂದೆ ಹೇಳುತ್ತೇನೆ ಎಂದು ಹೇಳುವ ಮೂಲಕ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Election: ಕುತೂಹಲ ಮೂಡಿಸಿದ ಜನಾರ್ದನ ರೆಡ್ಡಿ ನಡೆ ಕ್ರಿಶ್ಚಿಯನ್ ಸಮುದಾಯದ ಶಾಲೆಯ ಕಡೆ
ನಮ್ಮ ಇಡೀ ರಾಜಕೀಯ ಜೀವನ ಆರಂಭವಾಗಿದ್ದು ಬಿಜೆಪಿಯಿಂದ. ಲಾಲ್ ಕೃಷ್ಣ ಅಡ್ವಾಣಿ ಅವರ ರಥಯಾತ್ರೆಯಿಂದ ಸ್ಪೂರ್ತಿಗೊಂಡು ಬಿಜೆಪಿ ಸೇರ್ಪಡೆಯಾಗಿದ್ದೇನೆ. 30 ವರ್ಷದಿಂದ ಬಿಜೆಪಿ ಪಕ್ಷದಲ್ಲಿದ್ದೇವೆ, ಯಾವುದೇ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಬಂದಿಲ್ಲ.ನಮ್ಮ ದೇಹವನ್ನು ಎಲ್ಲಿ ಟಚ್ ಮಾಡಿದ್ರು ಕೂಡ ಬಿಜೆಪಿ ಅಭಿಮಾನ ಇರುತ್ತೇ ಎಂದು ಹೇಳಿದರು. ಈ ಮೂಲಕ ಬಿಜೆಪಿಯಿಂದಲೇ ಸ್ಪರ್ಧಿಸುವುದಕ್ಕೆ ಬಯಸಿದ್ದಾರೆ.
ಇನ್ನು ಇದೇ ವೇಳೆ ಶ್ರೀರಾಮುಲು ಜೊತೆಗಿನ ಗೆಳೆತನ ಹಳಸಿದೆ ಎನ್ನುವ ಮಾತುಗಳು ಬಗ್ಗೆ ಪ್ರತಿಕ್ರಿಯಿಸಿದ ಗಣಿ ದಣಿ, ನನ್ನ, ಶ್ರೀರಾಮುಲು ಮಧ್ಯೆ ಭಿನ್ನಾಭಿಪ್ರಾಯ ಬರಲು ಸಾಧ್ಯವೇ ಇಲ್ಲ. ಎಂದೂ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬರುವ ಸ್ಥಿತಿ ನಿರ್ಮಾಣವಾಗಲ್ಲ. ಇಡೀ ಜಗತ್ತು ಬೇರೆ. ನಾನು ಶ್ರೀರಾಮುಲುನೇ ಬೇರೆ. ಸಚಿವ ಬಿ.ಶ್ರೀರಾಮುಲು ಮನೆ ಅಂದ್ರೆ ಅದು ನನ್ನ ಮನೆ ಇದ್ದಂತೆ. ನನ್ನ ಮನೆ ಅಂದ್ರೆ ಬಿ.ಶ್ರೀರಾಮುಲು ಮನೆ ಇದ್ದಂತೆ. ನಮ್ಮಿಬ್ಬರದ್ದೂ ರಾಜಕೀಯಕ್ಕೂ ಮೀರಿದ ಸಂಬಂಧ ಅಂತ ಶ್ರೀರಾಮುಲುರವರೇ ಹೇಳಿದ್ದಾರೆ. ಹೀಗಾಗಿ ಮುನಿಸು ಬರಲ್ಲ. ಎಂದೂ ಭಿನ್ನಾಭಿಪ್ರಾಯ ಬರುವ ಪರಿಸ್ಥಿತಿ ನಿರ್ಮಾಣವಾಗಲ್ಲ ಎಂದು ತಮ್ಮಿಬ್ಬರ ಸ್ನೇಹದ ಸಂಬಂಧವನ್ನು ಬಿಚ್ಚಿಟ್ಟರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:00 pm, Tue, 6 December 22