Karnataka Politics: ಎನ್​ಡಿಎ ಮೈತ್ರಿಕೂಟ ಸೇರುತ್ತಾ ಜೆಡಿಎಸ್? ದೆಹಲಿಗೆ ತೆರಳಲು ಕುಮಾರಸ್ವಾಮಿ ಸಿದ್ಧತೆ; ವರದಿ

ಜುಲೈ 18 ರಂದು ದೆಹಲಿಯಲ್ಲಿ ಎನ್​​ಡಿಎ ಮೈತ್ರಿಕೂಟದ ಸಭೆ ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಬಿಜೆಪಿ ಜೊತೆ ಕುಮಾರಸ್ವಾಮಿ ಮಾತುಕತೆ ನಡೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.

Karnataka Politics: ಎನ್​ಡಿಎ ಮೈತ್ರಿಕೂಟ ಸೇರುತ್ತಾ ಜೆಡಿಎಸ್? ದೆಹಲಿಗೆ ತೆರಳಲು ಕುಮಾರಸ್ವಾಮಿ ಸಿದ್ಧತೆ; ವರದಿ
ಹೆಚ್​ಡಿ ಕುಮಾರಸ್ವಾಮಿ
Image Credit source: PTI
Edited By:

Updated on: Jul 16, 2023 | 11:35 AM

ಬೆಂಗಳೂರು, ಜುಲೈ 16: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡಿರುವ ಬಿಜೆಪಿ (BJP) ಹಾಗೂ ತಳಕಚ್ಚಿರುವ ಜೆಡಿಎಸ್ (JDS) ಪಕ್ಷಗಳು ಲೋಕಸಭೆ ಚುನಾವಣೆಗೆ ಒಗ್ಗಟ್ಟಾಗಲಿವೆಯೇ? ಹೀಗೊಂದು ಚರ್ಚೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಬಹಳ ಚರ್ಚೆಯಾಗುತ್ತಿದೆ. ಆದರೆ ಇದೀಗ ಬಹಳ ಮುಖ್ಯವೆನಿಸುವ ಬೆಳವಣಿಗೆಯೊಂದರಲ್ಲಿ ಎನ್​ಡಿಎ ಮೈತ್ರಿಕೂಟ ಸೇರಲು ಜೆಡಿಎಸ್ ಸಜ್ಜಾಗುತ್ತಿವೆ ಎಂದು ವರದಿಯಾಗಿದೆ. ಎನ್​ಡಿಎ ಮೈತ್ರಿಕೂಟ ಸೇರಲು ಜೆಡಿಎಸ್ ಬಹುತೇಕ ನಿರ್ಧಾರ ಕೈಗೊಂಡಿದೆ ಎನ್ನಲಾಗಿದ್ದು, ಸೋಮವಾರ ಅಥವಾ ಮಂಗಳವಾರ ಹೆಚ್​ಡಿ ಕುಮಾರಸ್ವಾಮಿ ಅವರು ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಜುಲೈ 18 ರಂದು ದೆಹಲಿಯಲ್ಲಿ ಎನ್​​ಡಿಎ ಮೈತ್ರಿಕೂಟದ ಸಭೆ ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಬಿಜೆಪಿ ಜೊತೆ ಕುಮಾರಸ್ವಾಮಿ ಮಾತುಕತೆ ನಡೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.

ಬಿಜೆಪಿ ಮೈತ್ರಿಕೂಟ ಸೇರಿದರೆ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲಬಂದಂತಾಗುತ್ತದೆ. ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಪಕವಾಗಿ ಎದುರಿಸಬಹುದು. ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲಬಹುದು ಎಂಬುದು ಜೆಡಿಎಸ್ ಪಾಳಯದ ಲೆಕ್ಕಾಚಾರವಾಗಿದೆ.

ಈ ಮಧ್ಯೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಕಠಿಣ ಸ್ಪರ್ಧೆ ಎದುರಿಸಬೇಕಾಗುತ್ತದೆ. ಹೀಗಾಗಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಿದರೆ ಆ ಪಕ್ಷದ ಪ್ರಾಬಲ್ಯ ಇರುವ ಕಡೆಯಲ್ಲಿ ಕಾಂಗ್ರೆಸ್ ಅನ್ನು ಒಟ್ಟಾಗಿ ಎದುರಿಸಬಹುದು ಎಂಬುದು ಬೆಜೆಪಿ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ: Lok Sabha Election: ಬಿಜೆಪಿ, ಜೆಡಿಎಸ್​ ಹೊಂದಾಣಿಕೆ ಮಾತು; ಅಚ್ಚರಿ ಹೇಳಿಕೆ ನೀಡಿದ ಸಿಪಿ ಯೋಗೇಶ್ವರ

ಈಗಾಗಲೇ ಬಿಜೆಪಿ ನಾಯಕರನ್ನು ಭೇಟಿಯಾಗಿರುವ ಕುಮಾರಸ್ವಾಮಿ

ಲೋಕಸಭಾ ಚುನಾವಣೆಯ ವಿಚಾರವಾಗಿ ಕಳೆದ ಒಂದು ತಿಂಗಳ ಹಿಂದೆ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹೀಗಾಗಿ ರಾಜ್ಯ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:24 am, Sun, 16 July 23