Lok Sabha Election: ಬಿಜೆಪಿಯನ್ನ ಮಣಿಸಲು ಒಗ್ಗೂಡಿದ ವಿರೋಧ ಪಕ್ಷಗಳು ; ಜು. 18 ರಂದು ಬೆಂಗಳೂರಿನಲ್ಲಿ ಸಭೆ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿರೋಧ ಪಕ್ಷಗಳು ಒಂದಾಗಿವೆ. ಶತಾಯಗತಾಯ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ನಾನಾ ತಂತ್ರಗಳನ್ನು ಹೆಣೆಯಲು ಆರಂಭಿಸಿವೆ. ಈ ಸಂಬಂಧ ಜುಲೈ 18 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳು ಸಭೆ ನಡೆಸಲಿವೆ.
ಬೆಂಗಳೂರು: ಲೊಕಸಭೆ ಚುನಾವಣೆಗೆ (Lok Sabha Election) 8 ರಿಂದ 9 ತಿಂಗಳು ಬಾಕಿ ಉಳಿದಿದೆ. ಈ ಬಾರಿ ಬಿಜೆಪಿಯನ್ನು (BJP) ಮಣಿಸಲು ವಿರೋಧ ಪಕ್ಷಗಳು (Opposition parties) ಒಂದಾಗಿವೆ. ಶತಾಯಗತಾಯ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ನಾನಾ ತಂತ್ರಗಳನ್ನು ಹೆಣೆಯಲು ಆರಂಭಿಸಿವೆ. ಈ ಸಂಬಂಧ ಜುಲೈ 18 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳು ಸಭೆ ನಡೆಸಲಿವೆ. ಇದು ವಿರೋಧಪಕ್ಷಗಳ ಎರಡನೇ ಸಭೆಯಾಗಿದೆ. ಪ್ರತಿಪಕ್ಷಗಳ ಮೈತ್ರಿಕೂಟದ ಮೊದಲ ಸಭೆಯು ಜೂನ್ ಅಂತ್ಯದಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದಿತ್ತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 16 ಪಕ್ಷಗಳ ನಾಯಕರು ಭಾಗಿಯಾಗಿದ್ದರು.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಆಮ್ ಆದ್ಮಿ ಪಕ್ಷ, ಆರ್‌ಜೆಡಿ ಮತ್ತು ಜೆಡಿಯು ಸೇರಿದಂತೆ ಒಟ್ಟು 15 ವಿರೋಧ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು. ಮೈತ್ರಿ ಕುರಿತು ಒಪ್ಪಂದಕ್ಕೆ ಬರಲು ಸಭೆ ವಿಫಲವಾದ ಕಾರಣ, ವಿರೋಧ ಪಕ್ಷಗಳು ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಿವೆ.
ಆರಂಭದಲ್ಲಿ ಜುಲೈ 12 ಅಥವಾ 14 ರಂದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಅಂತಿಮವಾಗಿ ಜುಲೈ 18 ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಚರ್ಚೆಯ ನೇತೃತ್ವದ ಜವಾಬ್ದಾರಿಯನ್ನು ಕಾಂಗ್ರೆಸ್‌ಗೆ ವಹಿಸಲಾಗಿದೆ. ಮೂರು ದಿನಗಳ ಹಿಂದೆ ಆಮ್ ಆದ್ಮಿ ಪಕ್ಷ ಸೇರಿದಂತೆ ಒಟ್ಟು 24 ವಿರೋಧ ಪಕ್ಷಗಳಿಗೆ ಕಾಂಗ್ರೆಸ್ ಆಹ್ವಾನ ನೀಡಿತ್ತು.
ಇದನ್ನೂ ಓದಿ: Lok Sabha Election: ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಮಾತು; ಅಚ್ಚರಿ ಹೇಳಿಕೆ ನೀಡಿದ ಸಿಪಿ ಯೋಗೇಶ್ವರ
ಮಹಾರಾಷ್ಟ್ರದಲ್ಕಿ ಎನ್ ಸಿಪಿ ಒಡೆದು ಇಬ್ಬಾಗವಾಗಿರುವ ಬಗ್ಗೆ ಸಮಾಲೋಚನೆ ನಡೆಸಲಿವೆ. ಬಿಜೆಪಿಯನ್ನು ಎದುರಿಸಲು ಕನಿಷ್ಠ 400 ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಬಿಜೆಪಿ ವಿರುದ್ಧದ ಮಹಾಮೈತ್ರಿಗೆ ಸಂಚಾಲಕರ ನೇಮಕವೂ ಕೂಡ ನಡೆಯಲಿದೆ.
ಈ ಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್‌ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಕಳೆದ ಬಾರಿಯಂತೆ ಅವರೊಂದಿಗೆ ಬರಲಿದ್ದಾರೆ. ಮೂಲಗಳ ಪ್ರಕಾರ ಮಮತಾ ಬ್ಯಾನರ್ಜಿ ಜುಲೈ 17 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ವಿಪಕ್ಷ ನಾಯಕರಿಗೆ ಕಾಂಗ್ರೆಸ್ ವಿಶೇಷ ಔತಣಕೂಟ ಏರ್ಪಡಿಸಿದ್ದು, ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ.
ಇನ್ನು ದೆಹಲಿ ಸೇವೆಗಳ ಕುರಿತು ಕೇಂದ್ರದ ಸುಗ್ರೀವಾಜ್ಞೆಯನ್ನು ವಿರೋಧಿಸಲು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಾರ್ವಜನಿಕವಾಗಿ ಬೆಂಬಲ ನೀಡುವುದಾಗಿ ಭರವಸೆ ನೀಡುವವರೆಗೆ ಇಂತಹ ಸಭೆಗಳಿಂದ ದೂರವಿರುವುದಾಗಿ ಎಎಪಿ ಘೋಷಿಸಿದ್ದರಿಂದ ಬೆಂಗಳೂರು ಸಭೆಯಲ್ಲಿ ಪಾಲ್ಗೊಳ್ಳುವುದೇ ಅಥವಾ ಇಲ್ಲವೇ ಎಂಬುದು ಅಸ್ಪಷ್ಟವಾಗಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:03 am, Sun, 16 July 23