Lok Sabha Election 2024: 14 ರಾಜ್ಯಗಳ ಅಧ್ಯಕ್ಷರೊಂದಿಗೆ ಜೆಪಿ ನಡ್ಡಾ ಸಭೆ; ಈ ನಾಲ್ಕು ವಿಷಯಗಳ ಬಗ್ಗೆ ಪ್ರಮುಖ ಚರ್ಚೆ
ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯನ್ನು ಅತ್ಯಂತ ತಳಮಟ್ಟಕ್ಕೆ ಇಳಿದು ಎದುರಿಸಲು ಬಿಜೆಪಿ ಮೆಗಾ ಪ್ಲಾನ್ ಸಿದ್ಧಪಡಿಸಿದೆ. ಇದರ ಅಡಿಯಲ್ಲಿ ಎಲ್ಲ ನಾಯಕರಿಗೂ ಕ್ಷೇತ್ರವಾರು ಬೇರೆ ಬೇರೆ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ (Lok Sabha Election 2024) ಹಾಗೂ ಅದಕ್ಕೂ ಮುನ್ನ ನಡೆಯಲಿರುವ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬಿಜೆಪಿ (BJP) ತಯಾರಿ ಆರಂಭಿಸಿದೆ. ಸಂಘಟನೆಯನ್ನು ಬಲಪಡಿಸುವ ಮೂಲಕ ಚುನಾವಣೆಗಳನ್ನು ಗೆಲ್ಲಲು ತಂತ್ರಗಾರಿಕೆಯನ್ನು ರೂಪಿಸುವುದಕ್ಕಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು 14 ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಪಕ್ಷದ ಅಧ್ಯಕ್ಷರ ಜತೆ ದೆಹಲಿಯಲ್ಲಿ ಸಭೆ ನಡೆಸಿದ್ದಾರೆ. ಪಕ್ಷವು ದೇಶವನ್ನು ಮೂರು ಪ್ರದೇಶಗಳಾಗಿ ವಿಂಗಡಿಸುವ ಮೂಲಕ ಸಭೆಗಳನ್ನು ಆಯೋಜಿಸಲು ಪ್ರಾರಂಭಿಸಿದೆ. ಈ ಸರಣಿಯಲ್ಲಿ ಇಂದು ದೆಹಲಿಯಲ್ಲಿ ಬೃಹತ್ ಸಭೆಯನ್ನು ನಡೆಸಲಾಗಿದ್ದು, ಇದರಲ್ಲಿ ದೇಶದ ಉತ್ತರ ಭಾಗದ ಎಲ್ಲಾ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧ್ಯಕ್ಷರು, ಸಚಿವರು, ರಾಜ್ಯ ಉಸ್ತುವಾರಿಗಳು ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದರು.
ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ, ಪಂಜಾಬ್, ಮಧ್ಯಪ್ರದೇಶ, ಛತ್ತೀಸ್‌ಗಢ, ಹರಿಯಾಣ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಚಂಡೀಗಢ ಮತ್ತು ದಮನ್ ಜೊತೆಗೆ ದಿಯು-ದಾದರ್ ನಗರ ಹವೇಲಿ ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ, ಎಲ್ಲಾ ರಾಜ್ಯಗಳಲ್ಲಿ ಸಂಘಟನೆಯ ಬಗ್ಗೆ ಚರ್ಚಿಸುವುದರ ಜೊತೆಗೆ, ರಾಜ್ಯಗಳ ಸ್ಥಳೀಯ ಚುನಾವಣೆ ವಿಷಯಗಳ ಬಗ್ಗೆಯೂ ಕಾರ್ಯತಂತ್ರವನ್ನು ರೂಪಿಸಲಾಯಿತು.
ಪ್ರತ್ಯೇಕ ರಾಜ್ಯಗಳಿಗೆ ಪ್ರತ್ಯೇಕ ತಂತ್ರ
ಮೂಲಗಳ ಪ್ರಕಾರ, ಬಿಜೆಪಿ ಸರ್ಕಾರ ಇರುವ ಮಧ್ಯಪ್ರದೇಶದಲ್ಲಿ ಸರ್ಕಾರದ ಯೋಜನೆಗಳನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯಲು ವಿಭಿನ್ನ ಮಾರ್ಗಗಳನ್ನು ಚರ್ಚಿಸಲಾಗಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢಕ್ಕೂ ಅದೇ ತಂತ್ರ ನಿರ್ಧರಿಸಲಾಗಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆವರೆಗೆ ಪ್ರತಿ ದಿನವೂ ವಿವಿಧ ವಿಷಯಗಳಲ್ಲಿ ಸರ್ಕಾರದ ವಿರುದ್ಧ ಕ್ಷೇತ್ರದ ಎಲ್ಲ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಲೇ ಸಿದ್ಧತೆ ನಡೆಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಕುರಿತು ಚರ್ಚಿಸಲಾಯಿತು. ಇದಕ್ಕಾಗಿ 4 ಅಂಶಗಳನ್ನು ಪ್ರಸ್ತಾಪಿಸಲಾಯಿತು.
ಮೊದಲನೆಯದಾಗಿ, ಸಮಾಜದ ಪ್ರತಿಯೊಂದು ವರ್ಗದ ಜನರನ್ನು ಸಂಪರ್ಕಿಸುವತ್ತ ಗಮನ ಹರಿಸಲು ನಿರ್ಧರಿಸಲಾಯಿತು. ಪಕ್ಷಕ್ಕೆ ಸೇರದವರನ್ನು ಸರ್ಕಾರದ ಯೋಜನೆಗಳ ಮೂಲಕ ಪಕ್ಷದೊಂದಿಗೆ ಒಲವು ಹೊಂದುವಂತೆ ಮಾಡಲು ಶ್ರಮಿಸುವುದು.
ಬೂತ್ ಸಮಿತಿಯನ್ನು ಬಲಪಡಿಸಲು ವಿಶೇಷ ಗಮನಹರಿಸುವ ಬಗ್ಗೆ ತೀರ್ಮಾನಿಸಲಾಯಿತು.
ಇದನ್ನೂ ಓದಿ: ತೆಲಂಗಾಣದ ವಾರಂಗಲ್ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ; ಚಿತ್ರಗಳಲ್ಲಿ ನೋಡಿ
ಪ್ರತಿ ಬೂತ್‌ನಲ್ಲಿ ಬಿಜೆಪಿ ಪರವಾಗಿ ಶೇಕಡಾ 51 ಕ್ಕಿಂತ ಹೆಚ್ಚು ಮತಗಳನ್ನು ಪಡೆಯುವ ಗುರಿ ಹೊಂದಲಾಗಿದೆ. ಪ್ರತಿ ಬೂತ್‌ನಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ನಿರಂತರವಾಗಿ ಮತದಾರರನ್ನು ಸಂಪರ್ಕಿಸಿ ಪಕ್ಷದ ಪರವಾಗಿ ಗರಿಷ್ಠ ವಾತಾವರಣ ನಿರ್ಮಿಸಲು ಶ್ರಮಿಸಬೇಕು.
ಮತಗಟ್ಟೆ ಸಂಘಟನೆಗಾಗಿ ಪ್ರತಿ ಬೂತ್‌ನಲ್ಲಿ ಕನಿಷ್ಠ 11 ಜನರ ತಂಡ ರಚಿಸಲಾಗುವುದು. ಲೋಕಸಭೆ ಚುನಾವಣೆಗಾಗಿ ಪ್ರತಿ ಬೂತ್‌ನಲ್ಲಿ ಸಂಘಟನೆ ಬಲಪಡಿಸಲು ತಂಡವನ್ನು ರಚಿಸುವ ಮೂಲಕ ಕೆಲಸ ಮಾಡಲಾಗುವುದು.
ಬಿಜೆಪಿಯ ಮೆಗಾ ಪ್ಲಾನ್
ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯನ್ನು ಅತ್ಯಂತ ತಳಮಟ್ಟಕ್ಕೆ ಇಳಿದು ಎದುರಿಸಲು ಬಿಜೆಪಿ ಮೆಗಾ ಪ್ಲಾನ್ ಸಿದ್ಧಪಡಿಸಿದೆ. ಇದರ ಅಡಿಯಲ್ಲಿ ಎಲ್ಲ ನಾಯಕರಿಗೂ ಕ್ಷೇತ್ರವಾರು ಬೇರೆ ಬೇರೆ ಜವಾಬ್ದಾರಿಗಳನ್ನು ವಹಿಸಲಾಗಿದೆ. ಇದಲ್ಲದೇ ಮೈತ್ರಿ ವಿಚಾರದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ. ಪ್ರಾದೇಶಿಕವಾಗಿ ಯಾವ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಬಗ್ಗೆಯೂ ನಡ್ಡಾ ಅವರು ರಾಜ್ಯಗಳ ನಾಯಕರ ಅಭಿಪ್ರಾಯ ಕೇಳಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ