ಕವಲುದಾರಿಗಳು ಇರುತ್ತವೆ, ನಾನೇನೂ ಸನ್ಯಾಸಿ ಇಲ್ಲ: ಅಚ್ಚರಿಯ ಹೇಳಿಕೆ ನೀಡಿದ ಸಚಿವ ಸೋಮಣ್ಣ

|

Updated on: Mar 13, 2023 | 3:44 PM

ನನಗೆ ಈಗ 72 ವರ್ಷ, ಆಗಬೇಕಿರುವುದು ಏನೂ ಇಲ್ಲ. ಆದರೆ ಸೋಮಣ್ಣ ನಿಂತ ನೀರಲ್ಲ, ಹರಿಯುವ ನೀರು ಎಂದು ಹೇಳಿದ್ದ ಸೋಮಣ್ಣ ಇದೀಗ ಕವಲುದಾರಿಗಳು ಇರುತ್ತವೆ, ನಾನೇನೂ ಸನ್ಯಾಸಿ ಇಲ್ಲ ಅಂತ ಹೇಳಿದ್ದಾರೆ. ಅಲ್ಲದೆ, ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ.

ಕವಲುದಾರಿಗಳು ಇರುತ್ತವೆ, ನಾನೇನೂ ಸನ್ಯಾಸಿ ಇಲ್ಲ: ಅಚ್ಚರಿಯ ಹೇಳಿಕೆ ನೀಡಿದ ಸಚಿವ ಸೋಮಣ್ಣ
ವಿ ಸೋಮಣ್ಣ
Follow us on

ಬೆಂಗಳೂರು: ವಿಧಾನಸಭೆ ಚುನಾವಣೆಗೆ (Karnataka Assembly Election 2023) ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ, ಕೊಡದಿದ್ದರೆ ಇಲ್ಲ. ನಾನು ಏನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೇನೆ. ಕವಲುದಾರಿಗಳು ಇರುತ್ತವೆ, ನಾನೇನೂ ಸನ್ಯಾಸಿ ಇಲ್ಲ ಎಂದು ಸಚಿವ ವಿ.ಸೋಮಣ್ಣ (V. Somanna) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ವಿಧಾನಸೌಧದ ಬಳಿ ಮಾತನಾಡಿದ ಅವರು, ನಾನು ಮೊದಲು ಕಾಂಗ್ರೆಸ್​ನಲ್ಲೇ (Congress) ಇದ್ದೆ, ಜನತಾಪಾರ್ಟಿ, ಜನತಾದಳದಲ್ಲೂ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ಇವೆಲ್ಲ ಸಾಮಾನ್ಯವಾಗಿ ಇರುತ್ತವೆ. ನಾನು ಯಾವತ್ತಾದರೂ ನನ್ನ ಪುತ್ರನಿಗೆ ಟಿಕೆಟ್ ಕೇಳಿದ್ದೀನಾ? ನಾಲ್ಕು ಗೋಡೆಗಳ ಮಧ್ಯೆ ಯಾರಿಗೆ ಏನು ಹೇಳಬೇಕೋ ಹೇಳಿದ್ದೇನೆ. ಡಿ.ಕೆ.ಶಿವಕುಮಾರ್ (DK Shivakumar)​, ಸಿದ್ದರಾಮಯ್ಯ (Siddaramaiah) ನಾವೆಲ್ಲರೂ ಸ್ನೇಹಿತರು. ನಾವೆಲ್ಲ ಒಟ್ಟಿಗೆ ಕೆಲಸ ಮಾಡಿದ್ದೇವೆ. ನನಗೆ ಬಿಜೆಪಿ ಮೇಲೆ ಅಸಮಾಧಾನ ಇದೆ ಅಂತಾ ನಾನು ಹೇಳಿಲ್ಲ. ನನ್ನನ್ನು ಬೆಂಗಳೂರಿಗೆ ಮಾತ್ರ ಯಾಕೆ ಸೀಮಿತ ಮಾಡುತ್ತೀರಿ? ಪಕ್ಷ ನನಗೆ ಕೊಟ್ಟ ಎಲ್ಲ ಜವಾಬ್ದಾರಿಗಳೆಲ್ಲವನ್ನೂ ನಿರ್ವಹಿಸಿದ್ದೇನೆ. ತುಮಕೂರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದ್ದೇನೆ ಎಂದರು.

ಅವಕಾಶ, ಹಣೆಬರಹ ಇದ್ದರೆ ಮಗನಿಗೆ ಟಿಕೆಟ್ ಸಿಗುತ್ತದೆ. ಎಲ್ಲರಿಗೂ ತಮ್ಮ ಮಕ್ಕಳು ಮೇಲೆ ಪ್ರೀತಿ ಇರುತ್ತದೆ. ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ. ಆದರೆ ಬೇರೆ ರಾಜಕಾರಣಿಗಳ ಮಕ್ಕಳು ರಾಜಕಾರಣದಲ್ಲಿ ಇರಬಹುದಾ? ನನಗೆ ಇರುವ ನಿಯಮ ಎಲ್ಲರಿಗೂ ಅನ್ವಯಿಸಬೇಕು ಅಲ್ವಾ? ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅಂದರೆ ನಮಗೂ ಬೇಡ ಎಂದು ಸೋಮಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಬಿಎಸ್ ಯಡಿಯೂರಪ್ಪ ಮತ್ತು ಡಿಕೆ ಶಿವಕುಮಾರ್ ಮಾತು ವಿ ಸೋಮಣ್ಣ ಕಾಂಗ್ರೆಸ್ ಸೇರುವ ಸಮಯ ಸನ್ನಿಹಿತವಾಗಿರುವುದನ್ನು ಸೂಚಿಸುತ್ತದೆಯೇ?

ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮೇಲೆ ಮುನಿಸಿಕೊಂಡಂತೆ ಮೇಲ್ನೋಟಕ್ಕೆ ಕಾಣಿಸಿಕೊಂಡಿರುವ ಸೋಮಣ್ಣ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹರಿದಾಟುತ್ತಿದೆ. ಈ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಸೋಮಣ್ಣ, ನನಗೆ ಅಸಮಾಧಾನ ಇದೆ ಅಂತ ಎಲ್ಲಾದರೂ ಹೇಳಿದ್ದೇನಾ? ರಾಜಕಾರಣಿಗಳಿಗೆ ಬದ್ಧತೆ ಇರಬೇಕು. ಕಾಂಗ್ರೆಸ್​ಗೆ ಬರುತ್ತಾರೆ ಅಂತ ಅವರ ಭಾವನೆಗಳಿವೆ. ಅದಕ್ಕ ನಾನು ಬೇಡ ಅನ್ನಲಾ? ಅವರಿಗೆಲ್ಲಾ ಒಳ್ಳೆಯದಾಗಲಿ ಎಂದರು.

ಅಭಿಮಾನಿಗಳ ಸಭೆ; ಸೋಮಣ್ಣ ರಿಯಾಕ್ಷನ್

ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ನಡುವೆ ಸಚಿವ ಸೋಮಣ್ಣ ಅವರ ಅಭಿಮಾನಿಗಳು ಸಭೆ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ಅಭಿಮಾನಿಗಳು ಸಭೆ ಮಾಡಿದರೆ ನಾನು ಮಾಡಬೇಡಿ ಅಂತ ಹೇಳಲು ಆಗುತ್ತಾ? ಚುನಾವಣೆ ಸಂದರ್ಭದಲ್ಲಿ ಇಡೀ ರಾಜ್ಯಕ್ಕೆ ನನ್ನನ್ನು ಕಳಿಸುತ್ತಾರೆ. ಜವಾಬ್ದಾರಿ ನೀಡಿದ್ದ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ. ಅರ್ಹತೆ ಇರುವವರಿಗೆ ಕೆಲವುಸಲ ಕವಲುದಾರಿ ಆಗುತ್ತದೆ. ನಾನು ಬೆಂಗಳೂರಿಗೆ ಬಂದು 56 ವರ್ಷಗಳು ಕಳೆದಿವೆ. ರಾಜಕೀಯ ಜೀವನದಲ್ಲಿ ಅನೇಕ ತೊಡರುಗಳನ್ನು ನೋಡಿದ್ದೇವೆ. ಕೆಲಸ ಮಾಡುವವರನ್ನು ಜನ ಗೌರವಿಸುತ್ತಾರೆ. ಅದಕ್ಕೆ ಉದಾಹರಣೆ ನಾನೇ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Mon, 13 March 23