ಬೊಮ್ಮಾಯಿ ಶಕುನಿ ಎಂಬ ರಣದೀಪ್ ಸುರ್ಜೇವಾಲ ಹೇಳಿಕೆಗೆ ಅರುಣ್ ಸಿಂಗ್ ತಿರುಗೇಟು

|

Updated on: Mar 26, 2023 | 1:21 PM

ಸಿಎಂ ಬಸವರಾಜ ಬೊಮ್ಮಾಯಿ ಶಕುನಿ ಇದ್ದಂತೆ, ಕೊನೆಗೆ ಪಾಂಡವರೇ ಗೆಲ್ಲುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಇಂಥ ಅವಹೇಳನಕಾರಿ ಹೇಳಿಕೆ ಕಾಂಗ್ರೆಸ್​​ನ ವರ್ತನೆ ತೋರಿಸುತ್ತದೆ ಎಂದಿದ್ದಾರೆ.

ಬೊಮ್ಮಾಯಿ ಶಕುನಿ ಎಂಬ ರಣದೀಪ್ ಸುರ್ಜೇವಾಲ ಹೇಳಿಕೆಗೆ ಅರುಣ್ ಸಿಂಗ್ ತಿರುಗೇಟು
ಅರುಣ್ ಸಿಂಗ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ
Follow us on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ (Basavaraj Bommai) ಕಾಮನ್​ಮ್ಯಾನ್, ಸಿಂಪಲ್​ಮ್ಯಾನ್. ಯಾರೂ ಕೂಡಾ ಅವರ ಬದ್ಧತೆ ಬಗ್ಗೆ ಒಂದೂ ಪ್ರಶ್ನೆಯನ್ನೂ ಎತ್ತಲು ಅವಕಾಶವಿಲ್ಲದ ವ್ಯಕ್ತಿ ಎಂದು ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ಹೇಳಿದರು. ಸಿಎಂ ಬಸವರಾಜ ಬೊಮ್ಮಾಯಿ ಶಕುನಿ ಇದ್ದಂತೆ, ಕೊನೆಗೆ ಪಾಂಡವರೇ ಗೆಲ್ಲುವುದು ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇಂತಹ ಅವಹೇಳನಕಾರಿ ಹೇಳಿಕೆ ಕಾಂಗ್ರೆಸ್​​ನ ವರ್ತನೆ ತೋರಿಸುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೂಡ ಇದೇ ರೀತಿ ಮಾತನಾಡುತ್ತಾರೆ. ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಕೂಡ ಅದೇ ರೀತಿಯಲ್ಲಿ ಮಾತಾಡುತ್ತಿದ್ದಾರೆ. ಎಸ್​ಟಿ ಸಮುದಾಯದ ಹಿರಿಯ ನಾಯಕರಾಗಿರುವ ಸಚಿವ ಶ್ರೀರಾಮುಲುಗೆ ಸಿದ್ದರಾಮಯ್ಯ ಪೆದ್ದ ಎಂದು ಹೇಳಿದ್ದರು. ಈಗ ಬೊಮ್ಮಾಯಿ‌ಗೆ ಅಪಮಾನ ಮಾಡುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿಗೆ ನೀಡುವ ಅವಹೇಳನಕಾರಿ ಹೇಳಿಕೆ ಕರ್ನಾಟಕದ ಜನರಿಗೆ ಮಾಡಿದ ಅಪಮಾನವಾಗಿದೆ. ಹೀಗಾಗಿ ರಾಜ್ಯದ ಜನ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ತಕ್ಕ ಉತ್ತರ ಕೊಡುತ್ತಾರೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಶಕುನಿ ಇದ್ದಂತೆ, ಕೊನೆಗೆ ಪಾಂಡವರೇ ಗೆಲ್ಲುವುದು. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಈ ಸರ್ಕಾರ ಎಸ್​ಸಿ, ಎಸ್​ಟಿ, ಅಲ್ಪಸಂಖ್ಯಾತರಿಗೆ ಮೋಸ ಮಾಡಿದೆ. ಬಸವರಾಜ ಬೊಮ್ಮಾಯಿಯವರು ಸಮುದಾಯಕ್ಕೆ ಮೋಸ‌ ಮಾಡುತ್ತಿದ್ದಾರೆ. ಮೀಸಲಾತಿಯನ್ನು 90 ದಿನಗಳಲ್ಲಿ 3 ಬಾರಿ ಬದಲಾವಣೆ ಮಾಡಿದ್ದಾರೆ. ಇದು ಇತಿಹಾಸದಲ್ಲಿ ಮೊದಲು. ರಾಜ್ಯವನ್ನು ಲೂಟಿ‌ ಮಾಡುತ್ತಿದ್ದಾರೆ, ಅದು 40% ಕಮಿಷನ್ ವಿಚಾರದಲ್ಲಿ ಗೊತ್ತಾಗಿದೆ. ರಾಜ್ಯದ ಜನತೆಗೆ ಮಾಡುತ್ತಿರುವ ಮಹಾಮೋಸ ಇದು ಎಂದು ಸುರ್ಜೇವಾಲ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ಮೀಸಲಾತಿ: ಶ್ರೀಗಳಿಗೆ 25 ಬಾರಿ ಕರೆ​ ಮಾಡಿ ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿದ್ದಾರೆ: ಡಿಕೆ ಶಿವಕುಮಾರ್ ಸ್ಫೋಟಕ ಆರೋಪ

ರಾಜ್ಯ ಸಾರ್ವತ್ರಿಕ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಇದನ್ನು ನಮ್ಮ ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸುತ್ತದೆ. ಮೊದಲು ರಾಜ್ಯ ಚುನಾವಣಾ ಸಮಿತಿ ಕುಳಿತು ಚರ್ಚಿಸಿ ನಂತರ ಕೇಂದ್ರಕ್ಕೆ ಕಳಿಸುತ್ತಾರೆ. ನಂತರ ಸರಿಯಾದ ಸಮಯದಲ್ಲಿ ಕೇಂದ್ರ ಚುನಾವಣಾ ಸಮಿತಿ ನಿರ್ಧಾರ ತೆಗೆದುಕೊಳ್ಳುತ್ತದೆ. ಇಂದು ರಾಜ್ಯ ಕೋರ್ ಕಮಿಟಿ ಸಭೆ ಇದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ?: ಅರುಣ್ ಸಿಂಗ್ ಪ್ರಶ್ನೆ

ಮೀಸಲಾತಿ ಹೆಚ್ಚಳ ಪೊಲಿಟಿಕಲ್ ಗಿಮಿಕ್​ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅರುಣ್ ಸಿಂಗ್, ಕಾಂಗ್ರೆಸ್​ಗೆ ಬೇರೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ಟೀಕಿಸುತ್ತಾರೆ. ಆದರೆ ಬಿಜೆಪಿ ಸರ್ಕಾರ ನ್ಯಾಯ ಒದಗಿಸುವ ಕೆಲಸ ಮಾಡಿದೆ ಎಂದರು. ಅಲ್ಲದೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಏಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ? ಅವರು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ, ಅದಕ್ಕೆ ಮೌನ ವಹಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಏನೇನು ಮಾಡಿದ್ದಾರೆ ಅಂತಾ ಜನರ ಮುಂದೆ ಬಂದು ಹೇಳಲು ನಾನು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕುತ್ತೇನೆ. ಅನಂತರ ನಾವು ನಮ್ಮ ಸಾಧನೆಗಳನ್ನು ಮುಂದಿಡುತ್ತೇವೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Sun, 26 March 23