ನಾರಾಯಣಗೌಡ ಪಕ್ಷ ಸೇರ್ಪಡೆಗೆ ತೊಂದರೆ ಏನೆಂದು ಗೊತ್ತಿಲ್ಲ, ನಾವು ಡೀಲ್ ಮಾಡುತ್ತೇವೆ: ಡಿಕೆ ಶಿವಕುಮಾರ್

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಚಿವ ವಿ.ಸೋಮಣ್ಣ ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಚಿವ ನಾರಾಯಣಗೌಡ ಪಕ್ಷದಲ್ಲಿ ಸಕ್ರಿಯರಾಗಿದ್ದರೂ ಕಾಂಗ್ರೆಸ್ ಸೇರುವ ಇರಾದೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.

ನಾರಾಯಣಗೌಡ ಪಕ್ಷ ಸೇರ್ಪಡೆಗೆ ತೊಂದರೆ ಏನೆಂದು ಗೊತ್ತಿಲ್ಲ, ನಾವು ಡೀಲ್ ಮಾಡುತ್ತೇವೆ: ಡಿಕೆ ಶಿವಕುಮಾರ್
ಡಿ.ಕೆ.ಶಿವಕುಮಾರ್ ಮತ್ತು ಕೆ.ಸಿ.ನಾರಾಯಣ ಗೌಡ
Edited By:

Updated on: Mar 06, 2023 | 3:52 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆಯೇ ಸಚಿವ ವಿ. ಸೋಮಣ್ಣ (V.Somanna) ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು, ಮತ್ತೆ ಕೈ ಹಿಡಿಯುವ ಚಿಂತನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಚಿವ ನಾರಾಯಣಗೌಡ (K.C. Narayana Gowda) ಅವರು ಪಕ್ಷದಲ್ಲಿ ಸಕ್ರಿಯರಾಗಿದ್ದರೂ ಕಾಂಗ್ರೆಸ್ ಸೇರುವ ಇರಾದೆ ವ್ಯಕ್ತಪಡಿಸಿದ್ದಾರೆ. ಆದರೆ ಇವರು ಪಕ್ಷಕ್ಕೆ ಮರು ಸೇರ್ಪಡೆಯಾಗುತ್ತಿರುವ ಕುರಿತಾದ ವರದಿಗಳ ಬಗ್ಗೆ ಮಂಡ್ಯದ  ಸ್ಥಳೀಯ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar), ಕೆ.ಸಿ. ನಾರಾಯಣ ಗೌಡರು ನಮ್ಮ ಜೊತೆ ಮಾತನಾಡಿಲ್ಲ. ಬೇರೆಯವರೂ ಮಾತನಾಡಿಲ್ಲ. ಅವರಿಂದ ಯಾರಿಗೆ ಏನು ತೊಂದರೆ ಆಗಿದೆ ಎಂದು ಗೊತ್ತಿಲ್ಲ. ಅವೆಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ ಬಿಡಿ ಎಂದರು.

ಯಾರು ಯಾರ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಿದೆ. ಕಾಂಗ್ರೆಸ್ ಸೇರುವ ಬಗ್ಗೆ ಸಚಿವ ವಿ.ಸೋಮಣ್ಣ ಸಹ ಯಾವತ್ತೂ ನನ್ನ ಜೊತೆ ಚರ್ಚೆ ಮಾಡಿಲ್ಲ. ಕನಕಪುರದಲ್ಲಿ ಹೌಸಿಂಗ್ ಬೋರ್ಡ್​​ನ ಕಾರ್ಯಕ್ರಮ ಇದೆ, ಅದಕ್ಕೆ ಬನ್ನಿ ಎಂದು ಕಾಗದ ಬರೆದಿದ್ದರು. ಯಾರಾದರೂ ಪಕ್ಷ ಸೇರುತ್ತೇನೆ ಎಂದು ಹೇಳಿದರೆ ಆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಸಚಿವ ನಾರಾಯಣಗೌಡ ಕಾಂಗ್ರೆಸ್​ ಸೇರ್ಪಡೆಗೆ ತೀವ್ರ ವಿರೋಧ, ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆತ, ಕೈಗೆ ಬಳೆ ನೀಡಿ ಕಾರ್ಯಕರ್ತರ ಆಕ್ರೋಶ

ರೊಚ್ಚಿಗೆದ್ದ ಕಾರ್ಯಕರ್ತರಿಂದ ಬ್ಯಾನರ್​ಗೆ ಬೆಂಕಿ, ನಾಯಕರಿಗೆ ಬಳೆ ಕೊಟ್ಟ ಕಾರ್ಯಕರ್ತರು

ಕೆ.ಸಿ ನಾರಾಯಣಗೌಡ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾಗುತ್ತಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಕೆಂಡಕಾರುತ್ತಿದ್ದಾರೆ. ಮಂಡ್ಯದಲ್ಲಿ ರೊಚ್ಚಿಗೆದ್ದ ಕೈ ಕಾರ್ಯಕರ್ತರು ಕಾಂಗ್ರೆಸ್ ಫ್ಲೆಕ್ಸ್ ಬ್ಯಾನರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾಯಕರಿಗೆ ಬಳೆಗಳನ್ನೂ ಕೊಟ್ಟಿದ್ದಾರೆ. ಕೆ.ಆರ್.ಪೇಟೆಯ ಪ್ರಜಾಧ್ವನಿ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಹೈಡ್ರಾಮ ನಡೆದಿದ್ದು, ನಾರಾಯಣ ಗೌಡ ಪಕ್ಷ ಸೇರುವುದನ್ನು ವಿರೋಧಿಸಿ ನಾಯಕರಿಗೆ ಬಳೆಗಳನ್ನು ಕೊಟ್ಟರು. ಮಾರ್ಚ್ 13ರಂದು ಕೆ.ಆರ್.ಪೇಟೆಯಲ್ಲಿ ಪ್ರಜಾಧ್ವನಿ ಸಮಾವೇಶ ಹಿನ್ನಲೆ ಸಭೆ ಕರೆಯಲಾಗಿತ್ತು.

ಪೂರ್ವಭಾವಿ ಸಭೆಗೆ ಆಗಮಿಸಿದ್ದ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಗಂಗಾಧರ್ ಕಾರಿಗೆ ಕೆ.ಆರ್. ಪೇಟೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ.ಆರ್​​​.ಪೇಟೆ ಕಾಂಗ್ರೆಸ್​ ಟಿಕೆಟ್​ಗೆ 6 ಮಂದಿ​ ಆಕಾಂಕ್ಷಿಗಳಿದ್ದಾರೆ. ನಾರಾಯಣಗೌಡ ಕಾಂಗ್ರೆಸ್ ಗೆ ಬಂದ್ರೆ ಅವರೆಲ್ಲಾ ಏನಾಗಬೇಕು? ಎಲ್ಲರೂ ಕೈಗೆ ಬಳೆ ತೊಟ್ಟುಕೊಂಡು ಓಡಾಡಬೇಕಾ? ಎಂದು ಜಿಲ್ಲಾಧ್ಯಕ್ಷ ಗಂಗಾಧರ್ ಕೈಗೆ ಬಳೆ ನೀಡಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Mon, 6 March 23