Pre-Poll Survey: ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ಲಸ್; ಲೋಕ್​ ಪೋಲ್ ಸಮೀಕ್ಷೆ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಸ್ಪಷ್ಟ ಬಹುಮತ ದೊರೆಯಲಿದೆ ಹಾಗೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದು ‘ಲೋಕ್​ ಪೋಲ್’ ಸಂಸ್ಥೆಯ ಚುನಾವಣಾಪೂರ್ವ ಸಮೀಕ್ಷೆ ತಿಳಿಸಿದೆ.

Pre-Poll Survey: ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ಲಸ್; ಲೋಕ್​ ಪೋಲ್ ಸಮೀಕ್ಷೆ
ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Follow us
Ganapathi Sharma
|

Updated on: Mar 11, 2023 | 4:55 PM

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಸ್ಪಷ್ಟ ಬಹುಮತ ದೊರೆಯಲಿದೆ ಹಾಗೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದು ‘ಲೋಕ್​ ಪೋಲ್ (Lok Poll)’ ಸಂಸ್ಥೆಯ ಚುನಾವಣಾಪೂರ್ವ ಸಮೀಕ್ಷೆ (Pre-poll survey) ತಿಳಿಸಿದೆ. ಆಡಳಿತಾರೂಢ ಬಿಜೆಪಿಯು 2018ರಲ್ಲಿ ಪಡೆದದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಿದ್ದು, ಸಮೀಕ್ಷಾ ವರದಿಯ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಇದರ ಪ್ರಕಾರ, ಕಾಂಗ್ರೆಸ್​​ಗೆ ಶೇ 39ರಿಂದ 42ರ ಮತ ಹಂಚಿಕೆಯೊಂದಿಗೆ 116ರಿಂದ 122 ಸ್ಥಾನ ದೊರೆಯಲಿದೆ. ಬಿಜೆಪಿಗೆ 77ರಿಂದ 83 ಹಾಗೂ ಜೆಡಿಎಸ್​​ 21ರಿಂದ 27 ಸ್ಥಾನ ಗಳಿಸಲಿವೆ. ಪಕ್ಷೇತರರು ಮತ್ತು ಸ್ವತಂತ್ರ ಅಭ್ಯರ್ಥಿಗಳು ಶೇ 6ರಿಂದ 9ರ ಮತ ಹಂಚಿಕೆಯೊಂದಿಗೆ 1ರಿಂದ 4 ಸ್ಥಾನ ಪಡೆಯುವ ಸಾಧ್ಯತೆ ಇದೆ.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ 10ರಿಂದ 13 ಸ್ಥಾನ ಪಡೆಯಬಹುದು ಎಂದು ಸಮೀಕ್ಷಾ ವರದಿ ತಿಳಿಸಿದೆ. ಕಾಂಗ್ರೆಸ್ 21ರಿಂದ 24 ಸ್ಥಾನ ಪಡೆದರೆ ಜೆಡಿಎಸ್ 14ರಿಂದ 17 ಸ್ಥಾನ ಪಡೆಯಬಹುದು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಗರಿಷ್ಠ, 24ರಿಂದ 27 ಕಡೆ ಗೆಲುವು ದೊರೆಯಲಿದೆ. ಬಿಜೆಪಿಗೆ 9ರಿಂದ 13 ಮತ್ತು ಜೆಡಿಎಸ್ 0-2 ಹಾಗೂ ಇತರರು 0-2 ಸ್ಥಾನ ಪಡೆಯಬಹುದು ಎಂದು ಸಮೀಕ್ಷಾ ವರದಿ ಹೇಳಿದೆ.

ಬೆಂಗಳೂರಿನಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ರಾಜ್ಯ ರಾಜಧಾನಿಯಲ್ಲಿ ಕಾಂಗ್ರೆಸ್​ಗೆ 19-23, ಬಿಜೆಪಿಗೆ 11-14 ಹಾಗೂ ಜೆಡಿಎಸ್​ಗೆ 1-4 ಸ್ಥಾನ ದೊರೆಯಬಹುದು ಎಂದು ಸಮೀಕ್ಷೆ ಹೇಳಿದೆ. ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ ತನ್ನ ಪ್ರಬಲ ನೆಲೆ ವಿಸ್ತರಿಸಲಿದೆ. ಈ ಪ್ರದೇಶದಲ್ಲಿ ಕೇಸರಿ ಪಾಳೆಯವು 27-30 ಸ್ಥಾನ ಪಡೆದರೆ, ಕಾಂಗ್ರೆಸ್​ 19-22, ಜೆಡಿಎಸ್ 0-1 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.

ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಯಾರಿಗೆ ಹೆಚ್ಚು ಸ್ಥಾನ?

ಬಿಜೆಪಿಯ ಭದ್ರ ಕೋಟೆ ಎಂದೇ ಪರಿಗಣಿಸಲಾಗಿರುವ ಕರಾವಳಿ ಕರ್ನಾಟಕ ಭಾಗದಲ್ಲಿ ಆಡಳಿತಾರೂಢ ಪಕ್ಷಕ್ಕೆ 14-17 ಸ್ಥಾನ, ಕಾಂಗ್ರೆಸ್​ಗೆ 7-10 ಸ್ಥಾನ ಹಾಗೂ ಜೆಡಿಎಸ್​​ಗೆ 0-1 ಸ್ಥಾನ ದೊರೆಯಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ. ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ 10-13, ಕಾಂಗ್ರೆಸ್​ಗೆ 7-10 ಹಾಗೂ ಜೆಡಿಎಸ್​ಗೆ 0-1 ಸ್ಥಾನ ದೊರೆಯಬಹುದು.

ಇದನ್ನೂ ಓದಿ: Karnataka Assembly Election: ಇವಿಎಂ ದುರುಪಯೋಗ ಸಾಧ್ಯವಿಲ್ಲ, ಬದಲಾವಣೆಯೂ ಇಲ್ಲ; ಚುನಾವಣಾ ಆಯೋಗ

ಜನವರಿ 15ರಿಂದ ಫೆಬ್ರುವರಿ 28ರ ನಡುವಣ ಅವಧಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ತಲಾ 224 ಮಂದಿಯಂತೆ ಸಮೀಕ್ಷೆಗೆ ಒಳಪಡಿಸಲಾಗಿದೆ ಎಂದು ‘ಲೋಕ್ ಪೋಲ್’ ತಿಳಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ 30 ಮತಗಟ್ಟೆ ವ್ಯಾಪ್ತಿಗಳನ್ನು ಬಳಸಿಕೊಂಡು ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಒಟ್ಟು 45,000 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಭ್ರಷ್ಟಾಚಾರ, ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆ ಮತ್ತು ನಿಧಾನಗತಿಯ ಆರ್ಥಿಕ ಬೆಳವಣಿಗೆ ಆಡಳಿತ ವಿರೋಧಿ ಅಲೆಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಮೀಕ್ಷಾ ವರದಿ ಉಲ್ಲೇಖಿಸಿದೆ.

ಇನ್ನಷ್ಟು ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ