ರಾಜ್ಯಸಭೆಯಲ್ಲಿ 3 ಸ್ಥಾನ ಗೆದ್ದ ಕಾಂಗ್ರೆಸ್‌, 1 ಸ್ಥಾನ ಬಿಜೆಪಿಗೆ: ಮೈತ್ರಿಗೆ ಮುಖಭಂಗ!

| Updated By: ರಮೇಶ್ ಬಿ. ಜವಳಗೇರಾ

Updated on: Feb 27, 2024 | 6:41 PM

Karnataka Rajya Sabha Election Result 2024: ಬಾರೀ ರಂಗೇರಿದ್ದ ರಾಜ್ಯಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಫಲಿತಾಂಶವೂ ಸಹ ಪ್ರಕಟವಾಗಿದೆ. ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಜಯಗಳಿಸಿದ್ದಾರೆ. ಬಿಜೆಪಿ, ಜೆಡಿಎಸ್‌ ಮೈತ್ರಿಯಿಂದ ಐದನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕುಪೇಂದ್ರ ರೆಡ್ಡಿ ಸೋಲು ಕಂಡಿದ್ದಾರೆ. ಇದರೊಂದಿಗೆ ಮೈತ್ರಿಗೆ ಮುಖಭಂಗವಾಗಿದೆ. ಅಲ್ಲದೇ ಲೋಕಸಭಾ ಚುನಾವಣೆಗೂ ಮುನ್ನವೇ ಮೈತ್ರಿಗೆ ಇದು ಎರಡನೇ ಸೋಲಾಗಿದೆ.

ರಾಜ್ಯಸಭೆಯಲ್ಲಿ 3 ಸ್ಥಾನ ಗೆದ್ದ ಕಾಂಗ್ರೆಸ್‌, 1 ಸ್ಥಾನ ಬಿಜೆಪಿಗೆ: ಮೈತ್ರಿಗೆ ಮುಖಭಂಗ!
Follow us on

ಬೆಂಗಳೂರು, (ಫೆಬ್ರವರಿ 27): ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ರಾಜ್ಯಸಭಾ ಚುನಾವಣೆಯ ಫಲಿತಾಂಶ (Karnataka Rajya Sabha Election Result 2024)  ಹೊರಬಿದ್ದಿದೆ. ಕಾಂಗ್ರೆಸ್‌ ತನ್ನ ಪಾಲಿನ ಮೂರು ಸೀಟನ್ನು ಗೆದ್ದುಕೊಂಡಿದೆ. ಇನ್ನು ಬಿಜೆಪಿ ನಿರೀಕ್ಷೆಯಂತೆ 1 ಸ್ಥಾನವನ್ನು ಪಡೆದುಕೊಂಡಿದೆ. ಆದರೆ, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ಅವರು ಸೋಲು ಕಂಡಿದ್ದಾರೆ. ಈ ಮೂಲಕ ಕುಮಾರಸ್ವಾಮಿ, ಬಿಜೆಪಿ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದೆ. ಇದರೊಂದಿಗೆ ಲೋಕಸಭಾ ಚುನಾವಣೆಗೂ ಮುನ್ನವೇ ಮೈತ್ರಿಗೆ ಮತ್ತೊಂದು ಸೋಲಾದಂತಾಗಿದೆ.

ಚಲಾವಣೆಗೊಂಡ ಎಲ್ಲಾ ಅಂದರೆ 222 ಮತಗಳು ಸಹ ಸಿಂಧುವಾಗಿದ್ದು,  ಕಾಂಗ್ರೆಸ್​ನ ಅಜಯ್ ಮಾಕೇನ್ -47, ನಾಸೀರ್ ಹುಸೇನ್ – 47, ಜಿ.ಸಿ. ಚಂದ್ರಶೇಖರ – 45 ಮತಗಳೊಂದಿಗೆ ಗೆಲುವು ಸಾಧಿಸಿದರೆ, ಬಿಜೆಪಿಯ ನಾರಾಯಣಸಾ ಭಾಂಡಗೆ 47 ಮತಗಳನ್ನ ಪಡೆದುಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಐದನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ ಅವರಿಗೆ 36 ಮತಗಳು ಬಿದ್ದಿವೆ. ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಜೆಡಿಎಸ್​​ನ 19 ಮತಗಳು ಬಿದ್ದಿದ್ದರೆ, ಮಿತ್ರ ಪಕ್ಷ ಬಿಜೆಪಿಯಿಂದ 16 ಮತಗಳು ಮಾತ್ರ ಬಿದ್ದಿವೆ. ಈ ಮೂಲಕ ಕುಪೇಂದ್ರ ರೆಡ್ಡಿ ಸೋಲನುಭವಿಸಿದ್ದಾರೆ.

ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ರಣತಂತ್ರ ಸಕ್ಸಸ್

ಹಲವು ಲೆಕ್ಕಾಚಾರಗೊಂದಿಗೆ ಜೆಡಿಎಸ್ ಹಾಗೂ ಬಿಜೆಪಿ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಇದು ಸಹಜವಾಗಿಯೇ ಆಡಳಿತರೂಢ ಕಾಂಗ್ರೆಸ್​​ಗೆ ಅಡ್ಡಮತದಾನ ಭೀತಿ ಶುರುವಾಗಿತ್ತು. ಇದರಿಂದ ಎಚ್ಚೆತ್ತ ಸಿದ್ದರಾಂಯ್ಯ ಡಿಕೆ ಶಿವಕುಮಾರ್​, ರಣತಂತ್ರಗಳನ್ನು ಹೆಣೆದು ತಮ್ಮ ಶಾಸಕರ ಜೊತೆ ಜೊತೆಗೆ ಬಿಜೆಪಿ ಹಾಗೂ ಪಕ್ಷೇತರ ಶಾಸಕರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಆರ್​ಪಿಪಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ, ದರ್ಶನ್‌ ಪುಟ್ಟಣ್ಣಯ್ಯ, ಪುಟ್ಟ ಸಿದ್ದೇಗೌಡ, ಲತಾ ಮಲ್ಲಿಕಾರ್ಜುನ ಅವರು ಕಾಂಗ್ರೆಸ್‌ ಅನ್ನು ಬೆಂಬಲಿಸಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ ಯಾವೊಬ್ಬ ಶಾಸಕರೂ ಅಡ್ಡ ಮತದಾನ ಮಾಡದೇ ಇದ್ದಿದ್ದರಿಂದ ನಿರಾಯಾಸವಾಗಿ ಗೆಲುವನ್ನು ಪಡೆದುಕೊಂಡಿದೆ. ಇನ್ನು ಬಿಜೆಪಿಯ ಸೋಮಶೇಖರ್ ಅವರನ್ನು ಅಡ್ಡಮತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಬಿಜೆಪಿಯ ಮತ್ತೋರ್ವ ಶಾಸಕ ಶಿವರಾಮ್​ ಹೆಬ್ಬಾರ್ ಅವರನ್ನು ಮತದಾನ ಮಾಡದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಹೆಣೆದಿದ್ದ ಕಾರ್ಯತಂತ್ರ ಯಶಸ್ವಿಯಾಗಿದೆ.

ಇನ್ನು ಬಿಜೆಪಿ-ಜೆಡಿಎಸ್​ ಮೈತ್ರಿ ಇದು ಎರಡನೇ ಸೋಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ಸಹ ಮೈತ್ರಿ ಅಭ್ಯರ್ಥಿ ರಂಗನಾಥ್ , ಕಾಂಗ್ರೆಸ್​ನ ಪುಟ್ಟಣ್ಣ ವಿರುದ್ಧ ಸೋಲುಕಂಡಿದ್ದರು.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯ ಮತದಾನ ಅಂತ್ಯ: ಬಿಜೆಪಿಗೆ ಕೈಕೊಟ್ಟ ಮತ್ತೋರ್ವ ಶಾಸಕ, ಕಾಂಗ್ರೆಸ್ ಪ್ಲ್ಯಾನ್ ಸಕ್ಸಸ್

ಒಟ್ಟು 223 ಮತಗಳ ಪೈಕಿ 222 ಶಾಸಕಕರು ತಮ್ಮ ಮತದಾನ ಮಾಡಿದ್ದರು. ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್​ (BJP MLA Shivaram Hebbar) ಮತದಾನಕ್ಕೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಶೇ.99.5ರಷ್ಟು ಮತದಾನವಾಗಿತ್ತು. ಕಾಂಗ್ರೆಸ್‌ ಪಕ್ಷದ 135 ಶಾಸಕರು, ಮೂವರು ಪಕ್ಷೇತರ ಶಾಸಕರು, ಬಿಜೆಪಿಯ 65 ಶಾಸಕರು, ಜೆಡಿಎಸ್‌ನ 19 ಶಾಸಕ ಸಹ ಮತದಾನ ಮಾಡಿದ್ದರು. ಈ ಪೈಕಿ ಸೋಮಶೇಖರ್ ಅವರು ಕಾಂಗ್ರೆಸ್​ನ ಮೊದಲ ಅಭ್ಯರ್ಥಿ ಅಜಯ್ ಮಕೇನ್​ಗೆ ಮತ ಹಾಕಿದ್ದಾರೆ. ಇನ್ನು ಮತ್ತೋರ್ಚ ಬಿಜೆಪಿ ಶಿವರಾಮ್ ಹೆಬ್ಬಾರ್ ಮತದಾನಕ್ಕೆ ಗೈರಾಗಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:31 pm, Tue, 27 February 24