ಬೆಂಗಳೂರು, (ಪೆಬ್ರವರಿ 06): ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕರ ಡಾ. ಮಂಜುನಾಥ್(Dr CN Manjunath) ಅವರು ಈ ಬಾರಿ ಲೋಕಸಭಾ ಚುನಾವಣೆಗೆ (Loksabha Poll 2024)ಸ್ಪರ್ಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ(praveen shetty) ಅವರು ಒತ್ತಾಯಿಸಿದ್ದಾರೆ. ಅವರು ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಸಹ ಕರ್ನಾಟಕ ರಕ್ಷಣಾ ವೇದಿಕೆ, ಎಲ್ಲಾ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರು ಅವರಿಗಾಗಿ ಕೆಲಸ ಮಾಡುತ್ತೇವೆ ಎಂದು ಬೆಂಬಲ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವೀಣ್ ಶೆಟ್ಟಿ, ಜಯದೇವ ಆಸ್ಪತ್ರೆಯನ್ನ ದೇಶವೇ ನೋಡುವಂತೆ ಮಾಡಿದ್ದಾರೆ. ದೇಶದ ಹಿತದೃಷ್ಟಿಯಿಂದ ಸೂಕ್ತವಾದ ಸಲಹೆ ನೀಡುತ್ತಾರೆ. ಪ್ರಧಾನ ಮಂತ್ರಿಗಳಿಗೆ ಮತ್ತು ಸಂಸದರಿಗೆ ಸಲಹೆ ನೀಡುತ್ತಾರೆ. ಹೀಗಾಗಿ ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ರಾಜಕಾರಣಕ್ಕೆ ಜಯದೇವ ಮಾಜಿ ನಿರ್ದೇಶಕ ಡಾ ಮಂಜುನಾಥ್ ಕರೆತರಲು ಜೆಡಿಎಸ್ ಕಸರತ್ತು
ಇದೀಗ ತಾನೇ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಹೃದ್ರೋಗ ತಜ್ಞರಾಗಿ ಸೇವೆ ಸಲ್ಲಿಸಿ ಡಾ. ಸಿಎನ್ ಮಂಜುನಾಥ್ ನಿವೃತ್ತರಾಗಿದ್ದಾರೆ. ಜಯದೇವ ಆಸ್ಪತ್ರೆಯನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ. ಜೆಡಿಎಸ್, ಕಾಂಗ್ರೆಸ್, ಅಥವಾ ಬಿಜೆಪಿ ಯಾವ ಪಕ್ಷದಿಂದ ಆದರೂ ಸಹ ಅವರು ಸ್ಪರ್ಧಿಸಬೇಕು. ಅವರ ಸೇವೆ ದೇಶಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.
ಬೆಂಗಳೂರು ಉತ್ತರಕ್ಕೆ ಬನ್ನಿ ಅಥವಾ ರಾಜ್ಯದ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು. ಕರ್ನಾಟಕ ರಕ್ಷಣಾ ವೇದಿಕೆ, ಎಲ್ಲಾ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರು ಅವರಿಗಾಗಿ ಕೆಲಸ ಮಾಡುತ್ತೇವೆ. ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಂಡು ಬರುತ್ತೇವೆ. ನಿವೃತ್ತಿಯಾಗಿ ಮನೆಯಲ್ಲಿರುವುದು ರಾಜ್ಯಕ್ಕೆ ಶೋಭೆಯಲ್ಲ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ, ನಿಮ್ಮ ಸೇವೆ ನಾಡಿಗೆ ಅವಶ್ಯಕವಾಗಿದೆ ಎಂದು ಒತ್ತಾಯಿಸಿದರು.