ತಂದೆ ಹಾದಿಯಲ್ಲಿ ಮಗ‌: ಪದಗ್ರಹಣಕ್ಕೂ ಮುನ್ನ ಕೋಲಾರದ ಕುರುಡುಮಲೆ ವಿನಾಯಕನ ಮೊರೆ ಹೋದ ವಿಜಯೇಂದ್ರ

| Updated By: ರಮೇಶ್ ಬಿ. ಜವಳಗೇರಾ

Updated on: Nov 14, 2023 | 8:12 AM

ಮೊನ್ನೆ ಮಠಗಳಿಗೆ ರೌಂಡ್ಸ್ ಹಾಕಿದ್ದ ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ, ನಿನ್ನೆ(ನವೆಂಬರ್ 13) ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂಗಳಾದ ಎಸ್‌.ಎಂ.ಕೃಷ್ಣ, ಬಸವರಾಜ ಬೊಮ್ಮಾಯಿ ನಿವಾಸಕ್ಕೆ ತೆರಳಿ ಪ್ರಸ್ತುತ ರಾಜಕೀಯದ ಬಗ್ಗೆ ಸಮಾಲೋಚನೆ ನಡೆಸಿದ್ದರು. ಇಂದು ಮೂರನೇ ದಿನ ವಿಜಯೇಂದ್ರ ಮೂಡಣ ಬಾಗಿಲೆಂದು ಪ್ರಸಿದ್ದಿ ಪಡೆದಿರುವ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದರೊಂದಿಗೆ ತಂದೆ ಬಿಎಸ್​ ಯಡಿಯೂರಪ್ಪ ಅವರ ಹಾದಿಯಲ್ಲಿ ನಡೆಯುತ್ತಿದ್ದಾರೆ.

ತಂದೆ ಹಾದಿಯಲ್ಲಿ ಮಗ‌: ಪದಗ್ರಹಣಕ್ಕೂ ಮುನ್ನ ಕೋಲಾರದ ಕುರುಡುಮಲೆ ವಿನಾಯಕನ ಮೊರೆ ಹೋದ ವಿಜಯೇಂದ್ರ
Follow us on

ಬೆಂಗಳೂರು, (ನವೆಂಬರ್ 14): ಬಿಜೆಪಿ ಹೈಕಮಾಂಡ್ ಯಾರೂ ನಿರೀಕ್ಷಿಸದ ರೀತಿಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ (BY Vijayendra) ಬಹು ದೊಡ್ಡ ಹೊಣೆಗಾರಿಕೆ ನೀಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಮುಂಬರುವ ಲೋಕಸಭಾ ಚುನಾವಣೆ ಹಾಗೂ ಕಾಂಗ್ರೆಸ್​ ಸರ್ಕಾರಕ್ಕೆ ಟಕ್ಕರ್ ಕೊಡಲು ಯುವನೇತಾರನ ಅಸ್ತ್ರಬಿಟ್ಟಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾgಉತ್ತಿದ್ದಂತೆಯೇ ವಿಜಯೇಂದ್ರ ಫುಲ್ ಆ್ಯಕ್ಟೀವ್ ಆಗಿದ್ದು, ದಿಗ್ಗಜ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ, ಸಲಹೆ, ಮಾರ್ಗದರ್ಶನ ಪಡೆಯುತ್ತಿದ್ದಾರೆ. ಇದರ ಮಧ್ಯೆ ಟೆಂಪನ್ ರನ್​ ನಡೆಸಿದ್ದು, ಇಂದು ಮೂಡಣ ಬಾಗಿಲೆಂದು ಪ್ರಸಿದ್ದಿ ಪಡೆದಿರುವ ಕೋಲಾರ (Kolar) ಜಿಲ್ಲೆ ಮುಳಬಾಗಲು ತಾಲೂಕಿನ ಕುರುಡುಮಲೆ ವಿನಾಯಕನಿಗೆ (Kurudumale Vinayaka) ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಕೋಲಾರದ ಗಡಿ ರಾಮಸಂದ್ರ ಬಳಿ ವಿಜಯೇಂದ್ರ ಅವರಿಗೆ ಸಂಸದ ಎಸ್.ಮುನಿಸ್ವಾಮಿ ಮತ್ತು ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಮಾಡಿಕೊಳ್ಳಲಿದ್ದಾರೆ. ಅಲ್ಲಿಂದ‌ ನೇರವಾಗಿ ಕುರುಡುಮಲೆ ವಿನಾಯಕ ದೇವಾಲಯಕ್ಕೆ‌ ಬೇಟಿ, 11 ಗಂಟೆಗೆ ಕುರುಡುಮಲೆ‌ ವಿನಾಯಕನಿಗೆ ಪೂಜೆ ಸಲ್ಲಿಸಿ ನಂತರ ಬೂತ್ ಮಟ್ಟದ ಅಧ್ಯಕ್ಷರ ಮನೆಗೆ‌ ಭೇಟಿ ನೀಡಲಿದ್ದಾರೆ. ಇನ್ನು ಇದೇ ವೇಳೆ ವಿಜಯೇಂದ್ರಗೆ ಸಂಸದರು ಸೇರಿದಂತೆ ಜಿಲ್ಲೆಯ ಎಲ್ಲಾ ಮಾಜಿ ಶಾಸಕರುಗಳು ಸಾಥ್ ನೀಡಲಿದ್ದಾರೆ.

ಇದನ್ನೂ ಓದಿ: ಮಾಜಿ ಪ್ರಧಾನಿ, ಇಬ್ಬರು ಮಾಜಿ ಸಿಎಂಗಳ ನಿವಾಸಕ್ಕೆ ವಿಜಯೇಂದ್ರ ಭೇಟಿ, ಮಹತ್ವದ ಚರ್ಚೆ

ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಸಹ ಯಾವುದೇ ಚುನಾವಣೆ, ರಾಜ್ಯಪ್ರವಾಸ ಮಾಡುವ ಮೊದಲು ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಇದೀಗ ವಿಜಯೇಂದ್ರ ಸಹ ನವೆಂಬವರ್ 15 ರಂದು ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡುವ ಮುನ್ನ ಕುರುಡುಮಲೆ ವಿನಾಯಕನ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹ‌‌ ಅನೇಕ ಬಾರಿ ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿದ್ದಾರೆ. ತಂದೆಯ ಹಾದಿಯಲ್ಲಿ ಮಗ‌ ವಿಜಯೇಂದ್ರ ಸಹ ಸಕಲ ವಿಘ್ನಗಳು ನಿವಾರಣೆಯಾಗುವಂತೆ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ.

ಬಿಎಸ್​ ಯಡಿಯೂರಪ್ಪ ಅವರು ಕಳೆದ ಸೆಪ್ಟೆಂಬರ್​​ನಲ್ಲಿ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ಕೊಟ್ಟಿದ್ದರು, ಅಲ್ಲದೇ ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ