ಬೆಂಗಳೂರು, ಜ.30: ಮಂಡ್ಯ ತಾಲೂಕಿನ ಕೆರಗೋಡು (Keragodu) ಗ್ರಾಮದಲ್ಲಿ ಹನುಮ ಧ್ವಜ ತೆರವು ವಿವಾದಕ್ಕೆ ಜಿಲ್ಲಾಡಳಿತ ನಡೆದುಕೊಂಡ ರೀತಿಯೇ ಕಾರಣ ಎಂದು ಸಂಸದೆ ಸುಮಲತಾ (Sumlatha) ಅವರು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಮುಚ್ಚಳಿಕೆ ವಿರುದ್ಧವಾಗಿ ಏಕೆ ನಡೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಟ್ರಸ್ಟ್ನವರು ಒತ್ತಾಯ ಮಾಡಿದ್ದಕ್ಕೆ ಧ್ವಜಾರೋಹಣಕ್ಕೆ ಅನುಮತಿ ಕೊಟ್ಟಿದ್ದಾರೆ. ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸಲು ಮಾತ್ರ ಅನುಮತಿ ಕೊಟ್ಟಿದ್ದಾರೆ. ಧರ್ಮ, ಪಕ್ಷದ ಬಾವುಟ ಹಾರಿಸಬಾರದೆಂದು ಸೂಚಿಸಲಾಗಿದೆ. ಅದಾಗ್ಯೂ ಮುಚ್ಚಳಿಕೆ ವಿರುದ್ಧವಾಗಿ ಏಕೆ ನಡೆದುಕೊಳ್ಳಬೇಕು ಎಂದು ಪ್ರಶ್ನಿಸಿದರು. ಅಲ್ಲದೆ, ರಾಜಕೀಯ ಬಳಸಿ, ರಾಜಕೀಯ ಲಾಭ ಪಡೆಯಬೇಕೆಂಬ ಉದ್ದೇಶದಿಂದ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನ ಇದು ಎಂದರು.
ಹನುಮ ಧ್ವಜ ವಿವಾದ ಸಂಬಂಧ ಟಿವಿ9ಗೆ ಮೊದಲ ಪ್ರತಿಕ್ರಿಯೆ ನೀಡಿದ ಮಂಡ್ಯ ಸಂಸದೆ ಸುಮಲತಾ, ಧ್ವಜ ಪ್ರಕರಣದಲ್ಲಿ ಜಿಲ್ಲಾಡಳಿತ ನಡೆದಕೊಂಡ ರೀತಿ ತಪ್ಪಾಗಿದೆ. ಅಲ್ಲಿನ ಪರಿಸ್ಥಿತಿಯನ್ನ ಅವಲೋಕಿಸಿ ಕ್ರಮ ತೆಗದುಕೊಳ್ಳಬೇಕಿತ್ತು. ಆರು ದಿನಗಳ ಹಿಂದೆ ಹಾರಿಸಿರುವ ಧ್ವಜವನ್ನ ಏಕಾಏಕಿ ಕ್ರಮ ಕೈಗೊಡಿದ್ದೇಕೆ? ಕಾನೂನು ಬಾಹಿರ ಆಗಿದ್ದರೆ ಮೊದಲೇ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸ್ಥಳೀಯರ ಬಳಿ ಮಾತನಾಡಿ ಚರ್ಚಿಸಿ ಹನುಮ ಧ್ವಜ ತೆಗೆಯಬಹುದಿತ್ತು. ಆದರೆ ಸ್ಥಳೀಯವಾಗಿ ಅಲ್ಲಿ ರಾಜಕಾರಣ ನಡೆದಿದೆ. ಶಾಸಕರ ಮಾಹಿತಿ ಮೇರಿಗೆ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲಿನ ಪರಿಸ್ಥಿತಿ ಗಮನಸದೇ ಕ್ರಮ ಕೈಗೊಂಡಿದ್ದು ತಪ್ಪು. ನಾನು ಮಂಡ್ಯದ ಸಂಸದೆಯಾಗಿ ಐದು ವರ್ಷವಾಗಿರಬಹುದು. ಆದರೆ ಇಲ್ಲಿನ ಜನರ ನಾಡಿಮಿಡಿತ ತಿಳಿದಿದೆ. ಅಲ್ಲಿನ ರಾಜಕೀಯ ಹೇಗಿದೆ ಎಂಬ ಬಗ್ಗೆ ನನಗೆ ಮಾಹಿತಿ ಇದೆ. ಧ್ವಜ ತೆರವು ಸ್ಥಳೀಯರಿಗೆ ನೂರಕ್ಕೆ ನೂರಷ್ಟು ನೋವಾಗಿದೆ. ಅಲ್ಲಿನ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದರು.
ಇದನ್ನೂ ಓದಿ: ಮಂಡ್ಯ ಹನುಮ ಧ್ವಜ ವಿವಾದ: ಸರ್ಕಾರವೇ ನಕಲಿ ದಾಖಲೆ ಸೃಷ್ಟಿಸಿದೆ ಎಂದ ಕುಮಾರಸ್ವಾಮಿ
ಕೆರಗೋಡು ಗ್ರಾಮದ ಮುಖ್ಯಸ್ಥರನ್ನ ಸಭೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು. ಅವರಿಗೆ ಕಾನೂನಿನ ಮಾಹಿತಿ ಕೊಟ್ಟು ಮನವರಿಕೆ ಮಾಡಬೇಕಿತ್ತು. ಪಂಚಾಯ್ತಿಯಲ್ಲಿ ಅನುಮತಿ ಪಡೆದು ಧ್ವಜವನ್ನ ಹಾಕಿದ್ದಾರೆ. ಇಲ್ಲ ಅಂದರೆ ಏಕೆ ಆರು ದಿನಗಳ ಕಾಲ ಸುಮ್ಮನೆ ಇದ್ದರು? ಇದರ ಹಿಂದೆ ಯಾರೋ ಇದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದರು.
ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಇದೆ ಅದನ್ನ ಹಾರಿಸಿದರೆ ರಾಷ್ಟ್ರಕ್ಕೆ ಅವಮಾನ ಅಲ್ಲ. ನಮ್ಮ ಜನರಿಗೆ ಕರ್ನಾಟಕ ಧ್ವಜ ಅಂದರೆ ಸ್ವಾಭಿಮಾನ, ಗೌರವ, ಭಾವನೆ ಇದೆ. ಅಯೋಧ್ಯೆ ಮೊನ್ನೆಯಷ್ಟೇ ಉದ್ಘಾಟನೆಯಾಗಿದೆ, ಎಷ್ಟೋ ಜನ ಕಣ್ಣೀರು ಹಾಕಿದ್ದಾರೆ. ಇಂತಹ ಸಮಯದಲ್ಲಿ ಜಾಗ್ರತೆಯಿಂದ ನಡೆದುಕೊಳ್ಳಬೇಕು. ರಾಜಕೀಯವಾಗಿ ಯಾರು ಸಹ ಜನರ ಭಾವನೆಯನ್ನ ಕೆರಳಿಸಬಾರದು ಎಂದರು.
ಹಿಂದೂ ಕಾರ್ಯಕರ್ತರಿಗೆ ಲಾಠಿಚಾರ್ಜ್ನಿಂದ ಗಾಯಾಗಳಾಗಿದ್ದು, ಇಂತಹ ಘಟನೆಗಳು ನಡೆಯಬಾರದು. ಧ್ವಜ ಪ್ರಕರಣದಲ್ಲಿ ತುಂಬಾ ತಪ್ಪುಗಳು ನಡೆದಿವೆ. ಎಷ್ಟೋ ವಿಷಯಗಳು ಇವೆ. ಅದರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿ. ನನಗೆ ಅರೋಗ್ಯ ಸರಿ ಇಲ್ಲವಾಗಿದ್ದರಿಂದ ನಾನು ಸ್ಥಳಕ್ಕೆ ಹೋಗಲು ಸಾಧ್ಯವಾಗಿಲ್ಲ. ಆದರೆ ನಾನು ಪ್ರತಿಯೊಂದು ಮಾಹಿತಿಯನ್ನ ಪಡೆಯುತ್ತಿದ್ದೇನೆ. ಶೀಘ್ರದಲ್ಲೇ ಮಂಡ್ಯಕ್ಕೆ ಭೇಟಿ ಕೊಟ್ಟು ಸ್ಥಳೀಯರ ಜೊತೆ ಚರ್ಚಿಸುತ್ತೇನೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ