ಬೆಂಗಳೂರು: 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ಇಂದು(ನವೆಂಬರ್ 21) ಕೊನೆ ದಿನವಾಗಿದ್ದು, ಘಟಾನುಘಟಿ ನಾಯಕರುಗಳು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅರ್ಜಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ಕೆ.ಎಚ್. ಮುನಿಯಪ್ಪ ಕೂಡ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ.
ವಿಧಾನಸಭೆ ಚುನಾವಣೆ ಟಿಕೆಟ್‌ಗಾಗಿ ಕೊನೆಗೂ ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ, ಕುತೂಹಲ ಮೂಡಿಸಿದ ಕ್ಷೇತ್ರ…!
K.H.ಮುನಿಯಪ್ಪ ಪರವಾಗಿ ಆಪ್ತ ಸಹಾಯಕರು ಅರ್ಜಿ ಸಲ್ಲಿಸಿದ್ದಾರೆ. ಆದ್ರೆ, ಅರ್ಜಿಯಲ್ಲಿ ಕ್ಷೇತ್ರದ ಹೆಸರು ಉಲ್ಲೇಖಿಸಿಲ್ಲ. ಹೈಕಮಾಂಡ್ ಹೇಳಿದ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯ ಸಹ ಕ್ಷೇತ್ರದ ಹೆಸರನ್ನು ಅರ್ಜಿಯಲ್ಲಿ ಬರೆದಿಲ್ಲ. ಇದೀಗ ಮುನಿಯಪ್ಪ ಸಹ ಅದೇ ಮಾದರಿ ಅನುಸರಿಸಿದ್ದು, ಇಬ್ಬರು ನಾಯಕರ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಯಾಕಂದ್ರೆ, ಕೋಲಾರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ. ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅಲ್ಲಿನ ಅನಭಿಷಿಕ್ತ ದೊರೆ. ,ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದಲ್ಲಿ ಹಿನ್ನೆಲೆಗೆ ಸರಿದಂತಿರುವ ಮುನಿಯಪ್ಪ, ಇತ್ತೀಚೆಗೆ ಕಾಂಗ್ರೆಸ್ ತೊರೆಯುವ ತೀರ್ಮಾನ ಮಾಡಿದ್ದರು. ಆದ್ರೆ, ಹೈಕಮಾಂಡ್ ಮನವೊಲಿಸಿ ಮುನಿಯಪ್ಪ ಅವರನ್ನು ಪಕ್ಷದಲ್ಲಿ ಉಳಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಮುನಿಯಪ್ಪ ಅವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಯಾವ ಕ್ಷೇತ್ರಕ್ಕೆ ಎನ್ನುವುದು ಕುತೂಹಲ ಮೂಡಿಸಿದೆ. ಮುನಿಯಪ್ಪ ಅವರು ಕೋಲಾರ ಬಿಟ್ಟು ದೇವನಹಳ್ಳಿ ಕ್ಷೇತ್ರಕ್ಕೆ ಹೋಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿವೆ. ಮತ್ತೊಂದೆಡೆ ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನಲಾಗುತ್ತಿದೆ.
ಇದರ ಮಧ್ಯೆ ಈ ಇಬ್ಬರು ನಾಯಕರು ಟಿಕೆಟ್‌ಗಾಗಿ ಸಲ್ಲಿಸಿದ ಅರ್ಜಿಯಲ್ಲಿ ಕ್ಷೇತ್ರದ ಹೆಸರು ಉಲ್ಲೇಖಿಸಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಕೋಲಾರ ಬಿಟ್ಟು ಬೇರೆ ಕಡೆ ಹೊದರೆ ಮುನಿಯಪ್ಪ ಅಲ್ಲಿ ಸ್ಪರ್ಧೆ ಮಾಡುತ್ತಾರೆ. ಆದರೆ, ಸಿದ್ದರಾಮಯ್ಯನವರು ಏನಾದರೂ ಕೋಲಾರದಲ್ಲಿ ಸ್ಪರ್ಧೆ ಮಾಡುವುದು ಖಚಿತವಾದರೆ ಮುನಿಯಪ್ಪ ಯಾವ ಕ್ಷೇತ್ರಕ್ಕೆ ಹೋಗುತ್ತಾರೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
Published On - 8:30 pm, Mon, 21 November 22