ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಸಿದ್ದರಾಮಯ್ಯಗೆ ಇಲ್ಲ, ಮಲ್ಲಿಕಾರ್ಜುನ ಖರ್ಗೆ ಘೋಷಿಸಬಹುದು: ಡಿಕೆ ಶಿವಕುಮಾರ್
ನಮಗೆ ಮಲ್ಲಿಕಾರ್ಜುನ ಖರ್ಗೆಯವರೇ ಹೈಕಮಾಂಡ್. ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಖರ್ಗೆ ಅವರಿಗೆ ಮಾತ್ರವೇ ಇದೆ ಎಂದು ಅವರು ತಿಳಿಸಿದರು.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾರು ಕಾಂಗ್ರೆಸ್ ಅಭ್ಯರ್ಥಿಗಳಾಗಿ ನಿಲ್ಲಬೇಕು ಎಂದು ಎಐಸಿಸಿ ನಿರ್ಧರಿಸುತ್ತದೆ. ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಸಿದ್ದರಾಮಯ್ಯ ಅವರಿಗಾಗಲೀ, ನನಗಾಗಲೀ ಇಲ್ಲ. ಸಿದ್ದರಾಮಯ್ಯ ಏಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಸೋತವರಿಗೆ ಪ್ರೋತ್ಸಾಹ ನೀಡಲೆಂದು ಸಿದ್ದರಾಮಯ್ಯ ಹಾಗೆ ಹೇಳಿರಬಹುದು. ನಮಗೆ ಮಲ್ಲಿಕಾರ್ಜುನ ಖರ್ಗೆಯವರೇ ಹೈಕಮಾಂಡ್. ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಖರ್ಗೆ ಅವರಿಗೆ ಮಾತ್ರವೇ ಇದೆ ಎಂದು ಅವರು ತಿಳಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಉಮೇದುವಾರರನ್ನು ಸಿದ್ದರಾಮಯ್ಯ ಘೋಷಿಸಿರುವ ಸಂದರ್ಭದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಹಾಕಲು ಇಂದು ಕೊನೆಯ ದಿನ. ಬಹುಶಃ ಹಿರಿಯರಿಗೆ ಪ್ರೋತ್ಸಾಹ ನೀಡಲು ಅವರು ಹೀಗೆ ಮಾತನಾಡಿರಬಹುದು. ಆದರೆ ಅಭ್ಯರ್ಥಿಗಳನ್ನು ಘೋಷಿಸುವ ಅಧಿಕಾರವು ಹೈಕಮಾಂಡ್ಗೆ ಮಾತ್ರವೇ ಇದೆ. ಹೈಕಮಾಂಡ್ ಎಂದರೆ ಖರ್ಗೆ ಎಂದು ಹೇಳಿದರು.
ಮತಪತ್ರ ಅವ್ಯವಹಾರ ಕುರಿತು ಪ್ರತಿಕ್ರಿಯಿಸಿದ ಅವರು, ಮತಗಳನ್ನು ಇವರು ಮಾರುತ್ತಿದ್ದಾರೆ. ಈ ಹಗರಣದಲ್ಲಿ ಸಾಕಷ್ಟು ಜನರು ಇದ್ದಾರೆ. ಮತಗಳ ಖರೀದಿಗೆ, ಮಾರ್ಪಡಿಸಲು ಎಷ್ಟು ದರ ನಿಗದಿಯಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಇದು ಸಾರ್ವಜನಿಕ ಆಸ್ತಿ. ಸಂಗ್ರಹಿಸಿದ ಮಾಹಿತಿಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಗಮನಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಈ ಪ್ರಕರಣದಲ್ಲಿ ಮಾಧ್ಯಮದವರು ಧೈರ್ಯದಿಂದ ವರದಿ ಮಾಡಿ ಹಗರಣವನ್ನು ಬೆಳಕಿಗೆ ತಂದಿದ್ದಾರೆ ಎಂದು ಡಿಕೆಶಿ ಹೇಳಿದರು.
ಈ ಪ್ರಕರಣದ ಬಗ್ಗೆ ಚುನಾವಣಾ ಆಯೋಗವು ಪರಿಶೀಲಿಸಬೇಕು ಎಂದು ಕೋರಿದ್ದೇವೆ. ಅಕ್ರಮ ಎಸಗಿದ ಸಂಸ್ಥೆಯು ಮ್ಯಾಪಿಂಗ್ ಹೇಗೆ ಮಾಡುತ್ತಿದ್ದರು. ಅದಕ್ಕೆ ಅನುಮತಿ ಇತ್ತೆ? ಚುನಾವಣೆ ಅಧಿಕಾರಿಗಳೇ ಹಿರಿಯ ಅಧಿಕಾರಿಗಳ ಆದೇಶದ ಮೇಲೆ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ ಎಂದು ಹೇಳಿದ್ದಾರೆ. ಅವರು ಹೇಳಿರುವ ಹೈಯರ್ಅಪ್ ಎಂದರೆ ಯಾರು? ಕೆಲಸಕ್ಕೆ ಬಾರದವರನ್ನು ಬಂಧಿಸಿದರೆ ಪ್ರಯೋಜವಿಲ್ಲ. ಕಿಂಗ್ಪಿನ್ ಯಾರು ಎಂಬುದನ್ನು ಗುರುತಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಈ ಹಗರಣದಲ್ಲಿ ಹಲವು ಶಾಸಕರು, ಸಚಿವರು ಶಾಮೀಲಾಗಿದ್ದಾರೆ. ಅದರ ಬಗ್ಗೆ ಮಾಹಿತಿ ನಮ್ಮ ಬಳಿಯಿದೆ. ಮಹದೇವಪುರ ಸೇರಿದಂತೆ ಬೆಂಗಳೂರಿನ ಎಲ್ಲ 28 ಕ್ಷೇತ್ರಗಳ ಎಆರ್ಒಗಳ ಮೇಲೆ ಕೇಸ್ ಹಾಕಬೇಕಿದೆ. ಪೊಲೀಸರು ಏನು ಮಾಡುತ್ತಾರೆ ಎನ್ನುವುದನ್ನು ನಾವು ಗಮನಿಸುತ್ತಿದ್ದೇವೆ. ಈ ಹಿಂದೆ ರಾಜ್ಯ ಸರ್ಕಾರವು ಹಗರಣಗಳನ್ನು ಹೇಗೆ ನಿರ್ವಹಿಸಿದೆ ಎಂಬುದನ್ನು ಗಮನಿಸಿದ್ದೇವೆ. ಪೊಲೀಸರು ತನಿಖೆ ಪೂರ್ಣಗೊಳಿಸುವ ಮೊದಲೇ ಮುಖ್ಯಮಂತ್ರಿ ಆರೋಪಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಈ ಹಗರಣದ ವಿಚಾರದಲ್ಲಿಯೂ ನಮಗೆ ಅನುಮಾನವಿದೆ. ಮತಪತ್ರಗಳ ಹಗರಣದ ಬಗ್ಗೆ 2013ರಿಂದಲೂ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿರುವುದನ್ನು ನಾವು ಸ್ವಾಗತಿಸುತ್ತೇವೆ. ನಾವು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ ಎಂದು ಹೇಳಿದರು.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ: ಸರ್ಕಾರಕ್ಕೆ ಡೆಡ್ಲೈನ್ ಕೊಟ್ಟ ಡಿಕೆ ಶಿವಕುಮಾರ್
Published On - 2:15 pm, Mon, 21 November 22