ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ: ಸರ್ಕಾರಕ್ಕೆ ಡೆಡ್​ಲೈನ್ ಕೊಟ್ಟ ಡಿಕೆ ಶಿವಕುಮಾರ್

ಮತದಾರರ ಪಟ್ಟಿಯಲ್ಲಿ​ ಅಕ್ರಮ ನಡೆಸಿದ ಎಲ್ಲಾ ಅಧಿಕಾರಿಗಳನ್ನು ಬಂಧಿಸಬೇಕು ಎಂದು ನಾಳೆ ಮಧ್ಯಾಹ್ನದವರೆಗೆ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಗಡುವು ನೀಡಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ: ಸರ್ಕಾರಕ್ಕೆ ಡೆಡ್​ಲೈನ್ ಕೊಟ್ಟ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 18, 2022 | 2:57 PM

ಬೆಂಗಳೂರು: ಮತದಾರರ (voters) ಪಟ್ಟಿಯಲ್ಲಿ​ ಅಕ್ರಮ ನಡೆಸಿದ ಎಲ್ಲಾ ಅಧಿಕಾರಿಗಳನ್ನು ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದು, ನಾಳೆ ಮಧ್ಯಾಹ್ನದವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ಕೇಂದ್ರ ಚುನಾವಣಾ ಆಯೋಗಕ್ಕೂ ತೆಗೆದುಕೊಂಡು ಹೋಗುತ್ತೇವೆ. ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಳ್ಳುವಂತೆ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡುತ್ತೇವೆ. ಭ್ರಷ್ಟ, ನೀಚ ಹಾಗೂ ಕೆಟ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಬೇಕು ಎಂದು ಡಿ.ಕೆ.ಶಿವಕುಮಾರ್​ ಕಿಡಿಕಾರಿದರು.

ಮಾನನಷ್ಟ ಮೊಕದ್ದಮೆ​ ಹಾಕಲಿ ಬೇಡ ಅಂದವರು ಯಾರು

ಮಾನನಷ್ಟ ಕೇಸ್​ ದಾಖಲಿಸುವುದಾಗಿ ಡಾ. ಅಶ್ವಥ್​ ನಾರಾಯಣ್​ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಮಾನನಷ್ಟ ಕೇಸ್​ ಹಾಕಲು ಅಶ್ವಥ್ ನಾರಾಯಣ ಕಾಯೋದು ಬೇಡ. ಮಾನನಷ್ಟ ಮೊಕದ್ದಮೆ​ ಹಾಕಲಿ ಬೇಡ ಅಂತಾ ಹೇಳಿದ್ದು ಯಾರು ಎಂದು ಪ್ರಶ್ನಿಸಿದರು. ಜಾತಿಗಣತಿ ವರದಿ ದುರ್ಬಳಕೆ ಮಾಡಿಕೊಂಡಿದ್ದರೂ ತನಿಖೆ ಮಾಡಲಿ. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಯಾಕೆ ಎಫ್​ಐಆರ್​ ದಾಖಲಾಗಿಲ್ಲ. ಮತದಾರರ ಗುರುತಿನ ಚೀಟಿ ನೀಡಿದವರನ್ನು ಇನ್ನೂ ಯಾಕೆ ಬಂಧಿಸಿಲ್ಲ. EVM ಮ್ಯಾನೇಜ್​ಮೆಂಟ್​ ಬಗ್ಗೆ ಚಿಲುಮೆಗೆ ಅನುಮತಿ ಕೊಟ್ಟಿದ್ಯಾರು? ಅಶ್ವಥ್​ ಜತೆ ಲಿಂಕ್​ ಇದೆಯಾ? ಡಿಕೆಶಿ ಜತೆ ಲಿಂಕ್ ಇದೆಯಾ? ಈ ಸಂಬಂಧ ಯಾಕೆ ಎಫ್​​ಐಆರ್​ ದಾಖಲಿಸಿ ಅರೆಸ್ಟ್​ ಮಾಡಿಲ್ಲ ಎಂದು ಹೀಗೆ ಪ್ರಶ್ನೆ ಕೇಳುವ ಮೂಲಕ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದರು.

ಸಿಎಂ ಬೊಮ್ಮಾಯಿ ಉಡಾಫೆ ಉತ್ತರ ಕೊಡುವುದು ಬೇಡ

ಇನ್ನು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದ ಡಿ.ಕೆ.ಶಿವಕುಮಾರ್​ ಸಿಎಂ ಬೊಮ್ಮಾಯಿ ಉಡಾಫೆ ಉತ್ತರ ಕೊಡುವುದು ಬೇಡ. ಪ್ರಕರಣವನ್ನು ಸಿಎಂ ಗಂಭೀರವಾಗಿ ತೆಗೆದುಕೊಳ್ಳಲಿ. ನಾವೇನಾದರೂ ತಪ್ಪು ಮಾಡಿದ್ದರೆ ನಮ್ಮನ್ನು ಕೂಡ ಬಂಧಿಸಲಿ ಎಂದರು. ಚುನಾವಣಾ ಆಯೋಗದ ಆಯುಕ್ತರ ಭೇಟಿಗೆ ನಾಳೆ ಮಧ್ಯಾಹ್ನ ಸಮಯ ಕೇಳಿದ್ದೇವೆ. 7-8 ಸಾವಿರ ಕಾರ್ಯಕರ್ತರು ಐಡಿ ಹಾಕಿಕೊಂಡು ಹೋಗಿದ್ದಾರೆ. ಮಲ್ಲೇಶ್ವರಂ, ಮಹದೇವಪುರ ಸೇರಿ ಎಲ್ಲಿ ಏನಾಗಿದೆ ಮಾಹಿತಿ ಸಿಕ್ಕಿದೆ. ಮನೆಮನೆಗೆ ಹೋಗಿ ಮ್ಯಾಪಿಂಗ್ ಮಾಡಿರುವ ಮಾಹಿತಿ ಇದೆ. ಅಲ್ಲಿನ ಅಧಿಕಾರಿಗಳೇ ನಮಗೆ ಮಾಹಿತಿ ನೀಡಿದ್ದಾರೆ ಎಂದರು. ಚುನಾವಣಾ ಆಯೋಗವೂ ಇದರಲ್ಲಿ ಶಾಮೀಲಾಗಿದೆ ಅನಿಸುತ್ತಿದೆ. ಚುನಾವಣಾ ಆಯೋಗಕ್ಕೆ ಮಾಹಿತಿ ಇದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಚುನಾವಣಾ ಆಯೋಗದಿಂದ ನೋಟಿಸ್

ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಬಿಬಿಎಂಪಿಯಿಂದ ವರದಿ ಕೇಳಿದೆ. ಚುನಾವಣಾ ಆಯೋಗದಿಂದ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಗೆ ನೋಟೀಸ್ ನೀಡಲಾಗಿದೆ. ಕಾಂಗ್ರೆಸ್ ಆರೋಪ, ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧಾರದ ಮೇಲೆ ಚುನಾವಣಾ ಆಯೋಗ ವರದಿ ಕೇಳಿದೆ. ಈ ಕುರಿತು ಬಿಬಿಎಂಪಿಯ ವಿಶೇಷ ಆಯುಕ್ತ ರಂಗಪ್ಪ ಮಾತನಾಡಿದ್ದು, ಮುಖ್ಯ ಆಯುಕ್ತರ ಒಪ್ಪಿಗೆ ಬಳಿಕ ವರದಿ ಸಲ್ಲಿಕೆ ಮಾಡುತ್ತೇವೆ. ಆರ್​ಒ ಅಧಿಕಾರಿಯೇ ಐಡಿ ನೀಡಿದ್ದಾರೆ ಎಂಬ ಮಾಹಿತಿ ಇದೆ ಎಂದರು.

ಚಿಲುಮೆ ಸಂಸ್ಥೆಯು ಸಮನ್ವಯಾಧಿಕಾರಿ ಎಂಬ ಐಡಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಗುರುತಿನ ಚೀಟಿ ಹಂಚಿಕೆ ಮಾಡಿದ ಆರ್​ಒ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮ ಬಿಎಲ್​ಒಗಳು ಮನೆಮನೆಗೆ ತೆರಳಿ ಪರಿಶೀಲನೆ ಮಾಡುತ್ತಾರೆ. ಪಟ್ಟಿಯಿಂದ ಡಿಲೀಟ್ ಆದವರು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ರಂಗಪ್ಪ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:52 pm, Fri, 18 November 22