ಶಿವಮೊಗ್ಗ, ಆಗಸ್ಟ್ 16: ಬಿಜೆಪಿಯ ಯಾವ ಶಾಸಕರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಬುಧವಾರ ಹೇಳಿದ್ದಾರೆ. ಶಿವಮೊಗ್ಗದಲ್ಲಿ (Shivamogga) ಮಾತನಾಡಿದ ಅವರು, ಕೆಲವು ಶಾಸಕರು ಕಾಂಗ್ರೆಸ್ಸಿಗೆ ಬರ್ತಾರೆ ಎಂಬುದಾಗಿ ಆ ಪಕ್ಷದವರು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ನಲ್ಲೇ ಇರುವ 30ಕ್ಕೂ ಹೆಚ್ಚು ಶಾಸಕರಿಗೆ ಅಲ್ಲಿಯೇ ಅನುಕೂಲ ಆಗ್ತಿಲ್ಲ. ಈ ಬಗ್ಗೆ ಪತ್ರ ಬರೆದು ಸಹಿ ಹಾಕಿ ಸಿಎಂ ಸಿದ್ದರಾಮಯ್ಯಗೆ ಕೊಟ್ಟಿದ್ದಾರೆ. ಬಿಜೆಪಿಗೆ ಬಂದಿರುವ ಯಾವ ಶಾಸಕರೂ ಕಾಂಗ್ರೆಸ್ಗೆ ಹೋಗುವುದಿಲ್ಲ. ಬಿಜೆಪಿ ಚಿಹ್ನೆಯಿಂದ ಗೆದ್ದವರು ನಮ್ಮ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಅಂತಾ ಮುನಿರತ್ನ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಮುಂದಿನ 6 ತಿಂಗಳುಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೋಟಾ, ಸಚಿವರು ನಮ್ಮ ಮಾತು ಕೇಳ್ತಿಲ್ಲ ಎಂದು ಆಡಳಿತ ಪಕ್ಷದ 30 ಶಾಸಕರು ಹೇಳಿದ್ದಾರೆ. ಅತ್ಯಂತ ನೋವಾಗಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ಥಿರತೆ ಇಲ್ಲ ಎಂದು ಯತ್ನಾಳ್ ಹೇಳಿದ್ದಾರೆ ಎಂದು ಹೇಳಿದರು.
ಯತ್ನಾಳ್ ಅವರ ಅನುಭವದ ಹಿನ್ನೆಲೆಯಲ್ಲಿ ಅವರಿಗೆ ಮಾಹಿತಿಗೆ ಸಿಕ್ಕಿರಬಹುದು. ಈ ಪ್ರಮಾಣದ ಭ್ರಷ್ಟಾಚಾರ ನಡೆಸುತ್ತಿರುವ ಸರ್ಕಾರ ಹಿಂದೆಂದೂ ನೋಡಿಲ್ಲ. ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಟೀಕಿಸಿದರು.
ರಾಜಕಾರಣ ನಿಂತ ನೀರಲ್ಲ, ಯಾರು ಎಲ್ಲಿರುತ್ತಾರೋ ಹೇಳಲು ಆಗದು ಎಂದು ಶಿವಮೊಗ್ಗದಲ್ಲಿ ಬಿಜೆಪಿಯ ಮಾಜಿ ಶಾಸಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಯಾರೇ ಬಂದರೂ ಹೋದರೂ ಬಿಜೆಪಿಯನ್ನು ಹಾಳು ಮಾಡಲು ಸಾಧ್ಯವಿಲ್ಲ. ಆಕಸ್ಮಿಕವಾಗಿ ವಿಧಾನಸಭೆ ಚುನಾವಣೆಯನ್ನು ಸೋತಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡುತ್ತೇವೆ. ಯಾವ ವ್ಯಕ್ತಿ ಪಕ್ಷದ ನಿಷ್ಠಾವಂತನಾಗಿರುತ್ತಾನೋ ಆತ ಬೇರೆ ಪಕ್ಷಗಳಿಗೆ ಹೋಗುವುದಿಲ್ಲ. ನನ್ನನ್ನು ಯಾರಾದರೂ ಕರಿತಾರಾ ನೋಡೋಣ ಎಂದು ಕೆಎಸ್ ಈಶ್ವರಪ್ಪ ಸವಾಲು ಹಾಕಿದರು.
ಇದನ್ನೂ ಓದಿ: ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ; ಹೊಸ ಪರಿಕಲ್ಪನೆ ಜಾರಿಗೆ ಮುಂದಾಗಿದ್ದೇವೆ ಎಂದ ಡಿಕೆ ಶಿವಕುಮಾರ್
ನನ್ನ ಬಗ್ಗೆ ಯಾರಾದರೂ ಮಾತನಾಡುತ್ತಾರಾ? ಕಾಂಗ್ರೆಸ್ಗೆ ಹೋಗ್ತಾರೆ ಜೆಡಿಎಸ್ಗೆ ಹೋಗ್ತಾರೆ ಎಂದು ಹೇಳುವ ಆ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಬಿಜೆಪಿ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಂದ ಗಟ್ಟಿಯಾಗಿದೆಯೇ ವಿನಃ ಪಕ್ಷಾಂತರ ಮಾಡುವವರಿಂದ ಅಲ್ಲ. ಯಾವಾಗ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಗೊತ್ತಿಲ್ಲ. ಹಾವೇರಿಯಲ್ಲಿ ವಿವಿಧ ಮಠಾಧೀಶರು ಹೋಮ ಪೂಜೆ ಏರ್ಪಡಿಸಿದ್ದರು ಅದಕ್ಕಾಗಿ ಹೋಗಿದ್ದೇವೆ. ಇದರಲ್ಲಿ ರಾಜಕೀಯವೇನು ಇಲ್ಲ ಇದಕ್ಕೂ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ ಎಂದು ಈಶ್ವರಪ್ಪ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ