Congress: ರಾಜಕಾರಣದಲ್ಲಿ ಚಪ್ಪಲಿ ಎಸೆಯೋರು, ಜಯಕಾರ ಹಾಕೋರು ಇರ್ತಾರೆ: ಸಲೀಂ-ಉಗ್ರಪ್ಪ ಹೇಳಿಕೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಪಕ್ಷವು ತನ್ನ ನಿಯಮಗಳಂತೆ ಶಿಸ್ತುಕ್ರಮ ಜರುಗಿಸಲಿದೆ. ಮಾಧ್ಯಮಗಳಲ್ಲಿ ಬಂದಿರುವ ವರದಿ ನನಗೂ-ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶಿವಕುಮಾರ್ ಹೇಳಿದರು.

Congress: ರಾಜಕಾರಣದಲ್ಲಿ ಚಪ್ಪಲಿ ಎಸೆಯೋರು, ಜಯಕಾರ ಹಾಕೋರು ಇರ್ತಾರೆ: ಸಲೀಂ-ಉಗ್ರಪ್ಪ ಹೇಳಿಕೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಡಿ.ಕೆ.ಶಿವಕುಮಾರ್
Edited By:

Updated on: Oct 13, 2021 | 2:39 PM

ಬೆಂಗಳೂರು: ಕಾಂಗ್ರೆಸ್ ನಾಯಕರಾದ ಸಲೀಂ ಮತ್ತು ಉಗ್ರಪ್ಪ ಅವರ ನಡುವೆ ನಡೆದಿರುವ ಸಂಭಾಷಣೆ ವೇಳೆ ತಮ್ಮ ವಿರುದ್ಧ ಕೇಳಿಬಂದ ಆರೋಪಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. ಪಕ್ಷವು ತನ್ನ ನಿಯಮಗಳಂತೆ ಶಿಸ್ತುಕ್ರಮ ಜರುಗಿಸಲಿದೆ. ಮಾಧ್ಯಮಗಳಲ್ಲಿ ಬಂದಿರುವ ವರದಿ ನನಗೂ-ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.

ಮಾಧ್ಯಮಗಳ ವರದಿಗಳನ್ನು ನಾನು ನಿರಾಕರಿಸುವುದಿಲ್ಲ. ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ. ನಾನು ಯಾವುದೇ ಪರ್ಸೆಂಟೇಜ್ ವಿಚಾರದಲ್ಲಿಯೂ ಭಾಗಿಯಾಗಿಲ್ಲ, ನನಗೆ ಅದರ ಅಗತ್ಯವೂ ಇಲ್ಲ. ದೂರು ಕೊಟ್ಟರೆ ತನಿಖೆ ನಡೆಸುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಬೇಕಿದ್ದರೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಿ ಎಂದು ಹೇಳಿದರು.

ಚಪ್ಪಾಳೆ ಹೊಡೆಯೋರು, ಮೊಟ್ಟೆ ಎಸೆಯೋರು, ಚಪ್ಪಲಿ ಎಸೆಯೋರು, ಜಯಕಾರ ಹಾಕೋರು ಇರ್ತಾರೆ. ರಾಜಕಾರಣದಲ್ಲಿ ಇವೆಲ್ಲಾ ಇದ್ದಿದ್ದೇ. ನಾನು ಯಾರ ಬಗ್ಗೆ ಹೇಳ್ತಿದ್ದೇನೆ ಅನ್ನೋದನ್ನು ನೀವೇ ತೀರ್ಮಾನ ಮಾಡಿ ಎಂದು ಮುಗುಂ ಆಗಿ ನುಡಿದರು. ಈ ಬೆಳವಣಿಗೆಯಿಂದ ಪಕ್ಷಕ್ಕೆ ಖಂಡಿತ ಮುಜುಗರ ಆಗಿದೆ. ರೆಹಮಾನ್ ಖಾನ್ ನೇತೃತ್ವದ ಕಾಂಗ್ರೆಸ್ ಶಿಸ್ತುಸಮಿತಿಯು ಕಠಿಣ ಕ್ರಮಗಳನ್ನು ಖಂಡಿತ ಶಿಫಾರಸು ಮಾಡಲಾಗಿದೆ. 30 ಪರ್ಸೆಂಟೇಜ್ ಬಗ್ಗೆ ನನ್ನ ವಿರೋಧಿಗಳು, ಬೇರೆ ಪಕ್ಷದವರು ಮಾತಾಡಿದ್ದಾರೆ. ಇದು ನನ್ನ ಗಮನಕ್ಕೆ ಬಂದಿದೆ ಎಂದರು.

ಒಬ್ಬ ಮಂತ್ರಿ ಬೆಡ್​ರೂಮ್​ನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದನ್ನು ನೀವು ಕೇಳಲಿಲ್ಲ ಏಕೆ ಎಂದು ಶಿವಕುಮಾರ್ ಪರೋಕ್ಷವಾಗಿ ಬಿಜೆಪಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿರಿಯ ಸಚಿವರೊಬ್ಬರ ಬಗ್ಗೆ ಪ್ರಸ್ತಾಪಿಸಿದರು. ನಾನು ಹಳ್ಳಿಯಿಂದ ಬಂದಿರೋನು. ನನ್ನ ಬಾಡಿ ಲಾಂಗ್ವೇಜ್, ಶೈಲಿ, ನಡತೆ, ದೇಹ, ಯಶಸ್ಸು ಇದೆ. ಇದನ್ನು ಯಾರಿಗೋಸ್ಕರವೂ ಬದಲಿಸಲು ಆಗುವುದಿಲ್ಲ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು.

ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತವಾಗಲೀ, ಬಣಗಳಾಗಲೀ ಇಲ್ಲ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ‘ಶಿವಕುಮಾರ್ ಅಧ್ಯಕ್ಷರಾಗಲು ನಾನು ಕೆಲಸ ಮಾಡಿದ್ದೆ. ಅವರು ನನ್ನ ನಿರೀಕ್ಷೆ ಹುಸಿ ಮಾಡಿದರು’ ಎಂಬ ಉಗ್ರಪ್ಪ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲರನ್ನೂ ಸಮಾಧಾನಪಡಿಸಲು ಆಗುವುದಿಲ್ಲ’ ಎಂದರು.

ಭ್ರಷ್ಟಾಚಾರದ ವಿಚಾರದಲ್ಲಿ ಬಿಜೆಪಿಯನ್ನು ಯಾರೂ ಮೀರಿಸಲು ಅಗುವುದಿಲ್ಲ. ಈ ಸರ್ಕಾರ ಬದುಕಿರುವುದೇ ಭ್ರಷ್ಟಾಚಾರದಲ್ಲಿ ಎಂದು ನೇರ ಆರೋಪ ಮಾಡಿದರು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳನ್ನು ಕೇಳಿ ಸಮಾಧಾನ ಕಳೆದುಕೊಂಡ ಅವರು, ಮಾಧ್ಯಮಗೋಷ್ಠಿಯಿಂದ ಎದ್ದು ಹೊರ ನಡೆದರು.

 

Published On - 2:28 pm, Wed, 13 October 21