ಚಿತ್ರದುರ್ಗ, ಅ.10: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಜೈಲಿಗೆ ಹೋಗುತ್ತಾರೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ತಿರುಗೇಟು ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda), ಜೆಡಿಎಸ್ ಮತ್ತು ಬಿಜೆಪಿ ಸಂಚಿನ ಸತ್ಯವನ್ನು ಕುಮಾರಸ್ವಾಮಿ ಮಾತಿನ ಮೂಲಕ ಹೇಳಿದ್ದಾರೆ ಎಂದಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿಕೆಗೆ ಈಗಾಗಲೇ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸಿದೆ. ಬೇರೆ ಪಕ್ಷದ ರಾಜಕೀಯ ಹೇಳಿಕೆ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ, ಎಲ್ಲವನ್ನೂ ಎದುರಿಸಲು ಸಜ್ಜಾಗಿದ್ದೇವೆ ಎಂದರು.
ಇದನ್ನೂ ಓದಿ: ಶಿವಕುಮಾರ್ ರನ್ನು ಜೈಲಿಗೆ ಕಳಿಸಲೆಂದೇ ಕುಮಾರಸ್ವಾಮಿ ಬಿಜೆಪಿ ಜೊತೆ ಸಖ್ಯ ಬೆಳೆಸಿರುವರೇ? ಕೆಎಂ ಶಿವಲಿಂಗೇಗೌಡ
ಯಾವುದೇ ಸರ್ಕಾರ ಮಾಡದ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಕ್ರಾಂತಿಕಾರಿ ಗ್ಯಾರಂಟಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದೇವೆ. ಸರ್ಕಾರ ಬಡವರಿಗೆ ಸಹಾಯ ಮಾಡುತ್ತಿರುವುದು ಬಿಜೆಪಿ, ಜೆಡಿಎಸ್ ನಾಯಕರ ಕಣ್ಣು ಕುಕ್ಕುತ್ತಿದೆ. ನಮ್ಮ ಸರ್ಕಾರ ಬಡವರು, ರೈತರು, ದುಡಿಯುವ ವರ್ಗದ ಪರವಿದೆ. ಜೆಡಿಎಸ್ ಮತ್ತು ಬಿಜೆಪಿಯವರು ಒಂದಾಗಿ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರನ್ನು ಜೈಲಿಗೆ ಕಳಿಸುವುದಾಗಿ ಹೇಳುತ್ತಿದ್ದಾರೆ. ಸೇಡಿನ ರಾಜಕಾರಣ ಮುಂದುವರಿದರೆ ಜನರೇ ಉತ್ತರ ನೀಡುತ್ತಾರೆ ಎಂದರು.
2024ಕ್ಕೆ ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ವಸತಿ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್, ಯಾವ ವಿಚಾರಕ್ಕೆ ಜೈಲಿಗೆ ಹಾಕುತ್ತಾರೆಂದು ಸರಿಯಾಗಿ ಹೇಳಬೇಕಲ್ವಾ? ಷರತ್ತು ವಿಧಿಸಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರಬೇಕು. ಅಷ್ಟು ಸುಲಭವಾಗಿ ಹೇಳುತ್ತಿದ್ದಾರೆ ಅಂದರೆ ಅಮಿತ್ ಶಾ ಜೊತೆ ಚರ್ಚೆ ವೇಳೆ ಕುಮಾರಸ್ವಾಮಿ ಷರತ್ತು ವಿಧಿಸಿರಬಹುದು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Tue, 10 October 23