ಬೆಂಗಳೂರು: ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಸಚಿವ ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳಿವೆ. ಈ ಮೊದಲು ಶೇಕಡಾ 40 ರಷ್ಟು ಕಮಿಷನ್ ಆರೋಪಕ್ಕೆ ಸಿಲುಕಿದ್ದ ಈಶ್ವರಪ್ಪ, ಸಂತೋಷ್ ಆತ್ಮಹತ್ಯೆ ಪ್ರಕರಣದ ಸುಳಿಯಲ್ಲಿಯೂ ಸಿಕ್ಕಿಬಿದ್ದಿದ್ದಾರೆ. ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಬೆಳಗಾವಿಯ ಸಂತೋಷ್ ಇಂದು (ಏಪ್ರಿಲ್ 12) ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆರೋಪಗಳ ಹಿನ್ನೆಲೆ ಈಶ್ವರಪ್ಪ ರಾಜೀನಾಮೆ ಆಗ್ರಹ ಜೋರಾಗಿ ಕೇಳಿಬಂದಿತ್ತು.
ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಪ್ರಕರಣದ ಬೆಳವಣಿಗೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ಮಂಗಳೂರಿನಲ್ಲಿ ಇರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಇರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜತೆ ಮಾತನಾಡಿದ್ದಾರೆ. ಈ ಮಧ್ಯೆ, ಸಂತೋಷ್ ಆತ್ಮಹತ್ಯೆ ಬಗ್ಗೆ ಬಿಜೆಪಿ ಹೈಕಮಾಂಡ್ ಮಾಹಿತಿ ಪಡೆದುಕೊಂಡಿರುವುದು ತಿಳಿದುಬಂದಿದೆ.
ಕರ್ನಾಟಕ ರಾಜ್ಯಸರ್ಕಾರ, ರಾಜ್ಯ ಬಿಜೆಪಿಯಿಂದ ವರಿಷ್ಠರು ಮಾಹಿತಿ ಪಡೆದಿದ್ದಾರೆ. ಸಿಎಂ, ಸುರಾನಾರಿಂದ ಹೈಕಮಾಂಡ್ ಮಾಹಿತಿ ಪಡೆದುಕೊಂಡಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ನಿರ್ಮಲ್ ಕುಮಾರ್ ಸುರಾನಾ, ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ; ನಿನ್ನೆ ಬೆಳಗ್ಗಿನಿಂದ ಏನೆಲ್ಲಾ ನಡೆಯಿತು?
ಇಂದು (ಏಪ್ರಿಲ್ 12) ಮಧ್ಯಾಹ್ನದ ವೇಳೆ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಉಡುಪಿಯ ಖಾಸಗಿ ಲಾಡ್ಜ್ ಒಂದರಲ್ಲಿ ಮೃತಪಟ್ಟಿರುವುದು ತಿಳಿದುಬಂತು. ಜೊತೆಗೆ, ತನ್ನ ಸಾವಿಗೆ ಸಚಿವ ಕೆಎಸ್ ಈಶ್ವರಪ್ಪ ಅವರೇ ಕಾರಣ, ಎಲ್ಲಾ ಆಸೆಗಳನ್ನು ಬದಿಗೊತ್ತಿ ತಾನು ಇಂತಹ ನಿರ್ಧಾರ ಕೈಗೊಂಡಿರುವ ಬಗ್ಗೆ ನೀಡಿರುವ ವಾಟ್ಸಾಪ್ ಸಂದೇಶ ಕೂಡ ಪತ್ತೆಯಾಗಿತ್ತು.
ಘಟನೆಯ ಹಿನ್ನೆಲೆ, ಈಶ್ವರಪ್ಪ ರಾಜೀನಾಮೆಗೆ ವಿಪಕ್ಷಗಳು ಒತ್ತಾಯ ಮಾಡಿದ್ದವು. ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರು ಇರುವಲ್ಲಿ ತೆರಳಿ ಮುತ್ತಿಗೆ ಹಾಕುವ, ಪ್ರತಿಭಟನೆ ನಡೆಸುವ ಕಾರ್ಯವನ್ನು ಕೂಡ ಮಾಡಿದ್ದರು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದ ಮಂಗಳೂರಿನ ಹೊಟೇಲ್ಗೆ ಕೂಡ ಕೈ ನಾಯಕರು, ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾಗಿದ್ದರು. ಘಟನೆ ಹಿನ್ನೆಲೆ ನಾಳೆ (ಏಪ್ರಿಲ್ 13) ರಾಜ್ಯಪಾಲರನ್ನು ಭೇಟಿಯಾಗಿ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ನಿಯೋಗ ತೆರಳುವ ಬಗ್ಗೆ ಮತ್ತು ಈಶ್ವರಪ್ಪ ರಾಜೀನಾಮೆಗೆ ಆಗ್ರಹ ವ್ಯಕ್ತಪಡಿಸಿ ಕಾಂಗ್ರೆಸ್ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿತ್ತು.
ಒಂದೆಡೆ ವಿಪಕ್ಷಗಳ ನಾಯಕರು ಪ್ರತಿಭಟನೆ, ವಿರೋಧ ವ್ಯಕ್ತಪಡಿಸುತ್ತಿದ್ದರೆ ಇತ್ತ ಬಿಜೆಪಿ ನಾಯಕರು, ಕಾಂಗ್ರೆಸ್ ಎಲ್ಲವನ್ನೂ ರಾಜಕೀಯವಾಗಿ, ವೋಟ್ ಬ್ಯಾಂಕ್ಗಾಗಿ ಬಳಸಿಕೊಳ್ಳುತ್ತಿದೆ ಎಂದು ದೂರಿತ್ತು. ಅದು ಕೇವಲ ವಾಟ್ಸಾಪ್ ಸಂದೇಶ, ಪ್ರಿಂಟ್ ಟೆಕ್ಸ್ಟ್ ಎಂದು ಈಶ್ವರಪ್ಪ ಹೇಳಿದ್ದರು. ತಪ್ಪು ಯಾರೇ ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಬಿಜೆಪಿಯ ಕೆಲ ನಾಯಕರು ಹೇಳಿಕೆ ನೀಡಿದ್ದರು. ಘಟನೆಯ ಕಾವು ಏರುತ್ತಿರುವಂತೆ ಸಿಎಂ ಬೊಮ್ಮಾಯಿ ಸಹಿತ ವಿವಿಧ ನಾಯಕರು ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಬಗ್ಗೆ, ಮುಂದಿನ ನಡೆಯ ಕುರಿತು ಚಿಂತನೆ ನಡೆಸಿದ್ದರು. ಎಲ್ಲಾ ಚರ್ಚೆಯ ಬಳಿಕ ಇದೀಗ ರಾಜ್ಯ ಸರ್ಕಾರ ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆ ಪಡೆದುಕೊಂಡಿದೆ.
ಈ ಮಧ್ಯೆ ಇದು ಆತ್ಮಹತ್ಯೆಯೋ ಕೊಲೆಯೋ ಎಂಬ ಬಗ್ಗೆ ಕುಟುಂಬ ಸದಸ್ಯರು ಸಹಿತ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆಲ್ಲಾ ಈಶ್ವರಪ್ಪನೇ ನೇರ ಕಾರಣ ಎಂದು ಸಂತೋಷ್ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಇದರಲ್ಲಿ ಇಲಾಖೆಯ ತಪ್ಪಿಲ್ಲ. ಈ ಬಗ್ಗೆ ಮೊದಲೇ ಕೋರ್ಟ್ಗೆ ನಾವು ದೂರು ನೀಡಿದ್ದೆವು. ಇಂತಹ ಗುತ್ತಿಗೆಯನ್ನೇ ಇಲಾಖೆ ನೀಡಿಲ್ಲ ಎಂಬ ಬಗ್ಗೆಯೂ ಮಾಹಿತಿಗಳು ಲಭ್ಯವಾಗಿದ್ದವು.
ಇದನ್ನೂ ಓದಿ: ರಸ್ತೆ ಮಾಡಲು ಇಲಾಖೆ ಹೇಳಿಲ್ಲ, ಹಾಗಾಗಿ ಹಣವೂ ಬಿಡುಗಡೆ ಆಗಿಲ್ಲ; ಸಂತೋಷ್ ಪಾಟೀಲ್ ಹೇಳಿಕೆ ಸುಳ್ಳೇ?
Published On - 9:27 am, Wed, 13 April 22