ರಸ್ತೆ ಮಾಡಲು ಇಲಾಖೆ ಹೇಳಿಲ್ಲ, ಹಾಗಾಗಿ ಹಣವೂ ಬಿಡುಗಡೆ ಆಗಿಲ್ಲ; ಸಂತೋಷ್ ಪಾಟೀಲ್ ಹೇಳಿಕೆ ಸುಳ್ಳೇ?
ಸಂತೋಷ್ ಕೆ ಪಾಟೀಲ್ ಹೇಳುವಂತೆ ಬೆಳಗಾವಿಯ ಹಿಂಡಲಗಾದ ಆ ರಸ್ತೆಯ ಕಾರ್ಯ ಇಲಾಖೆಯಿಂದ ಮಾಡಿಸಲಾಗಿಲ್ಲ. ಹೀಗಾಗಿ ಆ ಕೆಲಸಕ್ಕೆ ಯಾವುದೇ ಹಣ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಬೆಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪ ಮೇಲೆ ಶೇಕಡಾ 40 ಕಮಿಷನ್ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರರೇ ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಷ್ಟೇ ಅಲ್ಲದೆ, ಆತ್ಮಹತ್ಯೆಗೆ ಸಚಿವ ಈಶ್ವರಪ್ಪನೇ ಕಾರಣ ಎಂದೂ ತಿಳಿಸಿ ಅವರು ಸಾವನ್ನಪ್ಪಿದ್ದಾರೆ. ಈ ಘಟನೆಯು ರಾಜ್ಯ ರಾಜಕಾರಣದಲ್ಲಿ ಹೊಸ ವಿವಾದ ಸೃಷ್ಟಿಸಿದೆ. ಬಿಜೆಪಿ ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈಶ್ವರಪ್ಪ ಅವರನ್ನು ವಜಾಗೊಳಿಸಲು ಒತ್ತಾಯ ಕೇಳಿಬಂದಿದೆ. ಬಿಜೆಪಿ ನಾಯಕರು ಇರುವಲ್ಲಿ ಕೈ ಕಾರ್ಯಕರ್ತರ ಮುತ್ತಿಗೆ ಹಾಕಿರುವ ಘಟನೆ ನಡೆಯುತ್ತಿದೆ. ಬಿಜೆಪಿ ತನ್ನ ಭ್ರಷ್ಟಾಚಾರ ಮರೆಮಾಚಲು ಧರ್ಮ ಸಂಘರ್ಷ ತಂದಿಟ್ಟಿದೆ ಎಂದೂ ಆರೋಪಗಳು ಕೇಳಿಬರುತ್ತಿದೆ. ಈ ಮಧ್ಯೆ, ಇಲ್ಲಿ ಲಭ್ಯವಾಗಿರುವ ಪತ್ರವೊಂದು ಘಟನೆಯ ಬಗ್ಗೆ ಹೊಸ ಮಾಹಿತಿಯೊಂದನ್ನು ನೀಡಿದೆ.
ಅದರಂತೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಅಂತಹ ಯಾವುದೇ ಕೆಲಸಕ್ಕೆ ಅರ್ಜಿ ಬಂದಿಲ್ಲ. ಅಲ್ಲದೆ, ದೂರಿನಲ್ಲಿ ಇರುವಂಥ ಯಾವುದೇ ಕೆಲಸಕ್ಕೆ ಇಲಾಖೆ ಅನುಮೋದನೆ ನೀಡಿಲ್ಲ. ಅಂತಹ ಯಾವುದೇ ಕೆಲಸಕ್ಕೆ ಇಲಾಖೆ ಒಪ್ಪಿಗೆ ಯಾ ಅನುಮೋದನೆ ಆದೇಶ ನೀಡಿಲ್ಲ. ಸಂತೋಷ್ ಕೆ ಪಾಟೀಲ್ ಹೇಳುವಂತೆ ಬೆಳಗಾವಿಯ ಹಿಂಡಲಗಾದ ಆ ರಸ್ತೆಯ ಕಾರ್ಯ ಇಲಾಖೆಯಿಂದ ಮಾಡಿಸಲಾಗಿಲ್ಲ. ಹೀಗಾಗಿ ಆ ಕೆಲಸಕ್ಕೆ ಯಾವುದೇ ಹಣ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಸಂತೋಷ್ ಆರೋಪ ಮಾಡಿದ ದಿನವೇ ಕೋರ್ಟ್‌ಗೆ ಹೋಗಿದ್ದೆ: ಈಶ್ವರಪ್ಪ ವಿವರಣೆ
ನನ್ನ ಸಾವಿಗೆ ಕಾರಣ ಅಂತಾ ಜೇಬಿನಲ್ಲಿದ್ದ ಚೀಟಿಗೆ ಸಹಿ ಹಾಕಿಲ್ಲ. ಅದೊಂದು ಟೈಪ್ ಮಾಡಿದ ಪತ್ರವಾಗಿದೆ. ಇದನ್ನು ಯಾರು ಬೇಕಾದ್ರೂ ಮಾಡಬಹುದು. ಸಿದ್ದರಾಮಯ್ಯ, ಡಿಕೆಶಿಗೆ ನಾನು ನೇರವಾಗಿ ಕೇಳುತ್ತೇನೆ. ನಿಮ್ಮ ಹೆಸರು ಯಾರಾದ್ರೂ ಬರೆದ್ರೆ ರಾಜೀನಾಮೆ ನೀಡ್ತೀರಾ? ರಾಜಕೀಯವಾಗಿ ಬಂದ್ರೆ ಹೇಗೆ ಉತ್ತರಿಸಬೇಕೆಂಬುದು ಗೊತ್ತಿದೆ. ಅವರು ಹೇಳಿದ್ದನ್ನ ಕೇಳಿದ್ರೆ 100 ಸಲ ರಾಜೀನಾಮೆ ನೀಡಬೇಕಾಗುತ್ತೆ. ಸಿದ್ದರಾಮಯ್ಯ, ಡಿಕೆಶಿರನ್ನು ನಾವು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಸಂತೋಷ್‌ರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಪ್ರಯತ್ನ ನಡೆಸಿರಲಿಲ್ಲ. ಸಂತೋಷ್ ಆರೋಪ ಮಾಡಿದ ದಿನವೇ ಕೋರ್ಟ್‌ಗೆ ಹೋಗಿದ್ದೆ. ನ್ಯಾಯಾಲಯವೂ ನನಗೆ ನೋಟಿಸ್ ನೀಡಿತ್ತು. ನಾನೇ ಖುದ್ದು ತನಿಖೆಗೆ ಆಗ್ರಹಿಸಿದ್ದೇನೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ನನ್ನ ಕಚೇರಿಗೆ ಕೇಂದ್ರದಿಂದ ಪತ್ರ ಬಂದಿದ್ದು ನನಗೆ ಗೊತ್ತಿಲ್ಲ. ಕೇಂದ್ರದ ಪತ್ರಕ್ಕೆ ಸರ್ಕಾರದ ಅಧಿಕಾರಿಯೇ ಉತ್ತರ ನೀಡಿದ್ದಾರೆ. ಇದೊಂದು ಸುಳ್ಳು ಆರೋಪ ಅಂತಾ ಅಧಿಕಾರಿ ಉತ್ತರ ನೀಡಿದ್ದಾರೆ ಎಂದು ಮೈಸೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಪತಿ ಸಂತೋಷ್ ಪಾಟೀಲ್ದು ಆತ್ಮಹತ್ಯೆಯಲ್ಲ, ಇದು ಕೊಲೆ
ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಹಿನ್ನೆಲೆ ಪತ್ನಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪತಿ ಸಂತೋಷ್ ಪಾಟೀಲ್ದು ಆತ್ಮಹತ್ಯೆಯಲ್ಲ, ಇದು ಕೊಲೆ. ನನ್ನ ಪತಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಪತಿ ಸಂತೋಷ್ ಪಾಟೀಲ್ ನಿನ್ನೆ ನನ್ನ ಜತೆ ಚೆನ್ನಾಗಿಯೇ ಮಾತಾಡಿದ್ದರು. ಇವತ್ತು ಪತಿ ಇಲ್ಲ ಅಂದ್ರೆ ಹೇಗೆ? ಇದಕ್ಕೆಲ್ಲ ಸಚಿವ ಈಶ್ವರಪ್ಪನೇ ಕಾರಣ. ನನ್ನ ಪತಿ ಸಂತೋಷ್ ಸಾಲಸೋಲ ಮಾಡಿ ರಸ್ತೆ ಕಾಮಗಾರಿ ಮಾಡಿದ್ದರು. ಇವಾಗ ನನಗೆ ಸಂತೋಷ್ ಪರಿಚಯವೇ ಇಲ್ಲವೆಂದು ಈಶ್ವರಪ್ಪ ಹೇಳ್ತಾರೆ. ನಮಗೆ ದುಡ್ದು ಹೆಚ್ಚಾಗಿದೆಯಾ ಸಾರ್ವಜನಿಕ ರಸ್ತೆ ಕೆಲಸ ಮಾಡಿಸಲು? ಸಚಿವ ಈಶ್ವರಪ್ಪಗೆ ಪರಿಚಯ ಇಲ್ಲ ಅಂದ್ರೆ ಫೋಟೋ ಎಲ್ಲಿಂದ ಬಂದವು. ನನ್ನ ಗಂಡ ಸಂತೋಷ್ ಬಿಜೆಪಿ ಬಿಜೆಪಿ ಎಂದು ಜೀವವನ್ನೇ ಕಳೆದುಕೊಂಡ. ನಾನು 2 ವರ್ಷದ ಮಗು ಕಟ್ಟಿಕೊಂಡು ಮುಂದೆ ಹೇಗೆ ಜೀವನ ನಡೆಸಲಿ ಎಂದು ಸಚಿವ ಈಶ್ವರಪ್ಪ ವಿರುದ್ಧ ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂಜೆ ಒಳಗಾಗಿ ಕೆಎಸ್ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ, ಕೊಲೆ ಪ್ರಕರಣ ದಾಖಲಿಸಿ, ವಜಾಗೊಳಿಸಿ: ಕಾಂಗ್ರೆಸ್ ಆಗ್ರಹ
ಇದನ್ನೂ ಓದಿ: Santosh Suicide: ಸಚಿವ ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಲಂಚದ ಕುರಿತು ಮಾಡಿದ್ದ ಗಂಭೀರ ಆರೋಪಗಳ ವಿವರ ಇಲ್ಲಿದೆ
Published On - 5:59 pm, Tue, 12 April 22