Santosh Suicide: ಅದು ಡೆತ್ ನೋಟ್ ಅಲ್ಲ ಎನಿಸುತ್ತೆ, ಸಂತೋಷ್ ಸಾವಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
ನನಗೆ ಡೆತ್ ನೋಟ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಡೆತ್ ನೋಟ್ ಇದೆಯೋ ಇಲ್ಲವೋ ಮಾಹಿತಿ ಪಡೆದುಕೊಳ್ಳುತ್ತೇನೆ. ಬಹುಶಃ ಅದು ಡೆತ್ನೋಟ್ ಅಲ್ಲ ಎನ್ನಿಸುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ನನಗೆ ಡೆತ್ ನೋಟ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಡೆತ್ ನೋಟ್ ಇದೆಯೋ ಇಲ್ಲವೋ ಮಾಹಿತಿ ಪಡೆದುಕೊಳ್ಳುತ್ತೇನೆ. ಬಹುಶಃ ಅದು ಡೆತ್ನೋಟ್ ಅಲ್ಲ ಎನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಆರೋಪ ಮಾಡೋದು, ಸಾಬೀತು ಮಾಡೋದು, ಎಲ್ಲದಕ್ಕೂ ವಿಧಾನಗಳಿವೆ. ಆತ್ಮಹತ್ಯೆಗೆ ಕಾರಣವೇನು ಎನ್ನುವ ವಿವರ ಮೊದಲು ಪಡೆದುಕೊಳ್ಳುತ್ತೇನೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತದೆ ಎಂದು ಪ್ರತಿಕ್ರಿಯಿಸಿದರು.
ಶಿವಮೊಗ್ಗ ವರದಿ: ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಬೇಡಿಕೆಯಂತೆ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಪ್ರಕರಣದಲ್ಲಿ ಸಚಿವ ಈಶ್ವರಪ್ಪ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿ ಕೇಸ್ ದಾಖಲಿಸಬೇಕು ಮತ್ತು ಸಂಪುಟದಿಂದ ಅವರನ್ನು ವಜಾಗೊಳಿಸಿ ಬಂಧಿಸುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ಸಂತೋಷ್ ಆತ್ಮಹತ್ಯೆಯಲ್ಲಿ ಈಶ್ವರಪ್ಪ ವಿರುದ್ಧ ಆರೋಪ ನಿರಾಧಾರ ಎಂದು ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಈಶ್ವರಪ್ಪ ಪಾತ್ರದ ಬಗ್ಗೆ ಪೊಲೀಸ್ ತನಿಖೆಯಿಂದ ಸತ್ಯ ಹೊರಬರಬೇಕಿದೆ. ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಉಡುಪಿ ಎಸ್ಪಿ ಜತೆ ಮಾತಾಡಿದ್ದೇನೆ, FSL ತಜ್ಞರು ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಆರಂಭವಾಗಿದೆ ಎಂದು ಹೇಳಿದರು.
ಪ್ರಾಮಾಣಿಕ ತನಿಖೆ: ಬೊಮ್ಮಾಯಿ ಮಂಗಳೂರು: ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖೆ ಪ್ರಾಮಾಣಿಕವಾಗಿ ತನಿಖೆ ನಡೆಯಲಿದೆ. ನನಗೆ ಬಂದಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಉಡುಪಿಯ ಲಾಡ್ಜ್ನಲ್ಲಿ ದೇಹ ಪತ್ತೆ ಆಗಿದೆ. ಮಂಗಳೂರಿನಿಂದ ವಿಧಿವಿಜ್ಞಾನ ತಜ್ಞರು ಉಡುಪಿಗೆ ಹೋಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಖುದ್ದು SP ಭೇಟಿ ಕೊಟ್ಟಿದ್ದಾರೆ. ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುವುದು ಎಂದರು.
ಮಾಹಿತಿಯಿಲ್ಲ: ಯಡಿಯೂರಪ್ಪ ಬೆಳಗಾವಿ: ಸಂತೋಷ್ ಆತ್ಮಹತ್ಯೆ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂತೋಷ್ ಪಾಟೀಲ್ ಆತ್ಮಹತ್ಯೆ ಬಗ್ಗೆ ಮಾಹಿತಿ ನನಗಿಲ್ಲ. ಈ ವಿಷಯದ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದರು.
ಭ್ರಷ್ಟಾಚಾರದಲ್ಲಿ ಪಳಗಿದ ಸುರ್ಜೆವಾಲಾ: ಅಶ್ವತ್ಥ ನಾರಾಯಣ ಟೀಕೆ ಬೆಂಗಳೂರು: ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದರು. ಸಂತೋಷ್ ಸಾವಿನ ಬಗ್ಗೆ ಮಾಹಿತಿ ಪಡೆದು ಮಾತನಾಡುವೆ ಎಂದರು. ಈ ಕುರಿತು ಪ್ರತಿಕ್ರಿಯಿಸುವಾಗ, ಸುರ್ಜೆವಾಲಾ ಅವರು ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ. ಭ್ರಷ್ಟಾಚಾರ ನಿರ್ನಾಮ ಮಾಡುವುದಕ್ಕೆ ನಾವು ಪಣ ತೊಟ್ಟಿದ್ದೇವೆ. ಸುರ್ಜೆವಾಲಾ ಭ್ರಷ್ಟಾಚಾರದಲ್ಲಿ ಪಳಗಿದವರು. ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಸತ್ಯಾಸತ್ಯತೆಯನ್ನು ಯಾರೂ ತೆಗೆದು ಹಾಕುವುದಕ್ಕೆ ಸಾಧ್ಯವಿಲ್ಲ. ಸಂಬಂಧಪಟ್ಟ ಇಲಾಖೆ ತನಿಖೆ ಮಾಡುತ್ತದೆ. ಗಾಳಿಯಲ್ಲಿ ಗುಂಡು ಹಾರಿಸುವುದು ಕಾಂಗ್ರೆಸ್ ಸಂಸ್ಕೃತಿ. ಸಂತೋಷ್ ಸಾವಿನ ಬಗ್ಗೆ ಮಾತನಾಡುವುದಕ್ಕೆ ಇಷ್ಟು ಬೇಗನೇ ಪ್ರತಿಕ್ರಿಯಿಸಲು ಆಗುವುದಿಲ್ಲ ಎಂದರು.
ಈಗ ಏನು ಹೇಳಿದರೂ ತಪ್ಪಾಗುತ್ತೆ: ಈಶ್ವರಪ್ಪ ಮೈಸೂರು: ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಸಂತೋಷ್ ಪಾಟೀಲ್ ಯಾರು ಅನ್ನೋದೆ ನನಗೆ ಗೊತ್ತಿಲ್ಲ ಎಂದರು. ನಮ್ಮ ಇಲಾಖೆಯಿಂದ ಅವರಿಗೆ ಯಾವುದೇ ಕಾಮಗಾರಿ ಗುತ್ತಿಗೆ ನೀಡಿರಲಿಲ್ಲ. ಸಂತೋಷ್ ಆತ್ಮಹತ್ಯೆ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ಸಿಕ್ಕಿದೆ. ಸಂತೋಷ್ ನನ್ನ ಮೇಲೆ ನೇರವಾಗಿ ಆರೋಪ ಮಾಡಿರಲಿಲ್ಲ. ನಮ್ಮ ಕಡೆಯವರು ಕಮಿಷನ್ ಕೇಳಿದ್ದರೆಂದು ಆರೋಪಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ನಾಯಕರಿಂದ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆ ಕೂಡ ಸ್ಪಷ್ಟನೆ ಕೇಳಿತ್ತು. ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ಈ ಬಗ್ಗೆ ಕೋರ್ಟ್ ಸಂತೋಷ್ ಪಾಟೀಲ್ಗೆ ನೋಟಿಸ್ ಕೂಡ ನೀಡಿತ್ತು. ನೋಟಿಸ್‌ಗೆ ಹೆದರಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡರಾ? ಈಗ ಏನೇ ಹೇಳಿದರೂ ಅದು ತಪ್ಪಾಗುತ್ತದೆ ಎಂದು ಹೇಳಿದರು. ಡೆತ್ನೋಟ್ನಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಡೆತ್ನೋಟ್ ನಾನು ನೋಡಿಲ್ಲ, ಮಾಧ್ಯಮಗಳಲ್ಲಿ ನೋಡಿದೆ. ಅದನ್ನು ಅವರ ಸ್ನೇಹಿತರು ಕಳುಹಿಸಿದರು ಎಂಬ ಮಾಹಿತಿ ಇದೆ ಎಂದರು.
ತನಿಖೆಯಾಗಲಿ: ಪ್ರಲ್ಹಾದ ಜೋಶಿ ಧಾರವಾಡ: ಗುತ್ತಿಗೆದಾರ ಸಮತೋಷ್ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಡೆತ್ನೋಟ್ನಲ್ಲಿ ಈಶ್ವರಪ್ಪ ಅವರ ಹೆಸರನ್ನೇ ಏಕೆ ಹಾಕಿದ್ದಾರೋ ತನಿಖೆ ಆಗಲಿ. ತನಿಖೆ ನಡೆಸಿದ ಬಳಿಕ ಆ ಬಗ್ಗೆ ವಿಚಾರ ಮಾಡೋಣ. 40 ಪರ್ಸೆಂಟ್ ಕಮಿಷನ್, ಲಂಚದ ಆರೋಪಕ್ಕೆ ಆಧಾರವಿಲ್ಲ. ಒಂದು ವೇಳೆ ನಿಜವಾಗಿದ್ದರೆ ಬಿಜೆಪಿ ಸರ್ಕಾರವು ಇಂಥವನ್ನು ಖಂಡಿತವಾಗಿಯೂ ಸಹಿಸಲ್ಲ. ನಿರಾಧಾರವಾದ ಆರೋಪವಾದರೆ ಏನು ಮಾಡೋದು ಎಂದು ಪ್ರಶ್ನಿಸಿದರು.
ಸಂತೋಷ್ ಸಾವಿನ ಬಗ್ಗೆ ನೋವಿದೆ: ರೇಣುಕಾಚಾರ್ಯ ಬೆಂಗಳೂರು: ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಸಾವಿನ ಬಗ್ಗೆ ನೋವಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಈ ಸಂದರ್ಭದಲ್ಲಿ ಸಂತೋಷ್ ಪಾಟೀಲ್ ಕುಟುಂಬಕ್ಕೆ ಮೊದಲು ನಾವು ಸಾಂತ್ವನ ಹೇಳಬೇಕಾಗಿದೆ. ಕಾಂಗ್ರೆಸ್ ಮುಖಂಡರು ಸಾವಿನ ಮನೆಯಲ್ಲಿ ರಾಜಕಾರಣ ಮಾಡಬಾರದು. 40% ಕಮಿಷನ್ ವಿಚಾರ ನೂರಕ್ಕೆ ನೂರು ಸುಳ್ಳು. ನಮ್ಮ ಸರ್ಕಾರ ಸಿಎಂ ಹಾಗೂ ಸಚಿವರು 40% ಕಮಿಷನ್ ಪಡೆದಿಲ್ಲ. ಕಾಂಗ್ರೆಸ್ನವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವುದಕ್ಕೆ ಇಶ್ಯೂ ಇಲ್ಲ. ಹೀಗಾಗಿ ಈ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದೆ. ಸುರ್ಜೆವಾಲಾ ಬಹಳ ಗಂಭೀರವಾಗಿ ಆರೋಪ ಮಾಡಿದ್ದಾರೆ. ನಮ್ಮ ಸಿಎಂ ಮತ್ತು ಗೃಹ ಸಚಿವರು ಪಾರದರ್ಶಕ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ನಂತರ ಸತ್ಯಾಸತ್ಯತೆ ಹೊರಗೆ ಬರುತ್ತದೆ ಎಂದರು.
ತನಿಖೆಯ ನಂತರ ಸತ್ಯಾಂಶ ಹೊರಬಂದ ಮೇಲೆ ಮುಂದಿನ ಕ್ರಮವನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಸಿಎಂಗೆ ಪಾಲು ಹೋಗುತ್ತೆ ಎಂದು ಮಾತನಾಡುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ ಎಂದರು.
ಇದನ್ನೂ ಓದಿ: Santosh Suicide: ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ಮಾಧ್ಯಮಗಳಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಸಂತೋಷ್
ಇದನ್ನೂ ಓದಿ: ಈಶ್ವರಪ್ಪ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ, ಡಿಜಿಪಿ ಬದುಕಿದ್ದಾರಾ ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್
Published On - 2:54 pm, Tue, 12 April 22